ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೇಷಭೂಷಣವೇ ಯಕ್ಷಗಾನದ ಜೀವಾಳ’

Last Updated 24 ಜುಲೈ 2014, 4:45 IST
ಅಕ್ಷರ ಗಾತ್ರ

ನಾಗೂರು (ಬೈಂದೂರು): ‘ಯಕ್ಷಗಾನ ಕಲೆಯಲ್ಲಿ ಪಾತ್ರಗಳು ತೊಡುವ ವೇಷಭೂಷಣದ ವೈವಿಧ್ಯತೆ ಜಗತ್ತಿನ ಇನ್ನಾವ ಪ್ರದರ್ಶನ ಕಲೆಗಳಲ್ಲೂ ಕಾಣಸಿಗದು.  ವೇಷಭೂಷಣದಲ್ಲಿ ಬಳಕೆಯಾಗುವ ಬಣ್ಣಗಳ ಸಂಯೋಜನೆಯೂ ಅದ್ಭುತವಾದುದು’ ಎಂದು ಯಕ್ಷಗಾನ ಕಲಾವಿದ, ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್‌ ಸಹಯೋಗದಲ್ಲಿ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ಬುಧವಾರ ಆರಂಭವಾದ ಹತ್ತು ದಿನಗಳ ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಯಾಂತ್ರಿಕ ಸೌಲಭ್ಯಗಳು ಹೆಚ್ಚಿದಂತೆ ಮನುಷ್ಯ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ಯಕ್ಷಗಾನ ವೇಷಭೂಷಣ ತಯಾರಿಯಲ್ಲೂ ಇದು ಪ್ರಕಟವಾಗಿದೆ. ಅದರಿಂದಾಗಿ ಯಕ್ಷಗಾನ ವೇಷಗಳ ಮೂಲ ಸೌಂದರ್ಯ ನಶಿಸುತ್ತಿದೆ. ಅದರ ಅರಿವಿರುವ ಕಲಾವಿದರು ಈ ಕಮ್ಮಟದಲ್ಲಿ ರೂಪುಗೊಳ್ಳಲಿ’  ಎಂದು ಅವರು ಆಶಿಸಿದರು.

ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಉಮೇಶ ಶ್ಯಾನುಭೋಗ್‌ ಕಾರ್ಯಾಗಾರವನ್ನು ಉದ್ಘಾಟಿಸಿ­ದರು.

ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ತಮ್ಮ ಆಶಯ ಭಾಷಣದಲ್ಲಿ ‘ನಮ್ಮ ಹಿಂದಿನವರು ಅಪಾರ ಚಿಂತನೆ ನಡೆಸಿ ಕಲ್ಪನೆಗೆ ಸಿಗದ ಪೌರಾಣಿಕ ವ್ಯಕ್ತಿಗಳನ್ನು ವೇಷಭೂಷಣ ವೈಶಿಷ್ಟ್ಯದ ಮೂಲಕ ಸಾಕ್ಷಾತ್ಕರಿಸಿದರು. ಅದನ್ನು ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ’ ಎಂದರು.

ಕಲಾ ಪ್ರೋತ್ಸಾಹಕರಾದ ಕೆ. ಬಾಲಕೃಷ್ಣ ಶ್ಯಾನುಭೋಗ್, ಪ್ರಕಾಶ ಐತಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಅತಿಥಿಗಳಾ­ಗಿದ್ದರು.


ಅಕಾಡೆಮಿಯ ರಿಜಿಸ್ಟ್ರಾರ್ ಡಿ. ಆರ್. ಮೈಥಿಲಿ ಸ್ವಾಗತಿಸಿದರು. ಟ್ರಸ್ಟ್‌ನ ಸಂಸ್ಥಾಪಕ ಸುಬ್ರಹ್ಮಣ್ಯ ಧಾರೇಶ್ವರ ಪ್ರಾಸ್ತಾವಿಕವಾಗಿ ಮಾತಾಡಿದರು. ರತನ್‌ ಬಿಜೂರು ವಂದಿಸಿದರು. ವೇಣು­ಗೋಪಾಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT