ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಕಾಸ ಪುರುಷ’ನ ನೆಚ್ಚಿದ ‘ತುಳಸಿ’

ಅಮೇಠಿ ಕ್ಷೇತ್ರದಲ್ಲಿ ರಾಹುಲ್‌ ಎದುರು ಸ್ಪರ್ಧೆ
Last Updated 18 ಏಪ್ರಿಲ್ 2014, 19:55 IST
ಅಕ್ಷರ ಗಾತ್ರ

ಅಮೇಠಿ (ಪಿಟಿಐ): ನೆಹರೂ– ಗಾಂಧಿ ಕುಟುಂಬದ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಕಿರುತೆರೆಯ ತಾರೆಯಾಗಿಯೇ ಹೆಚ್ಚು ಪರಿಚಿತರಾಗಿರುವ ಸ್ಮೃತಿ ಇರಾನಿ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೆದುರು ಕಣಕ್ಕಿಳಿದಿರುವ ಅವರು ಈಗ ನರೇಂದ್ರ ಮೋದಿ ಅವರನ್ನು ‘ವಿಕಾಸ ಪುರುಷ’ ಎಂಬುದನ್ನೇ ಪ್ರಮುಖವಾಗಿ ಬಿಂಬಿಸುತ್ತಾ ಮತ ಕೇಳುತ್ತಿದ್ದಾರೆ. ಹಿಂದೊಮ್ಮೆ ಮೋದಿಯ ಟೀಕಾಕಾರರಾಗಿದ್ದ ಅವರು ಇದೀಗ ಅವರನ್ನೇ ‘ವಿಕಾಸ ಪುರುಷ’ನೆಂದು ಬಣ್ಣಿಸುತ್ತಿರುವುದು ಗಮನಾರ್ಹ.

38 ವರ್ಷದ ಸ್ಮೃತಿ ಇರಾನಿ ಇಲ್ಲಿನ ಜನರಿಗೆ ತಮ್ಮ ನಿಜವಾದ ಹೆಸರಿನಿಂದೇನೂ ಅಷ್ಟು ಪರಿಚಿತರಲ್ಲ. ಬದಲಾಗಿ ವರ್ಷ 2000ದಿಂದ 2008ರವರೆಗೆ ಪ್ರಸಾರವಾದ ಕಿರುತೆರೆಯ ಧಾರಾವಾಹಿಯಲ್ಲಿ ತಾವು ಅಭಿನಯಿಸಿದ ‘ತುಳಸಿ’ ಪಾತ್ರದ ಹೆಸರಿನಿಂದಲೇ ಅವರು ಹೆಚ್ಚು ಜನಪ್ರಿಯರು.

‘ಕಾಂಗ್ರೆಸ್‌ನ ಮೊದಲ ಕುಟುಂಬ 60 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಅವರು 60 ತಿಂಗಳುಗಳಲ್ಲಿ ಮಾಡಬಲ್ಲರು’ ಎಂದು ಅವರು ಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, 2004ರಲ್ಲಿ ಮೋದಿ ವಿರುದ್ಧ ಈ ಹಿಂದೆ ಮಾಡಿದ್ದ ಟೀಕೆಗಳಿಗಾಗಿ ತೀವ್ರ ವಿಷಾದವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಸ್ಮೃತಿ ಇರಾನಿ 2004ರಲ್ಲಿ ಬಿಜೆಪಿ ಸೇರಿದ ಸ್ವಲ್ಪ ದಿನಗಳಲ್ಲೇ ಮೋದಿ ಅವರ ಟೀಕಾಕಾರರಾಗಿ ಗಮನ ಸೆಳೆದಿದ್ದರು. ಗುಜರಾತ್‌ ಗಲಭೆಗಳ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗಾಗಿಯೂ ಒತ್ತಾಯಿಸಿದ್ದರು. ಅದೇ ಸಂದರ್ಭದಲ್ಲಿ ದೆಹಲಿಯ ಚಾಂದ್‌ನಿ ಚೌಕ್‌ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಬಯಸಿದ್ದ ಅವರು ಕಾಂಗ್ರೆಸ್‌ನ ಕಪಿಲ್‌ ಸಿಬಲ್‌ ಎದುರು ಸೋಲಿನ ಕಹಿ ಅನುಭವಿಸಿದ್ದರು.

ಮೋದಿ ಅವರ ವಿರುದ್ಧದ ಟೀಕೆಗಳನ್ನು ಗಂಭೀರ­ವಾಗಿ ಪರಿಗಣಿಸಿದ ಬಿಜೆಪಿ, ತಮ್ಮ ಹೇಳಿಕೆಗಳನ್ನು ವಾಪಸ್ಸು ಪಡೆಯುವಂತೆ ಅಥವಾ ಶಿಸ್ತು ಕ್ರಮ ಎದು­ರಿಸಲು ಸಿದ್ಧವಾಗುವಂತೆ ಸ್ಮೃತಿ ಅವರಿಗೆ ಎಚ್ಚರಿಕೆ ನೀಡಿತ್ತು. ಆಗ ಅವರು ತಮ್ಮ ಹೇಳಿಕೆಗಳನ್ನು ಹಿಂಪ­ಡೆ­ದರು. ಅಷ್ಟೇ ಅಲ್ಲ, ಕ್ರಮೇಣವಾಗಿ ಮೋದಿ ಅವರ ಆಂತರಿಕ ವಲಯದ ಸದಸ್ಯರೂ ಆಗಿಬಿಟ್ಟರು.

‘ಈ ಕ್ಷೇತ್ರವು ರಾಹುಲ್‌ ಗಾಂಧಿ ಅವರ ವಿಫಲ ನಾಯಕತ್ವದ ಪ್ರತೀಕವಾಗಿದ್ದು, ರಸ್ತೆಗಳು, ವಿಷಮುಕ್ತ ಕುಡಿಯುವ ನೀರು, ಗುಣಮಟ್ಟದ ವಿದ್ಯುತ್‌ ಪೂರೈಕೆ ಇಲ್ಲ’ ಎಂದೂ ಸ್ಮೃತಿ ಇರಾನಿ ಚುನಾವಣಾ ಭಾಷಣಗಳಲ್ಲಿ ದೊಡ್ಡ ಧ್ವನಿಯಲ್ಲಿ ಕೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT