ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಮೇಶ್‌ ಕುಮಾರ್‌ ಸಮಿತಿ ಶಿಫಾರಸು ಸಮಗ್ರ ಜಾರಿ’

ಪಂಚಾಯತ್ ಮಸೂದೆ
Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿಧಾನಮಂಡಲದ ಅನುಮೋದನೆ ಪಡೆದಿರುವ ‘ಕರ್ನಾಟಕ ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆ– 2015’ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ.

*ರಮೇಶ್‌ ಕುಮಾರ್‌ ನೇತೃತ್ವದ ಸಮಿತಿಯ ಶಿಫಾರಸುಗಳಲ್ಲಿ ಕೇವಲ ಮೂರನ್ನು ಬಿಟ್ಟು ಉಳಿದವನ್ನು  ಪರಿಗಣಿಸದಿರಲು ಕಾರಣವೇನು?
ಸಮಿತಿಯ ಎಲ್ಲ ಶಿಫಾರಸುಗಳನ್ನೂ ಸರ್ಕಾರ ಪರಿಗಣಿಸುತ್ತದೆ. ಶಿಫಾರಸುಗಳ ಜಾರಿ ಕುರಿತ ಶೇ 75ರಷ್ಟು ಕಾರ್ಯ ಪೂರ್ಣಗೊಂಡಿದೆ. ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬೇಕಿರುವುದರಿಂದ, ಅದಕ್ಕೆ ಸಂಬಂಧಿಸಿದ ಐದು ಅಂಶಗಳನ್ನು ಮಾತ್ರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ್ದೇವೆ.

ಇವುಗಳಲ್ಲಿ ಈ ಸಮಿತಿಯ ಶಿಫಾರಸುಗಳು ಹಾಗೂ ಸಂಪುಟ ಉಪ ಸಮಿತಿಯ ಶಿಫಾರಸುಗಳು ಸೇರಿವೆ. ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿದೆ. ಅವರು ಕೆಲವು ವಿವರಣೆ ಬಯಸಿದ್ದಾರೆ. ರಮೇಶ್‌ ಕುಮಾರ್‌ ಸಮಿತಿ ವರದಿಯಲ್ಲಿರುವ ಇತರ ಶಿಫಾರಸುಗಳನ್ನೂ  ಸರ್ಕಾರ ಶೀಘ್ರವೇ ಸಮಗ್ರವಾಗಿ ಜಾರಿಗೆ ತರಲಿದೆ.

*ಮತದಾನ ಕಡ್ಡಾಯ ಸಂವಿಧಾನ ವಿರೋಧಿ ಧೋರಣೆ ಅಲ್ಲವೇ?
ಜಗತ್ತಿನಲ್ಲಿ 22 ರಾಷ್ಟ್ರಗಳು ಮತದಾನವನ್ನು ಕಡ್ಡಾಯಗೊಳಿಸಿವೆ. ನಮ್ಮ  ದೇಶದಲ್ಲೂ ಗುಜರಾತ್‌ ಮತ್ತು ರಾಜಸ್ತಾನಗಳಲ್ಲಿ ಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯಗೊಳಿಸಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳೂ ಇದನ್ನು ಒಪ್ಪಿವೆ. ಖಂಡಿತಾ ಇದು ಸಂವಿಧಾನ ವಿರೋಧಿ ಕ್ರಮವಲ್ಲ.

ಆರೋಗ್ಯಪೂರ್ಣ ಪ್ರಜಾಪ್ರಭುತ್ವ ಇರಬೇಕೆಂದು ಸಂವಿಧಾನವು ಬಯಸುತ್ತದೆ. ಮತದಾನದ ವೇಳೆ ನೋಟಾ (None Of the above)  ಆಯ್ಕೆಯನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್‌ ಏಕೆ ಸೂಚಿಸಿತು? ಶೇ 100 ಮತದಾನ ನಡೆಯಬೇಕೆಂಬುದೇ ಇದರ ಉದ್ದೇಶ.

*ಮತದಾನ ಮಾಡದಿರುವುದಕ್ಕೆ ದಂಡ ಅಥವಾ ಶಿಕ್ಷೆ ಇಲ್ಲ. ಹಾಗಾಗಿ ಇದು ಪರಿಣಾಮಕಾರಿ ಆಗಬಲ್ಲದೆ?
ಶಿಕ್ಷೆಗೂ ಮೀರಿದ ಕೆಲವು ಬದ್ಧತೆಗಳು ಇರುತ್ತವೆ. ನಾವು ಒಂದು ಸಕಾರಾತ್ಮಕ ಬದಲಾವಣೆ ತರಲು ಮುಂದಾಗಿದ್ದೇವೆ. ಅದನ್ನು ಸ್ವಾಗತಿಸಬೇಕು. 22 ರಾಷ್ಟ್ರಗಳಲ್ಲಿ ಕಡ್ಡಾಯ ಮತದಾನ ಜಾರಿಯಲ್ಲಿದ್ದರೂ, ಮತದಾನ ಮಾಡದ ತಪ್ಪಿಗೆ ಕೇವಲ 10 ರಾಷ್ಟ್ರಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗುತ್ತಿದೆ.

ಕೆಲವು ದೇಶಗಳು ಪಾಸ್‌ಪೋರ್ಟ್‌ ತಡೆಹಿಡಿದರೆ, ಇನ್ನು ಕೆಲವೆಡೆ ಬಡ್ತಿ  ನೀಡುವುದಿಲ್ಲ. ನಮ್ಮಲ್ಲೂ, ಮತದಾನ ಮಾಡದವರ ಪಡಿತರ ಚೀಟಿ ರದ್ದುಪಡಿಸಿ ಎಂದು ಸಲಹೆ ನೀಡುವವರಿದ್ದಾರೆ. ಆದರೆ, ನಮ್ಮ ಉದ್ದೇಶ ಅದಲ್ಲ. ಜನರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವುದು, ಮತದಾನದಲ್ಲಿ ಭಾಗವಹಿಸುವುದರ ಮಹತ್ವವನ್ನು ಮನವರಿಕೆ ಮಾಡುವುದು, ಈ ವ್ಯವಸ್ಥೆ ರೂಪಿಸುವಲ್ಲಿ ಜನರೂ ಕಾರ್ಯತತ್ಪರರಾಗುವಂತೆ ಮಾಡುವುದು ನಮ್ಮ ಆಶಯ.

*ಕಡ್ಡಾಯ ಮತದಾನ ಪಂಚಾಯತ್‌ ಚುನಾವಣೆಗೆ ಸೀಮಿತವೇ?
ನಮ್ಮ ವ್ಯಾಪ್ತಿಯಲ್ಲಿರುವ ಅವಕಾಶ ಬಳಸಿಕೊಂಡು ಪಂಚಾಯತ್‌ ರಾಜ್‌ ಮಟ್ಟದಲ್ಲಿ ಇದನ್ನು ಜಾರಿಗೊಳಿಸಿದ್ದೇವೆ. ಇದನ್ನು ಇನ್ನಷ್ಟು ಉನ್ನತ ಸ್ತರಕ್ಕೆ ವಿಸ್ತರಿಸುವ ಬಗ್ಗೆ ಸಂಸತ್ತು ತೀರ್ಮಾನ ಕೈಗೊಳ್ಳಬೇಕು.

*ಅಧ್ಯಕ್ಷರ ಅಧಿಕಾರದ ಅವಧಿ 5 ವರ್ಷಗಳಿಗೆ ಹೆಚ್ಚಿಸುವುದರಿಂದ ಯಾವ ರೀತಿಯ ಪ್ರಯೋಜನ ನಿರೀಕ್ಷಿಸುತ್ತೀರಿ?
ಇದರಿಂದ ನಾಯಕತ್ವ ಬೆಳೆಸುವುದು ಸಾಧ್ಯವಾಗುತ್ತದೆ. ಆರು ತಿಂಗಳಿಗೊಮ್ಮೆ ಅಧ್ಯಕ್ಷರನ್ನು ಬದಲಾಯಿಸಿದರೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಕಷ್ಟ.

*ರಾಜಕೀಯ ಕಾರಣಗಳಿಗಾಗಿ ಅಧ್ಯಕ್ಷರ ಅವಧಿ ಹಂಚಿಕೆಗೆ ಹೇಗೆ ಕಡಿವಾಣ ಹಾಕುತ್ತೀರಿ?
ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡಿದ ಬಳಿಕ 30 ತಿಂಗಳು ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಿಲ್ಲ. ಸ್ವತಃ ಅಧ್ಯಕ್ಷರೇ ರಾಜೀನಾಮೆ ನೀಡುವುದಕ್ಕೂ ಕಟ್ಟುನಿಟ್ಟು ನಿಯಮ ತರುತ್ತೇವೆ.

*ಮಹಿಳೆಯರ ಮೀಸಲು ಶೇ 50ಕ್ಕೆ ಸೀಮಿತಗೊಳಿಸಿದ್ದೇಕೆ?
ಹಿಂದೆ ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ 50ಕ್ಕೆ ಕಡಿಮೆ ಆಗದಂತೆ ನಿಗದಿಗೊಳಿಸಬೇಕಿತ್ತು. ಆದರೆ, ಇದಕ್ಕೆ ಶೇ 50ರ ಮಿತಿ ಇರಲಿಲ್ಲ.  ಇದರಿಂದ ಮೀಸಲಾತಿ ವರ್ಗಗಳಿಗೆ  ಸ್ಥಾನ ನಿಗದಿಪಡಿಸುವಾಗ ಶೇ 70– 80ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗುತ್ತಿದ್ದವು. ಇದರಿಂದ ಈ ವರ್ಗಗಳ  ಪುರುಷರು ಅವಕಾಶ ವಂಚಿತರಾಗುತ್ತಿದ್ದರು. ಹೀಗಾಗಿ ಚುನಾವಣಾ ಆಯೋಗದ ಸಲಹೆ ಆಧರಿಸಿ ಸಂಪುಟ ಉಪಸಮಿತಿ ಈ ನಿರ್ಧಾರ ಕೈಗೊಂಡಿದೆ.

*ಗ್ರಾಮ ಸಭೆಗಳ ಮಹತ್ವ  ಹೆಚ್ಚಿಸಲು ಏನು ಕ್ರಮ ಕೈಗೊಂಡಿದ್ದೀರಿ?
ಗ್ರಾಮ ಸಭೆಗಳನ್ನು ಸಶಕ್ತಗೊಳಿಸುವುದಕ್ಕಾಗಿ ರಮೇಶ್‌ ಕುಮಾರ್‌ ನೇತೃತ್ವದ ಸಮಿತಿ ಅನೇಕ ಶಿಫಾರಸುಗಳನ್ನು ಮಾಡಿದೆ. ಇವುಗಳನ್ನು ಆಧರಿಸಿ ಕಾನೂನು ತಿದ್ದುಪಡಿ ತರುತ್ತೇವೆ. ಗ್ರಾಮದ ಜನತೆ ಸ್ಥಳೀಯ ಸಂಸ್ಥೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಗ್ರಾಮಗಳ ಪುನರ್ನಿರ್ಮಾಣದಲ್ಲಿ ಜನರ ಪಾತ್ರ ಹೆಚ್ಚಬೇಕು.
 

ನಿರಂಕುಶ ಪ್ರಭುತ್ವ
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು 30 ತಿಂಗಳವರೆಗೆ ಅವಕಾಶವಿಲ್ಲ. ಇದು  ನಿರಂಕುಶ ಪ್ರಭುತ್ವಕ್ಕೆ ದಾರಿ ಮಾಡುತ್ತದೆ. ಅಧ್ಯಕ್ಷರು ಸದಸ್ಯರ ಹಿಡಿತದಿಂದ ದೂರಾಗಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬಹುದು. ಇನ್ನು ಅಧ್ಯಕ್ಷರ ನೇರ ಆಯ್ಕೆಯೂ  ಬೇಡ. ಸದಸ್ಯರ ಬಹುಮತದಿಂದ ಆಯ್ಕೆಯಾಗಬೇಕು. 

ಇಲ್ಲವಾದರೆ ಅಧ್ಯಕ್ಷರಾಗುವವರು ತಮ್ಮ ಆಯ್ಕೆಗೆ ಹಣದ ಹೊಳೆ ಹರಿಸಬಹುದು. ಇಂಥವರಿಂದ ದಕ್ಷ ಆಡಳಿತ ನಿರೀಕ್ಷಿಸಲಾಗದು. ಒಂದು ವೇಳೆ ನೇರ ಆಯ್ಕೆ ಮಾಡುವುದಾದರೂ ಜಾತಿ ಆಧಾರಿತ ಮೀಸಲಾತಿ ಇರಬಾರದು. ಸ್ಪರ್ಧಿಸುವವರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಇರಲೇಬೇಕು. ಇದನ್ನು ಸುಧಾರಣಾ ಸಮಿತಿಯ ಮುಂದೆಯೂ ಹೇಳಿದ್ದೆ. ಮನ್ನಣೆ ಸಿಗಲಿಲ್ಲ.
–ವೀರಭದ್ರಪ್ಪ ಗಾಂಜಿ, ಅಧ್ಯಕ್ಷ, ಕಿನ್ನಾಳ ಗ್ರಾ.ಪಂ, ಕೊಪ್ಪಳ ಜಿಲ್ಲೆ

ಹಲ್ಲು ಕಿತ್ತ ಹಾವು
ಚುನಾವಣೆಗೆ ಸಂಬಂಧಿಸಿದ ಸುಧಾರಣೆ, ಪಂಚಾಯತ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ, ಆರ್ಥಿಕ ವಿಕೇಂದ್ರೀಕರಣ ಸೇರಿದಂತೆ ರಮೇಶ್‌ ಕುಮಾರ್‌ ಸಮಿತಿಯ ಅದ್ಭುತ ಸಲಹೆಗಳನ್ನು  ಬದಿಗೆ ಸರಿಸಲಾಗಿದೆ. ಇವೆಲ್ಲವನ್ನೂ ಜಾರಿಗೆ ತಂದಿದ್ದರೆ ನಿಜವಾದ ಗ್ರಾಮ ಸ್ವರಾಜ್‌ ಸಾಧ್ಯವಾಗುತ್ತಿತ್ತು. ಈಗ ಹಲ್ಲು ಕಿತ್ತ ಹಾವಿನಂಥ ಸ್ಥಿತಿಗೆ ದೂಡಲಾಗುತ್ತಿದೆ.
ಕಾಡಶೆಟ್ಟಿಹಳ್ಳಿ ಸತೀಶ್‌, ರಾಜ್ಯ ಉಪಾಧ್ಯಕ್ಷ, ಜನವಿಕಾಸ ಸಂಸ್ಥೆ

ಅಧಿಕಾರ ವಂಚನೆ

ಮತದಾನ ಕಡ್ಡಾಯ ಮಾಡುವ ಉದ್ದೇಶ ಒಳ್ಳೆಯ ಬೆಳವಣಿಗೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದ ಮೌಲ್ಯ ಎಷ್ಟು ಮಹತ್ವದ್ದು ಎಂಬುದನ್ನು ಇದು ತಿಳಿಸುತ್ತದೆ. ಆದರೆ, 10 ವರ್ಷಗಳಿಗೊಮ್ಮೆ ಮೀಸಲಾತಿ ಬದಲಿಸುವ ಪ್ರಸ್ತಾಪ ಎಳ್ಳಷ್ಟೂ ಸರಿಯಿಲ್ಲ. ಒಂದು ವಾರ್ಡ್‌ನಲ್ಲಿ ವಿವಿಧ ವರ್ಗದ ಜನರಿರುತ್ತಾರೆ. 10 ವರ್ಷಗಳವರೆಗೆ ಮೀಸಲಾತಿ ಬದಲಾಗದಿದ್ದರೆ ಇನ್ನುಳಿದ ವರ್ಗದವರು ಅಧಿಕಾರದಿಂದ ವಂಚಿತರಾಗಬೇಕಾಗುತ್ತದೆ.
ಬಿ.ವಿ.ಸುರೇಶ್‌, ಅಧ್ಯಕ್ಷ, ಬೆಳಗೊಳ ಗ್ರಾ.ಪಂ, ಶ್ರೀರಂಗಪಟ್ಟಣ ತಾಲ್ಲೂಕು

ಅನುದಾನ ಹೆಚ್ಚಿಸಿ
ಅನುದಾನದ ವಿಚಾರದಲ್ಲಿ ಹಳೆ ಪದ್ಧತಿಯನ್ನೇ ಉಳಿಸಿಕೊಂಡು ಗ್ರಾಮಗಳನ್ನು ಬಡಕಲಾಗಿಯೇ ಉಳಿಯುವಂತೆ ಮಾಡಲಾಗಿದೆ. ವಾರ್ಷಿಕ ₹ 8 ಲಕ್ಷ ಅನುದಾನ ಏನೇನೂ ಸಾಲದು. ಅದನ್ನು ಕನಿಷ್ಠ ₹ 25 ಲಕ್ಷಕ್ಕೆ ಹೆಚ್ಚಿಸಲೇಬೇಕು. ಶಾಸಕರ ಸಂಬಳವನ್ನು ಮಾಸಿಕ ₹ 2 ಲಕ್ಷದಷ್ಟು ಹೆಚ್ಚಿಸಲಾಗಿದೆ. ಅದರ ಶೇ 10ರಷ್ಟಾದರೂ ವೇತನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನೀಡಬೇಕು. ಉದ್ಯೋಗ ಖಾತರಿ ಹಣ ಸಂದಾಯ ಸೇರಿದಂತೆ ಕೆಲವು ಯೋಜನೆಗಳಲ್ಲಿ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸಲು  ಹೊಸ  ಕಾಯ್ದೆ ಗಮನ ಹರಿಸಿದಂತಿಲ್ಲ.  
ಬಾಲಕೃಷ್ಣ ಗೌಡ, ಅಧ್ಯಕ್ಷ, ಕೊಯಿಲ ಗ್ರಾ.ಪಂ, ದ.ಕ. ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT