ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಂಕರಮಠದ ಅಂಗಳದಲ್ಲಿ ಭವನ ನಿರ್ಮಾಣ’

₨ 3.50ಕೋಟಿ ವೆಚ್ಚದ ಸಾಂಸ್ಕೃತಿಕ ಭವನದ ಭವ್ಯ ಕಟ್ಟಡಕ್ಕೆ ಜಿಲ್ಲಾಧಿಕಾರಿ, ಶಾಸಕರಿಂದ ಜಾಗದ ಪರಿಶೀಲನೆ
Last Updated 2 ಆಗಸ್ಟ್ 2015, 10:07 IST
ಅಕ್ಷರ ಗಾತ್ರ

ಹಾನಗಲ್‌: ₨ 3.50 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುವ ಸಾಂಸ್ಕೃತಿಕ ಭವನದ ಭವ್ಯ ಕಟ್ಟಡಕ್ಕೆ ಸೂಕ್ತ ಜಾಗೆಯ ಪರಿಶೀಲನೆಗಾಗಿ ಶನಿವಾರ ಜಿಲ್ಲಾಧಿಕಾರಿ ಮಂಜುನಾಥ ನಾಯಕ ಮತ್ತು ಶಾಸಕ ಮನೋಹರ ತಹಶೀಲ್ದಾರ್‌ ಅವರು ಪಟ್ಟಣದ ವಿವಿಧ ಸ್ಥಳಗಳನ್ನು ವೀಕ್ಷಿಸಿದರು.

ಮೊದಲಿಗೆ ಇಲ್ಲಿನ ಹಳೆಬಸ್‌ ನಿಲ್ದಾಣ ಭಾಗದಲ್ಲಿನ ಶಾಸ್ತ್ರಿಹೊಂಡ ಖುಲ್ಲಾ ಜಾಗೆಯನ್ನು ವೀಕ್ಷಿಸಿದ ಅವರು, ನಂತರ ಪೇಟೆ ಭಾಗದಲ್ಲಿನ ಶಂಕರಮಠದ ಅಂಗಳ, ಗ್ರಾಮಕೇಂದ್ರದ ಸ್ಥಳ ಮತ್ತು ತಾಲ್ಲೂಕು ಕ್ರೀಡಾಂಗಣದ ಮುಂದಿನ ಖಾಲಿ ಜಾಗೆಯನ್ನು ಪರಿಶೀಲಿಸಿದರು. ಅವರಿಗೆ ತಹಶೀಲ್ದಾರ್‌ ಟಿ.ಗೋಪಿನಾಥ, ಪಿಡ್ಲ್ಯುಡಿ ಎಂಜಿನಿಯರ್‌ ಎಂ.ಬಿ.ತುರಮುರಿ, ಮಾಬಳೇಶ್ವರ ಮತ್ತು ಪುರಸಭೆ ಅಧಿಕಾರಿ ಶಿವಾನಂದ ಕ್ಯಾಲಕೊಂಡ ಮತ್ತಿತರ ಅಧಿಕಾರಿಗಳು ಸಾಥ್‌ ನೀಡಿದ್ದರು. 2012–13 ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಮಿಸಲಿಡಲಾಗಿರುವ ಸಾಂಸ್ಕೃತಿಕ ಭವನದ ಕಾಮಗಾರಿ ಸ್ಥಳದ ನಿಗದಿಗಾಗಿ ಇಷ್ಟು ವರ್ಷ ವಿಳಂಬಗೊಂಡಿತ್ತು.

ಈಗ ಅನುದಾನ ವಾಪಸ್‌ ಹೋಗುವ ಸಂಭವ ಇರುವ ಕಾರಣ ಇದ್ದುದರಲ್ಲಿ ಉತ್ತಮ ಜಾಗೆಯನ್ನು ನಿಗದಿ ಮಾಡುವ ಅನಿವಾರ್ಯತೆ ಬಂದಿದ್ದರಿಂದ ಶನಿವಾರ ಸ್ಥಳ ವೀಕ್ಷಣೆಯ ಕಾರ್ಯ ನಡೆದವು. ಅಂತಿಮವಾಗಿ ಪಟ್ಟಣದ ಮದ್ಯದಲ್ಲಿರುವ ಶಂಕರಮಠದ ಅಂಗಳವನ್ನು ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಳ್ಳುವ ವಿಚಾರವನ್ನು ಜಿಲ್ಲಾಧಿಕಾರಿ ಮಂಜುನಾಥ ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಂಕರಮಠ ಖಾಸಗಿ ಜಾಗೆಯಾಗಿದ್ದು, ಈ ಮಠದ ಸಮಿತಿ ಜೊತೆಯಲ್ಲಿ ಸಮಾಲೋಚನೆ ನಡೆಸಿ ಕರಾರುಗಳ ಒಪ್ಪಂದವನ್ನು ತಿಳಿಸುವಂತೆ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಮಂಜುನಾಥ ನಾಯಕ, ಸ್ಥಳ ನಿಗದಿ ಪ್ರಕ್ರಿಯೆ ಅಂತಿಮಗೊಂಡ ನಂತರ ಕಟ್ಟಡ ಶೀಘ್ರವಾಗಿ ನಿರ್ಮಾಣ ಆಗಲಿದೆ ಎಂದರು.

ಕಚೇರಿ ಸಂಕೀರ್ಣ: ಹಾನಗಲ್‌ನ ಹಳೆ ತಹಶೀಲ್ದಾರ್‌ ಕಚೇರಿಯನ್ನು ತೆರವುಗೊಳಿಸಿ ಈ ಜಾಗೆಯಲ್ಲಿ ವ್ಯವಸ್ಥಿತವಾದ ಸರ್ಕಾರಿ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ರೂ. 3 ಕೋಟಿ ಅನುದಾನ ಮೀಸಲಿರಿಸಿ ವರ್ಷಗಳೇ ಗತಿಸಿದ್ದರೂ, ಕಾಮಗಾರಿ ಆರಂಭಗೊಂಡಿಲ್ಲ, ನೆನೆಗುದಿಗೆ ಬಿದ್ದರುವ ಈ ಯೋಜನೆ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಹಳೆಯ ಕಲ್ಲಿನ ಕಟ್ಟಡವನ್ನು ಉಳಿಸಿಕೊಂಡು ಉನ್ನತೀಕರಿಸಿ ಐತಿಹ್ಯವನ್ನು ಕಾಪಾಡುವ ಯೋಚನೆಯಿದೆ. ಈ ಕಟ್ಟಡದ ಒಂದು ಭಾಗದಲ್ಲಿ ಹಾನಿಗೊಂಡ ಸ್ಥಳವನ್ನು ತೆರವುಗೊಳಿಸಿ ಮತ್ತು ಕಟ್ಟಡ ಎದುರಿನ ಖಾಲಿ ಸ್ಥಳವನ್ನು ಬಳಸಿಕೊಂಡು ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಗರೋತ್ಥಾನ ಯೋಜನೆ ಅಡಿಯಲ್ಲಿ  ನಡೆದ ಕಾಮಗಾರಿಗಳು ಕಳಪೆ ಯಾಗಿದ್ದರೆ ಮೂರನೇ ವ್ಯಕ್ತಿಯಿಂದ ತನಿಖೆ ನಡೆಸಿ ಗುಣಮಟ್ಟದ ಕಾಮಗಾರಿಗೆ ಆದೇಶಿಸಲಾಗುತ್ತದೆ.  -ಮಂಜುನಾಥ ನಾಯಕ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT