ಬೆಂಗಳೂರು: ‘ಸಾಹಿತ್ಯ ಅಕಾಡೆಮಿಯಿಂದ ಫೆಲೋಷಿಪ್ ಪಡೆಯುತ್ತಿದ್ದೀರಿ. ಎಂದಿನ ಗಾಂಭೀರ್ಯದಿಂದ ಹೊರಬಂದು ಇವತ್ತಾದರೂ ಒಮ್ಮೆ ನಕ್ಕುಬಿಡಿ. ನೀವು ನಗುವುದನ್ನು ನಾವೆಲ್ಲ ನೋಡಬೇಕು’–ಹಿಂದಿ ಸಾಹಿತಿ ಇಂದ್ರನಾಥ್ ಚೌಧರಿ ಹೀಗೆ ಹೇಳಿದಾಗ ಭರ್ತಿ ತುಂಬಿದ್ದ ಸಭಾಂಗಣದಲ್ಲಿ ದೊಡ್ಡ ನಗೆಯ ಅಲೆ ಎದ್ದಿತು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಮೊಗದಲ್ಲಿ ಮಂದಹಾಸವೊಂದು ಮಿಂಚಿ ಮರೆಯಾಯಿತು.

ಭೈರಪ್ಪ ಅವರಿಗೆ ಫೆಲೋಷಿಪ್ ಪ್ರದಾನ ಮಾಡಲು ಸಾಹಿತ್ಯ ಅಕಾಡೆಮಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಭೈರಪ್ಪ ಅವರದು ತತ್ವಜ್ಞಾನಿಯಂತಹ ಮುಖಭಾವ. ಸದಾ ಗಂಭೀರ ವದನರಾದ ಅವರು ನಕ್ಕಿದ್ದನ್ನು ನಾನಂತೂ ಕಂಡಿಲ್ಲ. ಚಿಕ್ಕ ವಯಸ್ಸಿನಲ್ಲೇ ಅವರ ಮನೆಯಲ್ಲಿ ನಡೆದ ಸಾವು–ನೋವುಗಳು ಅವರನ್ನು ಸಾವಿನ ಅರ್ಥದ ಹುಡುಕಾಟಕ್ಕೆ ಹಚ್ಚಿದವು. ಪ್ರಾಯಶಃ ನಗು ಆಗಲೇ ಮರೆತು ಹೋಯಿತು’ ಎಂದು ಹೇಳಿದರು.

‘ಮುಂಬೈ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿದ್ದ ಭೈರಪ್ಪ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆಯುವಷ್ಟು ಎತ್ತರಕ್ಕೆ ಬೆಳೆದದ್ದು ಅನನ್ಯ ಸಾಧನೆ’ ಎಂದು ಮೆಚ್ಚುಗೆಯಿಂದ ನುಡಿದರು.‘ಭೈರಪ್ಪ ಅವರಿಗೆ ತಾಯಿಯೇ ಭಾವಶಕ್ತಿ ಮೂಲ. ಭೀಮಕಾಯದಿಂದ ಯಾನದವರೆಗೆ ಅವರ ಸಾಹಿತ್ಯ ಗಂಗೆಯಂತೆ ಹರಿದಿದೆ. ಅಲ್ಲಿರುವುದು ಬರಿ ಭಾಷೆಯಲ್ಲ, ಅದೊಂದು ಸಂಗೀತ. ಹೀಗಾಗಿಯೇ ಅವರ ಕೃತಿಗಳನ್ನು ಅನುವಾದಿಸುವುದು ಕಷ್ಟ’ ಎಂದು ವಿದ್ವಾಂಸ ಪ್ರೊ.ಎಸ್. ರಾಮಸ್ವಾಮಿ ಹೇಳಿದರು.

‘ಭಾರತೀಯ ಕಥನ ಪರಂಪರೆಗೆ ಭೈರಪ್ಪ ಅತ್ಯುತ್ತಮ ಪ್ರತಿನಿಧಿ. ಕಾದಂಬರಿ ಮೇಲೆ ಅವರಿಗೆ ಶಬರಿಶ್ರದ್ಧೆ’ ಎಂದು ಬಣ್ಣಿಸಿದ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಕನ್ನಡ ವಿಮರ್ಶಾ ಜಗತ್ತು ಅವರನ್ನು ಅನಾದರವಾಗಿ ಕಂಡಿಲ್ಲ’ ಎಂದು ಅಭಿಪ್ರಾಯಪಟ್ಟರು. ‘ವಿಮರ್ಶಕರು ಮಾಡಿದ ಏಕೈಕ ತಪ್ಪೆಂದರೆ ಭೈರಪ್ಪ ಅವರ ಕಾದಂಬರಿಗಳ ಜನಪ್ರಿಯತೆಯನ್ನು ಅನುಮಾನದಿಂದ ನೋಡಿದ್ದು. ಏಕೆಂದರೆ ಜನಪ್ರಿಯತೆ ಎಂಬುದು ರಂಜಿಸಿ, ವಂಚಿಸುವ ಕಲೆ’ ಎಂದು ತಿಳಿಸಿದರು.

‘ಪರಸ್ಪರರ ವಿರುದ್ಧ ದೂರುತ್ತಾ ಹೋದರೆ ರಾಜಕೀಯದಂತೆ ಸಾಹಿತ್ಯದಲ್ಲೂ ಬೀದಿಜಗಳ ಉಂಟಾಗುವ ಅಪಾಯ ಇದೆ’ ಎಂದು ಹೇಳಿದರು. ‘ಸತ್ಯ ಶೋಧನವೇ ಭೈರಪ್ಪ ಕೃತಿಗಳ ಮುಖ್ಯ ಗುರಿ’ ಎಂದು ಶತಾವಧಾನಿ ಆರ್. ಗಣೇಶ್ ಅಭಿಪ್ರಾಯಪಟ್ಟರು. ‘ಕಾಲ–ದೇಶ ಮೀರಿದ ಪಾತ್ರಗಳನ್ನು ಸೃಷ್ಟಿಸಿದ ಅವರೊಬ್ಬ ಕಾಡುವ ಲೇಖಕ’ ಎಂದು ಅಜಕ್ಕಳ ಗಿರೀಶ ಭಟ್ ಬಣ್ಣಿಸಿದರು.

ವಿಮರ್ಶೆ ಸ್ವಹಿತಕ್ಕೆ ಬಳಸಿದ ನವ್ಯರು: ಭೈರಪ್ಪ
ಬೆಂಗಳೂರು: ‘ನವ್ಯ ಚಳವಳಿ ಪ್ರವರ್ಧಮಾನಕ್ಕೆ ಬರುವ ಕಾಲಘಟ್ಟದಲ್ಲಿ ನಾನು ಕಾದಂಬರಿ ಬರೆಯಲು ಆರಂಭಿಸಿದೆ. ಆ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಸೃಜನಶೀಲ ಬರಹಗಾರರು ತಾವೇ ವಿಮರ್ಶಕರಾದರು. ಇದೊಂದು ಅಪಾಯಕಾರಿ ಬೆಳವಣಿಗೆ. ಏಕೆಂದರೆ, ವಿಮರ್ಶೆಯನ್ನು ಅವರು ಸ್ವಹಿತಕ್ಕಾಗಿ ಬಳಸಿಕೊಂಡರು’ –ತಮ್ಮ ಸಾಹಿತ್ಯವನ್ನು ಅಲಕ್ಷಿಸಿದ ವಿಮರ್ಶಾ ವಲಯವನ್ನು ಹೀಗೆ ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ. ಸಾಹಿತ್ಯ ಅಕಾಡೆಮಿಯಿಂದ ಫೆಲೋಷಿಪ್ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

‘ಭಾರತದ ವೈದಿಕ ಇಲ್ಲವೆ ಬೌದ್ಧ ತತ್ವಜ್ಞಾನದ ಹಿಂದಿರುವ ತಿರುಳು ಒಂದೇ ಆಗಿದೆ. ಸಾವಿನ ಸಂದರ್ಭದಲ್ಲಿ ನಿಂತು ಜೀವನದ ಮೌಲ್ಯ ಶೋಧಿಸುವುದು ತತ್ವಜ್ಞಾನ. ಮನೆಯಲ್ಲಿ ಹೆಚ್ಚು ಸಾವುಗಳು ಸಂಭವಿಸಿದ್ದರಿಂದ ನಾನು ಬಹುಬೇಗ ಅದರತ್ತ ವಾಲಿದೆ. ನನ್ನ ಸಾಹಿತ್ಯ ಕೃಷಿಗೆ ತತ್ವಜ್ಞಾನ ಗಟ್ಟಿ ಬುನಾದಿ ಹಾಕಿತು’ ಎಂದು ವಿಶ್ಲೇಷಿಸಿದರು.

‘ತತ್ವಜ್ಞಾನದ ಜ್ಞಾನ ಇಲ್ಲದವರು ನನ್ನ ಕೃತಿಗಳಲ್ಲಿ ಬರಿ ತತ್ವಜ್ಞಾನ ತುಂಬಿದೆ ಎಂದು ಹುಯಿಲು ಎಬ್ಬಿಸಿದರು. ವಾಸ್ತವವಾಗಿ ಬದುಕಿನ ಹುಡುಕಾಟವೇ ನನ್ನ ಎಲ್ಲ ಕೃತಿಗಳ ಮುಖ್ಯ ಗುರಿಯಾಗಿದೆ. ಆದರೆ, ‘ಸಾರ್ಥ’ ಮಾತ್ರ ತತ್ವಜ್ಞಾನವನ್ನೇ ಅವಲಂಬಿಸಿದ ಕೃತಿ. ಅದನ್ನು ಆಳವಾಗಿ ಅಧ್ಯಯನ ಮಾಡಿರುವ ನಾನು ಮಾತ್ರ ಅಂತಹ ಕೃತಿ ಬರೆಯಲು ಸಾಧ್ಯ’ ಎಂದು ಹೇಳಿದರು. ‘ಮಾರ್ಕ್ಸ್‌ವಾದ ತತ್ವಜ್ಞಾನ ಅಲ್ಲ. ಅದರಲ್ಲಿ ಅರ್ಥಶಾಸ್ತ್ರ ಹಾಗೂ ಸಮಾಜವಾದ ಮಾತ್ರ ಇದೆ. ಹೀಗಾಗಿ ಸಾವಿನ ಚರ್ಚೆಗೆ ಅಲ್ಲಿ ತಳಹದಿ ಇಲ್ಲ’ ಎಂದು ವ್ಯಾಖ್ಯಾನಿಸಿದರು. ‘ಹೃದಯದ ಭಾಷೆ ಕನ್ನಡ. ಹೀಗಾಗಿ ಕನ್ನಡದಲ್ಲಿ ಮಾತ್ರ ಸಾಹಿತ್ಯ ರಚನೆ ಮಾಡಬಲ್ಲೆ’ ಎಂದು ಹೇಳಿದರು.

ಸಾಹಿತಿ ಚಂದ್ರಶೇಖರ ಕಂಬಾರ, ‘ನಾವು ‘ಸಾರ್ಥ’ದ ಬಗೆಗೆ ಮಾತನಾಡದಿದ್ದರೆ ನವ್ಯ ಎನಿಸಿಕೊಳ್ಳುವುದಿಲ್ಲವೇನೋ ಎಂಬ ಭಾವದಲ್ಲಿ ಆ ಕೃತಿ ಕುರಿತು ಚರ್ಚಿಸುತ್ತಿದ್ದೆವು’ ಎಂದು ತಮಾಷೆ ಧಾಟಿಯಲ್ಲಿ ಹೇಳಿದಾಗ, ಸಭಾಂಗಣ ನಗೆಗಡಲಲ್ಲಿ ತೇಲಿತು.
‘ನಾಡಭಾಷೆಗಳನ್ನು ಉಳಿಸಲು ಭೈರಪ್ಪ ಅವರ ಕಳಕಳಿ ಅಪೂರ್ವವಾದುದು. ಮಾತೃಭಾಷೆ ಉಳಿಸುವ ಹೋರಾಟಕ್ಕೆ ಅವರ ನೇತೃತ್ವದ ಅಗತ್ಯವಿದೆ’ ಎಂದು ಹೇಳಿದರು. ‘ನಾವೂ ಭೈರಪ್ಪ ಅವರ ಸಾಹಿತ್ಯದ ಅಭಿಮಾನಿಗಳು. ನಮ್ಮನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ಸೋಜಿಗ ತಂದ ಆಶಿಶ್ ನಂದಿ
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಯಾ ಗಾರದಲ್ಲಿ ಪಾಲ್ಗೊಳ್ಳಬೇಕಿದ್ದ ಹಿರಿಯ ವಿದ್ವಾಂಸ ಆಶಿಶ್ ನಂದಿ, ಕಾರ್ಯಾಗಾರ ಬಿಟ್ಟು ಸಮಾ ರಂಭಕ್ಕೆ ಬಂದಿದ್ದರು. ಸಾಂಸ್ಕೃತಿಕ ಚಿಂತನೆಯಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಭೈರಪ್ಪ ಮತ್ತು ನಂದಿ ಅವರು ಕೆಲಕಾಲ ಮಾತುಕತೆ ನಡೆಸಿದರು. ‘ನೀವು ಬಂಗಾಳ ಮೂಲದವರೇ’ ಎಂದು ಭೈರಪ್ಪ ಪ್ರಶ್ನಿಸಿದರು. ಅದಕ್ಕೆ ನಂದಿ ತಲೆ ಯಾಡಿಸಿದರು. ಕುಶಲೋಪರಿ ಬಳಿಕ ಅಭಿಮಾನಿಗಳ ಮಧ್ಯೆ ಇಬ್ಬರೂ ಬೇರೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.