ನವದೆಹಲಿ: ಈ ದೇಶದಲ್ಲಿ ಈಗಲೂ ಸ್ವಾತಂತ್ರ್ಯದ ಕನಸು ಕಾಣುತ್ತಿರುವ ಕೋಟ್ಯಂತರ ಮಕ್ಕಳಿಗೆ ಶಾಂತಿ ನೊಬೆಲ್ ಪ್ರಶಸ್ತಿ ಸಲ್ಲುತ್ತದೆ ಎನ್ನುತ್ತಾರೆ ಕೈಲಾಶ್ ಸತ್ಯಾರ್ಥಿ. ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಈ ಪ್ರಶಸ್ತಿಯ ಮಹತ್ವ ಏನು ಎನ್ನುವುದು ಕೂಡ ಅವರಿಗೆ ಗೊತ್ತಿದೆ. ಕೈಲಾಶ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಈ ಪುರಸ್ಕಾರವನ್ನು ನೀವು ಹೇಗೆ ಪರಿಭಾವಿಸುತ್ತೀರಿ?
ಇದು ವ್ಯಕ್ತಿಗೆ ಸಂದ ಗೌರವ ಅಲ್ಲ. ದಿಕ್ಕು ದೆಸೆ ಇಲ್ಲದೆ ಬಾಲ ಕಾರ್ಮಿಕರಾಗಿ ಬದುಕುತ್ತಿರುವ ಕೋಟ್ಯಂತರ ಮಕ್ಕಳಿಗೆ ಈ ಹಿರಿಮೆ ಸಲ್ಲುತ್ತದೆ. ಎಲ್ಲ ಸಂಕೋಲೆಗಳನ್ನು ಕಳಚಿಕೊಂಡು ಸ್ವತಂತ್ರ ಜೀವನ ನಡೆಸುವ ಅವಕಾಶ ಜಗತ್ತಿನ ಎಲ್ಲ ಮಕ್ಕಳಿಗೂ ಸಿಗುವಂತಾಗಬೇಕು. ಅವರು ಬಾಲ್ಯವನ್ನು ಖುಷಿಯಿಂದ ಕಳೆಯುವಂತಾಗಬೇಕು. ಜನ ಆರ್ಥಿಕತೆ ಹಾಗೂ ಮಾರುಕಟ್ಟೆಯ ಜಾಗತೀಕರಣ, ಜ್ಞಾನದ ಜಾಗತೀಕರಣದ ಬಗ್ಗೆ ಮಾತನಾಡುತ್ತಾರೆ. ಮಕ್ಕಳಿಗೆ ಅಕ್ಕರೆ ತೋರಿ ಎಂದು ನಾನು ಅವರಿಗೆ ಕರೆ ನೀಡುತ್ತೇನೆ.

* ನೀವು ಭಾರತಕ್ಕೆ ಗೌರವ ತಂದುಕೊಟ್ಟಿರಿ ಅಲ್ಲವೇ?
ಭಾರತೀಯನಾಗಿರುವುದು ನನಗೆ ಹೆಮ್ಮೆ ಎನಿಸುತ್ತದೆ. ಭಾರತವು ನೂರಾರು ಸಮಸ್ಯೆಗಳ ತೊಟ್ಟಿಲು. ಇದೇ ವೇಳೆ ಅದು ನೂರಾರು ಪರಿಹಾರಗಳ ತವರು ಕೂಡ ಹೌದು. ಬಾಲ ಕಾರ್ಮಿಕ ಸಮಸ್ಯೆ ವಿಶ್ವವ್ಯಾಪಿಯಾಗಿದೆ. ೧೯೮೨ರಲ್ಲಿ ವಿಶ್ವಸಂಸ್ಥೆಯಲ್ಲಿ ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಿಸಿ ಸಮಾವೇಶ ನಡೆದಿತ್ತು. ನಾನು ಈ ವಿಷಯವಾಗಿ ಕೆಲಸ ಮಾಡಲು ಶುರುಮಾಡಿದೆ. ಈ ಪ್ರಶಸ್ತಿಯು ೧೨೫ ಕೋಟಿ ಭಾರತೀಯರಿಗೆ ಸಲ್ಲುತ್ತದೆ ಎನ್ನುವುದು ನನ್ನ ಭಾವನೆ.

* ನೀವು ಈ ಹೋರಾಟಕ್ಕೆ ಧುಮುಕಿದ್ದು ಹೇಗೆ?
ಅದೊಂದು ಗೊತ್ತುಗುರಿಯಿಲ್ಲದ ಆರಂಭವಾಗಿತ್ತು. ಮಕ್ಕಳ ಮೇಲಿನ ಮಮಕಾರವೇ ನನ್ನನ್ನು ಈ ಹೋರಾಟಕ್ಕೆ ಎಳೆದುತಂದಿತು. ಮಧ್ಯಪ್ರದೇಶದ ವಿದಿಶಾದಲ್ಲಿ ನಾನು ಮೊದಲ ಬಾರಿ ಶಾಲೆಗೆ ಹೋದಾಗ ನನ್ನ ಓರಗೆಯ ಹುಡುಗನೊಬ್ಬ ತನ್ನ ತಂದೆಯೊಂದಿಗೆ ಬೂಟು ರಿಪೇರಿ ಮಾಡುತ್ತಿದ್ದುದನ್ನು ಕಂಡೆ.

ನಾನು ಖುಷಿಯಿಂದ, ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದರೆ, ಆ ಹುಡುಗ ತನ್ನ ಬಾಲ್ಯವನ್ನು ಮರೆತು ಅಪ್ಪನ ಜತೆ ಕೆಲಸ ಮಾಡುತ್ತಿದ್ದ. ಯಾಕೆ ಹೀಗೆ ಎಂದು ಶಿಕ್ಷಕರನ್ನು ಕೇಳಿದೆ. ಅವರು ಬಡವರು, ಕಲಿಯುವುದಕ್ಕೆ ಅವರ ಬಳಿ ಹಣ ಇಲ್ಲ ಎಂಬ ಉತ್ತರ ಸಿಕ್ಕಿತು. ನನಗೆ ಆ ಉತ್ತರಿಂದ ಸಮಾಧಾನವಾಗಲಿಲ್ಲ.

ನಿಮ್ಮ ಮಗನನ್ನು ಯಾಕೆ ಶಾಲೆಗೆ ಕಳಿಸುತ್ತಿಲ್ಲ ಎಂದು ಆ ಬಾಲಕನ ತಂದೆಯನ್ನು ಒಂದು ದಿನ ಪ್ರಶ್ನಿಸಿದ್ದೆ. ಅರೆಕ್ಷಣ ನನ್ನನ್ನು ದಿಟ್ಟಿಸಿ ನೋಡಿದ ಅವರು, ‘ನಾವು ಹುಟ್ಟಿದ್ದೇ ಕೆಲಸ ಮಾಡುವುದಕ್ಕೆ’ ಎಂದರು. ಅವರ ಮಾತನ್ನು ಅರಗಿಸಿಕೊಳ್ಳುವುದಕ್ಕೆ ನನಗೆ ಕಷ್ಟವಾಯಿತು. ಕೆಲ ಮಕ್ಕಳಿಗೆ ಯಾಕೆ ಶಿಕ್ಷಣ ಹಾಗೂ ಇತರ ಸೌಲಭ್ಯ ಸಿಗುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು.

* ಪಾಕಿಸ್ತಾನ ಹಾಗೂ ಭಾರತದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವಾಗ ನೀವು ಆ ದೇಶದ ಹೋರಾಟಗಾರ್ತಿ ಮಲಾಲಾ ಅವರ ಜತೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ?
ಇದು ನೊಬೆಲ್ ಆಯ್ಕೆ ಸಮಿತಿ ನೀಡಿದ ಹೇಳಿಕೆ. ಇದರ ಒಳಾರ್ಥವನ್ನು ಎಲ್ಲರೂ ಅರಿಯಬೇಕು. ಇದು ಕೇವಲ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕಾದ ವಿಷಯವಲ್ಲ. ಎರಡೂ ರಾಷ್ಟ್ರಗಳ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಉಭಯ ರಾಷ್ಟ್ರಗಳ ಮಕ್ಕಳು ಶಾಂತಿಯಿಂದ ಬದುಕುವ ಅವಕಾಶ ಕಲ್ಪಿಸಿಕೊಡೋಣ. ಮಕ್ಕಳು ಬಾಲ್ಯವನ್ನು ಸಂಪೂರ್ಣವಾಗಿ ಖುಷಿಯಿಂದ ಅನುಭವಿಸುವಂತಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.