ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸತ್ತ ಮೇಲಾದರೂ ನೆಮ್ಮದಿಯಾಗಿರಲು ಜಾಗ ಕೊಡಿ’

‘ಪ್ರಜಾವಾಣಿ’ ಜನಸ್ಪಂದನ: ದೂರುಗಳ ಮಹಾಪೂರ, ಅಧಿಕಾರಿಗಳಿಂದ ಪರಿಹಾರದ ಭರವಸೆ
Last Updated 31 ಜನವರಿ 2015, 20:28 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾಮಿ, ಸ್ವಲ್ಪ ಇತ್ತ ಗಮನಿಸಿ. ಇಲ್ಲಿ ಸಮಸ್ಯೆ ಇರುವುದು ಜೀವಂತ ಇರುವವರೆಗೆ ಮಾತ್ರವಲ್ಲ. ಸತ್ತ ಮೇಲೂ ಸಮಸ್ಯೆ ಇದೆ. ಏಕೆಂದರೆ ಈ ವಾರ್ಡ್‌ನಲ್ಲಿ ಒಂದೂ ಸ್ಮಶಾನ ಇಲ್ಲ. ಸತ್ತ ಮೇಲಾದರೂ ನೆಮ್ಮದಿಯಿಂದ ಇರಲು ಸ್ವಲ್ಪ ಜಾಗ ಕೊಡಿ’
‘ನಮ್ಮ ಕಾಲದಲ್ಲಿ ಈ ವಾರ್ಡ್‌ಗೆ ಕಾವೇರಿ ನೀರು ಸಿಗುವುದಿಲ್ಲ ಎಂಬುದು ಖಚಿತವಾಗಿದೆ. ಮೊಮ್ಮಕ್ಕಳ ಕಾಲಕ್ಕಾದರೂ ಕಾವೇರಿ ನೀರು ಬಿಡುತ್ತೀರಾ ಸ್ವಾಮಿ?’,  ‘ಈ ಊರಿಗೆ ಹಂದಿಗಳ ನಗರ ಎಂಬ ಹೆಸರೇ ಲಾಯಕ್ಕು ಸ್ವಾಮಿ?’ ‘ಇಲ್ಲೊಂದು ರಾಜಕಾಲುವೆ ಇತ್ತು, ದಯವಿಟ್ಟು ಅದನ್ನು ಹುಡುಕಿ ಕೊಡುವಿರಾ?’

–ಹೀಗೆ ಸಾರ್ವಜನಿಕರು ಒಬ್ಬೊಬ್ಬರಾಗಿ ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟರು. ಅವರ ಮೊಗದಲ್ಲಿ ನಿರಾಸೆ ಇತ್ತು, ಹಲವು ವರ್ಷಗಳಿಂದ ಮಡುಗಟ್ಟಿದ ದುಃಖವಿತ್ತು. ಯಾರಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂಬ ಪ್ರಶ್ನೆ ಕಾಡುತ್ತಿತ್ತು. ಅದನ್ನು ಬಿಚ್ಚಿಡಲು ಸೂಕ್ತ ವೇದಿಕೆಗಾಗಿ ಕಾದಿದ್ದರು.

‘ಸರ್‌, ಮನೆಮುಂದಿನ ಒಳಚರಂಡಿ  ಸ್ವಚ್ಛಗೊಳಿಸಲು ₨ 500 ಲಂಚ ಕೇಳ್ತಾರೆ. ಕೊಳವೆ ಬಾವಿ ಹಾಕಿಸ್ತೀವಿ, ₨ 10 ಸಾವಿರ ಕೊಡಿ ಎನ್ನುತ್ತಾರೆ. ಕೇವಲ ಅರ್ಧ ಲೀಟರ್‌ ಔಷಧಿಗೆ ನೀರು ಬೆರೆಸಿ ಇಡೀ ಊರಿಗೆ ಸಿಂಪಡಿಸಿ ಹೋಗುತ್ತಾರೆ. ಬೆಳಿಗ್ಗೆ ಎದ್ದರೆ ಮತ್ತೆ ಸೊಳ್ಳೆ ಕಾಟ...’ ಹೀಗೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಮಹಿಳೆಯರು.

ಇದಕ್ಕೆ ವೇದಿಕೆಯಾಗಿದ್ದು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ಹೆರಾಲ್ಡ್‌’ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ.
ಜನಸಾಮಾನ್ಯರನ್ನು ಕಾಡುವ ಸಮಸ್ಯೆಗಳಿಗೆ ಸರ್ಕಾರಿ ಅಧಿಕಾರಿಗಳ ಸಮಕ್ಷಮದಲ್ಲೇ ಸೂಕ್ತ ಪರಿಹಾರ ದೊರಕಿಸಿಕೊಡಲು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ವಾರ್ಡ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸರ್ಕಾರಿ ಆಟದ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಾರ್ಯಕ್ರಮಕ್ಕೆ ಸಾವಿರಾರು ನಾಗರಿಕರು ಬಂದು  ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು  ಬಿಚ್ಚಿಟ್ಟರು. ಸ್ಥಳೀಯ ನಿವಾಸಿಗಳು  ಸಮಸ್ಯೆಯನ್ನು ಹೇಳಿಕೊಳ್ಳಲು ಪೈಪೋಟಿಯಿಂದ ಮುಂದಾಗುತ್ತಿದ್ದರು. ಗುಂಪು ಗುಂಪಾಗಿ ಬಂದಿದ್ದ ಬಡಾವಣೆ ನಿವಾಸಿಗಳು ಜೋರು ದನಿಯಲ್ಲಿಯೇ ಕುಂದುಕೊರತೆಗಳನ್ನು ಹೇಳಿಕೊಂಡರು.

ನೂರೊಂದು ಸಮಸ್ಯೆ: ರಸ್ತೆ ವಿಸ್ತರಣೆ, ಪರ್ಯಾಯ ರಸ್ತೆ, ಅಕ್ರಮ ಖಾತಾ, ಚರಂಡಿ, ಉದ್ಯಾನ, ಕೆರೆ, ಆಟದ ಮೈದಾನ, ಬೀದಿದೀಪ, ನೀರು, ಸಾರಿಗೆ ಸೌಲಭ್ಯ, ಬಸ್‌ ನಿಲ್ದಾಣ, ಕುಡಿಯುವ ನೀರು, ನೈರ್ಮಲ್ಯ, ಸಂಚಾರ, ಹಂದಿ, ನಾಯಿ, ಸೊಳ್ಳೆಕಾಟದ ಸಮಸ್ಯೆಗಳು ಸೇರಿದಂತೆ ಈ ವಾರ್ಡ್‌ನ ಬಹುತೇಕ  ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು.

ಕೆಲ ಅಧಿಕಾರಿಗಳು ಉತ್ತರಿಸಿದ ರೀತಿ

*ಈ ಬಡಾವಣೆ ನಮ್ಮ ವಲಯ ವ್ಯಾಪ್ತಿಗೆ ಬರುವುದಿಲ್ಲ
*ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ
*ಟೆಂಡರ್‌ ಕರೆದಿದ್ದೇವೆ
*ಯೋಜನೆಗೆ ಪ್ರಸ್ತಾವ ನೀಡಿದ್ದೇವೆ. ಇನ್ನೂ ಹಣ ಬಿಡುಗಡೆಯಾಗಿಲ್ಲ.
*ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳ­ಲಾಗುವುದು
*ಹಣಕಾಸಿನ ಸಮಸ್ಯೆ ಇದೆ
*ಯೋಜನೆ ರೂಪಿಸಲಾಗುತ್ತಿದೆ
*ಶಕ್ತಿಮೀರಿ ಪ್ರಯತ್ನಿಸುತ್ತೇವೆ.
*ನಾವಿರುವುದೇ ನಿಮ್ಮ ಸೇವೆಗೆ. ಖಂಡಿತ ಕೆಲಸ ಮಾಡುತ್ತೇವೆ
*ನಾಳೆಯೇ ನಿಮ್ಮ ಬಡಾವಣೆಗೆ ಬಂದು ಸಮಸ್ಯೆ ಪರಿಹರಿಸುತ್ತೇನೆ

ಗರಂ ಆದ ಜನ: ‘ನೋಡ್ತೀನಿ, ಮಾಡ್ತೀನಿ, ಮೇಲಧಿಕಾರಿಗಳ ಜೊತೆ ಮಾತನಾಡ್ತೀನಿ’ ಎಂದ ಅಧಿಕಾರಿಗಳನ್ನು ನಾಗರಿಕರು ತರಾಟೆಗೆ ತೆಗೆದುಕೊಂಡರು. ‘ಅವರನ್ನೇ ಕಳುಹಿಸಬೇಕಿತ್ತು. ನೀವ್ಯಾಕೆ ಬಂದ್ರಿ. ನಿಮ್ಗೆ ಮತ್ತಿನ್ನೇನು ಗೊತ್ರಿ’ ಎಂದು ಗರಂ ಆದರು.

ಪಾಲಿಕೆ ಸದಸ್ಯ ಎಂ.ಶ್ರೀನಿವಾಸ್‌ ಅವರು ಜನರ ಕುಂದುಕೊರತೆಗಳಿಗೆ ಕಿವಿಯಾದರು. ಜೊತೆಗೆ ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿಗಳ ಕಿವಿಯನ್ನೂ ಹಿಂಡಿದರು. ತಮ್ಮ ಲೋಪ­ದೋಷಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ ಕೆಲ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಗಡುವು ವಿಧಿಸಿಕೊಂಡಿದ್ದು ವಿಶೇಷ.

‘ಕೊನೆಗೂ ಸಮಸ್ಯೆ ಹೇಳಿಕೊಳ್ಳಲು ನನಗೆ ಒಂದು ವೇದಿಕೆ ಲಭಿಸಿತು. ಶೇ 10 ರಷ್ಟಾದರೂ ಅಭಿವೃದ್ಧಿಯಾದರೆ ಅದೇ ನಮ್ಮ ಪಾಲಿಗೆ ಸಂತಸದ ವಿಷಯ. ಅದಕ್ಕಾಗಿ ಸಂಘಟಕರಿಗೆ ಧನ್ಯವಾದ’ ಎಂದ ಸ್ಥಳೀಯ ನಿವಾಸಿ ಜೆ.ಮರಿಯಪ್ಪ ಅವರ ಕಂಗಳಲ್ಲಿ ಏನೋ ಉತ್ಸಾಹದ ಬಿಂಬ.

ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡೆಕ್ಕನ್‌ಹೆರಾಲ್ಡ್‌ ಪತ್ರಿಕೆ ಸಂಪಾದಕರಾದ ಕೆ.ಎನ್‌.ತಿಲಕ್‌ಕುಮಾರ್‌, ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ ಕಾರ್ಯಕ್ರಮದಲ್ಲಿ ಇದ್ದರು.

ಬೇಗೂರು ವಾರ್ಡ್‌ ಕುರಿತು....
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡ್‌ 18.5 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಸುಮಾರು 95 ಸಾವಿರ ಜನರು ಇಲ್ಲಿದ್ದಾರೆ.  55 ಬಡಾವಣೆಗಳನ್ನು ಹೊಂದಿರುವ ಇದು ಹೋಬಳಿ ಕೂಡ. ಇಲ್ಲಿ ಐತಿಹಾಸಿಕ ನಾಗೇಶ್ವರ ಪಂಚಲಿಂಗ ದೇಗುಲವಿದೆ. ಬೆಂಗಳೂರು ನಗರಿಯ ದೊಡ್ಡ ಕೆರೆಗಳಲ್ಲಿ ಒಂದೆನಿಸಿರುವ ಬೇಗೂರು ಕೆರೆ ಈ ವಾರ್ಡ್‌ನಲ್ಲಿದೆ.

*ವಾರ್ಡ್‌ ಸಂಖ್ಯೆ: 192 (ಬೊಮ್ಮನಹಳ್ಳಿ ವಲಯ)
*ಪಾಲಿಕೆ ಸದಸ್ಯ: ಎಂ.ಶ್ರೀನಿವಾಸ್‌ (ಜೆಡಿಎಸ್‌)
*ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಸದಸ್ಯ: ಎಂ.ಕೃಷ್ಣಪ್ಪ (ಬಿಜೆಪಿ)
*ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ: ಡಿ.ಕೆ.ಸುರೇಶ್‌ (ಕಾಂಗ್ರೆಸ್‌)

ಕರುಣೆಯಿದೆಯೇ?
ಇಲ್ಲಿನ ಅಂಗನವಾಡಿ ಕೇಂದ್ರವನ್ನು ನಿರ್ಮಿಸಿ 15 ವರ್ಷಗಳಾದವು. ಅದೀಗ ಶಿಥಿಲ­ಗೊಂ­ಡಿದ್ದು, ಮಕ್ಕಳ ಮೇಲೆ ಬೀಳುವ ಆತಂಕ­ವಿದೆ. ಸುತ್ತಮುತ್ತ ಕಸದ ರಾಶಿ ಬಿದ್ದಿದೆ. ಮಳೆ ಬಂದಾಗ ಕೊಳಚೆ ನೀರು ಅಂಗನವಾಡಿಗೆ ನುಗ್ಗುತ್ತದೆ.  ಮಕ್ಕಳ ಮೇಲೆ ನಿಮಗೆ ಸ್ವಲ್ಪವಾದರೂ ಕರುಣೆಯಿದೆಯೇ?
–ಅನ್ನಪೂರ್ಣ, ಅಂಗನವಾಡಿ ಕಾರ್ಯಕರ್ತೆ

ಇಸ್ಪೀಟ್‌ ಆಡುವವರ ಅಡ್ಡೆ
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಯಾವಾಗ ಹೋದರೂ ವೈದ್ಯರು ಇರುವುದಿಲ್ಲ. ಆಸ್ಪತ್ರೆ ಕಟ್ಟಡ ಎಲ್ಲಾ ಕಡೆ ಬಿರುಕು ಬಿಟ್ಟಿದ್ದು, ಕುಡುಕರ ಹಾಗೂ ಇಸ್ಪೀಟ್‌ ಆಡುವವರ ಅಡ್ಡೆಯಾಗಿದೆ.
-ಜೆ.ಮರಿಯಪ್ಪ, ಸ್ಥಳೀಯ ನಿವಾಸಿ

ವರದಿ ಸಲ್ಲಿಸಿದ್ದೇವೆ...
‘110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದಾಗ 10 ಟಿಎಂಸಿ ನೀರು ಬಿಡುವುದಾಗಿ ಭರವಸೆ ನೀಡಿದ್ರಿ. ಆ ಯೋಜನೆಯನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ನಮ್ಮ ಮೊಮ್ಮಕ್ಕಳ ಸಮಯಕ್ಕಾದರೂ ಕಾವೇರಿ ನೀರು ಸಿಗುತ್ತಾ ಸ್ವಾಮಿ?’ ಎಂದು ನಾಗರಿಕರೊಬ್ಬರು ಪ್ರಶ್ನಿಸಿದರು.

ಆಗ ಬಿಡಬ್ಲ್ಯುಎಸ್‌ಎಸ್‌ಬಿ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಭಾಕರ್‌, ‘ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಇದು ₨ 5020 ಕೋಟಿ ಯೋಜನೆ. ಹಣ ಬಿಡುಗಡೆಯಾಗುತ್ತಿದ್ದಂತೆ ಯೋಜನೆ ಕೈಗೆತ್ತಿಕೊಳ್ಳುತ್ತೇವೆ. ತಾತ್ಕಾಲಿಕವಾಗಿ ಲಾರಿಗಳಲ್ಲಿ ನೀರು ಸರಬರಾಜು ಮಾಡುತ್ತೇವೆ’ ಎಂದರು.

ಬೇಗೂರಿನಿಂದ ಮೆಜೆಸ್ಟಿಕ್‌, ಜಯನಗರ ಹಾಗೂ ಬನಶಂಕರಿಗೆ ಕಡಿಮೆ ಬಸ್‌ಗಳಿವೆ ಎಂಬ ದೂರು ಬಂದಿದೆ. ಮುಂದಿನ ಒಂದು ವಾರದಲ್ಲಿ ಬಸ್‌ಗಳ ಸೇವೆ ಹೆಚ್ಚಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ.
–ಕೆ.ರಾಮಮೂರ್ತಿ,
ವಲಯ ನಿಯಂತ್ರಕರು (ದಕ್ಷಿಣ), ಬಿಎಂಟಿಸಿ

ನೀರಿಗೆ ₨ 2 ಸಾವಿರ
ಕುಡಿಯುವ ನೀರಿಗಾಗಿ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಗಿದೆ. ನೀರಿಗಾಗಿ ನಾನು ಪ್ರತಿ ತಿಂಗಳು ₨ 2 ಸಾವಿರ ಖರ್ಚು ಮಾಡುತ್ತಿದ್ದೇನೆ.
–ಟಿ.ವಾಸುದೇವ್, ವಿಶ್ವಪ್ರಿಯ ಬಡಾವಣೆ ನಿವಾಸಿ



ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT