ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಳತೆ’ ಎನ್ನುವ ಈ ಕಾಲದ ಶಕ್ತಿಮದ್ದು!

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಚಹರೆ ಕಳೆದುಕೊಳ್ಳುತ್ತಿರುವ ಹಳ್ಳಿಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಲೇ, ಈ ಹೊತ್ತಿಗೆ ಅನಿವಾರ್ಯವಾದ ಸರಳ ಮತ್ತು ಪರಿಸರ ಸ್ನೇಹಿ ಬದುಕಿನ ಮಾದರಿಯ ಪ್ರತಿಪಾದಿಸುವ ಬರಹ ಇದು. ಇದೇ ಉದ್ದೇಶವನ್ನು ಒಳಗೊಂಡ ‘ಬದನವಾಳು ಸತ್ಯಾಗ್ರಹ ಮತ್ತು ರಾಷ್ಟ್ರೀಯ ಸುಸ್ಥಿರ ಸಮಾವೇಶ’ವನ್ನು ‘ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ’ ಇಂದು ನಡೆಸುತ್ತಿದೆ. ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ನಡೆಯುವ ಈ ಕಾರ್ಯಕ್ರಮ, ‘ಯಂತ್ರ ನಾಗರಿಕತೆಯನ್ನು ನಿಗ್ರಹಿಸೋಣ ಮತ್ತು ಶ್ರಮಸಹಿತವಾದ ಸರಳ ಬದುಕನ್ನು ಪೋಷಿಸೋಣ’ ಎನ್ನುವ ಆಶಯ ಒಳಗೊಂಡಿದೆ.

ಉಪ್ಪಿನಬೆಟಗೇರಿಯು ಧಾರವಾಡದಿಂದ 25 ಕಿಮೀ ದೂರದಲ್ಲಿರುವ ಒಂದು ದೊಡ್ಡ ಹಳ್ಳಿ. ಹೋದ ವರ್ಷ ಅಲ್ಲಿಯ ಪ್ರೌಢಶಾಲೆಯವರು ತಮ್ಮ ವಾರ್ಷಿಕೋತ್ಸವಕ್ಕೆ ನನ್ನನ್ನು ಅತಿಥಿಯಾಗಿ ಕರೆದಿದ್ದರು. ಗರಗ ಹಾಗೂ ಹೆಬ್ಬಳ್ಳಿ ಗ್ರಾಮಗಳ ಜೊತೆ ಉಪ್ಪಿನಬೆಟಗೇರಿಯೂ ಧಾರವಾಡ ವಲಯದ ಒಂದು ಮುಖ್ಯ ಖಾದಿ ಕೇಂದ್ರ ಎಂಬುದು ನನಗೆ ಗೊತ್ತಿತ್ತು. ಕಳೆದ ಮೂವತ್ತೈದು ವರ್ಷಗಳಿಂದ ಖಾದಿ ಹುಚ್ಚ ನಾನು. ಉಪ್ಪಿನಬೆಟಗೇರಿಗೆ ಬಂದಾಗ ಅಲ್ಲಿಯ ಖಾದಿ ಕೇಂದ್ರವನ್ನೂ ನೋಡಬೇಕು ಎಂದು ನನ್ನ ಸ್ನೇಹಿತರಿಗೆ ಕೇಳಿಕೊಂಡೆ. ಅವರು ‘‘ಅದಕ್ಕೇನ್ರಿ, ನಾ ತೋರಸ್ತೀನಿ’’ ಅಂದರು. ಶಾಲೆಯ ಕಾರ್ಯಕ್ರಮ ಇದ್ದದ್ದು ಮುಂಜಾನೆ ಹನ್ನೊಂದಕ್ಕೆ. ನಾನು ಹತ್ತು ಗಂಟೆಗೇ ಉಪ್ಪಿನಬೆಟಗೇರಿ ತಲುಪಿ ನನ್ನ ಸ್ನೇಹಿತರ ಜೊತೆ ಅಲ್ಲಿಯ ಖಾದಿ ಕೇಂದ್ರಕ್ಕೆ ಹೋದೆ. ಸುತ್ತಲಿನ ಹೊಲಗದ್ದೆಗಳೆಲ್ಲ ಕಾಣುವ ಹಾಗೆ ಎತ್ತರದ ಗುಡ್ಡದ ಮೇಲೆ ಇದೆ ಈ ಖಾದಿ ಕೇಂದ್ರ.

ಯಾವ ಊರಿನವರೂ ಹೆಮ್ಮೆ ಪಡುವಂತಹ ಸುಂದರವಾದ ಕಲ್ಲಿನಿಂದ ಕಟ್ಟಿದ, ಈಗಲೂ ಸುಸ್ಥಿತಿಯಲ್ಲಿರುವ ಭವ್ಯ ಕಟ್ಟಡ. ಸಾಕಷ್ಟು ಗಾಳಿ ಬೆಳಕು ಇರುವ ನೂರಾರು ಜನ ಕೆಲಸ ಮಾಡುವಂತಹ ವಿಶಾಲ ಕೋಣೆಗಳು. ಇಡೀ ಕಟ್ಟಡ ಬಿಕೋ ಅನ್ನುತ್ತಿತ್ತು. ಸ್ವಲ್ಪ ಸಣ್ಣದು ಅನ್ನಬಹುದಾದ ಒಂದು ಕೋಣೆಯಲ್ಲಿ ಅರಿವೆಯ ದಾಸ್ತಾನಿತ್ತು. ಅಲ್ಲಿದ್ದ ಒಬ್ಬರನ್ನು ಮಾತಾಡಿಸಿದೆ. ಅವರು ಅಭಿಮಾನದಿಂದ ‘‘ನಮ್ಮಲ್ಲಿ ನೈಸರ್ಗಿಕ ಬಣ್ಣದ ಖಾದಿ ತಯಾರಾಗತೈತಿ’’ ಎಂದು ಹೇಳಿ ಮಾದರಿಯನ್ನು ತೋರಿಸಿದರು. ತಿಳಿ ಕಂದು ಬಣ್ಣದ ಖಾದಿ ಅರಿವೆ.

ಸಾಮಾನ್ಯವಾಗಿ ಹತ್ತಿ ಅಂದರೆ ಬಿಳಿ ಬಣ್ಣದ್ದೇ ಸರಿ. ಆದರೆ ಅಪರೂಪಕ್ಕೊಮ್ಮೆ ಸೃಷ್ಟಿಯ ವೈಚಿತ್ರ್ಯವೋ ಅನ್ನುವ ಹಾಗೆ ಬೇರೆ ಬಣ್ಣದ ಹತ್ತಿಯ ಹೂ ಅರಳಿರುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಡಾ. ಖಾದಿ (ಹೌದು, ಈ ವಿಜ್ಞಾನಿಯ ಹೆಸರೂ  ಖಾದಿ) ಅವರು ಬಹಳ ಪರಿಶ್ರಮ ಪಟ್ಟು ಸಂಶೋಧನೆ ಮಾಡಿ ತಯಾರಿಸಿದ ನೈಸರ್ಗಿಕ ಬಣ್ಣದ ಖಾದಿ ಅರಿವೆಯಿದು. ನಾಲ್ಕಾರು ವರ್ಷಗಳ ಹಿಂದೆಯೇ ಕೃಷಿ ಮೇಳದಲ್ಲಿ ತಿಳಿ ನೀಲಿ ಮತ್ತು ತಿಳಿ ಕಂದು ನೈಸರ್ಗಿಕ ಬಣ್ಣದ ಖಾದಿ ಅರಿವೆಗಳು ಮಾರಾಟಕ್ಕಿದ್ದುದನ್ನು ನೋಡಿದ್ದೆ. ಈಗ ಅದನ್ನು ಇಲ್ಲಿ ಮತ್ತೆ ನೋಡಿ ನನಗೆ ಭಯಂಕರ ಖುಷಿಯಾಯಿತು. ಎರಡು ಅಂಗಿಗೆ ಆಗುವಷ್ಟು ಅರಿವೆ ಖರೀದಿಸಿದೆ.

ಅಲ್ಲಿಂದ ನಾವು ಶಾಲೆಗೆ  ಹೋದೆವು. ಕಾರ್ಯಕ್ರಮ ಶುರುವಾಗಲು ಇನ್ನೂ ವೇಳೆಯಿತ್ತು. ಊರಿನ ಹಿರಿಯರು ಹತ್ತು ಹನ್ನೆರಡು ಜನ ಬಂದಿದ್ದರು. ಚಹಾ ಚೂಡಾ ಸವಿಯುತ್ತ ಅವರೊಡನೆ ಮಾತಾಡುವ ಅವಕಾಶ  ಸಿಕ್ಕಿತು. ಖಾದಿ ಕೇಂದ್ರದ ಬಗ್ಗೆ ಅವರಿಗೆ ಕೇಳಿದೆ. ‘‘ಸ್ವಾತಂತ್ರ್ಯ ಸಿಕ್ಕ ಮ್ಯಾಲೆ ಕಟ್ಟಿದ್ದು ನೋಡ್ರಿ ಆ ಕಟ್ಟಡ. ಹತ್ತೊಂಬತ್ ನೂರಾ ಅರವತ್ತರ ಸುಮಾರಿಗೆ ನಮ್ಮ ಈ ಖಾದಿ ಕೇಂದ್ರದೊಳಗ ದಿನಾಲೂ ಎರಡು ಸಾವಿರ ಜನ ಕೆಲಸ ಮಾಡ್ತಿದ್ರು’’ ಎಂದು ಒಬ್ಬ ಹಿರಿಯರು ಹೇಳಿದರು. ‘‘ಮತ್ತ ಈಗ?’’ ನಾ ಕೇಳಿದೆ. ‘‘ಈಗೆಲ್ಲಿದರೀ, ಇಪ್ಪತ್ತ ಮಂದಿನೂ ಇರೂದಿಲ್ಲ ಅಲ್ಲ’’. ವಿಷಾದದ ಬಾವಿಯಿಂದ ಎದ್ದು ಬಂದ ಅವರ ಉತ್ತರ ನನ್ನನ್ನು ತಲುಪಿತು. ‘‘ಯಾಕ ಹಿಂಗಾತು, ಕಾರಣ ಏನು?’’ ಎಂದೆ. ‘‘ಅದೊಂದು ದೊಡ್ಡ ಕತೀನ ಐತಿ, ಹಿಂಗ ಎರಡು ಮಿನಿಟಿನ್ಯಾಗ ಹೇಳಿ ಮುಗಸಲಾಕ್ ಆಗೂದಿಲ್ಲರಿ’’ ಎಂದು ಇನ್ನೊಬ್ಬ ಹಿರಿಯರು ಹೇಳಿದರು.

ನಾನು ಒಂದೆರಡು ನಿಮಿಷ ಸುಮ್ಮನಿದ್ದು ಮಾತಿನ ದಿಕ್ಕು ಬದಲಿಸುವ ಸಲುವಾಗಿ ‘‘ಉಪ್ಪಿನಬೆಟಗೇರಿ ಗ್ರಾಮಕ್ಕ ನೀರಿನ ಸೌಕರ್ಯ ಹೆಂಗ’’ ಎಂದು ಸಹಜವಾಗಿ ಕೇಳಿದೆ. ಅದಕ್ಕೆ ಒಬ್ಬರು ‘‘ನಮ್ಮ ಊರಾಗ ಖಾದಿ ಕೇಂದ್ರದ್ದು ಒಂದ್ ಕತಿ ಆದರ, ನೀರಿಂದ ಇನ್ನೊಂದ್ ಕತಿ ನೋಡ್ರಿ’’ ಎಂದು ಹೇಳಿ ಮುಂದುವರಿಸಿದರು. ‘‘ನನ್ನ ವಯಸ್ಸು ಈಗ ಎಪ್ಪತ್ತರ ಎಡಬಲ ಅಂತಿಟ್ಕೋರಿ. ನಾವು ಸಣ್ಣವರಿದ್ದಾಗ ನಮ್ಮ ಊರಿನ ಆಚಿಗೊಂದು ಈಚಿಗೊಂದು ಎರಡು ಹಳ್ಳ ಹರೀತಿದ್ವು. ನಾವು ಸಣ್ಣ ಹುಡುಗರೆಲ್ಲಾರೂ ಆ ಹಳ್ಳದಾಗ ಈಸ್ ಹೊಡಿತಿದ್ವಿ; ಊರಾಗಿನ ಬಾವಿಯೊಳಗೂ ಇಡೀ ವರ್ಷ ನೀರ್ ಇರ್ತಿತ್ತು. ನಿಧಾನಕ್ಕ ಆ ಎರಡೂ ಹಳ್ಳ ಗಾಯಬ್ ಆದವು. ಛಲೋ ಮಳಿ ಆದರ ನಾಕ ದಿನಾ ಹರೀತಾವ್ ಅಷ್ಟ. ಮತ್ತ ಹಳ್ಳದಾಗ ನೀರಿಲ್ಲ ಅಂದಮ್ಯಾಲೆ ಊರಾಗಿನ ಬಾವಿಯೊಳಗ ಎಲ್ಲಿಂದ್ ನೀರ್ ಬರಬೇಕು? ಅವೂ ಎಲ್ಲಾ ಬತ್ತಿ ಹೋಗ್ಯಾವ’’.

‘‘ಹಂಗಂದರ ಕುಡಿಯೂ ನೀರಿಗೆ ಏನ್ ವ್ಯವಸ್ಥೆ?’’.
‘‘ಈಗ ನಾವು ಭಾಳ ಸುಧಾರ್ಸಿವಿ’’ ಅವರು ವ್ಯಂಗವಾಗಿ ಹೇಳಿದರು. ‘‘ಹಳ್ಳ ಬಾವಿ ಎಲ್ಲ ಹಳೆ ಕಾಲದ್ದು ಅಲ್ರಿ, ಅದಕ್ಕ ಅವನ್ನ ಬಿಟ್ಟು ಈಗ ನಾವೇನು ಮಾಡೀವಿ ಅಂದರ ಇಲ್ಲಿಂದ ಐದು ಕಿಲೋಮೀಟರ್ ದೂರ ಕಲ್ಲೂರ ಐತರಿ: ಅಲ್ಲಿ ಒಂದ್ ಬೋರ್ ಹೊಡದು ಅಲ್ಲಿಂದ ಇಲ್ಲಿಗೆ ಪೈಪ್ ಲೈನ್ ಹಾಕಿ ನಮ್ಮ ಊರಿಗೆ ನೀರ್ ತಂದಿವ್ರಿ, ನಾವು ಆಧುನಿಕ ಭಗೀರಥರು!’’.

‘‘ಅಲ್ಲರಿ ಮತ್ತ, ಬೋರ್ ಅಂದ್ರ ಅದು ಎಷ್ಟ್ ದಿವಸ ನಡೀತೈತಿ?’’.
‘‘ಎಷ್ಟ್ ದಿವಸ ನಡೀತೈತಿ ಅಷ್ಟ ದಿವಸ ನಡಸೂದು: ಅಲ್ಲಿಂದ ಮುಂದ್ ಮತ್ತೇನರೆ ಹೊಸ ತಂತ್ರಜ್ಞಾನ ಬರಬಹುದು. ಇಲ್ಲಾಂದರ ಶಿವಾಯನಮಃ’’.

ಅಷ್ಟು ಹೊತ್ತಿಗೆ ಸಂಘಟಕರು ಬಂದು ಕರೆದಿದ್ದರಿಂದ ನಾವೆಲ್ಲ ಹೊಸದಾಗಿ ನಿರ್ಮಾಣಗೊಂಡ ಸಭಾಭವನಕ್ಕೆ ತೆರಳಿದೆವು. ಅಲ್ಲಿ ಸಭಾ ಕಾರ್ಯಕ್ರಮ. ಸಾಮಾನ್ಯವಾಗಿ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಕ್ಕಳು ಭಾಷಣ ಕೇಳುವ ಮನಸ್ಥಿತಿಯಲ್ಲಿ ಇರುವದಿಲ್ಲ. ಅವರ ಕಣ್ಣು ಕಿವಿ ಹೃದಯಗಳೆಲ್ಲ ನಂತರ ಬರುವ ಮನರಂಜನಾ ಕಾರ್ಯಕ್ರಮದ ಮೇಲೆಯೇ ಇರುತ್ತವೆ. ಇದು ನನಗೆ ಚೆನ್ನಾಗಿ ಗೊತ್ತು. ನಾನು ಅವರ ತಾಳ್ಮೆಯನ್ನು ಹೆಚ್ಚು ಜಗ್ಗದೆ ನಾಲ್ಕು ಮಾತು ಹೇಳಿ ಮುಗಿಸಿದೆ. ಬಳಿಕ ಸಂಘಟಕರು ‘‘ಇನ್ನ ಇಲ್ಲಿ ಮನರಂಜನಾ ಕಾರ್ಯಕ್ರಮದ ತಯಾರಿ ಮಾಡ್ಕೋತಾರ್ರಿ, ಅಷ್ಟರೊಳಗ ನೀವು ಊಟ ಮಾಡಿಕೊಂಡ ಬಿಡಬಹುದು’’ ಎಂದು ನನ್ನನ್ನು ಕರೆದೊಯ್ದರು. ಅಲ್ಲಿ ಮತ್ತೆ ಕೆಲವು ಹಿರಿಯರು ಹಾಗೂ ಶಿಕ್ಷಕರು ಮಾತಿಗೆ ಸಿಕ್ಕರು. ‘‘ಎಸ್.ಎಸ್.ಎಲ್.ಸಿ. ಮಕ್ಕಳು ಈಗ ಪರೀಕ್ಷಾ ಬರೀತಾರಲ್ಲ, ಅವರೆಲ್ಲ ಮುಂದೇನ ಮಾಡ್ತಾರ?’’ ಎಂದು ಕೇಳಿದೆ.

ಅದಕ್ಕೆ ಶಿಕ್ಷಕರೊಬ್ಬರು ‘‘ಬಹುತೇಕ  ಎಲ್ಲಾರೂ ಊರು ಬಿಡತಾರ್ರಿ. ಕಾಲೇಜು ನೌಕರಿ ಮತ್ತೇನೇನೋ ಅಂತ ಧಾರವಾಡ ಹುಬ್ಬಳ್ಳಿ ಬೆಂಗಳೂರು ಹಾದಿ ಹಿಡಿತಾರ್ರಿ. ಮತ್ತ ನಪಾಸಾದವರು ಒಕ್ಕಲತನ, ಕಿರಾಣಿ ಅಂಗಡಿ, ಆ ಉದ್ಯೋಗ ಈ ಉದ್ಯೋಗ ಅಂತ ಏನೇನೂ ಮಾಡ್ಕೊತಾರ. ಒಟ್ಟಿನ್ಯಾಗ ಹೇಳ್ ಬೇಕಂದ್ರ ಭಾಳ್ ಕಡಿಮಿ ಜನ ಊರಾಗ ಉಳೀತಾರ’’ ಎಂದರು. ‘‘ನನ್ನ ಮೂರೂ ಮಕ್ಕಳೂ ಹಾರಿ ಹೋಗ್ಯಾವ: ಸಣ್ಣ ಊರಾಗಿನ ಸಾಲಿ ಅಂದ್ರ ಮಕ್ಕಳನ್ನ ಶಹರಕ್ಕ ರಫ್ತು ಮಾಡೂ ಕೇಂದ್ರ ಆಗ್ಯಾವ’’ ಎಂದರು ಮತ್ತೊಬ್ಬ ಹಿರಿಯರು. ‘‘ಅಲ್ಲ ಮತ್ತ, ಹಿಂಗ್ ಮಕ್ಕಳೆಲ್ಲಾ ಊರ್ ಬಿಡತಾರಂದ್ರ ಸಾಲಿ ಇದ್ದು ಊರಿಗೆ ಏನು ಉಪಯೋಗ? ಸಾಲಿ ನಡಸ್ಲಿಕ್ಕೆ ನೀವು ಊರವರು ಯಾಕ ಇಷ್ಟು ತ್ರಾಸ್ ತಗೊತೀರಿ?’’ ಎಂದೆ. ‘‘ನಮಗೂ ಇದೆಲ್ಲಾ ಅಂಗೈ ಹುಣ್ಣಿನಂಗ ನಿಚ್ಚಳ ಕಾಣಸ್ತೈತ್ರಿ, ಆದರ ಏನ್ ಮಾಡೂದು. ಪ್ರತಿಯೊಂದು ಊರಾಗೂ ಒಂದ್ ಸಾಲಿ ಇರಬೇಕು ಅಂತ ನಮ್ಮ ಊರಾಗೂ ಒಂದ್ ಸಾಲಿ ಐತಿ ಅಷ್ಟ’’. ಅವರ ದನಿಯಲ್ಲಿ ಹತ್ತು ಚಕ್ಕಡಿಯಷ್ಟು ನೋವು ಸಂಕಟ ತುಂಬಿತ್ತು.

ನಮ್ಮ ಊಟ ಮುಗಿಯುವಷ್ಟರಲ್ಲಿ ಅಲ್ಲಿ ಮನರಂಜನಾ ಕಾರ್ಯಕ್ರಮ ಶುರುವಾಗಿದ್ದವು. ಸಭಾ ಕಾರ್ಯಕ್ರಮದ ಮೂರು ಪಟ್ಟು ಜನ ಸಭಾಂಗಣದಲ್ಲಿ ಸೇರಿದ್ದರು. ಸಿನಿಮಾ ಹಾಡಿನ ಅಬ್ಬರಕ್ಕೆ ಮಕ್ಕಳು ಕುಣಿಯುವದು...

ಎಲ್ಲ ಕಡೆಗಳಲ್ಲೂ ಶಾಲಾ ವಾರ್ಷಿಕೋತ್ಸವದ ಮನರಂಜನೆಯೆಂದರೆ ಇಷ್ಟೇ ಆಗಿಬಿಟ್ಟಿದೆ. ಇಲ್ಲಿಯೂ ಅಷ್ಟೇ ಇತ್ತು. ‘‘ಮಕ್ಕಳು ನಾಟಕ ಆಡಾವರಿದ್ದಾರೇನು?’’ ಎಂದು ಕೇಳಿದೆ. ‘‘ನಾಟಕರೀ? ಆ ದಿನಾ ಹೋದೂರೀ ಸರ್, ಈಗ ಛಲೋ ನಾಟಕ ಆಡಸಾವರೂ ಇಲ್ಲ ಆಡಾವರೂ ಇಲ್ಲ’’ ಎನ್ನುವ ಉತ್ತರ ಬಂತು. ನಾನು ಒಂದೆರಡು ಕುಣಿತ ನೋಡಿ  ಧಾರವಾಡಕ್ಕೆ ಮರಳಿದೆ.

ಉಪ್ಪಿನ ಬೆಟಗೇರಿಯ ಭೆಟ್ಟಿ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಮೂಡಿಸಿತು: ಉಪ್ಪಿನ ಬೆಟಗೇರಿಗೆ ನಾವು ಮಾಡಿದ್ದಾದರೂ ಏನು? ಆ ಊರಿನ ಗಾಡಿ ಎಲ್ಲಿ ಹಳಿ ತಪ್ಪಿತು? ಇದು ನಾವು ಕನಸು ಕಂಡ ಪ್ರಗತಿಯೇ? ಉಪ್ಪಿನ ಬೆಟಗೇರಿ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಿದೆಯೇ? ಉಪ್ಪಿನ ಬೆಟಗೇರಿಯ ನಾಳಿನ ಭವಿಷ್ಯವೇನು? ಇಪ್ಪತ್ತೈದು ಅಥವಾ ಐವತ್ತು ವರ್ಷಗಳ ನಂತರ ಉಪ್ಪಿನ ಬೆಟಗೇರಿ ಹೇಗಿರುತ್ತದೆ?

ಶರೀರ–ಮನಸ್ಸು ಎರಡನ್ನೂ ಒಂದಾಗಿಡುತ್ತಿದ್ದ ಉದ್ಯೋಗಗಳನ್ನು ನಾಶಮಾಡಿ ಗ್ರಾಮೀಣರ ಜೀವನೋಪಾಯ ಕಿತ್ತುಕೊಂಡೆವು. ನೂರಾರು ವರ್ಷಗಳಿಂದ ಆಸರೆಯಾಗಿದ್ದ ಜಲಮೂಲಗಳನ್ನು ಬತ್ತಿಸಿ ನಿತ್ಯ ಬದುಕನ್ನು ದರಿದ್ರ ಮತ್ತು ದುರ್ಭರ ಮಾಡಿಕೊಂಡೆವು. ಶಿಕ್ಷಣ ಮತ್ತು ಮನರಂಜನೆಯ ಹೂರಣವನ್ನೇ ಹೊಲಸು ಮಾಡಿ ಮಕ್ಳಳನ್ನು ಪರದೇಸಿ ಮಾಡಿದೆವು ಎಂದು ನನಗನ್ನಿಸಿತು.

ಇಂದು ಕೇವಲ ಉಪ್ಪಿನ ಬೆಟಗೇರಿ ಮಕ್ಕಳು ರಫ್ತಾಗುತ್ತಿಲ್ಲ; ಉಪ್ಪಿನ ಬೆಟಗೇರಿಯಲ್ಲಿ ಕಲಿತ ಮಕ್ಕಳು ಧಾರವಾಡ – ಹುಬ್ಬಳ್ಳಿಯತ್ತ ನಡೆಯುತ್ತಿದ್ದಾರೆ; ಧಾರವಾಡ – ಹುಬ್ಬಳ್ಳಿಯಲ್ಲಿ ಕಲಿತ ಮಕ್ಕಳು ಬೆಂಗಳೂರು ಮುಂಬಯಿಗಳತ್ತ ಓಡುತ್ತಿದ್ದಾರೆ; ಬೆಂಗಳೂರಿನಲ್ಲಿ ಕಲಿತ ಮಕ್ಕಳು ಆಗಲೇ ನ್ಯೂಯಾರ್ಕಿಗೆ ಹಾರಿ ಹೋಗಿ ಆಗಿದೆ. ಇತ್ತ ನಾವು ಮೊಬೈಲು, ಜೀನ್ಸ್, ಟೀವಿ, ಕಂಪ್ಯೂಟರ್, ಜೆಸಿಬಿ, ಐಪಿಎಲ್, ಕರೋಡ್ಪತಿ, ಬಿಗ್ ಬಾಸ್‌ಗಳ ಭರಾಟೆಯಲ್ಲಿ ಅಭಿವೃದ್ಧಿಯ ಡಂಗುರ ಸಾರುತ್ತಿದ್ದೇವೆ.

ಇದು ಹೀಗೆಯೇ ಮುಂದುವರಿಯಬೇಕೇ? ಅಥವಾ ನಾವು ಪರಿಹಾರಗಳಿಗಾಗಿ ಪ್ರಯತ್ನಿಸಬೇಕೆ? ಪರಿಹಾರಗಳು ಎಲ್ಲಿಂದ ಯಾರಿಂದ ಬರಬಹುದು? ಸರ್ಕಾರಗಳು, ರಾಜಕೀಯ ಪಕ್ಷಗಳು ವಿಶ್ವವಿದ್ಯಾಲಯಗಳು, ಸಾಹಿತಿಗಳು, ಐಟಿ ಬಿಟಿ ಧಣಿಗಳು, ಸಿನೆಮಾ ಕ್ರಿಕೆಟ್ ತಾರೆಯರು– ಹೇಳಿ, ಇವರಲ್ಲಿ ಯಾರಾದರೂ ನಿಜವಾದ ಏಳಿಗೆಯ ಮತ್ತು ಸುಸ್ಥಿರ ಬದುಕಿನ ಸೂತ್ರಗಳನ್ನು ನಮಗೆ ಹೇಳಬಲ್ಲರು ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಟೊಂಕ ಕಟ್ಟಿ ನಮ್ಮ ಜೊತೆ ನಿಲ್ಲಬಲ್ಲರು....

ಇಂತಿನ ಬಹುತೇಕ ಸಮಸ್ಯೆಗಳು ಸೃಷ್ಟಿಯಾಗಿದ್ದು ಮತ್ತು ಬೃಹತ್ ಗಾತ್ರಕ್ಕೆ ಬೆಳೆದಿದ್ದು ನಮ್ಮ ಹೊಟ್ಟೆಬಾಕ ಜೀವನಶೈಲಿಯಿಂದಾಗಿ. ಪರಿಹಾರವೂ ನಮ್ಮ ಜೀವನಶೈಲಿಯ ಒಳಗೇ  ಅವಿತಿದೆ. ಈ ಸಂದರ್ಭದಲ್ಲಿ ವಿಜ್ಞಾನಿ, ಮಾನವತಾವಾದಿ ಅಲ್ಬರ್ಟ್ ಐನ್‌ಸ್ಟೀನ್ ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು– ‘‘ಯಾವ ಪಾತಳಿಯಲ್ಲಿ ನಾವು ಸಮಸ್ಯೆಯನ್ನು ಸೃಷ್ಟಿ ಮಾಡಿರುತ್ತೇವೆಯೋ  ಅದೇ ಪಾತಳಿಯಲ್ಲಿ ನಿಂತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ; ಬೇರೊಂದು ಪಾತಳಿಯಿಂದಲೇ ನಾವು ಪರಿಹಾರಗಳಿಗಾಗಿ ಪ್ರಯತ್ನಿಸಬೇಕು’’.

ಇಂದು ನಾವು ಸುಖದ ಮುಖವನ್ನೇ ತಿರುಗಿಸಬೇಕಾಗಿದೆ. ಹೆಚ್ಚು ದುಡ್ಡು–ಹೆಚ್ಚು ಆಸ್ತಿ ಪರಿಕಲ್ಪನೆಯಿಂದ ಹೊರ ಬರಬೇಕಿದೆ. ನೈಸರ್ಗಿಕ ಸಂಪನ್ಮೂಲಗಳ ಬೇಕಾಬಿಟ್ಟಿ ಬಳಕೆ, ಶರೀರ ಶ್ರಮವೇ ಇಲ್ಲದ ದಿನಚರಿ, ಯಂತ್ರ ವ್ಯಾಮೋಹ, ತಾಸುಗಟ್ಟಲೆ ಟೀವಿ– ಇವುಗಳ ಬದಲಾಗಿ ಶ್ರಮಪೂರ್ಣ, ಪರಿಸರಸ್ನೇಹಿ, ಹಾಗೂ ಸರಳವಾದ ಹಂಚಿಕೊಂಡು ಬಾಳುವ ಬದುಕು ಇಂದು ನಮಗೆ ಬೇಕಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT