ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಧಿಸುವ ತುಡಿತ ಇನ್ನಷ್ಟಿದೆ’

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಮಾಡುವ ಕೆಲಸದ ಬಗ್ಗೆ ಪ್ರೀತಿ ಮತ್ತು ಸಾಧಿಸುವ ತುಡಿತ ಇದ್ದರೆ ಏನನ್ನಾದರೂ ಮಾಡಿ ತೋರಿಸಬಹುದು ಎಂಬುದಕ್ಕೆ ಜಿ. ಬಾಲಕೃಷ್ಣ  ಸ್ಪಷ್ಟ ನಿದರ್ಶನ.ಬೆಂಗಳೂರಿನ ವರ್ತೂರಿನಲ್ಲಿ ಹುಟ್ಟಿದ ಬಾಲಕೃಷ್ಣ ತಮ್ಮ 16ನೇ ವಯಸ್ಸಿನಲ್ಲೇ ದೇಹದಾರ್ಢ್ಯಪಟುವಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕೆಂದು ಕನಸು ಕಂಡವರು. 

ಎಲ್ಲರಂತೆ ಮುಂದೇನಾಗುತ್ತದೊ ಆಗಲಿ ಎಂದು ಕೈಕಟ್ಟಿ ಕುಳಿತವರಲ್ಲ. ಕನಸಿನಲ್ಲೂ ತಾವು ಸಾಧಿಸಬೇಕೆಂದಿದ್ದ ಗುರಿಯನ್ನು ಬೆನ್ನು ಹತ್ತಿದವರು. ’ಮಿಸ್ಟರ್‌ ಇಂಡಿಯಾ’,  ಮಿಸ್ಟರ್‌ ವರ್ಲ್ಡ್’ ಕಿರೀಟ ಮುಡಿಗೇರಿಸಿಕೊಂಡಿರುವ ಈ ಸಾಧಕನ ಜತೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ವಿವರವನ್ನು ಇಲ್ಲಿ ನೀಡಲಾಗಿದೆ.

*ದೇಹದಾರ್ಢ್ಯ ಪಟುವಾಗಿ ಪಯಣ ಆರಂಭವಾಗಿದ್ದು ಹೇಗೆ?
ಹುಟ್ಟಿದ್ದು ವರ್ತೂರಿನಲ್ಲಿ. ಊರಿನ ಸಮೀಪವೇ ಸಣ್ಣದೊಂದು ಜಿಮ್‌ ಇತ್ತು. ಎಸ್ಸೆಸ್ಸೆಲ್ಸಿಯಿಂದಲೇ ಆ ಜಿಮ್‌ನಲ್ಲಿ ಅಭ್ಯಾಸ ಆರಂಭವಾಯಿತು.  ಪಿಯುಸಿಗೆ ಕಾಲಿಟ್ಟಾಗ ದೇಹದಾರ್ಢ್ಯದ ಬಗೆಗಿನ ಆಸಕ್ತಿ ಇಮ್ಮಡಿಸಿತು. ಆ ಸಮಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು  ಪ್ರಶಸ್ತಿಗಳನ್ನೂ ಗೆದ್ದೆ. ಆಗ ಸಿಕ್ಕ ಯಶಸ್ಸು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.

*ನಿಮಗೆ ಪ್ರೇರಣೆಯಾಗಿದ್ದು ಯಾರು?
16ನೇ ವಯಸ್ಸಿನವನಾಗಿದ್ದಾಗ ಹಾಲಿವುಡ್‌ ಸಿನಿಮಾಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದೆ. ಅರ್ನಾಲ್ಡ್‌ ಅವರ ದೇಹಸಿರಿ ಆಕರ್ಷಿಸಿತು. ಅವರ ಬಗ್ಗೆ ಓದಿ ತಿಳಿದುಕೊಂಡೆ. ಅವರಂತೆಯೇ ನಾನೂ ಬಲಿಷ್ಠ ಅಂಗ ಸೌಷ್ಠ್ಯವನ್ನು ಹೊಂದಬೇಕು ಅನಿಸಿತು. ಅದೇ ನಿಟ್ಟಿನಲ್ಲಿ ತರಬೇತಿ ಆರಂಭಿಸಿದೆ.

*ಅಭ್ಯಾಸ ಕ್ರಮ ಹೇಗಿರುತ್ತದೆ?
ಆರಂಭದ ದಿನಗಳಲ್ಲಿ ಬೆಳಿಗ್ಗೆ 7.30ಕ್ಕೆ ಏಳುತ್ತಿದ್ದೆ. ಬಳಿಕ ಉಪಹಾರ ಸೇವಿಸಿ ಕಾಲೇಜಿಗೆ ಹೋಗುತ್ತಿದ್ದೆ.  ತರಗತಿ ಮುಗಿದ ನಂತರ ಅರೆಕಾಲಿಕ ಉದ್ಯೋಗ. ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ ಬಳಿಕ ರಾತ್ರಿ 8 ರಿಂದ 11ರವರೆಗೆ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದೆ. ಅದೇ ಕ್ರಮವನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದೇನೆ. ಜಿಮ್‌ ತರಬೇತುದಾರರಾದ ಸುರೇಶ್‌ರಾಜು ಮತ್ತು ಯಶವಂತಪುರದಲ್ಲಿರುವ ಶಿವಶಂಕರ್‌ ಅವರ ಮಾರ್ಗದರ್ಶನದಂತೆ ಅಭ್ಯಾಸ ಮುಂದುವರಿಸಿದ್ದೇನೆ.

*ಆಹಾರ ಕ್ರಮದ ಬಗ್ಗೆ ಹೇಳಿ?
ಇದೇ ಸಮಯಕ್ಕೆ, ಇಂತಹುದನ್ನೇ ತಿನ್ನಬೇಕು ಎಂಬ ವೇಳಾಪಟ್ಟಿ ಇಲ್ಲ. ಪ್ರತಿ ಮೂರು ಗಂಟೆಗೊಮ್ಮೆ ಆಹಾರ ಸೇವಿಸುತ್ತೇನೆ. ಬೆಳಿಗ್ಗೆ ಓಟ್ಸ್‌, ಒಂದು 10ಎಕ್ಸ್‌, ಹಣ್ಣುಗಳು ತಿಂದರೆ. ಮೂರು ಗಂಟೆಯ ನಂತರ ಚಪಾತಿ, ಚಿಕನ್‌, ಒಣ ಹಣ್ಣುಗಳು ,ಫ್ರೂಟ್ಸ್‌ ಸಲಾಡ್‌. ಮತ್ತೆ ಮೂರು ಗಂಟೆಯ ನಂತರ ಚಿಕನ್‌, ಮೊಟ್ಟೆ, ಮೀನು ಹಾಗೂ ಬ್ರೌನ್‌ ರೈಸ್‌  ತಿನ್ನುತ್ತೇನೆ. ಇದರ ಜತೆಗೆ ದಿನಕ್ಕೆ 48 ಬೇಯಿಸಿದ ಮೊಟ್ಟೆಯ ಬಿಳಿ ಭಾಗ ಮತ್ತು ಒಂದೂವರೆ ಕೆ.ಜಿ ಚಿಕನ್‌ ಸೇವಿಸುತ್ತೇನೆ. ಮೊಟ್ಟೆಯಲ್ಲಿರುವ ಹಳದಿ ಬಣ್ಣದ ಭಾಗದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿರುವುದರಿಂದ ಅದನ್ನು ತಿನ್ನುವುದಿಲ್ಲ.

*ಜಾಹೀರಾತಿನಲ್ಲಿ ಬಿಂಬಿತವಾಗಿರುವ ಉತ್ಪನ್ನಗಳನ್ನು ಸೇವಿಸುವುದು ಎಷ್ಟು ಸರಿ?
ಈಗ ಹೆಚ್ಚೆಚ್ಚು ಜನ ಈ ಉತ್ಪನ್ನಗಳೆಡೆ ಆಕರ್ಷಿತರಾಗಿ ಇವುಗಳನ್ನು ಸೇವಿಸುತ್ತಿದ್ದಾರೆ. ಇವುಗಳನ್ನು ಸೇವಿಸಿದಾಕ್ಷಣ ಶೀಘ್ರವೇ ತೂಕ ಹೆಚ್ಚಿಸಿಕೊಳ್ಳುವುದು, ಇಳಿಸುವುದು ಸಾಧ್ಯವಾಗದ ಮಾತು. ಇವುಗಳನ್ನು ಸೇವಿಸಿದರೂ ಅದಕ್ಕೆ ತಕ್ಕಂತೆ ದೇಹವನ್ನು ದಂಡಿಸಬೇಕು. ಇಲ್ಲದಿದ್ದಲ್ಲೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

*ನಿಮ್ಮ ಸಾಧನೆಗಳ ಬಗ್ಗೆ ಹೇಳಿ?
ಮಿಸ್ಟರ್‌ ಇಂಡಿಯಾ ಸ್ಪರ್ಧೆಯಲ್ಲಿ ಏಳು ಸಲ ಸ್ಪರ್ಧಿಸಿದ್ದೇನೆ. ಅದರಲ್ಲಿ ಆರು ಬಾರಿ ಪ್ರಶಸ್ತಿ ಗೆದ್ದಿದ್ದೇನೆ. ಜತೆಗೆ ರಾಜ್ಯಮಟ್ಟದ ಓಪನ್‌ ಸ್ಪರ್ಧೆಗಳಲ್ಲಿ 25 ಬಾರಿ ಪ್ರಶಸ್ತಿ ಜಯಿಸಿದ್ದೇನೆ. ವರ್ಷಕ್ಕೊಮ್ಮೆ ನಡೆಯುವ ‘ಮಿಸ್ಟರ್‌ ಕರ್ನಾಟಕ ಶ್ರೇಷ್ಠ’ ಸ್ಪರ್ಧೆಯಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿದ್ದೇನೆ.

2010ರಲ್ಲಿ ಜರ್ಮನಿಯಲ್ಲಿ ನಡೆದಿದ್ದ ‘ಮಿಸ್ಟರ್‌ ಯೂನಿವರ್ಸ್‌’ ಟೂರ್ನಿಯ 24ವರ್ಷದೊಳಗಿನವರ ಜೂನಿಯರ್‌  ವಿಭಾಗದಲ್ಲಿ 6ನೇ ಸ್ಥಾನ ಪಡೆದಿದ್ದೆ. 2013ರ ನವೆಂಬರ್‌ನಲ್ಲಿ ನಡೆದಿದ್ದ ಜೂನಿಯರ್‌ ವಿಭಾಗದಲ್ಲಿ ‘ಮಿಸ್ಟರ್‌ ಯೂನಿವರ್ಸ್‌’ ಕಿರೀಟ ಮುಡಿಗೇರಿಸಿಕೊಂಡೆ. 2014ರ ಜೂನ್‌ನಲ್ಲಿ ಇಲ್ಲೇ ನಡೆದಿದ್ದ ಜೂನಿಯರ್‌ ವಿಭಾಗದ ‘ಮಿಸ್ಟರ್‌ ವರ್ಲ್ಡ್‌’ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿದ್ದೇನೆ.

*ಖರ್ಚು ವೆಚ್ಚ ಹಾಗೂ ನಿರ್ವಹಣೆ?
ತಿಂಗಳಿಗೆ ₹50 ರಿಂದ ₹60 ಸಾವಿರ ಖರ್ಚಾಗುತ್ತದೆ. ಪ್ರಾಯೋಜಕರಾರೂ ಸಿಗದಿದ್ದರೆ ಹೊಂದಿಸುವುದು ತುಂಬಾ ಕಷ್ಟ. ವಿಡಿಬಿ ಡೆವಲಪರ್ಸ್‌ ಎರಡು ವರ್ಷಗಳಿಂದ ನೆರವು ನೀಡುತ್ತಿದ್ದಾರೆ. ಇನ್ನೂ ಎತ್ತರದ ಸಾಧನೆ ಮಾಡಲು ನೆರವಿನ ಅಗತ್ಯವಿದೆ.

*ಸರ್ಕಾರದಿಂದ ನೆರವು ಸಿಕ್ಕಿದೆಯಾ?
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯದ ಕೀರ್ತಿ ಬೆಳಗಿದ್ದೇನೆ. ಆದರೆ ಇದುವರೆಗೂ ಸರ್ಕಾರ ಈ ಸಾಧನೆಯನ್ನು ಗುರುತಿಸಿಲ್ಲ. ಸರ್ಕಾರದಿಂದ ಬಿಡಿಗಾಸಿನ ನೆರವೂ ಸಿಕ್ಕಿಲ್ಲ. ಎರಡು ಬಾರಿ ಏಕಲವ್ಯ ಪ್ರಶಸ್ತಿಗೆ ಅರ್ಜಿ ಹಾಕಿದ್ದೆ. ಆದರೆ ಪ್ರಶಸ್ತಿ ಸಿಕ್ಕಿಲ್ಲ. ಮುಂದೊಮ್ಮೆ ಗುರುತಿಸಬಹುದು ಎಂಬ ವಿಶ್ವಾಸದಲ್ಲೇ ಕಾಲ ದೂಡುತ್ತಿದ್ದೇನೆ.

*ಭವಿಷ್ಯದ ಗುರಿಗಳು?
ಸದ್ಯದಲ್ಲೇ ಲಂಡನ್‌ನಲ್ಲಿ ‘ಮಿಸ್ಟರ್‌್ ವರ್ಲ್ಡ್‌’ ಸ್ಪರ್ಧೆ ನಡೆಯಲಿದ್ದು, ಪ್ರಶಸ್ತಿ ಗೆಲ್ಲಲೇಬೇಕೆಂಬ ಗುರಿ ಇದೆ.  ಅಲ್ಲಿ ಇಂಗ್ಲೆಂಡ್‌, ಅಮೆರಿಕ, ಬ್ರಿಟನ್‌ನ ದೇಹದಾರ್ಢ್ಯಪಟುಗಳಿಂದ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT