ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರಿಯಾದ ಪಕ್ಷ, ವ್ಯಕ್ತಿ ಕುರಿತು ಸಾಹಿತಿ ಚಿಂತಿಸಬೇಕು’

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹತ್ತು ಹದಿನೈದು ವರ್ಷ­ಗಳ ಹಿಂದೆ ಸಾಹಿತಿಗಳು ರಾಜಕೀಯದ ಬಗ್ಗೆ ಮಾತನಾ­ಡಿದ್ದು ಕಡಿಮೆ, ಇಲ್ಲವೇ ಇಲ್ಲ ಎನ್ನುವಷ್ಟು ಇದೆ. ವಿಶೇಷವಾಗಿ ಈ ವರ್ಷ ಕೆಲವು ಸಾಹಿತಿಗಳು ಕಾಂಗ್ರೆಸ್‌ ಬೆಂಬಲಿಸಿ , ಬಿಜೆಪಿ­ಟೀಕಿಸಿ, ಹೇಳಿಕೆ ನೀಡಿದ್ದಾರೆ. ಈ ಸಾಹಿತಿಗಳ ಹೇಳಿಕೆ ಪತ್ರಿಕೆ­ಯಲ್ಲಿ ಬಂದ ದಿವಸವೇ ನಾನು ಬೇರೆ ಬೇರೆ ಸಾಹಿತಿ­ಗಳಿಗೆ ದೂರವಾಣಿ ಮಾಡಿದೆ. ಮೋದಿ, ಅನಂತ­ಕುಮಾರ್‌ ಅವರಿಗೆ ನಮ್ಮ ಬೆಂಬಲ ಸೂಚಿಸಿ ಪತ್ರಿಕೆ­ಗಳಿಗೆ ಹೇಳಿಕೆ ಬಿಡುಗಡೆ ಮಾಡಿದೆವು. ಇದರಲ್ಲಿ ಎಂ.ಚಿದಾ­ನಂದ ಮೂರ್ತಿ, ಎಸ್‌.ಎಲ್‌.ಭೈರಪ್ಪ, ವಿಜಯಲಕ್ಷ್ಮಿ ಬಾಳೇಕುಂದ್ರಿ, ಎನ್.ಎಸ್.ಲಕ್ಮೀನಾರಾ­ಯಣಭಟ್ಟ, ಪ್ರೇಮಾಭಟ್, ದೊಡ್ಡರಂಗೇಗೌಡ, ಎಸ್.ವಿದ್ಯಾಶಂಕರ್, ಎಸ್.ಆರ್.ಲೀಲಾ (ಏ.3ರ ಪತ್ರಿಕಾ ಹೇಳಿಕೆ) ಇದ್ದಾರೆ.

ನಾನು ರಾಜಕಾರಣದಲ್ಲಿ ಸಾಹಿತಿ­ಗಳು ಪ್ರವೇಶ ಮಾಡಬಾರದು ಅಂತ ಹೇಳೋ­ದಿಲ್ಲ. ಏಕೆಂದರೆ ರಾಜಕೀಯವಾಗಲಿ ಸಾಮಾಜಿಕ ಜೀವನ­ವಾಗಲಿ ಭಿನ್ನವಲ್ಲ. ರಾಜ್ಯದ, ರಾಷ್ಟ್ರದ ಆರ್ಥಿಕ ಭವಿಷ್ಯ ರೂಪಿಸುವವರೇ  ರಾಜಕಾರಣಿಗಳು. ಸಾಮಾ­ಜಿಕ, ಸಾಂಸ್ಕೃತಿಕ ಜೀವನ  ರೂಪಿಸುವವರು ಮುಖ್ಯ­ವಾಗಿ  ಸಾಹಿತಿಗಳು. ಆಡಳಿತ , ಸಾಹಿತ್ಯ ಇವು  ಒಂದು ಸಂಸ್ಕೃತಿಯ ಭಿನ್ನ ಆಯಾಮ, ಅವು ಪರಸ್ಪರ ವಿರೋಧ ಎಂದು ಯಾರೂ ಹೇಳಿಲ್ಲ.

ಹಿಂದೆ  ಇದ್ದ ಬಸವಣ್ಣ ಸಾಹಿತಿ, ಧಾರ್ಮಿಕ ಮುಖಂಡ. ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯೂ ಆಗಿದ್ದ. ಸರಿಯಾದ ಪಕ್ಷ, ಸರಿಯಾದ ವ್ಯಕ್ತಿಗಳನ್ನು ಕುರಿತು ಸಾಹಿತಿ  ಚಿಂತಿಸಬೇಕು. ಇದು ನಮ್ಮ ಸಮಾಜದ ನಿರೀಕ್ಷೆ. ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಯಲ್ಲಿ ಪ್ರಾಮಾಣಿಕವಾಗಿರುವಂತೆ ರಾಜಕೀಯ ಕುರಿತು ಮಾತನಾಡಿದರೂ ಪ್ರಾಮಾಣಿಕರಾಗಿರಬೇಕು. ಗಿರೀಶ್ ಕಾರ್ನಾರ್ಡ್ , ಯು.ಆರ್‌.ಅನಂತಮೂರ್ತಿ, ಕೆ.ಎಂ.ಮರುಳಸಿದ್ದಪ್ಪ ಚುನಾವಣೆ ಬಗ್ಗೆ ಹೇಳಿದ್ದು ಖಂಡಿಸುವುದಿಲ್ಲ. ಅದು ಅವರ ಹಕ್ಕು. ಆದರೆ ಯಾವ ಪಕ್ಷ ಬೆಂಬಲಿಸಿದರು, ಯಾವ ಪಕ್ಷ ವಿರೋಧಿಸಿದರು ಅದನ್ನು ನಾನು ಒಪ್ಪುವುದಿಲ್ಲ. ನಾನೆಂದೂ ರಾಜಕೀಯ ಪ್ರವೇಶ ಮಾಡಿಲ್ಲ. ರಾಜಕೀಯವನ್ನೂ ಮಾಡಿಲ್ಲ. ಯಾರೂ ಮಾಡಬಾರದು. ಬಿಜೆಪಿ ಉತ್ತಮ ಪಕ್ಷ­ವೆಂಬುದು ಅನೇಕ ವರ್ಷಗಳಿಂದ ನನ್ನ ನಿಲುವಾಗಿದೆ.

ಕಾಂಗ್ರೆಸ್‌, ಮುಸ್ಲಿಂ ಮತ್ತು ಕ್ರೈಸ್ತ್ನರ ವಿಷಯದಲ್ಲಿ  ಲಘು ಧೋರಣೆ ತೋರಿದೆ. ಕಾಂಗ್ರೆಸ್‌ಗೆ ಇಂಡಿಯಾ ಬೇಕು, ಭಾರತೀಯ ಸಂಸ್ಕೃತಿ ಬೇಕಿಲ್ಲ.ಆದರೆ ಬಿಜೆಪಿ ಅನ್ಯಧರ್ಮ ದ್ವೇಷ ಇಟ್ಟುಕೊಂಡಿಲ್ಲ. ಅದು ಇದ್ದಿದ್ದರಲ್ಲಿ ಭಾರತೀಯ ಸಂಸ್ಕೃತಿ ಉಳಿವಿನ ಬಗ್ಗೆ ಹೇಳುತ್ತದೆ.

ವ್ಯಕ್ತಿ ಮಟ್ಟಕ್ಕೆ ಬಂದರೆ ಬಿಜೆಪಿ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂಬುದು ನಮ್ಮಗಳ ಅಪೇಕ್ಷೆ. ಏಕೆಂದರೆ ಮೋದಿ ಗುಜರಾತನ್ನು ಯಾವುದೇ ಧಾರ್ಮಿಕ  ಘರ್ಷಣೆಗಳಿರದೆ ಪ್ರಗತಿಪರ ಪಥದಲ್ಲಿ ಕೊಂಡೊಯ್ದಿದ್ದಾರೆ. ಅಲ್ಲಿ ಧಾರ್ಮಿಕ ಘರ್ಷಣೆ ಆಗಿಲ್ಲ. ಮೋದಿ ಆಡಳಿತವನ್ನು ಗುಜರಾತಿನ ಜನ, ಮುಸ್ಲಿಮರೂ ಕೂಡ ಒಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT