ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಸಕರ ಅನರ್ಹತೆ: ಸ್ಪೀಕರ್‌ ಕ್ರಮ ಸರಿ’

ಉತ್ತರಾಖಂಡ ರಾಜಕೀಯ ಬಿಕ್ಕಟ್ಟು
Last Updated 9 ಮೇ 2016, 19:53 IST
ಅಕ್ಷರ ಗಾತ್ರ

ನೈನಿತಾಲ್/ ನವದೆಹಲಿ (ಪಿಟಿಐ):  ಉತ್ತರಾಖಂಡದ ಒಂಬತ್ತು ಬಂಡುಕೋರ ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್‌, ಸಂವಿಧಾನದ 10ನೇ  ಪರಿಚ್ಛೇದದ ಪ್ಯಾರಾ 2(1)(ಎ) ಪ್ರಕಾರ ಸ್ಪೀಕರ್ ಅವರು ತೆಗೆದುಕೊಂಡ ಕ್ರಮವು ಸೂಕ್ತವಾಗಿದೆ ಎಂದಿದೆ.

ಧನವಿನಿಯೋಗ ಮಸೂದೆಯ ವಿರುದ್ಧ ಮತ ಚಲಾಯಿಸುವುದಾಗಿ  ರಾಜ್ಯಪಾಲರಿಗೆ ಬರೆದ ಪತ್ರಕ್ಕೆ ಬಿಜೆಪಿ ಸದಸ್ಯರ ಜತೆ ಸಹಿ ಹಾಕಿರುವುದು ಭಿನ್ನಮತ ನಿಜ.

ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪಕ್ಷಾಂತರವಲ್ಲ ಎಂದು ಪಕ್ಷಾಂತರ ನಿಷೇಧ ಕಾಯ್ದೆ ಹೇಳುತ್ತದೆ. ಆದರೂ ಸಂವಿಧಾನದ 10ನೇ ಪರಿಚ್ಛೇದದ ಪ್ಯಾರಾ 2 (1) (ಎ) ಪ್ರಕಾರ ಪಕ್ಷ, ಸರ್ಕಾರ ಮತ್ತು ಪಕ್ಷದ ನಾಯಕನಿಂದ ದೂರ ಉಳಿಯುವುದು ತಾವಾಗಿಯೇ ಪಕ್ಷದ ಸದಸ್ಯತ್ವ ಬಿಟ್ಟುಕೊಟ್ಟಂತಾಗುತ್ತದೆ. ಆದ್ದರಿಂದ ಈ ಕ್ರಮವೂ ಪಕ್ಷಾಂತರ ಆಗುತ್ತದೆ. ಹಾಗಾಗಿ ಸ್ಪೀಕರ್ ಅವರ ಕ್ರಮ ಸರಿಯಾಗಿದೆ ಎಂದು ನ್ಯಾಯಮೂರ್ತಿ ಯು.ಸಿ ಧ್ಯಾನಿ ತಿಳಿಸಿದ್ದಾರೆ.

ಅನರ್ಹಗೊಂಡ ಶಾಸಕರು ತೀರ್ಮಾನವನ್ನು  ಪುನರ್ವಿಮರ್ಶಿಸುವಂತೆ  ಸ್ಪೀಕರ್ ಅವರಿಗೆ ಮನವಿ ಮಾಡಲು ತಮ್ಮ ಆದೇಶ ಅಡ್ಡಿ ಬರುವುದಿಲ್ಲ ಎಂದು ನ್ಯಾಯಮೂರ್ತಿ  ಧ್ಯಾನಿ ಸ್ಪಷ್ಟಪಡಿಸಿದ್ದಾರೆ.

ಈಗ 9 ಶಾಸಕರು ಅನರ್ಹಗೊಂ ಡಿರುವುದು ಊರ್ಜಿತವಾಗಿದ್ದರಿಂದ  ಶಾಸನ ಸಭೆಯ ಸದಸ್ಯರ ಬಲ 61ಕ್ಕೆ ಇಳಿದಿದೆ. ಅವರಲ್ಲಿ 27 ಕಾಂಗ್ರೆಸ್ ಸದಸ್ಯರಿದ್ದು, ಪಿಡಿಎಫ್‌ನ ಆರು ಸದಸ್ಯರು ಬೆಂಬಲ ನೀಡುತ್ತಿರುವುದರಿಂದ ಆಡಳಿತ ಪಕ್ಷದ ಪರ ಒಟ್ಟು 33 ಸದಸ್ಯರಿರುತ್ತಾರೆ.

ಸರಳ ಬಹುಮತಕ್ಕೆ ರಾವತ್ ಅವರಿಗೆ ಅಗತ್ಯವಿರುವುದು 31 ಸದಸ್ಯರ ಬೆಂಬಲ. ಬಿಜೆಪಿ 28 ಸದಸ್ಯರನ್ನು ಹೊಂದಿದೆ. ಅವರಲ್ಲಿ ಭೀಮಲಾಲ್ ಆರ್ಯ ಅವರ ನಿಷ್ಠೆ ಸಂಶಯಾಸ್ಪದ ಎಂದು ಹೇಳಲಾಗುತ್ತಿದೆ.

ಪಾಪ್ಯೂಲರ್ ಡೆಮಾಕ್ರೆಟಿಕ್ ಫ್ರಂಟ್‌ನಲ್ಲಿ ಇಬ್ಬರು ಬಿಎಸ್‌ಪಿ, ಉತ್ತರಾಖಂಡ ಕ್ರಾಂತಿ ದಳದ ಒಬ್ಬರು ಮತ್ತು ಮೂವರು ಪಕ್ಷೇತರರು ಸೇರಿದ್ದಾರೆ. ತುರ್ತು ಆದೇಶಕ್ಕೆ ಸುಪ್ರೀಂ ನಕಾರ: ಉತ್ತರಾಖಂಡ ಹೈಕೋರ್ಟ್  ಸ್ಪೀಕರ್ ಅವರ ಆದೇಶವನ್ನು ಎತ್ತಿಹಿಡಿದು ತೀರ್ಪು ನೀಡಿದ್ದನ್ನು ಪ್ರಶ್ನಿಸಿ ಅನರ್ಹಗೊಂಡ 9 ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೂ ವಿಚಾರಣೆ ಯನ್ನು ಜುಲೈ 12ರಂದು ನಡೆಸಲಾಗುತ್ತದೆ ಎಂದು ನ್ಯಾಯಪೀಠ ತಿಳಿಸಿತು.

ಇದರಿಂದ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ಪಡೆಯುವ ಅನರ್ಹಗೊಂಡ ಶಾಸಕರ ಪ್ರಯತ್ನ ಕೈಗೂಡಲಿಲ್ಲ. ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠವು ಮೇಲ್ಮನವಿಯ ವಿಚಾರ ಣೆಯನ್ನು ಜುಲೈ 12ಕ್ಕೆ ನಿಗದಿಪಡಿಸಿ ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ಅವರಿಗೆ ನೋಟಿಸ್ ನೀಡಿದೆ.

ಇದಕ್ಕೂ ಮೊದಲು ಅನರ್ಹಗೊಂಡ ಶಾಸಕರ ಪರ ವಕೀಲ ಸಿ. ಎ. ಸುಂದರಂ ಅವರು ಮುಖ್ಯ ನ್ಯಾಯಮೂರ್ತಿ ಎದುರು ಉತ್ತರಾಖಂಡ ಹೈಕೋರ್ಟ್‌ ತೀರ್ಪನ್ನು ಪ್ರಸ್ತಾಪಿಸಿದರು. ಆದರೆ ಈ ವಿಚಾರವನ್ನು ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಆದೇಶಿಸಿದ ನ್ಯಾಯಪೀಠಕ್ಕೆ ಮನವಿ ಸಲ್ಲಿಸುವಂತೆ ಮುಖ್ಯ ನ್ಯಾಯ ಮೂರ್ತಿಗಳು ಸೂಚಿಸಿದರು.

ರಾವತ್ ಮನವಿ: ಬಂಡಾಯ ಶಾಸಕರನ್ನು ವಾಪಸ್ ಕರೆಯಿಸಿಕೊಳ್ಳಲು ಮಾತುಕತೆ ನಡೆಸುತ್ತಿರುವ ವಿಡಿಯೊ ದೃಶ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎದುರಿಗೆ ಹಾಜರಾಗಲು ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಕಾಲಾವಕಾಶ ಕೋರಿದ್ದಾರೆ. ತಮ್ಮ ಕೋರಿಕೆಯನ್ನು ಸಿಬಿಐ ಅಧಿಕಾರಿಗಳು ಮನ್ನಿಸುತ್ತಾರೆ ಎಂಬ ಭರವಸೆ ಇದೆ ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದರು.

ಬಜೆಟ್‌ಗೆ ಲೋಕಸಭೆ ಅಸ್ತು: ಉತ್ತರಾಖಂಡದ ನಾಲ್ಕು ತಿಂಗಳ ಬಜೆಟ್‌ಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದೆ. ಮಂಗಳವಾರ ವಿಶ್ವಾಸಮತ ಯಾಚನೆ ನಡೆಯಲಿರುವುದರಿಂದ ಆತುರವಾಗಿ ಈ ಬಜೆಟ್ ಅಂಗೀಕಾರ ಮಾಡುವ ಅಗತ್ಯವಾದರೂ ಏನಿತ್ತು ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಸಂವಿಧಾನದ ಪ್ರಕಾರ ಧನವಿನಿಯೋಗಕ್ಕೆ ಶಾಸನ ಸಭೆಯಲ್ಲಿ ಬಜೆಟ್ ಅಂಗೀಕಾರ ಮಾಡಲೇಬೇಕು. ಆದ್ದರಿಂದ ನಾಲ್ಕು ತಿಂಗಳ ವೆಚ್ಚಕ್ಕೆ ಅಗತ್ಯವಾದ ಬಜೆಟ್‌ಗೆ ಅನುಮೋದನೆ ನೀಡಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.

ಆದೇಶ ಮಾರ್ಪಾಡು ಮಾಡಿದ ‘ಸುಪ್ರೀಂ’
ನವದೆಹಲಿ (ಪಿಟಿಐ): ಉತ್ತರಾಖಂಡ ವಿಧಾನಸಭೆಯಲ್ಲಿ ಮಂಗಳವಾರ ನಡೆಯ ಲಿರುವ ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ಮೇ 6ರಂದು ಹೊರಡಿಸಿದ್ದ ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಮಾರ್ಪಾಡು ಮಾಡಿದೆ.

ವಿಶ್ವಾಸಮತ ಯಾಚನೆಯ ಮೇಲ್ವಿಚಾರಣೆಯನ್ನು ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ನೋಡಿಕೊ ಳ್ಳಬೇಕು ಎಂದು ಮೊದಲು ಹೊರಡಿಸಿದ್ದ ಆದೇಶವನ್ನು ಬದಲಿಸಿ, ವಿಧಾನಸಭೆಯ ಮತ್ತು ಸಂಸದೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಮೇ 6ರಂದು ಹೊರಡಿಸಿದ ಆದೇಶದಲ್ಲಿ ಹುದ್ದೆಯ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ತಾವು ಮೇಲ್ವಿಚಾರಣೆ  ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ತಿಳಿಸಿರುವುದರಿಂದ ಆದೇಶವನ್ನು ಮಾರ್ಪಾಡು ಮಾಡಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.

ಕೇಂದ್ರದ ಮನವಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್‌ ಅವರನ್ನು ಒಳಗೊಂಡ ಪೀಠವು ಹೊಸ ಆದೇಶ ಹೊರಡಿಸಿದೆ.

ಆಕ್ಷೇಪ: ವಿಧಾನಸಭೆಯ ಮತ್ತು ಸಂಸದೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಅವರಿಗೆ ಮೇಲ್ವಿಚಾರಣೆಗೆ ಸೂಚಿಸಿದರೆ ಹೊರಗಿನವರು ಕಲಾಪದಲ್ಲಿ ಭಾಗವಹಿಸಿದಂತಾಗುತ್ತದೆ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿತು. ಆದರೆ ನ್ಯಾಯಪೀಠವು ಈ ಆಕ್ಷೇಪ ತಳ್ಳಿಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT