ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಸತ್ಯದರ್ಶನ’ದ ಅಬ್ಬರದ ಮಾರ್ಗ

ರಂಗಭೂಮಿ
Last Updated 14 ಜೂನ್ 2015, 19:30 IST
ಅಕ್ಷರ ಗಾತ್ರ

ಕೆಲವು ದಶಕಗಳ ಹಿಂದೆ ಕೊಳಕು ರಾಜಕೀಯದ ಬಣ್ಣಗಳನ್ನು ಮುಲಾಜಿಲ್ಲದೆ ಬಯಲುಮಾಡುತ್ತಿದ್ದ, ಮಾ. ಹಿರಣ್ಣಯ್ಯನವರ ನಾಟಕಗಳ ಮೊನಚು, ಚುಚ್ಚು ಮಾತಿನ ಓಘ ಮತ್ತೆ ಮರುಕಳಿಸಿದಂತಾಯ್ತು, ‘ಡ್ರಾಮ್ಯಾಟ್ರಿಕ್ಸ್’ತಂಡ ಇತ್ತೀಚೆಗೆ ಪ್ರಸ್ತುತಿಪಡಿಸಿದ ‘ಮರಣ ಮೃದಂಗ’ ನಾಟಕ ನೋಡಿ. ತಮ್ಮ ಮಾತಿನಮೋಡಿಗೆ ಪ್ರಸಿದ್ಧರಾದ ನಾಟಕಕಾರ, ನಿರ್ದೇಶಕ ರಾಜೇಂದ್ರ ಕಾರಂತ, ನಾಟಕದ ಪ್ರಾರಂಭದಿಂದ ಅಂತ್ಯದವರೆಗೂ ಓತಪ್ರೋತವಾಗಿ ಪ್ರಸಕ್ತ ರಾಜಕೀಯದ ಒಳಮರ್ಮಗಳನ್ನು, ಜನರಿಗೆ ಸ್ಪಂದಿಸದ ಜಡಗಟ್ಟಿದ ಸ್ವಾರ್ಥಪರ ನಡೆಯನ್ನು ಮಾತಿನ ಛಡಿಯಿಂದ ಮನಸೋ ಇಚ್ಛೆ ಬಡಿದರು. ಪ್ರೇಕ್ಷಕರು ಪ್ರತಿಮಾತಿಗೆ ಸ್ಪಂದಿಸುತ್ತ, ತಮ್ಮ ಎದೆಯ ಮಾತನ್ನು ಕಾರಂತರ ಕಂಚುಕಂಠದಲ್ಲಿ ಕೇಳುತ್ತ, ಹೌದೆನ್ನುವಂತೆ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದ ಪ್ರತಿಕ್ರಿಯೆಯೇ ಇದಕ್ಕೆ ಸಾಕ್ಷಿಯಾಗಿತ್ತು.

ಜನಸಾಮಾನ್ಯರಿಗೆ ಅತ್ಯಂತ ಹತ್ತಿರವಾದ ಆಳುವ ಅರಸರ ಸರ್ವಾಧಿಕಾರದ ದಾಂಧಲೆಯ ಕಥೆ. ‘ಏನಕೇನ ಪ್ರಕಾರೇಣ’ ಜನತೆಯಿಂದ ಓಟು ಕಿತ್ತುಕೊಂಡು ಐದು ವರ್ಷಗಳ ಕಾಲ ಅವರನ್ನು ಕ್ಯಾರೇ ಎನ್ನದೆ, ಅವರ ಬದುಕಿನ ಬವಣೆ-ಯೋಗಕ್ಷೇಮಗಳ ಬಗ್ಗೆ ದಿವ್ಯ ನಿರ್ಲಕ್ಯ್ಷ ತಾಳುವ ಭಂಡ ಸರ್ಕಾರದ ಶತಾವತಾರಗಳನ್ನು ಅನಾವರಣಗೊಳಿಸುವ ಈ ನಾಟಕದ ವಸ್ತು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತದೆ.

ಬಡತನದ ಹೆಜ್ಜೆಗಳನ್ನಿಟ್ಟುಕೊಂಡು ಬಂದ ಸಾಮಾನ್ಯ ವ್ಯಕ್ತಿಯೊಬ್ಬ, ರಾಜಕಾರಣದ ಏಣಿಹತ್ತಿ, ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಸುಖದ ಜೊತೆಗೆ ಖಂಡುಗ ಆಸ್ತಿ ಮಾಡಿಕೊಂಡದ್ದಲ್ಲದೆ, ಬಡಜನರ ನೋವಿಗೆ ಕುರುಡ-ಕಿವುಡನಾಗಿ, ಇನ್ನೂ ಖಜಾನೆ ಕೊಳ್ಳೆಹೊಡೆವ ಮೈದಾಸನಾಗಿರುವಾಗ ಅವನ ಪಾಪದ ಕೊಡ ತುಂಬಿಬಂದು ಅವನಿಗೆ ‘ಕ್ಯಾನ್ಸರ್’ ಆವರಿಸಿಕೊಳ್ಳುತ್ತದೆ. ಆ ಭಯಾನಕ ಕಾಯಿಲೆ, ಸಾವಿಗೆ ಪರ್ಯಾಯ ಪದವೆಂದು ಮನಗಂಡ ಮಾಜಿ ಸಿಎಂ ಪಾತಾಳಕ್ಕೆ ಕುಸಿಯುತ್ತಾನೆ.

ತನ್ನ ಅಧಿಕಾರಾವಧಿಯಲ್ಲಿ ಆಸ್ಪತ್ರೆಗೆ ಜಾಗ ಕೊಡಲು ತಕರಾರೆತ್ತಿ ಲಂಚಕ್ಕಾಗಿ ಪೀಡಿಸಿದ ಅದೇ ಕರುಣಾಶ್ರಮ ಕಂ ಆಸ್ಪತ್ರೆಗೆ ಬಂದು ಸೇರಿರುತ್ತಾನೆ. ಸಾವಿನ ಹೊಸ್ತಿಲಲ್ಲಿ ನಿಂತ ಅವನ ಇಂದ್ರಿಯಗಳೆಲ್ಲ ಇದ್ದಕ್ಕಿದ್ದ ಹಾಗೆ ಕೆಲಸ ಮಾಡಲಾರಂಭಿಸಿ, ತನ್ನ ಎದೆಯ ಢವಢವದಿಂದ ಹೃದಯದ ಅಸ್ತಿತ್ವ ಕಂಡುಕೊಂಡವನು, ಸುತ್ತಲಿನ ರೋಗಿಗಳ ನಾನಾ ಬಗೆಯ ದೈನ್ಯದ ಕಥೆಗಳನ್ನು ಕೇಳುತ್ತ ಅವನ ಕಣ್ಣು-ಕಿವಿಗಳು ಸೂಕ್ಷ್ಮವಾಗಿ ಕೆಲಸ ಮಾಡಲಾರಂಭಿಸುವುದು ಅವನ ಸ್ವಾರ್ಥ ಬದುಕಿನ ವಿಪರ್ಯಾಸ. ಅಟ್ಟದಿಂದ ಧುಡುಮ್ಮನೆ ಕೆಳಗೆ ಉರುಳಿಬಿದ್ದಂತೆ, ಸಾವಿನ ಭಯದಿಂದ ನಡುಗುತ್ತ ಸುತ್ತಲ ಬಡಪಾಯಿ ರೋಗಿಗಳ ಪರಿಸ್ಥಿತಿಯನ್ನು ಮೊತ್ತಮೊದಲ ಬಾರಿಗೆ ಗಮನಿಸುತ್ತ ಇದುವರೆಗಿನ ತನ್ನ ಕ್ರೂರ ಮನಸ್ಥಿತಿಗೆ, ತನ್ನ  ಮಿತಿಮೀರಿದ ಭ್ರಷ್ಟಾಚಾರ ನಡವಳಿಕೆಗೆ, ತಾನು ಮಾಡಿದ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ ಪಡುತ್ತಾನೆ. ಒಂದೊಮ್ಮೆ ತಾನೀ ಸಾವಿನ ದವಡೆಯಿಂದ ಪಾರಾದದ್ದೇ ಆದರೆ ಮತ್ತೆ ಸಿಎಂ ಆಗಿ, ಎಲ್ಲ ಜನರಿಗೆ ಉಪಕಾರ ಮಾಡುವ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ, ರಾಜಕೀಯದೊಳಗಿನ ಗಬ್ಬುನಾತ,ಹೊಲಸುಗಳನ್ನೆಲ್ಲ ವಾಚಾಮಗೋಚರ ಬೈಯುತ್ತ, ಪ್ರಸಕ್ತ ರಾಜಕೀಯದ ಬಣ್ಣಗಳನ್ನೆಲ್ಲ ಎಳೆಎಳೆಯಾಗಿ ಬಿಡಿಸಿಡುತ್ತಾನೆ. ಅಧಿಕಾರದ ಲಾಲಸೆಯಿಂದ ತನ್ನ ಸ್ವಂತ ಮಗ, ಸ್ನೇಹಿತರು, ಜೊತೆಗಾರರೆಂದುಕೊಂಡವರೆಲ್ಲ ನಡೆಸುತ್ತಿರುವ  ಹೀನ ಮಸಲತ್ತುಗಳನ್ನರಿತು ಅಸಹಾಯಕತೆಯಿಂದ ಒರಲುತ್ತಾನೆ. ಜೊತೆಗೆ ತನ್ನ ಸಹರೋಗಿಗಳ ಚಿತ್ರ-ವಿಚಿತ್ರ ಕಥೆಗಳಿಂದ ‘ಬದುಕು ಇಷ್ಟೇನೇ?’ ಎಂದು ಹತಾಶನಾಗುತ್ತಾನೆ.

ಅಧಿಕಾರದಲ್ಲಿದ್ದಾಗ ಪಶುವಾಗಿದ್ದವನು ಈಗ ಮಾನವ ಹೃದಯದ ಸ್ಪಂದನೆಗೆ ಸಿಲುಕಿ, ದೈನ್ಯತೆಯಿಂದ ಒದ್ದಾಡುವುದರ ಸುತ್ತ ನಾಟಕ ಕ್ರಮಿಸುತ್ತದೆ.

ಸದಾ ಅನ್ವೇಷಕ ದೃಷ್ಟಿಯುಳ್ಳ ನಾಟಕಕಾರ ಕಾರಂತರು ಈ ಸಲ ಆರಿಸಿಕೊಂಡಿರುವ ವಸ್ತು ತುಂಬಾ ವಿಶಾಲ ವ್ಯಾಪ್ತಿಯುಳ್ಳದ್ದು. ‘ರಾಜಕೀಯ’ದ ಬಗ್ಗೆ ಮಾತನಾಡೆಂದರೆ ಮೂಗನು ಕೂಡ ಮಾತನಾಡಲೆತ್ನಿಸುವಂಥ ತೀವ್ರತುಡಿತವುಳ್ಳ, ಶಕ್ತಿಯುತ ವಿಷಯ. ಇಂದು ರಾಜಕೀಯ ‘ಹೀನಾರ್ಥ’ ಪಡೆದಿದೆ. ಪ್ರಸಕ್ತ ರಾಜಕೀಯದ ಸನ್ನಿವೇಶದಲ್ಲಿ ನಡೆಯುತ್ತಿರುವ ಅನೇಕ ಆಷಾಢಭೂತಿತನದ ಪ್ರಸಂಗಗಳನ್ನು, ಹುನ್ನಾರಗಳನ್ನು ನಾಟಕದಲ್ಲಿ ನಗ್ನಗೊಳಿಸುವ ಪ್ರಯತ್ನ ನಡೆಸಲಾಗಿದೆ.

ಇವೆಲ್ಲವನ್ನೂ ಒಟ್ಟು ಬಾಚಿಹೇಳುವ ಧಾವಂತ-ಅವಸರವನ್ನು ನಾಟಕದಲ್ಲಿ ಕಾಣಬಹುದಿತ್ತು. ಸ್ವಾರ್ಥಪರತೆ, ಅಧಿಕಾರದಾಹ, ಭ್ರಷ್ಟಾಚಾರ, ಭೂಸ್ವಾಧೀನ, ಪರಿಸರ ಮಾಲಿನ್ಯ, ರೈತರ ಸಮಸ್ಯೆಗಳು, ಕಪ್ಪುಹಣ, ಸ್ವಜನ ಪಕ್ಷಪಾತ ಮುಂತಾದ ಅನೇಕ ಅವ್ಯವಹಾರ, ಅಮಾನವೀಯ ಕಠೋರ ಪರಿಸ್ಥಿತಿಯ ಕಾವು ಸಮಸ್ತರನ್ನೂ ತಟ್ಟುತ್ತಿದೆ. ಒಂದೊಂದು ಸಮಸ್ಯೆಯ ಮೇಲೂ ಒಂದೊಂದು ನಾಟಕ ಚಿತ್ರಿಸಬಹುದು. ಆದರೆ ಇಲ್ಲಿ ನಾಟಕಕಾರರು ಎಲ್ಲ ಸಮಸ್ಯೆಗಳ ಮೇಲೂ ಒಟ್ಟಿಗೆ ಬೆಳಕು ಚೆಲ್ಲಲು ಪ್ರಯತ್ನಿಸಿರುವುದು ನೋಡುಗರಿಗೆ ಹೇರಿಕೆಯಾಗುತ್ತದೆ. ಕ್ಯಾನ್ಸರ್ ರೋಗಿಯಾದ ಮುಖ್ಯಮಂತ್ರಿ (ವೀಲ್‌ಛೇರ್‌ನಲ್ಲಿರುವ ಕಾರಣ?) ಅಷ್ಟು ಭಾವಾವೇಶದಿಂದ ಜೋರಾಗಿ, ಒಂದೇ ಸಮನೆ ಭಾಷಣ ಮಾಡುವುದು ಸಹಜತೆಗೆ ದೂರಾಗಿ, ಮಾತುಗಳು ವಾಚ್ಯದ ಮಟ್ಟಕ್ಕೆ ಇಳಿದುಬಿಡುತ್ತವೆ. ಸಂಭಾಷಣೆಗಳು ವಿಚಾರಪೂರಿತವಾಗಿದ್ದರೂ ಏಕಕಾಲಕ್ಕೆ ಎಲ್ಲವನ್ನೂ ಬಡಬಡನೆ ಕಾರಿಕೊಳ್ಳುವುದು ‘ಕಚ್ಚಾ’ ಎನಿಸಿ, ಕೊಂಚ ಸಂಯಮದಿಂದ ಹೇಳಬಹುದಿತ್ತೇನೋ ಎನಿಸುತ್ತದೆ.

ಮುಖ್ಯಮಂತ್ರಿಯ ಬಾಲ್ಯದ ಗೆಳೆಯ, ಎಡೆಬಿಡದ ಸಂಗಾತಿ ಭರಮ್ಯಾ ಅವರ ನೆರಳಿನಂತಿದ್ದು, ಅವರಾಡಿದ ಪ್ರತಿ ಮಾತನ್ನು ವಿರೋಧಿಸುತ್ತ, ವಿಮರ್ಶಿಸುತ್ತ, ಕಟಕಿಯಾಡುತ್ತ, ಅವರೊಳಗನ್ನು ಚುಚ್ಚಲು ಯತ್ನಿಸುವ ಪಾತ್ರ ಅವರ ಎಚ್ಚರಪ್ರಜ್ಞೆ ಅಥವಾ ಆತ್ಮದ ಪ್ರತೀಕವಾಗಿ ಅಭಿವ್ಯಕ್ತಗೊಂಡಿತು. ನಾಟಕದ ಅಂತ್ಯದಲ್ಲಿ ಅವರ ಆತ್ಮಬಲವನ್ನು ಕುಗ್ಗಿಸುವಂತೆ, ಭರಮ್ಯಾ ಅನಾಮತ್ತು ಸಾಯುವ ಕಾರಣ ಅರಿವಾಗದು. ಕಡೆಯಲ್ಲಿ ಅವರು ‘ಜೀವಚ್ಛವ’ ಆದರೆಂದು ಅರ್ಥೈಸಿಕೊಳ್ಳಬಹುದೇನೋ.

ಪ್ರಣವಕಾರಂತರ ಸುಶ್ರಾವ್ಯಕಂಠದ ಸಂಗೀತ ಮಾಧುರ್ಯ ನಾಟಕದ ಹಿನ್ನೆಲೆಯಲ್ಲಿ ಮೂಡಿಬರುತ್ತಿದ್ದುದು ಅನ್ಯಾದೃಶ ಅನುಭೂತಿಯನ್ನು ಕಟ್ಟಿಕೊಟ್ಟಿತ್ತು. ಸಂದರ್ಭಕ್ಕನುಗುಣವಾಗಿ ಮೂಡಿಬರುತ್ತಿದ್ದ ದಾಸರಪದಗಳು ಹೃದ್ಯವಾಗಿದ್ದವು. ಪದಗಳಿಗೆ ಅಭಿನಯಿಸುತ್ತ ಹಿಂಭಾಗದ ವೇದಿಕೆಯ ಮೇಲೆ ನರ್ತಿಸುತ್ತಿದ್ದ ಡಾ. ಸೀತಾಕೋಟೆ ಮತ್ತು ಭವಾನಿ ಅವರ ಚೆಂದದ ನೃತ್ಯ, ನಾಟಕದ ಅವಿಭಾಜ್ಯ ಅಂಗವಾಗದೆ ಪ್ರತ್ಯೇಕವಾಗೇ ಉಳಿಯಿತು. ಎಂದಿನ ಗತ್ತಿನ ಏರುಕಂಠದಲ್ಲಿ ಕಾರಂತರು ಜೋರಾಗಿ ಮಾತನಾಡುವುದು ರೋಗಿಯ ಪಾತ್ರದ ಚೌಕಟ್ಟಿನೊಳಗೆ ಅಷ್ಟು ಸಹಜವೆಂಬಂತೆ ಕಾಣದಿದ್ದರೂ, ಕೆಲವು ಹೃದಯವಿದ್ರಾವಕ ಸನ್ನಿವೇಶಗಳಲ್ಲಿ ಅವರಲ್ಲಿ ಗರಿಗಟ್ಟಿದ ವಿಷಾದ ಭಾವಾಭಿನಯ ಪರಿಣಾಮಕಾರಿಯಾಗಿತ್ತು.

ಅವರ ಹೆಂಡತಿಯ ಪಾತ್ರದಲ್ಲಿ ರಾಜೇಶ್ವರಿ, ಗಂಡನ ಒಳಿತಿಗಾಗಿ ಜ್ಯೋತಿಷಿಗಳ, ಗುರೂಜಿಗಳ ಸಲಹೆಯಂತೆ ಮಂತ್ರಿಸಿದ ನೀರು ಪ್ರದಕ್ಷಿಣೆಯಲ್ಲಿ ಪ್ರೋಕ್ಷಿಸುವುದು, ಕುಂಕುಮ ರಕ್ಷೆ ಇಡುವುದು ಇತ್ಯಾದಿ ಮೂಢನಂಬಿಕೆಗಳ ಅನುಸರಣೆಯ ಅಣಕು ಅಭಿನಯವನ್ನು ಚೆನ್ನಾಗಿ ಮಾಡಿದರು. ಭರಮ್ಯನಾಗಿ ಶ್ರೀನಾಥ್ ತಮ್ಮ ಪಾತ್ರದ ಇಂಗಿತವರಿತು ಸೂಕ್ಷ್ಮವಾದ, ಉತ್ತಮ ಅಭಿನಯ ನೀಡಿದರು. ಮುದುಕನಾಗಿ ರಾಘೂ ರಮಣಕೊಪ್ಪ ಪಳಗಿದ ನಟನೆ ತೋರಿದರೂ, ಮುದಿರೋಗಿಯಾಗಿ ವಯಸ್ಸಿಗೆ ಬಂದ ಮಗನನ್ನು ಹಿಗ್ಗಾಮುಗ್ಗಾ ಥಳಿಸುವ, ಅಟ್ಟಾಡಿಸಿ ಒದೆಯುವ, ಗಂಟಲು ಕಿತ್ತುಬರುವಂತೆ ಕೂಗಾಡುವಷ್ಟು ತ್ರಾಣವಿರುವುದು ಅಸಹಜತೆಯನ್ನು ಬಿಂಬಿಸುತ್ತದೆ.

ನಾಟಕದಲ್ಲಿ ಬಹಳಷ್ಟು ಪಾತ್ರಗಳು ಜೋರಾಗಿ ಅರಚುವ ಅಗತ್ಯವಿರಲಿಲ್ಲ. ಡಾಕ್ಟರಾಗಿ ಶಾಂತರಾಜು, ಆಫೀಸರಾಗಿ ವೀರಭದ್ರಯ್ಯ ಹದವಾಗಿ ಅಭಿನಯಿಸಿದರು. ಹಾಲಿ ಸಿಎಂ ಶಿವಧನುಷ್, ಯುವಕ-ತನುಷ್ ಮತ್ತು     ಟಿವಿಯವನಾಗಿ ಮಹೇಂದ್ರ ಸೂಕ್ತವಾಗಿ ನಟಿಸಿದರು. ಪ್ರಸಾಧನ-ವಿಜಯ ಬೆಣಚ, ತಬಲಾ-ಕಿರಣ್ ಮತ್ತು ಬೆಳಕಿನ ವಿನ್ಯಾಸವನ್ನು ಎಂ.ಜಿ.ನವೀನ್ ಸೂಕ್ತವಾಗಿ ನಿರ್ವಹಿಸಿದ್ದರು. ಆದರೆ ಒಂದು ಅಚ್ಚರಿಯೆಂದರೆ ಆಸ್ಪತ್ರೆಯ ಯಾವ ರೋಗಿಗಳಿಗೂ ಆಸ್ಪತ್ರೆಯ ದಿರಿಸಿಲ್ಲ. ಗುರೂಜಿ ನಾಡಿ ನೋಡಿ ಹೇಳಿದ ನಂತರವೇ ಅಲ್ಲಿ ಚಿಕಿತ್ಸೆ ಆರಂಭ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT