ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಗ್‌ ಮಿಲ್ಕಾ ಭಾಗ್‌‘ ಅತ್ಯುತ್ತಮ ರಂಜನೀಯ ಚಿತ್ರ

‘ಶಿಪ್‌ ಆಫ್‌ ಥಿಸಿಯಸ್‌‘ ಅತ್ಯುತ್ತಮ ಚಲನಚಿತ್ರ
Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆನಂದ್‌ ಗಾಂಧಿ ನಿರ್ದೇಶನದ ಚೊಚ್ಚಲ ಚಿತ್ರ ‘ಶಿಫ್‌ ಆಫ್‌ ಥಿಸಿಯಸ್‌’  ಅತ್ಯುತ್ತಮ ಚಲ­ನಚಿತ್ರ ಪ್ರಶಸ್ತಿಗೆ ಹಾಗೂ ಮಿಲ್ಕಾ ಸಿಂಗ್‌ ಜೀವನ ವೃತ್ತಾಂತ ಆಧರಿಸಿದ ‘ಭಾಗ್‌ ಮಿಲ್ಕಾ ಭಾಗ್‌’ ಅತ್ಯು­ತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿವೆ.

61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿ, ‘ಭಾಗ್‌ ಮಿಲ್ಕಾ ಭಾಗ್‌’ ಒಂದು ಪರಿ­ಪೂರ್ಣ ರಂಜನೀಯ ಸಿನಿಮಾ ಎಂದು ಅಭಿಪ್ರಾಯಪಡಲಾಗಿದೆ.

‘ಶಾಹಿದ್‌’ ಚಿತ್ರದ ನಟ ಹನ್ಸಲ್‌ ಮೆಹ್ತಾ ಮತ್ತು ಮಲಯಾಳಂ ಚಿತ್ರ ‘ಪೆರಾರಿಯಾಥವರ್‌’ದಲ್ಲಿನ ನಟನೆ­ಗಾಗಿ ಸೂರಜ್‌ ವೆಂಜರಮೂಡು ಅವರು ಜಂಟಿಯಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಹತ್ಯೆಗೀಡಾದ ವಕೀಲ– ಹೋರಾಟಗಾರ ಶಾಹಿದ್‌ ಅಜ್ಮಿ ಬದುಕನ್ನು ಆಧರಿಸಿದ ‘ಶಾಹಿದ್‌’ ಚಿತ್ರದ ನಿರ್ದೇಶಕ ಹನ್ಸಲ್‌ ಮೆಹ್ತಾ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹಿಂದಿ ಚಿತ್ರ ‘ಲೈಯರ್‌್ಸ ಡೈಸ್‌’ನಲ್ಲಿನ ಅಭಿನಯಕ್ಕಾಗಿ ಗೀತಾಂಜಲಿ ಥಾಪಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.





ಸಂತೋಷ ತಂದಿದೆ

‘ಡಿಸೆಂಬರ್ 1’ ಚಿತ್ರಕ್ಕೆ ಪ್ರಾದೇಶಿಕ ವಿಭಾಗದಲ್ಲಿ ಉತ್ತಮ ಸಿನಿಮಾ ಎಂಬ ಪ್ರಶಸ್ತಿಯ ಜೊತೆಗೆ ಉತ್ತಮ ಚಿತ್ರಕಥೆ ಪ್ರಶಸ್ತಿಯೂ ಲಭಿಸಿರುವುದು ನನ್ನ ಸಂತೋಷವನ್ನು ಹೆಚ್ಚು­ಮಾಡಿದೆ. ಕನ್ನಡಕ್ಕೆ ಚಿತ್ರ­ಕಥೆಯ ವಿಭಾಗದಲ್ಲಿ ಎರಡು ಪ್ರಶಸ್ತಿ ಬಂದಿರು­ವುದು ಅಪ­ರೂಪದ ಹಾಗೂ ಸಂತಸದ ವಿಷಯ.

ಕನ್ನಡದಲ್ಲಿ ಕಥೆಗಳಿಲ್ಲ ಎನ್ನುವ ಆರೋಪಕ್ಕೆ, ನಮ್ಮಲ್ಲಿ ಕಥೆಗಳಿವೆ ಅದನ್ನು ರೂಪಿಸುವ ಮನಸ್ಥಿತಿ ಬೇಕಷ್ಟೇ ಎನ್ನುವ ಉತ್ತರವನ್ನು ಈ ಪ್ರಶಸ್ತಿಗಳು ನೀಡಿವೆ. ಸತತವಾಗಿ ಎಂಟು ಸಿನಿಮಾಗಳಿಗೆ ಪ್ರಶಸ್ತಿ ಪಡೆದ ಖುಷಿಯ ಜೊತೆ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಇನ್ನಷ್ಟು ಪ್ರಾಮಾಣಿಕವಾಗಿ ಸದಭಿ­ರುಚಿಯ ಸಿನಿಮಾಗಳನ್ನು ಮಾಡುವ ಕೆಲಸವನ್ನು ಮುಂದುವರೆಸುತ್ತೇನೆ.

–ಪಿ. ಶೇಷಾದ್ರಿ, ‘ಡಿಸೆಂಬರ್ 1’ ಚಿತ್ರದ ನಿರ್ದೇಶಕ

ತೀರ್ಪುಗಾರರ ವಿಶೇಷ ಪ್ರಶಸ್ತಿ ಭಿನ್ನ ಎನಿಸುತ್ತಿದೆ

ನಾನು ಡಾಕ್ಯುಮೆಂಟರಿ ಫಿಲ್ಮ್‌ಮೇಕರ್‌ ಅಲ್ಲ. ಯು.ಆರ್‌. ಅನಂತಮೂರ್ತಿ ಅವರ ಬಗ್ಗೆ ಸಾಕ್ಷ್ಯಚಿತ್ರ ಮಾಡುವ ಆಹ್ವಾನ ಬಂದಾಗ ಮಾಡಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದೆ. ಕೊನೆಗೆ ಮಾಡಿಯೇ ಬಿಡೋಣ ಎಂದು ಕೈಹಾಕಿದೆ.

ಅನಂತಮೂರ್ತಿ ಅವರ ಬಗ್ಗೆ ಈಗಾಗಲೇ ಏಳೆಂಟು ಸಾಕ್ಷ್ಯಚಿತ್ರಗಳು ಬಂದಿವೆ. ಅವುಗಳಿಗಿಂತ ವಿಭಿನ್ನವಾದ ಸಾಕ್ಷ್ಯಚಿತ್ರ ಇದಾಗಬೇಕು ಎಂಬ ಕಾರಣಕ್ಕೆ ಅವರ ಸಿದ್ಧಾಂತವನ್ನು ಇಟ್ಟುಕೊಂಡು ಸಾಕ್ಷ್ಯಚಿತ್ರ ತಯಾರಿಸಿದೆ.

ಈ ಮೊದಲ ಪ್ರಯತ್ನಕ್ಕೇ ರಾಷ್ಟ್ರಗೌರವ ಸಂದಿರುವುದು ಸಂತಸವಾಗುತ್ತಿದೆ. ಇದುವರೆಗೆ ಸಿನಿಮಾಗಳಿಗಾಗಿ ಪಡೆದ ಪ್ರಶಸ್ತಿಗಳ ನಡುವೆ ಸಾಕ್ಷ್ಯಚಿತ್ರಕ್ಕೆ ದೊರೆತ ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ ಭಿನ್ನ ಎನಿಸುತ್ತಿದೆ.
–ಗಿರೀಶ್‌ ಕಾಸರವಳ್ಳಿ, ‘ಅನಂತಮೂರ್ತಿ – ನಾಟ್ ಎ ಬಯೊಗ್ರಫಿ... ಬಟ್ ಎ ಹೈಪೊಥೀಸಿಸ್’ ಸಾಕ್ಷ್ಯಚಿತ್ರದ ನಿರ್ದೇಶಕ

ಶ್ರಮ ಗುರುತಿಸಿರುವುದು ಸಮಾಧಾನ ತಂದಿದೆ

‘ಪ್ರಕೃತಿ’ ಚಿತ್ರಕಥೆಗಾಗಿ ದೊರೆತ ಪ್ರಶಸ್ತಿಯನ್ನು ಕನ್ನಡಕ್ಕೆ ಸಂದ ಗೌರವ ಎಂದು ಭಾವಿಸುತ್ತೇನೆ. ರಾಷ್ಷ್ಟ್ರಮಟ್ಟದಲ್ಲಿ ಕನ್ನಡದ ಚಿತ್ರಗಳನ್ನು ಗುರ್ತಿಸುವ ಕೆಲಸ ನಡೆಯುತ್ತಿದೆ ಎಂಬ ಸಂತಸವಿದೆ. ಈ ಚಿತ್ರದ ಬಗ್ಗೆ ಇನ್ನೂ ದೊಡ್ಡ ನಿರೀಕ್ಷೆ ಇತ್ತು. ಆದರೂ ಚಿತ್ರಕಥೆಯ ವಿಭಾಗದಲ್ಲಿ ಶ್ರಮವನ್ನು ಗುರ್ತಿಸಿರುವುದರಿಂದ ಒಂದು ಮಟ್ಟದ ಸಮಾಧಾನವಿದೆ.
–ಪಂಚಾಕ್ಷರಿ, ‘ಪ್ರಕೃತಿ’ ಚಿತ್ರದ ನಿರ್ದೇಶಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT