ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಣ್ಣು’ ಆದೀತೆ ಹೊನ್ನು?

Last Updated 27 ಜನವರಿ 2015, 19:30 IST
ಅಕ್ಷರ ಗಾತ್ರ

ಗೃಹ ನಿರ್ಮಾಣ ಮಾಡಿ ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿದ್ದವರಿಗೆ 2014 ಅಷ್ಟೇನೂ ಲಾಭದಾಯಕವಾಗಿರಲಿಲ್ಲ. ಆಕಾರ, ವಿನ್ಯಾಸ, ವಾಸ್ತು, ಮೌಲ್ಯದಲ್ಲಿ ಏರುಪೇರು ಏನೇ ಕಸರತ್ತು ಮಾಡಿದರೂ ಗ್ರಾಹಕರನ್ನು ಒಲಿಸಿಕೊಳ್ಳುವಲ್ಲಿ ರಿಯಾಲ್ಟರ್ಸ್‌ಗೆ ಹೇಳಿಕೊಳ್ಳುವಂತಹ ಗೆಲುವೇನೂ ಸಿಗಲಿಲ್ಲ. ಹಾಗಾಗಿ 2015ರ ಮೇಲೆ ಸಹಜವಾಗಿಯೇ ಆ ಕ್ಷೇತ್ರದವರು ಭಾರೀ ನಿರೀಕ್ಷೆಯೊಂದಿಗೆ ಕನಸಿನ ಸೌಧಗಳನ್ನು ಮುಂದಿಟ್ಟುಕೊಂಡು ಕೂತಿದ್ದಾರೆ. ಮಾತ್ರವಲ್ಲ ಡೆವಲಪರ್‌ಗಳು ಲಾಭದ ಹಾದಿಗಳ, ಅವಕಾಶಗಳ ಗಣಿತದಲ್ಲಿ ತೊಡಗಿದ್ದಾರೆ.

ಭೂಮಿ ಮಾರಾಟ ಕ್ಷೇತ್ರದಲ್ಲಿ ತೊಡಗಿರುವವರಿಗೆ ಕೆಲ ವರ್ಷಗಳಿಂದೀಚೆಗೆ ‘ಮಣ್ಣು ಹೊನ್ನು’ ಆಗಿ ಉಳಿದಿಲ್ಲ. ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ಮೇಲಾದರೂ ತಮಗೆ  ಈ ಕ್ಷೇತ್ರ ಮತ್ತೆ ಹಳೆಯ ಖದರನ್ನು ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ 2014ರ ಉತ್ತರಾರ್ಧದ ಹಬ್ಬಗಳ ಸೀಸನ್‌ನಲ್ಲಿ ಕೂಡಾ ಗೃಹ ಮಾರಾಟ ಕ್ಷೇತ್ರದ ಗ್ರಾಫ್‌ ಏರುಮುಖವಾಗದೆ ಹಬ್ಬಗಳೂ ಸಿಹಿ ಉಣಿಸಲಿಲ್ಲ.

ಇದು ಗೃಹ ನಿರ್ಮಾಣ ಮತ್ತು ಮಾರಾಟ ಕ್ಷೇತ್ರದ ಕತೆಯಾದರೆ,  ಕಮರ್ಷಿಯಲ್‌ ರಿಯಲ್‌ ಎಸ್ಟೇಟ್‌, ಕಚೇರಿಗಳಿಗೆ ಲೀಸ್‌ ಕೊಡುವ/ಕೊಡಿಸುವ ವ್ಯವಹಾರದಲ್ಲಿ ತೊಡಗಿದ್ದವರಿಗೆ ಮಾತ್ರ ಸ್ವಲ್ಪ ಆಶಾದಾಯಕವಾಗಿತ್ತು. ಬಾಡಿಗೆ ದರವೂ ವರ್ಷವಿಡೀ ಯಥಾಸ್ಥಿತಿಯಲ್ಲಿತ್ತು.
ಜೇಬು ತುಂಬಲಿಲ್ಲ!

ಗೃಹ ನಿರ್ಮಾಣ ಮಾಡಿ ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿದ್ದವರಿ ಗಂತೂ 2013ರಲ್ಲಿ ಆದಂತೆಯೇ ಕಳೆದ ವರ್ಷವೂ ಜೇಬು ತುಂಬಿಕೊಳ್ಳಲೇ ಇಲ್ಲ. ಕಟ್ಟಿದ ಮನೆಗಳಿಗೆ ಗ್ರಾಹಕರು ಸಿಗದ ಕಾರಣ ಡೆವಲಪರ್‌ಗಳು ಹಣಕಾಸಿನ  ಮುಗ್ಗಟ್ಟಿ ನಿಂದ ಸೊರಗಿದರು. ಮತ್ತೊಂದು ಕಡೆ ನಿರ್ಮಾಣ ಹಂತದಲ್ಲಿನ  ಮನೆಗಳ ಖರೀದಿ ಗಾಗಿ ಮುಂಗಡ ಹಣ ಪಾವತಿಸಿದ ಕೆಲ ಗ್ರಾಹಕರಿಗೆ ಸಕಾಲಕ್ಕೆ ಕಾಮಗಾರಿ ಮುಗಿಸಿ ಕೊಡಲಾಗದ ಡೆವಲಪರ್‌ಗಳು ಗ್ರಾಹಕರ ಪ್ರತಿಭಟನೆಯನ್ನೂ ಎದುರಿಸಬೇಕಾಯಿತು. ಇದರಿಂದಾಗಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಯೋಚನೆಗಳನ್ನು ಕೈಬಿಟ್ಟು ಹಳೆಯ ಯೋಜನೆಗಳನ್ನೇ ಮುಗಿಸಬೇಕಾದ ಒತ್ತಡವೂ ಅವರ ಮೇಲೆ ಬಿತ್ತು.

ಫಲಿಸದ ತಂತ್ರಗಾರಿಕೆ
ಪರಿಸ್ಥಿತಿಯ ಒತ್ತಡ ಹೀಗಿದ್ದರೂ ಗ್ರಾಹಕರನ್ನು ಹೇಗಾದರೂ ಮಾಡಿ ಸೆಳೆಯುವ ತಂತ್ರಗಳನ್ನು ಹೆಣೆಯುವಲ್ಲಿ ಡೆವಲಪರ್‌ಗಳು ಹಿಂದೆ ಬೀಳಲಿಲ್ಲವೆನ್ನಿ. ಒಂದಷ್ಟು ರಿಯಾಯಿತಿ ದರಗಳು, ಮರುಪಾವತಿಗೆ ಉದಾರನೀತಿಯ ಆಮಿಷ ಮುಂದಿಟ್ಟರೂ ಗ್ರಾಹಕರು ಯೋಜನೆಗಳತ್ತ ಆಸಕ್ತಿ ತೋರಿಸದೆ ಇನ್ನಷ್ಟು ದರ ಕಡಿತ ಮತ್ತು ಬಡ್ಡಿ ದರದಲ್ಲಿ ಇಳಿಕೆಯ ಸಮಯಕ್ಕಾಗಿ ಕಾದುಕುಳಿತರು.
ಹೊಸ ಸರ್ಕಾರದಿಂದ ಡೆವಲಪರ್‌ಗಳು ಇಟ್ಟಿದ್ದ ನಿರೀಕ್ಷೆ ಪೂರ್ತಿಯಾಗಿ ಹುಸಿಯಾಗಲಿಲ್ಲ. ರಿಯಲ್‌ ಎಸ್ಟೇಟ್‌ ಹೂಡಿಕೆ ಟ್ರಸ್ಟ್‌ (ಆರ್‌ಇಐಟಿ)ಗಳಿಗೆ ಅನುಮತಿ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಉದಾರ ನೀತಿ ಮತ್ತು 100 ಸ್ಮಾರ್ಟ್‌ ಸಿಟಿಗಳ ನಿರ್ಮಾಣದಂತಹ ಮಹತ್ವದ ಯೋಜನೆಗಳನ್ನು ಅದು ಪ್ರಕಟಿಸಿತು.

ಈ ಯೋಜನೆಗಳು ರಿಯಲ್‌ ಎಸ್ಟೇಲ್‌ ಕ್ಷೇತ್ರದ ಮೇಲೆ ತಕ್ಷಣ ಪರಿಣಾಮ ಬೀರಲಿಲ್ಲವಾದರೂ ಈ ಎರಡು ಮಾನದಂಡಗಳು ಈ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡುವವರ ಗಮನ ಸೆಳೆಯುವುದಂತೂ ಖಚಿತ ಎಂಬುದು ತಜ್ಞರ ಅಭಿಪ್ರಾಯ.
ಈ ಮಧ್ಯೆ ರಿಯಾಲಿಟಿ ಪೋರ್ಟಲ್‌ಗಳೂ ಡೀಲ್‌ಗಳನ್ನು ಮಾಡಲು ನೆರವಾದವು.

ರಿಯಲ್‌ ಎಸ್ಟೇಟ್‌ ಕ್ಷೇತ್ರ ಹೊಸ ವರ್ಷದ ಮೇಲೆ ಇಟ್ಟಿರುವ ನಿರೀಕ್ಷೆ, ನಂಬಿಕೆಗೆ ಪುಷ್ಟಿ ಕೊಡುವಂತಹ ಬೆಳವಣಿಗೆಗಳು ಆರಂಭದಲ್ಲಿಯೇ ನಡೆದಿವೆ. ಈ ಕ್ಷೇತ್ರದ ದಿಗ್ಗಜ ಕಂಪೆನಿಗಳಲ್ಲೊಂದಾದ ಡಿಎಲ್ಎಫ್‌ನ ವಿಲಾಸಿ ಆತಿಥ್ಯ ಸರಣಿ ಅಮಾನ್‌ ರೆಸಾರ್ಟ್ಸ್‌ನ್ನು ರೂ. 2,200 ಕೋಟಿಗೆ ಮಾರಾಟ ಮಾಡಿದರೆ, ಸಹಾರಾ ಸಮೂಹವು ಗುಡಗಾಂವ್‌ನಲ್ಲಿನ ತನ್ನ 183 ಎಕರೆ ಜಮೀನನ್ನು ಎಂ3ಎಂ ಇಂಡಿಯಾ ಕಂಪೆನಿಗೆ ರೂ. 1,200 ಕೋಟಿಗೆ ಈ ತಿಂಗಳು ಮಾರಾಟ ಮಾಡಿದೆ.

ಕಳೆದ ಜನವರಿ–ಸೆಪ್ಟೆಂಬರ್‌ ಅವಧಿಯಲ್ಲಿ ರೂ. 8,900 ಕೋಟಿಯಷ್ಟು ಅಂದರೆ ದುಪ್ಪಟ್ಟು ಪ್ರಮಾಣಕ್ಕೆ ಜಿಗಿದಿದ್ದ ಖಾಸಗಿ ನಿವ್ವಳ (ಪಿಇ) ಹೂಡಿಕೆಯು ಈ ವರ್ಷಾಂತ್ಯ ದೊಳಗೆ ರೂ. 12 ಸಾವಿರ ಕೋಟಿಯನ್ನು ದಾಟುವ ನಿರೀಕ್ಷೆ ಇದೆ.

ಕಳೆದ ವರ್ಷಾಂತ್ಯದಲ್ಲಿ ಸರ್ಕಾರ ನಿರ್ಮಾಣ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಜಾರಿಯಲ್ಲಿದ್ದ ನೀತಿಯನ್ನು ಸಡಿಲಿಸಿತು. ಅಲ್ಲದೆ ಹೂಡಿದ ಬಂಡವಾಳ ಮೂರು ವರ್ಷದಲ್ಲಿ ಸ್ವದೇಶಕ್ಕೆ ವಾಪಸು ಬರಬೇಕು ಎಂಬ ‘ಲಾಕ್‌ ಇನ್‌’ ಅವಧಿಯನ್ನೂ ಈ ಹೊಸ ನೀತಿ ಒಳಗೊಂಡಿರುವುದು ವಿಶೇಷ.

ಆದರೆ ಸರ್ಕಾರ ಪ್ರಕಟಿಸಿರುವ ಹೊಸ ನೀತಿ ಬಗ್ಗೆ ಡೆವಲಪರ್‌ಗಳು ತಕರಾರು ಎತ್ತಿ ದ್ದಾರೆ. ಅಂದರೆ ಬಡ್ಡಿ ದರವನ್ನು ಇಳಿಸಿ ಹೆಚ್ಚಿನ ಆರ್ಥಿಕ ಪ್ರಗತಿಯನ್ನು ನಿರೀಕ್ಷಿಸಿ ರುವುದು ಭೂ ವ್ಯವಹಾರ ಕ್ಷೇತ್ರಕ್ಕೆ ಪುನರುಜ್ಜೀವನ ನೀಡುವ ನಿಟ್ಟಿನಲ್ಲಿ  ಸಹಕಾರಿ ಯಾಗಲಾರದು ಎಂಬುದು ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಕ್ಷೇತ್ರದ ತಜ್ಞರ ಅಭಿಪ್ರಾಯ.

ಕಳೆದ ಐದು ವರ್ಷಗಳಲ್ಲೇ 2014 ಅತ್ಯಂತ ಸವಾಲಿನ ವರ್ಷವಾಗಿತ್ತು. ಮುಂದಿನ ವರ್ಷ ಭೂಮಿ ವ್ಯವಹಾರ ಕ್ಷೇತ್ರದಲ್ಲಿ ಲಾಭದಾಯಕವಾಗಲಿದೆ ಎಂಬ ನಿರೀಕ್ಷೆಯಿಟ್ಟುಕೊಂಡಿದ್ದೇವೆ. ಬಡ್ಡಿ ದರ ಇಳಿಕೆ ಹಾಗೂ ಏಕಗವಾಕ್ಷಿ  ವಿಲೇವಾರಿ ವ್ಯವಸ್ಥೆ ಜಾರಿಗೆ ಬಂದರೆ ಇದು ಸಾಧ್ಯವಾಗಲಿದೆ. ಯೋಜನೆಗಳಿಗೆ ಆನ್‌ಲೈನ್‌ ಅನುಮತಿ, ಕಡಿಮೆ ತೆರಿಗೆ ಮತ್ತು ಜಮೀನಿನ ಹೆಚ್ಚಿನ ಭಾಗವನ್ನು ಕಟ್ಟಡ ನಿರ್ಮಿಸಲು ಅವಕಾಶವೂ ಸಿಗಬೇಕಿದೆ ಎಂದು ಜೈನ್‌ ಹೇಳುತ್ತಾರೆ.

***
ಪ್ರಾಪರ್ಟಿ ಕನ್ಸಲ್ಟೆಂಟ್‌ ಜೆಎಲ್ಎಲ್‌ ಇಂಡಿಯಾದ ಅಧ್ಯಕ್ಷ ಮತ್ತು ರಾಷ್ಟ್ರೀಯ ಮುಖ್ಯಸ್ಥ ಅನುಜ್‌ ಪುರಿ ಅವರೂ ಪ್ರಸಕ್ತ ವರ್ಷದ ಬಗ್ಗೆ ಬಹಳ ನಿರೀಕ್ಷೆಯಿರುವುದನ್ನು ಒಪ್ಪಿಕೊಳ್ಳುತ್ತಾರೆ. ಖರೀದಿ ದರಗಳು ಖಂಡಿತವಾಗಿಯೂ ಇಳಿಮುಖವಾಗಲಿವೆ. ಡೆವಲಪರ್‌ಗಳು ತಮ್ಮ ಹೂಡಿಕೆಯ ಯೋಜನೆಗಳನ್ನು ಮಾರಾಟ ಮಾಡುವುದಕ್ಕಾಗಿ ಗ್ರಾಹಕರನ್ನು ಓಲೈಸುತ್ತಿವೆ.

–ಲಲಿತ್‌ ಕುಮಾರ್‌ ಜೈನ್‌, ಕ್ರೆಡಾಯ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT