ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗೀತಕ್ಕೆ ಎಲ್ಲರನ್ನೂ ಬೆಸೆಯುವ ಶಕ್ತಿ ಇದೆ’

‘ವೀಣೆ ಶೇಷಣ್ಣ’, ‘ಸ್ವರಮೂರ್ತಿ ವಿ.ಎನ್‌.ರಾವ್’ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ವೀಣೆ ಶೇಷಣ್ಣ’ ಹಾಗೂ ‘ಸ್ವರಮೂರ್ತಿ ವಿ.ಎನ್‌.ರಾವ್’ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಕ್ರಮವಾಗಿ ಪಿಟೀಲು ವಾದಕ ಎಂ. ಚಂದ್ರಶೇಖರನ್‌ ಮತ್ತು ಗಾಯಕಿ ಎಂ.ಎಸ್‌. ಶೀಲಾ ಅವರಿಗೆ ಶನಿವಾರ ನಗರದಲ್ಲಿ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯು ತಲಾ ₨50 ಸಾವಿರ ನಗದು, ವೀಣೆ ಶೇಷಣ್ಣನವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಚೆನ್ನೈ ಮ್ಯೂಸಿಕ್‌ ಅಕಾಡೆಮಿ ಅಧ್ಯಕ್ಷ ಎನ್‌. ಮುರಳಿ, ‘ಸಂಗೀತಕ್ಕೆ ಎಲ್ಲರನ್ನೂ ಬೆಸೆಯುವ ಶಕ್ತಿ ಇದೆ. ಜೊತೆಗೇ ಸಮಾಜದಲ್ಲಿ ಶಾಂತಿ ಸ್ಥಾಪನೆಗೂ ಕಲೆ ಸಹಕಾರಿ’ ಎಂದರು.

‘ಕರ್ನಾಟಕದಲ್ಲಿ ಕರ್ನಾಟಕ ಸಂಗೀತದ ಜೊತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬೆಳವಣಿಗೆಗೆ ಅನೇಕ ಕಲಾವಿದರು ಕೊಡುಗೆ ನೀಡಿದ್ದಾರೆ.  ಸಂಗೀತಕ್ಕೆ ಪ್ರೋತ್ಸಾಹ ನೀಡುತ್ತಿರುವ ದೇಶದ ಕೆಲವೇ ಕೆಲವು ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ’ ಎಂದರು.

‘ವೀಣೆ ಶೇಷಣ್ಣ ಮತ್ತು ವಿ.ಎನ್‌. ರಾವ್‌ ಅವರು ಹಾಕಿಕೊಟ್ಟ ಸಂಗೀತ ಪರಂಪರೆಯನ್ನು ಟ್ರಸ್ಟ್‌ ಅಧ್ಯಕ್ಷ ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ
ಅವರು ಮುಂದುವರೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ವಿಚಾರ’ ಎಂದು ಕೊಂಡಾಡಿದರು.

‘ಹಿರಿಯ ಕಲಾವಿದರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಮತ್ತು ಹೊಸ ಕಲಾವಿದರಿಗೆ ವೇದಿಕೆ ಒದಗಿಸಿಕೊಡುತ್ತಿರುವುದು ಸಂತಸದ ವಿಷಯ’ ಎಂದು ಹೇಳಿದರು.

ಗಾಯಕಿ ಎಂ.ಎಸ್‌. ಶೀಲಾ ಮಾತನಾಡಿ, ‘ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಜೊತೆಗೇ ಶ್ರೋತೃಗಳು ಸಹಜವಾಗಿಯೇ ನನ್ನಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ’ ಎಂದರು.

‘ಆಕಾಶವಾಣಿ ನೀಡಿದ ಅವಕಾಶದಿಂದ ಸಂಗೀತ ಕ್ಷೇತ್ರದಲ್ಲಿ ಬೆಳೆಯಲು ಕಾರಣವಾಯಿತು. ಅಲ್ಲಿ ಎಲ್ಲ ರೀತಿಯ ಹಾಡುಗಳನ್ನು ಹಾಡಲು ಸಾಧ್ಯವಾಯಿತು’ ಎಂದು ನೆನಪಿಸಿಕೊಂಡರು.

ಸ್ವರಮೂರ್ತಿ ವಿ.ಎನ್‌. ರಾವ್‌ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ ಮಾತನಾಡಿ, ‘ಚೆನ್ನೈ ಸೇರಿದಂತೆ ರಾಜ್ಯದ ಇತರೆಡೆ ವಿ.ಎನ್‌. ರಾವ್‌ ಅವರ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT