ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಹಿತಿ ಬಹಿರಂಗಕ್ಕೆ ಸ್ವಿಟ್ಜರ್ಲೆಂಡ್‌ ಸಿದ್ಧ’

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಸ್ವಿಟ್ಜರ್ಲೆಂಡ್‌ ಬ್ಯಾಂಕು­ಗಳಲ್ಲಿ ಕಪ್ಪು ಹಣ  ಇಟ್ಟಿದ್ದಾರೆ ಎನ್ನಲಾದ ಭಾರತೀ­ಯರ ಹೆಸರು­ಗಳನ್ನು ಒಳಗೊಂಡ ಮಾಹಿ­ತಿ ನೀಡುವುದಕ್ಕೆ ಸಿದ್ಧವಿರುವುದಾಗಿ  ಅಲ್ಲಿನ ಸರ್ಕಾರ ಸುಳಿವು ನೀಡಿದೆ ಎಂದೂ ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

‘ಭಾರತದ ಆದಾಯ ತೆರಿಗೆ ಇಲಾಖೆಯು ಸ್ವತಂತ್ರ ತನಿಖೆ ನಡೆಸು­ತ್ತಿರುವ ಪ್ರಕರಣಗಳ ಬಗ್ಗೆ  ಮಾಹಿತಿ ನೀಡುವುದಕ್ಕೆ ಅಲ್ಲಿನ ಸರ್ಕಾರ ಸಿದ್ಧವಿದೆ. ಇಂಥ ಎಷ್ಟೋ ಪ್ರಕರಣ­ಗಳನ್ನು ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ. ಆದ ಕಾರಣ ಇದೊಂದು ಮಹತ್ವದ ಬೆಳವಣಿಗೆ’ ಎಂದೂ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಈ ಮೊದಲು,  ಸ್ವಿಟ್ಜರ್ಲೆಂಡ್‌  ಸರ್ಕಾರ  ಇಂಥ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿತ್ತು.  ತನ್ನ ದೇಶದ ಕಾನೂನು ಉಲ್ಲಂಘಿಸಿ ಈ ಮಾಹಿತಿಗಳನ್ನು ಪಡೆಯಲಾಗಿದೆ. ಹಾಗಾಗಿ ಇವು ‘ಕದ್ದ ಮಾಹಿತಿಗಳು’ ಎಂದು ಅದು ಹೇಳಿತ್ತು. ಪೂರ್ಣ ಪಟ್ಟಿ ಬಹಿರಂಗಕ್ಕೆ ಅಡ್ಡಿ: ವಿದೇಶಗಳೊಂದಿಗೆ ಮಾಡಿಕೊಂಡಿ­ರುವ ದ್ವಿಮುಖ ತೆರಿಗೆ ತಪ್ಪಿಸುವ ಒಪ್ಪಂದದ (ಡಿಟಿಎಟಿ) ಗೋಪ್ಯತಾ ಷರತ್ತಿನ ಕಾರಣ­ದಿಂದಾಗಿ  ಸರ್ಕಾರಕ್ಕೆ ವಿದೇಶಿ ಬ್ಯಾಂಕುಗಳಲ್ಲಿ ಹಣ ಇಟ್ಟಿರುವವರ ಪೂರ್ಣ ಪಟ್ಟಿಯನ್ನು ಏಕಾಏಕಿ ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ. ಕೋರ್ಟ್‌­ನಲ್ಲಿ ಪ್ರಕರಣ ದಾಖಲಿಸಿದ ನಂತರವೇ ಹೆಸರು ಬಹಿರಂಗಪಡಿಸಬಹುದು. ಭಾರತವು ೮೦ಕ್ಕೂ ಹೆಚ್ಚು ದೇಶಗಳೊಂದಿಗೆ ಈ ಒಪ್ಪಂದ ಮಾಡಿಕೊಂಡಿದೆ.

--ವೆಬ್‌ಸೈಟ್‌ನಲ್ಲಿ ಮಾಹಿತಿ ಮಾಯ!
ಕಪ್ಪುಹಣದ ಪಟ್ಟಿಯಲ್ಲಿ ತನ್ನ  ಮಾಲೀಕ ಪಂಕಜ್‌  ಚಿಮನ್‌ಲಾಲ್‌್ ಲೋಧಿಯಾ ಹೆಸರು ಬಹಿರಂಗ­ಗೊಂಡಿದ್ದೇ ತಡ  ರಾಜ್‌ಕೋಟ್‌ನ ಶ್ರೀಜಿ ಸಮೂಹವು ತನ್ನ ವೆಬ್‌ಸೈಟ್‌ನಿಂದ ಪ್ರಮುಖ ಮಾಹಿತಿಗಳನ್ನು ತೆಗೆದುಹಾಕಿದೆ. ಪಂಕಜ್‌ ಅವರು ಶ್ರೀಜಿ ಟ್ರೇಡಿಂಗ್‌ ಕಂಪೆನಿಯ ಮಾಲೀಕ. ಈ ಮೊದಲು ಕಂಪೆನಿಯು ಗುಜರಾತ್‌್ ಹಾಗೂ ಇತರ ರಾಜ್ಯಗಳಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿತ್ತು. ಶ್ರೀಜಿ ಆರ್ನಮೆಂಟ್ಸ್‌ ಪ್ರೈವೆಟ್‌ ಲಿಮಿಟೆಡ್‌, ವಜ್ರ ಹಾಗೂ ಚಿನ್ನದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಬೆಂಗಳೂರು, ಅಹಮದಾಬಾದ್‌, ದೆಹಲಿ, ಜೈಪುರ, ಇಂದೋರ್‌, ರಾಯ್‌ಪುರ ಮತ್ತಿತರ ಕಡೆ ಇದರ ಶಾಖೆಗಳು ಇವೆ.

ಕಾಂಗ್ರೆಸ್‌ ಆಗ್ರಹ
ವಿದೇಶಗಳಲ್ಲಿ ಕಪ್ಪು ಹಣ ಇಟ್ಟಿರುವ ವ್ಯಕ್ತಿಗಳ ಸಂಪೂರ್ಣ ಪಟ್ಟಿ ಬಹಿರಂಗ­ಪಡಿಸಲು ಎನ್‌ಡಿಎ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ. ‘ಅಧಿಕಾರಕ್ಕೆ  ಬಂದಲ್ಲಿ ೧೦೦ ದಿನಗಳ ಒಳಗೆ ವಿದೇಶದಲ್ಲಿರುವ ಕಪ್ಪು ಹಣ­ವಾಪಸ್‌ ತರಿಸಿಕೊಳ್ಳುವು­ದಾಗಿ ಬಿಜೆಪಿ ಆಶ್ವಾಸನೆ ನೀಡಿತ್ತು. ಅಲ್ಲದೇ ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮ ಹಣ ಇಟ್ಟಿರುವ ಎಲ್ಲ ಖಾತೆದಾರರ ಹೆಸರು­ಗಳನ್ನೂ ಬಹಿರಂಗಪಡಿಸುವುದಾಗಿ ಚುನಾ­ವಣಾ ಪ್ರಚಾರದ ವೇಳೆ ಭರವಸೆ ನೀಡಿತ್ತು. ಈಗ ಆಗಿದ್ದೇ ಬೇರೆ’  ಎಂದು ಕಾಂಗ್ರೆಸ್‌ ವಕ್ತಾರ ಸಂಜಯ್‌ ಝಾ ಹೇಳಿದ್ದಾರೆ.

‘ನಮ್ಮ ಸರ್ಕಾರ ಇದ್ದಾಗ ಇಂಥ ೨೬ ಹೆಸರುಗಳನ್ನು ಸುಪ್ರೀಂಕೋರ್ಟ್‌ ಮುಂದೆ ಬಹಿರಂಗಪಡಿಸಿತ್ತು. ಎಲ್ಲ ಹೆಸರುಗಳನ್ನು ಬಹಿರಂಗಪಡಿಸಲು ಎನ್‌ಡಿಎ ಸರ್ಕಾರ ಹಿಂದೇಟು ಹಾಕುತ್ತಿದೆ. ಆದ ಕಾರಣ ಕಪ್ಪು ಹಣದ ವಿಷಯದಲ್ಲಿ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ’ ಎಂದೂ ಅವರು ಟೀಕಿಸಿದ್ದಾರೆ. ಸಿಪಿಐನ ಗುರುದಾಸ್‌ ದಾಸ್‌ಗುಪ್ತ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ‘ಮೂವರು ಉದ್ಯಮಿಗಳ ಹೆಸರುಗಳನ್ನು ಮಾತ್ರ ಸರ್ಕಾರ ಬಹಿರಂಗಪಡಿಸಿದೆ. ಸಂಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಣೀತ್‌ ಕೌರ್‌ ಸ್ಪಷ್ಟನೆ
ವಿದೇಶಗಳಲ್ಲಿ ಕಪ್ಪುಹಣ ಇರಿಸಿದವರ ಪೈಕಿ ಕಾಂಗ್ರೆಸ್‌ನ  ಕೆಲ ನಾಯಕರ ಹೆಸರು ಕೇಳಿಬಂದಿದ್ದು ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಕಳುಹಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆ ಮಾಜಿ ಸಚಿವೆ ಪ್ರಣೀತ್‌ ಕೌರ್‌ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ವಿದೇಶಿ ಖಾತೆಗೆ ಸಂಬಂಧಿಸಿದಂತೆ 2011ರಲ್ಲಿ ತಮಗೆ ಆದಾಯ ತೆರಿಗೆ ಇಲಾಖೆ  ಕಳುಹಿಸಿದ್ದ ನೋಟಿಸ್‌ಗೆ  ಉತ್ತರಿಸಿದ್ದಾಗಿ ತಿಳಿಸಿದ್ದಾರೆ. ತಾವು ವಿದೇಶದ ಯಾವುದೇ  ಬ್ಯಾಂಕ್‌ನಲ್ಲಿ ಖಾತೆ ಹೊಂದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT