ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀನಾಕ್ಷಿ’ ಕಬಳಿಸಿದ ಹುತಾತ್ಮರ ವೃತ್ತ

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ವಿಜಯಪುರದಲ್ಲಿ ಹುತಾತ್ಮರ ಚೌಕ ಎಲ್ಲಿದೆ ಎಂದು ಕೇಳಿದರೆ ಯಾರೂ ಹೇಳುವುದಿಲ್ಲ. ಅದಕ್ಕೆ ಇನ್ನೊಂದು ಹೆಸರೂ ಇದೆ. ಅದು ಮೀನಾಕ್ಷಿ ಚೌಕ. ಅದೇ ಜನಪ್ರಿಯವೂ ಕೂಡ. ಮೀನಾಕ್ಷಿ ಚೌಕ ಎಂದರೆ ಎಲ್ಲರಿಗೂ ಗೊತ್ತು. ಈಗ ಅದು ಹಲವು ವಾಣಿಜ್ಯ ಚಟುವಟಿಕೆಗಳ ಜನನಿಬಿಡ ಕೇಂದ್ರ. ಹಿಂದೆ ಅದು ನಗರ ಸಂಚಾರಿ ವಾಹನಗಳ ನಿಲ್ದಾಣವೂ ಆಗಿತ್ತು. ಆಗ ಸಿಟಿ ಬಸ್ಸುಗಳ ಹಣೆಯ ಮೇಲೆ ‘ಮೀನಾಕ್ಷಿ ಚೌಕ’ ಎಂಬ ಹೆಸರು ರಾರಾಜಿಸಿದ್ದೂ ಉಂಟು.

ಈ ಮೀನಾಕ್ಷಿ ಯಾರು? ಅವಳ ಹೆಸರು ಈ ಚೌಕಿಗೆ ಹೇಗೆ ಬಂತು ಎಂಬುದು ಈಗಿನ ಪೀಳಿಗೆಗೆ ಗೊತ್ತಿಲ್ಲ.  ಅವರೇನಾದರೂ ಈ ವೃತ್ತದ ಎಲ್ಲ ದಿಕ್ಕುಗಳಿಗೂ ಹೋಗಿ, ಎಲ್ಲಾದರೂ ಮೀನಾಕ್ಷಿ ಎಂಬ ಹೆಸರು ಇದೆಯೋ ಎಂದು ನೋಡಿದರೆ; ಅದು ಅಲ್ಲೆಲ್ಲು ಸಿಗುವುದಿಲ್ಲ.

ಸುಮಾರು 20–30­ ವರ್ಷಗಳ ಹಿಂದೆ ಇಲ್ಲೊಂದು ಉಪಹಾರ ಗೃಹವಿತ್ತು. ಅದರ ಹೆಸರು ‘ಮೀನಾಕ್ಷಿ ಭವನ’. ಅದೇ ಹೆಸರಿನಿಂದ ಜನ ಈ ವೃತ್ತವನ್ನು ಗುರುತಿಸುವಂತಾಯಿತು. ಮೀನಾಕ್ಷಿ ಎಂಬುದು ಆ ಉಪಾಹಾರ ಗೃಹದ ಮಾಲೀಕನ ಮಗಳದೋ, ಮಡದಿಯದೋ  ಸಹೋದರಿಯದೋ ಹೆಸರಾಗಿರಬಹುದು. ಆತ ಪೂಜಿಸುವ ದೇವತೆಯ ಹೆಸರೂ ಆಗಿರಬಹುದು. ಈಗ ಮೀನಾಕ್ಷಿ ಭವನ ಅಲ್ಲಿಲ್ಲ. ಅದು ಬೆಂಕಿಗೆ ಆಹುತಿಯಾಗಿ ಬಹಳ ದಿನಗಳಾದವು. ಈಗ ಅಲ್ಲಿರುವುದು ದೀಪಕ ಡೈರಿ (ಜಮಖಂಡಿ) ಎಂಬ ಅಂಗಡಿ.  ಎಂದೋ ಇದ್ದ ಹೋಟೆಲೊಂದರ ಹೆಸರು ಇಂದೂ ಅಮರವಾಗಿ ಉಳಿದಿರುವುದು ಸೋಜಿಗದ ಸಂಗತಿ.

ಹುತಾತ್ಮರ ವೃತ್ತದ ಸ್ತಂಭದ ಮೇಲೆ ‘ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರು’ ಎಂದು ಬರೆಯಲಾಗಿದೆ. ಅದರ ಕೆಳಗೆ ಬಸಲಿಂಗಪ್ಪ ವೀರಸಂಗಪ್ಪ ದೇಶಮುಖ ಎಂಬ ಹೆಸರೂ ಇದೆ. ಈ ಬರಹ ಎಷ್ಟು ಸಣ್ಣ ಅಕ್ಷರಗಳಿಂದ ಕೂಡಿದೆ ಎಂದರೆ, ಆ ಸ್ತಂಭದ ಹತ್ತಿರ ಹೋಗಿ ದಿಟ್ಟಿಸಿ ನೋಡಿದಾಗ ಮಾತ್ರ ಅದು ಕಾಣುತ್ತದೆ.  ಬಹುಶಃ ಈ ಕಾರಣದಿಂದಾಗಿಯೇ ಹುತಾತ್ಮರ ವೃತ್ತ ಎಂಬ ನಿಜವಾದ ಹೆಸರು ಜನರ ಅರಿವಿಗೆ ಬರದೇ ಹೋಗಿದೆ. ಮಹಾನಗರ ಪಾಲಿಕೆ ಈ ವೃತ್ತದ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಎಲ್ಲರಿಗೂ ಕಾಣುವಂತೆ ಬರೆಯಿಸಿ, ಈ ವೃತ್ತದ ನಿಜ ನಾಮವನ್ನು ಪ್ರಸಿದ್ಧಿಗೊಳಿಸುವ ಅವಶ್ಯಕತೆ ಇದೆ.

1857ರಲ್ಲಿ ಆರಂಭವಾದ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಹುತಾತ್ಮರಾದ ತಂದೆ ವೀರಸಂಗಪ್ಪ ಹಾಗೂ ಅವರ ಮಗ ಬಸಲಿಂಗಪ್ಪ ದೇಶಮುಖ ಅವರ ಸ್ಮರಣಾರ್ಥ ಈ ವೃತ್ತವನ್ನು ನಿರ್ಮಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 25 ವರ್ಷಗಳ ನಂತರ, ಸ್ವಾತಂತ್ರ್ಯದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ 1972ರಲ್ಲಿ ಈ ವೀರಗಲ್ಲನ್ನು ಸ್ಥಾಪಿಸಲಾಯಿತು. ಇದಕ್ಕೆ ಸಂಬಂಧಿಸಿದ ಠರಾವನ್ನು ಆಗಿನ ವಿಜಾಪುರ ನಗರ ಸಭೆ ಅಂಗೀಕರಿಸಿತ್ತು.

1857ರ ಸಿಪಾಯಿ ದಂಗೆ ಚಾಲ್ತಿ ಇರುವಾಗ ಮುಂಬೈ ಕರ್ನಾಟಕ ಪ್ರಾಂತದ, ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿಕೊಂಡವರು ಸುರಪುರದ ರಾಜಾ ವೆಂಕಟಪ್ಪ ನಾಯಕ.  ಅವರು ಈ ಭಾಗದ ಸರದಾರರಿಗೆ, ದೇಸಾಯರಿಗೆ, ದೇಶಮುಖರಿಗೆ, ಗೌಡರಿಗೆ, ಜಹಗೀರದಾರರಿಗೆ ದಂಗೆ ಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದರು.  ಅದಕ್ಕೆ ಕೊಟ್ನಾಳ ದೇಶಮುಖ ಮನೆತನದ ವೀರಸಂಗಪ್ಪ ಹಾಗೂ ಅವರ ಮಗ ಬಸಲಿಂಗಪ್ಪ ಸಕ್ರಿಯವಾಗಿ ಸ್ಪಂದಿಸಿದರು.

ಆಂಗ್ಲರ ವಿರುದ್ಧ ಹೋರಾಡಲು ಬಹಳಷ್ಟು ಮದ್ದು-ಗುಂಡುಗಳನ್ನು ಸಂಗ್ರಹಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದರು.  ಆದರೆ ಅವರು ಬ್ರಿಟಿಷರ ತಂತ್ರಗಾರಿಕೆಗೆ ಒಳಗಾಗಿ ಜೈಲು ಸೇರಿದರು. ‘ನಿಮಗೆ ಪ್ರೇರಣೆ ನೀಡಿದ ನಾಯಕ ಯಾರು ಎಂದು ಹೇಳಿದರೆ 4 ಸಾವಿರ ಎಕರೆ ಭೂಮಿಯನ್ನು ಮರಳಿ ಕೊಡುತ್ತೇವೆ’ ಎಂದು ಬ್ರಿಟಿಷರು ಆಮಿಷ ಒಡ್ಡಿದರು. ಇದಾವುದಕ್ಕೂ ಜಗ್ಗದ ಈ ಅಪ್ಪ-ಮಗನನ್ನು ಗಲ್ಲಿಗೇರಿಸಲಾಯಿತು.

ಭಾರತ ಸ್ವಾತಂತ್ರ್ಯ ಹೋರಾಟದ ವೀರರಾಣಿ ಕಿತ್ತೂರ ಚೆನ್ನಮ್ಮನ ನಾದಿನಿ (ಗಂಡನ ಸಹೋದರಿ) ಪಾರ್ವತಿಯು ವೀರಸಂಗಪ್ಪ ದೇಶಮುಖರ ಸೊಸೆಯಾಗಿದ್ದಳು. ಆ ಮೂಲಕ ಚೆನ್ನಮ್ಮನ ಧೀಮಂತಿಕೆಯ ಪರಿಚಯ-ಪ್ರೇರಣೆ ಕೊಟ್ನಾಳದ ದೇಶಮುಖರಿಗೆ ಬಲ ನೀಡಿರಬೇಕು. ವೀರಸಂಗಪ್ಪ ಹಾಗೂ ಅವರ ಮಗ ಬಸಲಿಂಗಪ್ಪ ದೇಶಮುಖ ಅವರ ವೀರಗಾಥೆಯನ್ನು ಸಾರಬೇಕಾದ ಹುತಾತ್ಮರ ಚೌಕ, ಹಳೆಯ ಹೋಟೆಲೊಂದರ ಹೆಸರಿನಲ್ಲಿ ಮಸುಕಾಗಿರುವುದು ಶೋಚನೀಯ ಸಂಗತಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT