ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಕ್ತಿದಾತ’ ರೈತ

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

‘ಲೋಕಕೆಲ್ಲ ಬೆಳಕನೀವ ಸೂರ್ಯ ಚಂದ್ರ ನಿನಗೆ ನಮನ...’ ಎಂಬುದು ಬಾಲ್ಯದಲ್ಲಿ ಹಾಡಿದ ಕವಿವಾಣಿ. ಆದರೆ, ಈಗ ಮೀಟರ್‌ ಬೋರ್ಡ್‌ ನೋಡಬೇಕು, ವಿದ್ಯುತ್‌ ಕಂಪೆನಿಗಳ ಹೆಸರು ಜಪಿಸಬೇಕು. ಕರೆ ಮಾಡಿದರೆ, ‘ಲೈನ್ ಫಾಲ್ಟ್‌, ಲೋಡ್‌ ಶೆಡ್ಡಿಂಗ್’ ಎಂಬ ಉತ್ತರ ಸ್ವೀಕರಿಸಬೇಕು. ಆದರೆ, ಇವೆಲ್ಲವುಗಳ ನಡುವೆಯೇ ಅನ್ನದಾತರಾಗಿರುವ ರೈತರು ‘ಶಕ್ತಿ’ದಾತರೂ ಆಗುವ ಪ್ರಯತ್ನವೊಂದು ಹಾವೇರಿ ಜಿಲ್ಲೆಯಲ್ಲಿ ಚಿಗುರೊಡೆದಿದೆ.

ಭಾರತದ ಬಹುಸಂಖ್ಯಾತ ರೈತ ಸಮುದಾಯ ಸಂಕಷ್ಟದಲ್ಲಿದೆ. ರಾಜ್ಯದಲ್ಲೂ ರೈತರ ಆತ್ಮಹತ್ಯೆ ಮೂರಂಕಿ ತಲುಪಿದೆ. ಹಾವೇರಿ ಜಿಲ್ಲೆಯಲ್ಲೇ ಎರಡಂಕಿ ಆಗಿದೆ. ಪ್ರತಿನಿತ್ಯ ಅನ್ನದಾತರ ಸಾವಿನ ಸುದ್ದಿ ಅನುರಣಿಸುತ್ತಿದೆ. ಈ ನಡುವೆಯೇ ಕೆಲವು ರೈತರು ಭರವಸೆಯ ‘ಬೆಳಕು’ ಮೂಡಿಸುತ್ತಿದ್ದಾರೆ. ಅದಕ್ಕಾಗಿಯಾದರೂ ನೀವು ಏಲಕ್ಕಿ ಕಂಪಿನ ಹಾವೇರಿಗೆ ಬರಬೇಕು.... ಬಾಣಸಿಗರ ಅಡುಗೆಗೆ ಸ್ವಾದ ನೀಡಿದ ಮೆಣಸಿನ ವ್ಯಾಪಾರದ ಮಾರುಕಟ್ಟೆಯ ಬ್ಯಾಡಗಿಗೆ ಬನ್ನಿ. ಇಲ್ಲಿಂದ ಸುಮಾರು ಐದು ಕಿ.ಮೀ ದೂರ ಸಾಗಿದರೆ ಸಿಗುವ ಊರು ಮಾಸಣಗಿ. ಎಲ್ಲ ಹಳ್ಳಿಗಳಂತೆ ಹಾದಿಯ ರಸ್ತೆ ಬದಿಯಲ್ಲಿ ವಿದ್ಯುತ್‌ ಕಂಬಗಳು, ತಂತಿ, ಪಂಪ್‌ಸೆಟ್‌ಗಳನ್ನು ಕಾಣಬಹುದು.

ಕಣ್ಣರಳಿಸಿ ಮೇಲೆ ನೋಡಿದರೆ, ಹಗಲು– ರಾತ್ರಿ ಎನ್ನದೇ ಹಣತೆಯಂತೆ ಉರಿಯುವ ಬೀದಿದೀಪವೂ ಗೋಚರಿಸಬಹುದು. ತ್ರೀಫೇಸ್‌ ವಿದ್ಯುತ್‌ಗಾಗಿ ಚಾತಕ ಪಕ್ಷಿಯಂತೆ ಕಾಯುವ ರೈತರೂ ಸಿಗಬಹುದು. ಆದರೆ, ಇದೇ ಊರಿನಲ್ಲಿ ಭರವಸೆಯ ಒಂದು ಬೆಳಕೂ ಮೂಡಿದೆ. ತಳಿ ಹಾಗೂ ಬೆಳೆಗಳಲ್ಲಿ ಪ್ರಯೋಗ, ಹೈನುಗಾರಿಕೆ ಮೂಲಕ ಪ್ರಗತಿಪರ ರೈತರಾದ ಈ ಊರಿನ ಶ್ರೀನಿವಾಸ ಕುಲಕರ್ಣಿ ಈಗ ‘ಶಕ್ತಿದಾತ’ರೂ ಆಗಿದ್ದಾರೆ. ವಿದ್ಯುತ್‌ ಕಡಿತ, ತ್ರೀಫೇಸ್‌ ಎಂಬಿತ್ಯಾದಿ ತಕರಾರಿನ ಬದಲಾಗಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಗೇ (ಹೆಸ್ಕಾಂ) ವಿದ್ಯುತ್‌ ನೀಡುತ್ತಿದ್ದಾರೆ. 

ತಲೆ ಹೊಕ್ಕ ‘ಡ್ರ್ಯಾಗನ್‌’
2009ರಲ್ಲಿ ಸರ್ಕಾರವು ಚೀನಾಕ್ಕೆ ಕರೆದುಕೊಂಡ ಹೋದ ರೈತರ ತಂಡದಲ್ಲಿ ಅವರೂ ಒಬ್ಬರು. ಅಲ್ಲಿನ ಕೆಲವು ಹಳ್ಳಿಗಳಲ್ಲಿ ಸೌರಶಕ್ತಿ ಬಳಸಿ ವಿದ್ಯುತ್‌ ಉತ್ಪಾದಿಸುವುದು ಅವರ ಗಮನಸೆಳೆದಿತ್ತು. ‘ನಾನೇ ಏಕೆ ವಿದ್ಯುತ್‌ ಉತ್ಪಾದಿಸಬಾರದು’ ಎಂಬ ‘ಹುಳ’ ಅವರ ತಲೆ ಹೊಕ್ಕಿತು. ಅದು ‘ಡ್ರ್ಯಾಗನ್’ ರೂಪದಲ್ಲೇ ಅವರನ್ನು ಕಾಡಲು ಆರಂಭಿಸಿತು.  ಹಾಗೆ ಭಾರತಕ್ಕೆ ಮರಳಿ‌ ಬಂದ ಅವರು ಸುಮ್ಮನೆ ಕೂರಲಿಲ್ಲ. ಆಂಧ್ರಪ್ರದೇಶ ಮತ್ತಿತರ ಕಡೆಗಳಲ್ಲಿ ವಿದ್ಯುತ್‌ ಉತ್ಪಾದಿಸುವ ಬಗ್ಗೆ ಮಾಹಿತಿ ಕಲೆ ಹಾಕಿದರು. ಅವರ ಕನಸಿಗೆ ಅಳಿಯ ರಾಘವೇಂದ್ರ ಕುಲಕರ್ಣಿ ‘ಶಕ್ತಿ’ ತುಂಬಿದರು.

ಇಕೋ ಎನರ್ಜಿ, ಎಂ.ವಿ ಸೋಲಾರ್ ಮತ್ತಿತರ ಕಂಪೆನಿಗಳಲ್ಲಿ ಉದ್ಯೋಗಿಯಾಗಿದ್ದ ರಾಘವೇಂದ್ರ ಕುಲಕರ್ಣಿ ಅವರಿಗೆ ಸೌರಶಕ್ತಿಯನ್ನು ರೈತರ ಮನೆಗೆ ತಲುಪಿಸಬೇಕು ಎಂಬ ಹಂಬಲ. ಈ ನಿಟ್ಟಿನಲ್ಲಿ ‘ಸ್ಮಾರ್ಟ್ ಸೋಲಾರ್ ಸೊಲ್ಯೂಶನ್’ ಎಂಬ ಸಂಸ್ಥೆ ಹುಟ್ಟುಹಾಕಿದ್ದರು. ವಿದ್ಯುತ್ ಉತ್ಪಾದನೆ ಮಾತ್ರವಲ್ಲ, ಅದನ್ನು ಮಾರಿ ಹಣ ಗಳಿಸುವ ಯೋಜನೆಯನ್ನೂ ಮಾವ ಶ್ರೀನಿವಾಸ ಕುಲಕರ್ಣಿ ಅವರಿಗೆ ನೀಡಿದರು. ಭದ್ರತೆ ಹಾಗೂ ನಿರ್ವಹಣೆ ದೃಷ್ಟಿಯಿಂದ ತಮ್ಮ ಮನೆ ಮೇಲೆ ಶ್ರೀನಿವಾಸ ಕುಲಕರ್ಣಿ 5 ಲಕ್ಷ ವೆಚ್ಚದಲ್ಲಿ ಪ್ರತಿನಿತ್ಯ 25ಯೂನಿಟ್‌ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಿದರು. ಒಟ್ಟು 5ಕಿ.ವಾ ಪೀಕ್ ಸಾಮರ್ಥ್ಯದ 20 ಪ್ಯಾನೆಲ್‌ ಹಾಕಲಾಯಿತು. ವಿದ್ಯುತ್ ಖರೀದಿಗೆ ಹೆಸ್ಕಾಂ ಜೊತೆ ಯೂನಿಟ್‌ಗೆ ₹9.56 ದರದಲ್ಲಿ 25 ವರ್ಷಗಳ ಒಪ್ಪಂದ ಮಾಡಲಾಯಿತು. 16 ಏಪ್ರಿಲ್‌ 2015ರಂದು ವಿದ್ಯುತ್ ಉತ್ಪಾದನೆ ಆರಂಭಗೊಂಡಿತು.

ಉತ್ಪಾದನೆ
‘ಪ್ರತಿನಿತ್ಯ ಸುಮಾರು 25 ಯೂನಿಟ್‌ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಹಿಂದೆ ಮಾಸಿಕ ₹200 ಮನೆಯ ಕರೆಂಟ್‌ ಬಿಲ್‌ ಬರುತ್ತಿತ್ತು. ಬಿಲ್‌ ಕಟ್ಟಲು ಹೋಗಿಬರಲು ಅರ್ಧ ದಿನ ಬೇಕಾಗಿತ್ತು. ಈಗ ಹಾಗಿಲ್ಲ. ಮನೆ ಬಳಕೆಗೆ ಹೊರತು ಪಡಿಸಿ, ಸುಮಾರು 20 ಯೂನಿಟ್‌ ವಿದ್ಯುತ್ ಹೆಸ್ಕಾಂ ಖರೀದಿಸುತ್ತಿದೆ. ದಿನಕ್ಕೆ ಸುಮಾರು  ₹200ರಂತೆ ಮಾಸಿಕ  ₹6,000 ಹೆಸ್ಕಾಂ ನಮ್ಮ ಖಾತೆಗೆ ಜಮಾ ಮಾಡುತ್ತಿದೆ. ಮನೆ ಬಳಕೆ ಕಡಿಮೆ ಮಾಡಿದರೆ, ಆದಾಯ ಹೆಚ್ಚುತ್ತದೆ. ಅತಿವೃಷ್ಟಿ– ಅನಾವೃಷ್ಟಿ ಮತ್ತಿತರ ಸಮಸ್ಯೆಗಳಿಂದ ಬೆಳೆ ನಷ್ಟವಾದರೂ ಜೀವನ ನಿರ್ವಹಣೆಗೆ ಸಮಸ್ಯೆ ಇಲ್ಲ’ ಎಂದು ಶ್ರೀನಿವಾಸ ಕುಲಕರ್ಣಿ ಮುಗುಳ್ನಗುತ್ತಾರೆ.

ನಿರ್ವಹಣೆ–ಸಬ್ಸಿಡಿ
‘ಈ ಸೋಲಾರ್‌ ಪ್ಲೇಟ್‌ಗಳ ನಿರ್ವಹಣೆಗೆ ಹೆಚ್ಚಿನ ಕಷ್ಟವಿಲ್ಲ. ಎರಡರಿಂದ ಮೂರು ದಿನಕ್ಕೊಮ್ಮೆ ದೂಳು ತೆಗೆದು ಸ್ವಚ್ಛಗೊಳಿಸಿದರೆ ಸಾಕು. ಸರ್ಕಾರ ಸಬ್ಸಿಡಿ ನೀಡುತ್ತದೆ. ಆದರೆ, ಸಬ್ಸಿಡಿ ಪಡೆದರೆ ಯೂನಿಟ್‌ಗೆ  ₹7 ಕೊಡುತ್ತಾರೆ. ಅದಕ್ಕಾಗಿ ನಾನು ಸಬ್ಸಿಡಿ ನಿರಾಕರಿಸಿದೆ. ಇದರಿಂದ ಆದಾಯವೂ ಹೆಚ್ಚಿದೆ’ ಎನ್ನುತ್ತಾರೆ ಅವರು.

ಈ ಪ್ರಯೋಗವು ಈಗ ಬ್ಯಾಡಗಿಯಲ್ಲಿ ಪ್ರೇರಣೆಯಾಗುತ್ತಿದೆ. ಕೃಷಿಕರೂ ಆಗಿರುವ ಉದ್ಯಮಿ ಜಯದೇವಪ್ಪ ಬಂಗಾರಪ್ಪ ಕಬ್ಬೂರ್‌ ಎಂಬವರು 20 ಕಿಲೋ ವ್ಯಾಟ್‌ ಪೀಕ್‌ನ ಎರಡು ಹಾಗೂ 5 ಕಿಲೋ ವ್ಯಾಟ್‌ ಪೀಕ್‌ನ ಘಟಕ ಸ್ಥಾಪಿಸುತ್ತಿದ್ದಾರೆ. ಈ ಪೈಕಿ ಒಂದು ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ. ಅಲ್ಲದೇ, ದಾವಣಗೆರೆ, ರಾಣೆಬೆನ್ನೂರು, ಬೆಂಗಳೂರು ವಿವಿಧೆಡೆಯಿಂದ ಬೇಡಿಕೆ ಕೇಳಿ ಬರುತ್ತಿದೆ. ವಿವಿಧೆಡೆ ರೈತರು ಬಂದು ಮಾಹಿತಿ ಪಡೆಯುತ್ತಿದ್ದಾರೆ.

‘ಕೆಲವರು ಕೆಲವು ಲಕ್ಷ ಬೆಳೆಸಾಲ ಮಾಡುತ್ತಾರೆ. ಅವೈಜ್ಞಾನಿಕ ಬೆಳೆವಿಮೆ ಪದ್ಧತಿ ಪರಿಣಾಮ, ವೈಯಕ್ತಿಕ ಬೆಳೆ ಹಾನಿಯಾದರೆ ವಿಮಾ ಕಂಪೆನಿ ಪರಿಹಾರ ನೀಡುವುದಿಲ್ಲ. ವಿಮೆ ಕಂತು ಹಾಗೂ ಬೆಳೆ ಎರಡೂ ನಷ್ಟ. ರೈತರು ಅನಿವಾರ್ಯವಾಗಿ ಮೀಟರ್‌ ಬಡ್ಡಿ ಸಾಲಕ್ಕೆ ಕೈಚಾಚುತ್ತಾರೆ. ಮೀಟರ್ ಬಡ್ಡಿ ಸಾಲವು ಚಕ್ರವ್ಯೂಹದ ಹಾಗೆ. ಒಳ ಹೋದವರು ಹೊರಗೆ ಬರುವುದೇ ಬಹಳ ವಿರಳ. ಕೆಲವರು ಅಲ್ಲೇ ಆತ್ಮಹತ್ಯೆಗೆ ಶರಣಾಗುತ್ತಾರೆ’ ಎನ್ನುತ್ತಾರೆ ಶಿಕ್ಷಕರಾದ ವೀರೇಶ್ ಕೊಪ್ಪದ. ‘ಆದರೆ, ಸೌರಶಕ್ತಿ ವಿದ್ಯುತ್ ಹಾಗಿಲ್ಲ. ನಿಮಗೆ ಮಾಸಿಕ ಹಣ ಗ್ಯಾರೆಂಟಿ.

ಅಲ್ಲದೇ, ಮನೆಯ ವಿದ್ಯುತ್‌ ಖರ್ಚು ಉಳಿಯುತ್ತದೆ. ಇದು ‘ರೈತರ ಪಿಂಚಣಿ’. ರಾಜ್ಯ ಸರ್ಕಾರ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಸ್ವಸಹಾಯ ಸಂಘಗಳ ಮೂಲಕ ಈ ಘಟಕಗಳನ್ನು ಪ್ರೋತ್ಸಾಹಿಸಬೇಕು. ವಿದ್ಯುತ್ ಶಕ್ತಿ ಕಂಪೆನಿಗಳು ಮುಂದಡಿ ಇಡಬೇಕು’ ಎಂದು ರಾಘವೇಂದ್ರ ಕುಲಕರ್ಣಿ ಆಶಿಸುತ್ತಾರೆ. ಶ್ರೀನಿವಾಸ ಕುಲಕರ್ಣಿ ಹಾಗೂ ಸಹೋದರರಿಗೆ ಒಟ್ಟು 32 ಎಕರೆ ಹೊಲವಿದೆ. ಕೃಷಿಯಲ್ಲಿ ಹೊಸ ಹೊಸ ಪ್ರಯೋಗದ ಜೊತೆ ಈಗ ‘ಶಕ್ತಿದಾತ’ರೂ ಆಗಿದ್ದಾರೆ. ಸಾವಿನ ಸುದ್ದಿಗಳ ನಡುವೆ ಸೌರಶಕ್ತಿ ‘ಹೊಸ ಬೆಳಕು’ ಮೂಡಿಸಿದೆ.
*
ಹಳ್ಳಿಗೆ ಸ್ವಾವಲಂಬನೆ, ಸರ್ಕಾರಕ್ಕೆ ನೆಮ್ಮದಿ
ವಿದ್ಯುತ್ ಕಂಪೆನಿಗಳು ಒಂದು ಹಳ್ಳಿಗೆ 10 ಕಿಲೊವಾಟ್ ವಿದ್ಯುತ್‌ ನೀಡಲು ಸರಬರಾಜಿನಲ್ಲಿ ಸುಮಾರು 20 ಕಿಲೊವಾಟ್ ನಷ್ಟ ಮಾಡಿಕೊಳ್ಳುತ್ತವೆ. ಆದರೆ, ಅದೇ ಹಳ್ಳಿಯಲ್ಲಿ ಒಬ್ಬರು ಸೌರಶಕ್ತಿ ವಿದ್ಯುತ್ ಉತ್ಪಾದಿಸಿದರೆ, ಸರಬರಾಜು ನಷ್ಟವಿಲ್ಲದೇ ಐದಾರು ಮನೆಗಳಿಗೆ ವಿದ್ಯುತ್ ನೀಡಬಹುದು. ಹೀಗಾಗಿ ನಾಲ್ಕೈದು ರೈತರು ಸೇರಿ ಘಟಕ  ಸ್ಥಾಪಿಸಬಹುದು. ಅಲ್ಲದೇ, ರೈತರು ಸ್ವಾವಲಂಬಿಗಳಾಗಬಹುದು ಎನ್ನುತ್ತಾರೆ ಶ್ರೀನಿವಾಸ ಕುಲಕರ್ಣಿ.

25 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಗರಿಷ್ಠ ಸೌರಶಕ್ತಿ ಉತ್ಪಾದನೆಯಾ­ಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತದೆ. ಒಂದು ಪ್ಯಾನೆಲ್‌ನಲ್ಲಿ  250 ವ್ಯಾಟ್‌ ಪೀಕ್ ಸಾಮರ್ಥ್ಯವಿದೆ. ಕಂಪೆನಿಗಳು 10 ವರ್ಷದ ಗ್ಯಾರೆಂಟಿ ಹಾಗೂ 25 ವರ್ಷ ವಾರೆಂಟಿ ನೀಡುತ್ತಾರೆ. 25 ವರ್ಷದ ಬಳಿಕ ಶೇ 20ರಷ್ಟು ಉತ್ಪಾದನೆ ಕಡಿಮೆ ಆಗಬಹುದು. ಆಗ ಬಂಡವಾಳ, ಲಾಭ  ಬಂದಿರುತ್ತದೆ ಎಂಬ ಲೆಕ್ಕಾಚಾರ ರಾಘವೇಂದ್ರ ಕುಲಕರ್ಣಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT