ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಂಕೇಶ್‌, ಡಿ.ಆರ್ ಅವರಿಂದ ಶಿಸ್ತನ್ನು ಕಲಿತಿದ್ದೇನೆ’

Last Updated 5 ಏಪ್ರಿಲ್ 2014, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಲಂಕೇಶ್‌ ಒಬ್ಬ ಅದ್ಭುತ ಸಾಹಿತಿ, ಸಂಘಟನಾ ಚತುರ. ಡಿ.ಆರ್‌. ನಾಗರಾಜ್‌ ಶ್ರೇಷ್ಠ ವಿಮರ್ಶಕ. ಇಬ್ಬ­ರಿಂದಲೂ ನಾನು ಶಿಸ್ತನ್ನು ಕಲಿತಿದ್ದೇನೆ’ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

ಥಿಯೇಟರ್‌ ತತ್ಕಾಲ್‌ ನಗರದಲ್ಲಿ ಶನಿವಾರ ಏರ್ಪಡಿ­ಸಿದ್ದ ಕಾರ್ಯಕ್ರಮ­ದಲ್ಲಿ ವಿಮರ್ಶಕ ನಟರಾಜ್‌ ಹುಳಿ­ಯಾರ್‌ ಅವರ ‘ಇಂತಿ ನಮಸ್ಕಾರಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹುಟ್ಟಿನಿಂದ ಬ್ರಾಹ್ಮಣನಾದ, ಎಡ­ಪಂಥೀಯ ವಿಚಾರಗಳನ್ನು ಹೊಂದಿದ್ದ ನನ್ನನ್ನು ಕಾಪಾಡಿದ್ದು ಶಿಸ್ತಿನ ಜೀವನ­ಶೈಲಿ. ಮಾರ್ಕ್ಸ್‌ವಾದಿ ಗುರುಗಳಾದ ಎ.ಕೆ.ಗೋಪಾಲನ್‌, ಸುಂದರನ್‌ ಅವ­ರಿಂದ ಜೀವನಶೈಲಿಯನ್ನು ಕಲಿತಿದ್ದೇನೆ. ದಲಿತ ಮತ್ತು ಯಾವುದೇ ಸಾಮಾಜಿಕ ಚಳವಳಿಯಲ್ಲಿಯೂ ಅಂತಹ ಶಿಸ್ತನ್ನು ಕಂಡಿಲ್ಲ ಎಂದರು.

ಡಿ.ಆರ್.ನಾಗರಾಜ್‌ ಸಾಹಿತ್ಯದ ಆಚೆಗೂ ಚಿಂತನೆ ಮಾಡುವ ದೃಷ್ಟಿ­ಯನ್ನು ಹೊಂದಿದ್ದರು. ಅವರಲ್ಲಿ ಸುಖ­ಪ್ರಜ್ಞತೆಯ ಸಮಸ್ಯೆ ಕಾಣುತ್ತಿತ್ತು. ಅದನ್ನು ನಿವಾರಿಸಿಕೊಂಡಿದ್ದರೆ ದೊಡ್ಡ ಆಸ್ತಿಯಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಕವಿ ಅಗ್ರಹಾರ ಕೃಷ್ಣಮೂರ್ತಿ ಮಾತ­ನಾಡಿ, ಆರಂಭದಿಂದಲೂ ಡಿ.ಆರ್. ಅವರಿಗೆ ವಿಮರ್ಶೆ ಆಸಕ್ತಿಯ ಕ್ಷೇತ್ರವಾಗಿತ್ತು. ವಿಮರ್ಶೆ ಸೃಜನಶೀಲ ಸಾಹಿತ್ಯದ ಅವಿಭಾಜ್ಯ ಅಂಗ. ಅಂತಹ ವಿಮರ್ಶೆಗೆ ಅವರು  ಗೌರವ ತಂದುಕೊಟ್ಟರು ಎಂದರು.

‘ನಾವು ಕಾಲೇಜು ಕಲಿಯುತ್ತಿದ್ದಾಗ ಆಟೊದಲ್ಲಿ ಓಡಾ­ಡುವುದೇ ಐಶಾರಾಮಿಯಾಗಿತ್ತು. ನಾವು ಆಟೊ­ದಲ್ಲಿ ಹೋಗುತ್ತಿದ್ದರೆ ಡಿ.ಆರ್. ಆಟೊದಿಂದ ತಲೆ ಹೊರಹಾಕಿ ಪರಿಚಿತರು ಸಿಕ್ಕರೆ ‘ಹೇ ಬ್ರದರ್‌ ನಾನು ಆಟೊದಲ್ಲಿ ಹೋಗುತ್ತಿ­ದ್ದೇನೆ’ ಎನ್ನುತ್ತಿದ್ದರು. ಇದು ಅವರಲ್ಲಿದ್ದ ಪ್ರದರ್ಶಕ ಗುಣಕ್ಕೆ ಸಾಕ್ಷಿ’ ಎಂದು ನೆನಪಿಸಿಕೊಂಡರು. ಡಿ.ಆರ್‌. ಅವರ ‘ಅಲ್ಲಮ ಪ್ರಭು’ ಮತ್ತು ‘ಶೈವ ಸಿದ್ಧಾಂತ’ ಎರಡು ಶ್ರೇಷ್ಟ ಕೃತಿಗಳಾಗಿವೆ ಎಂದು ಹೇಳಿದರು.

ಲಂಕೇಶ್ ತಮ್ಮ ಲೇಖನಗಳಲ್ಲಿ ಗಂಭೀರವಾದ ಪದಗಳನ್ನು ಬಳಸುತ್ತಿದ್ದರು. ಅವರ ಗದ್ಯ ಮತ್ತು ಕನ್ನಡ ಭಾಷೆ ಶ್ರೇಷ್ಟ ಮಟ್ಟದ್ದಾಗಿದೆ ಎಂದರು.

ಲೇಖಕ ನಟರಾಜ್‌ ಹುಳಿಯಾರ್‌ ಮಾತನಾಡಿ, ರಾತ್ರಿಯಾದರೆ ಲಂಕೇಶ್‌ ಮತ್ತು ಡಿ.ಆರ್. ಬ್ರೈಟ್‌ ಆಗುತ್ತಿದ್ದರು. ಸ್ವಯಂ ನಿಂದನೆ, ಚಿಂತನೆ, ತಲೆಹರಟೆ, ಟೀಕೆ, ಮದ್ಯಪಾನ ಜೊತೆಗೆ  ಹಲವು ಸತ್ಯಗಳು ವಿಕಾಸ­ವಾಗುತ್ತಿದ್ದವು. ಇಬ್ಬರಿಂದಲೂ ಬದುಕಲು ಕಲಿತಿದ್ದೇನೆ. ಇಬ್ಬರು ಒಂದೇ ಗುರಿ ಇಟ್ಟುಕೊಂಡು ಬೇರೆ ಬೇರೆ ದಾರಿಯಲ್ಲಿ ಸಾಗಿದವರು ಎಂದು ಹೇಳಿದರು.

ಇಬ್ಬರೂ ಇದ್ದಿದ್ದರೆ ಮೋದಿಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು. ಜಗತ್ತಿನ ಯಾವುದೇ ಶ್ರೇಷ್ಠ ಲೇಖಕರ ಜೊತೆ ಗುರುತಿಸಬಹುದಾದಷ್ಟು ಪ್ರತಿಭೆ­ಹೊಂದಿದ್ದ ಅವರನ್ನು ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಜಗತ್ತು ನಿರ್ಲಕ್ಷಿಸಿದೆ ಎಂದರು.
ಪಲ್ಲವ ಪ್ರಕಾಶನ ಹೊರತಂದಿರುವ ಪುಸ್ತಕದ ಬೆಲೆ ₨ 180.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT