ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿ’ ಖಾತೆ: ಹಾಲಿ ವ್ಯವಸ್ಥೆ ಮುಂದುವರಿಕೆ

Last Updated 29 ಜನವರಿ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮರ್ಪಕ ದಾಖಲೆಗ­ಳಿಲ್ಲದ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಟರ್‌­ನಲ್ಲಿ ನೋಂದಾಯಿಸುವ ಹಾಲಿ ವ್ಯವಸ್ಥೆ ಹಾಗೇ ಮುಂದುವರಿಯಲಿದೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ. ಲಕ್ಷ್ಮೀನಾರಾಯಣ ಸ್ಪಷ್ಟಪಡಿಸಿದರು.

ಗುರುವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಚಾಮರಾಜಪೇಟೆ ವಾರ್ಡ್‌ನ ಬಿ.ವಿ. ಗಣೇಶ್‌ ಹಾಗೂ ಜಯಮಹಲ್‌ ವಾರ್ಡ್‌ನ ಎಂ.ಕೆ. ಗುಣಶೇಖರ್‌ ಅವರು ಎತ್ತಿದ ಪ್ರಶ್ನೆಗಳಿಗೆ ಆಯುಕ್ತರು ಸುದೀರ್ಘ ಉತ್ತರ ನೀಡಿದರು.

‘ಹೈಕೋರ್ಟ್‌ ಆದೇಶದ ಬಳಿಕ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಖಾತೆ ಮಾಡಿಕೊಡುವ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ’ ಎಂದು ಗಣೇಶ್‌ ದೂರಿದರೆ, ‘ಬಿ ರಿಜಿಸ್ಟರ್‌ನಲ್ಲಿ ದಾಖ ಲಾದ ಆಸ್ತಿಗಳಿಗೂ ಅಧಿಕೃತ ಖಾತೆ ಕೊಡಬೇಕು’ ಎಂದು ಗುಣಶೇಖರ್‌ ಒತ್ತಾಯಿಸಿದರು.

‘ಸರ್ಕಾರದ ನಿಯಮಾವಳಿ ಅನ್ವಯವೇ ಬಿಬಿಎಂಪಿ ಯಲ್ಲಿ ಖಾತೆ ನೋಂದಣಿ ಮಾಡಲಾಗುತ್ತಿದೆ. ಹೈಕೋರ್ಟ್‌ ಈಗ ಆ ನಿಯಮಾವಳಿಯನ್ನೇ ಪ್ರಶ್ನೆ ಮಾಡಿದೆ. ಈ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುವುದು’ ಎಂದು ಆಯುಕ್ತರು ಹೇಳಿದರು.

‘ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮೊದಲಾದ ಕಾಯ್ದೆಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿದ ಬಡಾವಣೆಗಳ ನಿವೇಶನ ಇಲ್ಲವೆ ಕಟ್ಟಡಗಳಿಗೆ ಅಧಿಕೃತ ಖಾತೆ ನೀಡಲು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಮರ್ಪಕ ದಾಖಲೆಗಳಿಲ್ಲದ 2 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ನೋಂದಣಿ ಮಾಡಲಾಗಿದೆ. ರಾಜ್ಯ ಸರ್ಕಾರ ಅಕ್ರಮ ಸಕ್ರಮ ಯೋಜನೆಯನ್ನು ಜಾರಿಗೆ ತಂದರೆ ಮಾತ್ರ ಅವುಗಳಿಗೆ ಅಧಿಕೃತ ಖಾತೆ ನೀಡಲು ಸಾಧ್ಯ. ಇಲ್ಲದಿದ್ದರೆ ಪ್ರತ್ಯೇಕ ರಿಜಿಸ್ಟರ್‌ನ ಸದ್ಯದ ವ್ಯವಸ್ಥೆ ಮುಂದುವರಿಯಲಿದೆ’ ಎಂದು ಅವರು ತಿಳಿಸಿದರು.

‘ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಬಿಬಿಎಂಪಿ ಎಲ್ಲ ಮಾಹಿತಿಯನ್ನೂ ಒದಗಿಸಿದ್ದು, ಎಂಟು ವರ್ಷ ಗಳಿಂದ ಪ್ರತ್ಯೇಕ ರಿಜಿಸ್ಟರ್‌ ನಿರ್ವಹಣೆ ಮಾಡುತ್ತಿ ರುವುದನ್ನು ಕೂಡ ಅದರ ಗಮನಕ್ಕೆ ತರಲಾಗಿದೆ’ ಎಂದು ಹೇಳಿದರು.

ಆಯುಕ್ತರ ವಿವರಣೆ ಹೊರತಾಗಿಯೂ ಸದಸ್ಯರು ಕಾನೂನು ಕೋಶದ ಅಭಿಪ್ರಾಯವನ್ನು ಅಪೇಕ್ಷಿಸಿದರು. ಕಾನೂನು ಕೋಶದ ಮುಖ್ಯಸ್ಥ ಕೆ.ಡಿ. ದೇಶಪಾಂಡೆ, ‘ಖಾತೆ ನೋಂದಣಿಗೆ ಸಂಬಂಧಿಸಿದಂತೆ 2014ರ ಡಿಸೆಂಬರ್‌ 19ರಂದು ಹೈಕೋರ್ಟ್‌ ನೀಡಿದ ತೀರ್ಪು ಸರಿಯಾಗಿದ್ದು, ‘ಬಿ’ ಖಾತೆಗೆ ಕಾನೂನಿನ ಯಾವ ಮಾನ್ಯತೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೆಎಂಸಿ ಕಾಯ್ದೆಯ ನಿಯಮ 114ರಲ್ಲಿ ಆಸ್ತಿ ಮಾಲೀಕತ್ವ ವರ್ಗಾವಣೆಗೆ ಸಂಬಂಧಿಸಿದಂತೆ ವಿವರಿಸ ಲಾಗಿದೆ. ಆಸ್ತಿ ಮಾಲೀಕರು ಸಾವನ್ನಪ್ಪಿದರೆ ಇಲ್ಲವೆ ಆಸ್ತಿಯನ್ನು ಪಾಲು ಮಾಡಿಕೊಂಡರೆ ನೋಂದಣಿ ಮಾಡಲು ಅದರಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.  ‘ಕೆಎಂಸಿ ಕಾಯ್ದೆಯಲ್ಲಿ ಖಾತೆ ಎನ್ನುವ ಪದಕ್ಕೆ ಯಾವುದೇ ವ್ಯಾಖ್ಯಾನ ಇಲ್ಲವೆ ವಿವರಣೆಯನ್ನು ಕೊಡಲಾಗಿಲ್ಲ. ಆದರೆ, ಕಟ್ಟಡ ಯೋಜನೆಯನ್ನು ಮಂಜೂರು ಮಾಡಲು ಖಾತಾ ದಾಖಲೆಯೂ ಅಗತ್ಯ ಎಂಬ ನಿಯಮ ರೂಪಿಸಲಾಗಿದೆ’ ಎಂದರು.

‘ಕಾನೂನುಬದ್ಧವಲ್ಲದ ಆಸ್ತಿಗಳನ್ನು ಹೇಗೆ ಕಾಣಬೇಕು ಎನ್ನುವ ವಿವರ ಕೂಡ ಕೆಎಂಸಿ ಕಾಯ್ದೆ ನಿಯಮ 108ಎ (3)ರಲ್ಲಿದೆ. ಅಂತಹ ಆಸ್ತಿಗಳಿಗೆ ಅಧಿಕೃತ ಖಾತೆ ನೀಡದೆ ತೆರಿಗೆ ಸಂಗ್ರಹದ ಏಕೈಕ ಉದ್ದೇಶಕ್ಕಾಗಿ ಅವುಗಳನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎನ್ನುತ್ತದೆ ಈ ನಿಯಮ’ ಎಂದು ಹೇಳಿದರು.

‘ಪ್ರತ್ಯೇಕ ರಿಜಿಸ್ಟರ್‌ ದಾಖಲೆಯನ್ನೇ ಸಾರ್ವಜನಿಕರು ‘ಬಿ’ ಖಾತಾ ಎಂದು ಭಾವಿಸುತ್ತಾರೆ. ಕಾನೂನಿನ ಪ್ರಕಾರ ‘ಬಿ’ ಖಾತಾ ಎನ್ನುವುದೇ ಇಲ್ಲ. ಅದರಿಂದ ಯಾವ ಹಕ್ಕನ್ನೂ ಸ್ಥಾಪಿಸಲು ಸಾಧ್ಯವಿಲ್ಲ. ಅಕ್ರಮ ಎಂದು ಒಮ್ಮೆ ಸಾಬೀತಾದ ಆಸ್ತಿ, ಕಾನೂನಿನ ಮುಂದೆ ಎಂದೆಂದಿಗೂ ಅಕ್ರಮವೇ. ಸರ್ಕಾರ ಸಕ್ರಮಗೊಳಿಸುವ ಕಾಯ್ದೆ ತಂದರೆ ಮಾತ್ರ ಅವುಗಳಿಗೆ ಅಧಿಕೃತ ಖಾತೆ ನೀಡಲು ಸಾಧ್ಯ’ ಎಂದು ವಿವರಿಸಿದರು.

‘ನಿಯಮ 108ಎ (3)ರ ಅಡಿಯಲ್ಲಿ ಬರುವ ಆಸ್ತಿಗಳಿಗೆ ಯಾವುದೇ ಕಾರಣಕ್ಕೂ ನಿಯಮ 114ರ ಅಡಿಯಲ್ಲಿ ಖಾತೆ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು. ‘ಈ ಹಿಂದೆ ಭರತ್‌ಲಾಲ್‌ ಮೀನಾ ಅವರು ಆಯುಕ್ತರಾಗಿದ್ದಾಗ ‘ಬಿ’ ಖಾತೆಗೆ ಸಂಬಂಧಿಸಿದಂತೆ ಹೊರಡಿಸಿದ್ದ ಸುತ್ತೋಲೆಗೆ ಸಹ ಕಾನೂನಿನ ಮಾನ್ಯತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT