ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯ ಲೋಕ’ದ ಆವರಣದಲ್ಲಿ...

ಪುಸ್ತಕಪ್ರೀತಿ
Last Updated 10 ಜುಲೈ 2015, 19:30 IST
ಅಕ್ಷರ ಗಾತ್ರ

‘ಇಂದು ಸಾಹಿತ್ಯ ಪುಸ್ತಕಗಳನ್ನು ಓದುವವರು ಯಾರೂ ಇಲ್ಲ. ಪುಸ್ತಕ ವ್ಯಾಪಾರದಲ್ಲಿ ಲಾಭವಿಲ್ಲ ಎಂಬೆಲ್ಲವೂ ಕೇವಲ ಊಹೆಗಳಷ್ಟೇ. ಪ್ರೀತಿ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಯಶಸ್ಸು ಗಳಿಸಲು ಸಾಧ್ಯ. ಕೊಂಚ ತಾಳ್ಮೆವಹಿಸಿ ದುಡಿಯುವ ವ್ಯವಧಾನ ಬೇಕಷ್ಟೇ’ ಎಂದು ವಿಶ್ವಾಸದಿಂದ ಮಾತಿಗಿಳಿದ ‘ಸಾಹಿತ್ಯ ಲೋಕ ಬುಕ್‌ ಹೌಸ್‌’ ಮಾಲೀಕ ಎ. ರಘುವೀರ್‌ ಈ ಮಾತಿಗೆ ತಮ್ಮನ್ನೇ ಉದಾಹರಣೆ ಕೊಟ್ಟುಕೊಳ್ಳುತ್ತಾರೆ.

‘ಸಾಹಿತ್ಯ ಲೋಕ ಬುಕ್‌ ಹೌಸ್‌’ ಹಲವು ಮಹಡಿಗಳ ದೊಡ್ಡ ಪುಸ್ತಕ ಮಳಿಗೆಯಲ್ಲ. ಬದಲಿಗೆ ಒಂದು ಚಿಕ್ಕ ಕೊಠಡಿಯ ಪುಟ್ಟ ಸಾಹಿತ್ಯ ಜಗತ್ತು.ಬೆಂಗಳೂರಿನವರೇ ಆದ ರಘುವೀರ್‌, ಬಿ.ಎ ವಿದ್ಯಾರ್ಥಿಯಾಗಿದ್ದಾಗಲೇ ನವಕರ್ನಾಟಕ ಪ್ರಕಾಶನದಲ್ಲಿ ಕೆಲಸ ಮಾಡುತ್ತಿದ್ದರು. ಪುಸ್ತಕ ವ್ಯಾಪಾರದ ಪ್ರಥಮ ಪಾಠಗಳನ್ನು ಕಲಿತಿದ್ದು ಅಲ್ಲಿಯೇ.‘ನಾನೇ ಯಾಕೆ ಸ್ವಂತ ಪುಸ್ತಕ ವ್ಯಾಪಾರ ಆರಂಭಿಸಬಾರದು’ ಎಂಬ ಯೋಚನೆಯಿಂದ 2007ರಲ್ಲಿ ರಾಜಾಜಿನಗರ ಮೂರನೇ ಬ್ಲಾಕ್‌ನಲ್ಲಿ ಒಂದು ಪುಟ್ಟ ಕೊಠಡಿಯಲ್ಲಿ ಪುಸ್ತಕ ಮಳಿಗೆ ಆರಂಭಿಸಿದರು.

‘ಓದುಗರು ನಗರದ ಎಲ್ಲ ಕಡೆಗಳಲ್ಲಿಯೂ ಇರುತ್ತಾರೆ. ಆದರೆ ಪುಸ್ತಕ ಮಳಿಗೆಗಳು ಎಲ್ಲ ಕಡೆಗಳಲ್ಲಿ ಇರುವುದಿಲ್ಲ. ಆದ್ದರಿಂದ ಎಲ್ಲಿ ಪುಸ್ತಕ ಮಳಿಗೆ ಇರುವುದಿಲ್ಲವೋ ಅಲ್ಲಿ ಆರಂಭಿಸಿದರೆ ಅಲ್ಲಿನ ಜನರಲ್ಲಿ ಓದಿನ ಅಭಿರುಚಿ ಬೆಳೆಸಬಹುದು. ರಾಜಾಜಿನಗರದ ಈ ಭಾಗದಲ್ಲಿ ಈ ಮೊದಲು ಸಾಹಿತ್ಯಕ್ಕೆ ಮೀಸಲಾದ ಪುಸ್ತಕ ಮಳಿಗೆ ಇರಲಿಲ್ಲ. ಆದ್ದರಿಂದ ಇಲ್ಲಿಯೇ ಮಳಿಗೆ ಆರಂಭಿಸಲು ನಿರ್ಧರಿಸಿದೆ’ ಎನ್ನುವ ರಘುವೀರ್‌ ಅವರ ಪ್ರಯತ್ನಕ್ಕೆ ಆರಂಭದ ದಿನಗಳಲ್ಲಿ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ದೊರಕಿರಲಿಲ್ಲ.

‘ಪುಸ್ತಕ ಮಳಿಗೆ ಆರಂಭಿಸಿದಾಗ ಇಲ್ಲಿನ ಜನರಿಗೆ ತಿಳಿದಿರಲಿಲ್ಲ. ಜನರ ಪ್ರತಿಕ್ರಿಯೆಯೂ ಅಷ್ಟಕಷ್ಟೇ ಇತ್ತು. ಈ ಪುಸ್ತಕ ಮಳಿಗೆಯ ಬಗ್ಗೆ ಸುತ್ತಮುತ್ತಲಿನ ಜನರಿಗೆ ತಿಳಿಸಲು ಕರಪತ್ರಗಳನ್ನು ಮುದ್ರಿಸಿ ದಿನಪತ್ರಿಕೆಗಳ ಮಧ್ಯ ಇಟ್ಟು ಪ್ರಚಾರ ಮಾಡಿದೆ. ಹಾಗೆಯೇ ಇಲ್ಲಿನ ಬೀದಿಗಳಲ್ಲಿ ಮನೆ ಮನೆಗೆ ಹೋಗಿ ಗೇಟಿಗೆ ಕರಪತ್ರ ಸಿಕ್ಕಿಸಿ ಬರುತ್ತಿದ್ದೆ. ಪ್ರಮುಖ ಸ್ಥಳಗಳಲ್ಲಿ ಭಿತ್ತಿ ಪತ್ರ ಅಂಟಿಸುತ್ತಿದ್ದೆ’ ಎಂದು ಸಾಹಿತ್ಯಲೋಕದ ಆರಂಭದ ದಿನಗಳಲ್ಲಿ ಪಟ್ಟ ಪಡಿಪಾಟಲನ್ನು ಅವರು ನೆನಪಿಸಿಕೊಳ್ಳುತ್ತಾರೆ.ರಘುವೀರ್‌ ಅವರ ಶ್ರಮ ಹುಸಿಹೋಗಲಿಲ್ಲ. ನಿಧಾನಕ್ಕೆ ಸಾಹಿತ್ಯಲೋಕಕ್ಕೆ ಭೇಟಿ ಕೊಡುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಕನ್ನಡವನ್ನೇ ನೆಚ್ಚಿ...
ಸಾಹಿತ್ಯಲೋಕ ಪುಸ್ತಕ ಮಳಿಗೆಯಲ್ಲಿ ಇಂಗ್ಲಿಷ್‌ ಪುಸ್ತಕಗಳೂ ಇವೆ. ‘ನಾನು ನೆಚ್ಚಿಕೊಂಡಿರುವುದು ಕನ್ನಡ ಪುಸ್ತಕಗಳನ್ನೇ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ರಘುವೀರ್‌.‘ಇಂಗ್ಲಿಷ್‌ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿಯೂ ಸಾಕಷ್ಟು ಗ್ರಾಹಕರು ಕೊಳ್ಳುತ್ತಾರೆ. ಆದರೆ ಕನ್ನಡ ಪುಸ್ತಕಕ್ಕೆ ಆ ಪ್ರಮಾಣದಲ್ಲಿ ಆನ್‌ಲೈನ್ ಹಾವಳಿ ಇಲ್ಲ. ಅಲ್ಲದೇ ಸಂಪೂರ್ಣ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಪುಸ್ತಕ ಮಳಿಗೆಯನ್ನು ಪ್ರಾರಂಭಿಸಬೇಕು ಎನ್ನುವ ಉದ್ದೇಶದಿಂದಲೇ ನಾನು ಈ ಪುಸ್ತಕ ಮಳಿಗೆಗೆ ‘ಸಾಹಿತ್ಯ ಲೋಕ’ ಎಂದು ಹೆಸರಿಟ್ಟಿದ್ದು.

ಆದರೆ ಇಲ್ಲಿ ಬರುವ ಗ್ರಾಹಕರು ಆಗೀಗ ಇಂಗ್ಲಿಷ್‌ ಪುಸ್ತಕಗಳನ್ನೂ ಕೇಳುವುದರಿಂದ ಅವರಿಗೆ ನಿರಾಸೆ ಮಾಡಬಾರದು ಎಂಬ ಉದ್ದೇಶದಿಂದ ಇಂಗ್ಲಿಷ್‌ ಪುಸ್ತಕಗಳನ್ನೂ ಇಟ್ಟಿದ್ದೇನೆ’ ಎನ್ನುವ ಇವರು, ‘ಆನ್‌ಲೈನ್‌ ಪುಸ್ತಕ ವ್ಯಾಪಾರದಿಂದ ಕನ್ನಡ ಪುಸ್ತಕ ವ್ಯಾಪಾರಕ್ಕೆ ಅಷ್ಟೇನೂ ಹೊಡೆತ ಬಿದ್ದಿಲ್ಲ’ ಎನ್ನುತ್ತಾರೆ.‘ಪುಸ್ತಕ ಮಳಿಗೆಯಲ್ಲಿ ಪುಸ್ತಕವನ್ನು ಮುಟ್ಟಿ, ಪುಟ ತಿರುವಿ ಇಷ್ಟವಾದರೆ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯ ಇರುತ್ತದೆ. ಇದು ಆನ್‌ಲೈನ್‌ನಲ್ಲಿ ಸಾಧ್ಯವಿಲ್ಲ’ ಎಂಬ ವಿವರಣೆ ಅವರದು.

ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ಕತೆ, ಕವನ, ಕಾದಂಬರಿ, ಆಧ್ಯಾತ್ಮಿಕ, ವೈಚಾರಿಕ ಪುಸ್ತಕಗಳು, ಯೋಗ, ವಿಜ್ಞಾನ, ಭಕ್ತಿ, ವ್ಯಕ್ತಿತ್ವ ವಿಕಸನ ಹೀಗೆ ಹಲವು ಪ್ರಕಾರದ ಪುಸ್ತಕಗಳನ್ನು ಸಾಹಿತ್ಯಲೋಕದಲ್ಲಿ ಕಾಣಬಹುದು. ಅಲ್ಲದೇ ತಮ್ಮಲ್ಲಿ ಇಲ್ಲದ ಪುಸ್ತಕಗಳನ್ನು ಗ್ರಾಹಕರು ಬಯಸಿದರೆ ಎಲ್ಲಿಂದಾದರೂ ತರಿಸಿಕೊಡುವ ಭರವಸೆಯೂ ಇಲ್ಲಿದೆ.

‘‘ಮೊನ್ನೆ ಮಹಿಳೆಯೊಬ್ಬರು ಸೇತುರಾಂ ಅವರ ‘ಗತಿ’ ನಾಟಕವನ್ನು ಕೇಳಿದರು. ನನ್ನ ಬಳಿ ಇರಲಿಲ್ಲ. ತರಿಸಿಕೊಡುತ್ತೇನೆ ಎಂದು ಹೇಳಿದೆ. ಆಮೇಲೆ ವಿಚಾರಿಸಿದರೆ ಬೆಂಗಳೂರಿನ ಯಾವ ಪುಸ್ತಕ ಮಳಿಗೆಯಲ್ಲಿಯೂ ಆ ಪುಸ್ತಕ ಲಭ್ಯವಿರಲಿಲ್ಲ. ಕೊನೆಗೆ ಅದನ್ನು ಮಂಗಳೂರಿನಿಂದ ತರಿಸಿಕೊಡಬೇಕಾಯಿತು. ಹೀಗೆ ಗ್ರಾಹಕರನ್ನು ವಿಶ್ವಾಸದಿಂದ ಇಟ್ಟುಕೊಂಡರೆ ಮಾತ್ರ ವ್ಯಾಪಾರದಲ್ಲಿ ಯಶಸ್ವಿಯಾಗಲು ಸಾಧ್ಯ’’ ಎಂದು ನಿದರ್ಶನ ಸಮೇತ ಹೇಳುವ ರಘುವೀರ್‌, ಇಲ್ಲಿಗೆ ಬರುವ ಜನರು ಕೇವಲ ಗ್ರಾಹಕರಲ್ಲ. ಪುಸ್ತಕ ಮಳಿಗೆಯ ಕುಟುಂಬದ ಸದಸ್ಯರು’ ಎಂದು ಭಾವಿಸುತ್ತಾರೆ.‘ಒಳ್ಳೆಯ ಪುಸ್ತಕ ಬಂದರೆ ಖಂಡಿತ ಜನ ಓದೇ ಓದುತ್ತಾರೆ. ಜನ ಬಯಸುವಂತಹ ಪುಸ್ತಕಗಳನ್ನು ನಾವು ತರಬೇಕು’ ಎಂಬುದು ಅವರ ದೃಢ ನಂಬಿಕೆ.

ಪ್ರಕಾಶನ ಆರಂಭಿಸುವ ಪ್ರಯತ್ನ
ಪುಸ್ತಕ ಮಳಿಗೆಯಲ್ಲಿ ಯಶಸ್ಸು ಗಳಿಸಿರುವ ರಘುವೀರ್‌ ಅವರು ಈಗ ಪ್ರಕಾಶನವನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಲೇ ಮೊದಲ ಪ್ರಯತ್ನವಾಗಿ ಯು.ಜಿ. ಕೃಷ್ಣಮೂರ್ತಿ ಅವರ ಆಯ್ದ ಬರಹಗಳ ‍ಪುಸ್ತಕ ಪ್ರಕಟಿಸುವ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ಕೃಷ್ಣ, ಹನುಮಂತ, ಗಣೇಶ ಹೀಗೆ ಪುರಾಣಗಳ ಮುಖ್ಯ ಪಾತ್ರಗಳ ಕುರಿತಾದ ಸರಣಿ ಪುಸ್ತಕಗಳನ್ನು ಪ್ರಕಾಶಿಸುವ ಯೋಜನೆಯೂ ಇವರಿಗಿದೆ.‘ಆಯ್ದು  ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸುತ್ತೇನೆ. ಲಾಭವಾಗುತ್ತೋ ನಷ್ಟವಾಗತ್ತೋ ಆಮೇಲಿನ ವಿಚಾರ’ ಎಂದು ತಮ್ಮ ಪ್ರಕಾಶನದ ಉದ್ದೇಶವನ್ನು ವಿವರಿಸುತ್ತಾರೆ.

ಖಾಯಂ ಗ್ರಾಹಕರ ಬಳಗ
ಇಲ್ಲಿ ಖಾಯಂ ಗ್ರಾಹಕರ ದೊಡ್ಡ ಬಳಗವೇ ಇದೆ. ಇಲ್ಲಿ ಹೊಸ ಪುಸ್ತಕಗಳು ಬಂದಾಗ ರಘುವೀರ್‌ ಅವರಿಗೆ ಫೋನ್‌ ಮಾಡಿ ಹೇಳುತ್ತಾರೆ. ಹಲವರಿಗೆ ಮನೆಗೇ ತೆಗೆದುಕೊಂಡು ಹೋಗಿ ಕೊಟ್ಟು ಬರುವುದೂ ಇದೆ.

***
ಸಾಹಿತ್ಯ‌ಲೋಕ ಬುಕ್ ಹೌಸ್
ವಿಳಾಸ: 
12ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌, ಹಳೆ ಪೊಲೀಸ್‌ ಸ್ಟೇಷನ್‌ ಬಸ್‌ ಸ್ಟಾಪ್‌ ಹತ್ತಿರ, ರಾಜಾಜಿನಗರ.
ದೂರವಾಣಿ ಸಂಖ್ಯೆ: 9945939436

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT