ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತಿಗೆ ಅಧಿಕಾರ, ಅಕ್ಷರದ ಅಹಂಕಾರ ಇರಬಾರದು’

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ
Last Updated 20 ಮಾರ್ಚ್ 2016, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಜವಾದ ಸಾಹಿತಿಗೆ ಅಹಂಕಾರ ಇರಬಾರದು. ಅಧಿಕಾರದ ಅಹಂಕಾರ, ಅಕ್ಷರದ ಅಹಂಕಾರ ಇವೆರಡೂ ಅತ್ಯಂತ ಅಪಾಯಕಾರಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಕಣ್ವ ಪ್ರಕಾಶನ ಹಾಗೂ ಎಂ.ಎಸ್‌.ಎಂ ಎಂಟರ್‌ಪ್ರೈಸಸ್‌ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಗುರುಪಾದ ಬೇಲೂರು ಅವರ ‘ಅಗರ್ತ’, ‘ದೇವರ ಕಾಡು’ ಹಾಗೂ ಕಂನಾಡಿಗಾ ನಾರಾಯಣ ಅವರ ‘ಅಲ್ಲಾಭಕ್ಷಿ ಮತ್ತು ಅವನ ನಾಯಿ’ ಕಥಾ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಕ್ಷರದ ಅಹಂಕಾರ, ನಾನೇ ಶ್ರೇಷ್ಠ ಎಂದು ಹೇಳುತ್ತದೆ. ಅಧಿಕಾರದ ಅಹಂಕಾರ, ಉಳಿದವರೆಲ್ಲ ಕನಿಷ್ಠ ಎಂದು ಹೇಳುತ್ತದೆ. ಅಧಿಕಾರಿಯಾಗಿರುವ ಗುರುಪಾದ ಅವರಲ್ಲಿ ಅಧಿಕಾರದ ಅಹಂಕಾರ ಇಲ್ಲ. ನಾರಾಯಣ ಅವರಲ್ಲಿ ಅಕ್ಷರದ ಅಹಂಕಾರ ಇಲ್ಲ. ಈ ವಿನಯವೇ ಇವರಿಂದ ಉತ್ತಮವಾದ ಸಾಹಿತ್ಯವನ್ನು ನೀಡುವಂತೆ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗದೆಯೂ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಕನ್ನಡದ ಲೇಖಕರ ಪರಂಪರೆ ದೊಡ್ಡದಿದೆ. ಶೈಕ್ಷಣಿಕವಲ್ಲದ ವಲಯದಿಂದ ಬಂದ ಗುರುಪಾದ ಹಾಗೂ ನಾರಾಯಣ ಅವರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ’ ಎಂದರು.

‘ಸಾಹಿತ್ಯ ಸಮಾಜದ ಸಾಕ್ಷಿಪ್ರಜ್ಞೆ ಆಗಬೇಕು. ಅಗರ್ತ, ದೇವರ ಕಾಡು, ಅಲ್ಲಾಭಕ್ಷಿ ಮತ್ತು ಅವನ ನಾಯಿ ಕಥಾ ಸಂಕಲನದ ಕಥೆಗಳು ಸಮಾಜದ ಸಾಕ್ಷಿಪ್ರಜ್ಞೆಗೆ ಬೇಕಾಗಿರುವಂತಹ ಆವರಣವನ್ನು ಸೃಷ್ಟಿ ಮಾಡುತ್ತವೆ. ಇವರಿಬ್ಬರ ನಿರೂಪಣಾ ಶೈಲಿ ಬೇರೆ ಬೇರೆ ಇದ್ದರೂ ಅವರು ಬದುಕಿನ ಬಹು ಆಯಾಮಗಳನ್ನು ಮರೆತಿಲ್ಲ’ ಎಂದರು.

‘ಸಾಹಿತಿ, ಕಲಾವಿದ ತನ್ನ ಕಾಲದ ದನಿಯಾಗಬೇಕು. ಯಾರು ಕಾಲದಲ್ಲಿ ಬದುಕುತ್ತಿರುತ್ತಾರೋ ಅವರು ನಿಜವಾದದ್ದನ್ನು ಸೃಷ್ಟಿಸಬಲ್ಲರು’ ಎಂದು ಹೇಳಿದರು.

ವಿಮರ್ಶಕ ಡಾ. ಕುಂಸಿ ಉಮೇಶ್‌ ಕೃತಿಗಳ ಕುರಿತು ಮಾತನಾಡಿ, ‘ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಅವರು ನೀಳ್ಗತೆಗಳನ್ನು ಬರೆಯಲು ಪ್ರಯತ್ನಿಸಿ ಹಿಂದೆ ಸರಿದರು. ಆದರೆ ಗುರುಪಾದ ಅವರು ನೀಳ್ಗತೆಗಳ ರಚನೆಯಲ್ಲಿ ತೊಡಗಿದ್ದಾರೆ. ಅವರ ಕಥೆಗಳು ಓದುವ ಸುಖಕ್ಕೆ ಯಾವುದೇ ಧಕ್ಕೆ ತರುವುದಿಲ್ಲ’ ಎಂದರು.

‘ಗುರುಪಾದ ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ವಿವರಗಳನ್ನು ನೀಡುವುದರಿಂದ ಕಥೆಯ ಓಟಕ್ಕೆ ತಡೆಯೊಡ್ಡಿದಂತಾಗುತ್ತದೆ. ಆದರೂ, ಪುರಾಣ, ವಿಜ್ಞಾನ, ಪರಿಸರವನ್ನು ಮೇಳೈಸಿದಂತೆ ಇವರ ಕಥೆಗಳು ಮೂಡಿಬಂದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ನಾರಾಯಣ ಅವರಿಗೆ ಬದುಕಿನ ಅನೇಕ ಮುಖಗಳನ್ನು ಕಥನವಾಗಿಸುವ ಕೌಶಲ ದಕ್ಕಿದೆ. ನಿರುದ್ವಿಗ್ನ ಬರವಣಿಗೆ ಶೈಲಿ, ಸಾಮಾಜಿಕ ಕಾಳಜಿ ಅವರ ಕಥೆಗಳಲ್ಲಿ ಕಾಣಬಹುದು. ಮನುಷ್ಯ–ಪ್ರಾಣಿ ಸಂಬಂಧವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಪ್ರಾಣಿಗಳು ಜೀವಂತ ಪಾತ್ರಗಳಾಗಿ ಅವರ ಕಥೆಗಳಲ್ಲಿ ಮೂಡಿಬರುತ್ತವೆ’ ಎಂದರು.

ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಗುರುಪಾದ, ನಾರಾಯಣ ಅವರ ಕಥೆಗಳು ಪ್ರಕೃತಿ, ಮನುಷ್ಯ, ಪ್ರಾಣಿ ಸಂಬಂಧವನ್ನು ಕಟ್ಟಿಕೊಡುತ್ತವೆ. ಇಬ್ಬರೂ ಪ್ರಕೃತಿ ಜತೆ ಬದ್ಧತೆಯನ್ನು ಇಟ್ಟುಕೊಂಡಿದ್ದಾರೆ. ಭೂಮಿ ತಾಯಿ ಇದ್ದಂತೆ. ಆದರೆ ಈಗ ಭೂಮಿಯನ್ನು ನೋಡುವ ಭಾವನೆ ಬದಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

*
ಪುಸ್ತಕಗಳು
ಗುರುಪಾದ ಬೇಲೂರು ಅವರ ‘ಅಗರ್ತ’, ‘ದೇವರ ಕಾಡು’
ಕಂನಾಡಿಗಾ ನಾರಾಯಣ ಅವರ ‘ಅಲ್ಲಾಭಕ್ಷಿ ಮತ್ತು ಅವನ ನಾಯಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT