ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ಧತೆ’ ಇಲ್ಲದ ‘ತೆರೆಗಳು’

Last Updated 2 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಗರದ ಕೆಂಗಲ್ ಹನುಮಂತಯ್ಯ ಸಭಾಂಗಣದಲ್ಲಿ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನವು ‘ಲಂಕೇಶರ ಆಕ್ರಾಂತರು’ ನಾಟಕವನ್ನು ಪ್ರಸ್ತುತಪಡಿಸಿತು. ಇದು ಲಂಕೇಶ್ ಅವರ ‘ತೆರೆಗಳು’ ಮತ್ತು ‘ಸಿದ್ಧತೆ’ ಎಂಬ ಎರಡು ಏಕಾಂಕಗಳನ್ನು ಸೇರಿಸಿ ಮಾಡಿದ ನಾಟಕ. ಎಲ್ ಕೃಷ್ಣಪ್ಪ ಇದನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.

ಮೊದಲನೇ ಭಾಗದಲ್ಲಿ ‘ತೆರೆಗಳು’ ಎಂಬ ಏಕಾಂಕವನ್ನು ಪ್ರದರ್ಶಿಸಲಾಯಿತು. ‘ತೆರೆಗಳು’ ಅಸಂಗತ ಏಕಾಂಕ. ನಿವೃತ್ತ ಶಿಕ್ಷಕನೊಬ್ಬನ ಮನೆಗೆ ಬರುವ ಮೂರು ಜನ ಅಪರಿಚಿತರು ಮತ್ತು ಆ ನಿವೃತ್ತ ಶಿಕ್ಷಕನ ನಡುವೆ ನಡೆಯುವ ಸಂಭಾಷೆಣೆಯೇ ಈ ಏಕಾಂಕ. ಶಿಕ್ಷಕ ರಾಜಕಾರಣಿಯಾಗುತ್ತಾನೆ, ವ್ಯಾಪಾರಿಯಾಗುತ್ತಾನೆ. ಕೊನೆಯಲ್ಲಿ ಜನಸಾಮಾನ್ಯನೂ ಆಗುತ್ತಾನೆ. ಅಂತೆಯೇ ಮನೆಗೆ ಬಂದ ಅಪರಿಚಿತರೂ ಆ ಶಿಕ್ಷಕನ ಹಳೆಯ ವಿದ್ಯಾರ್ಥಿಗಳಾಗುತ್ತಾರೆ, ಪೊಲೀಸರಾಗುತ್ತಾರೆ, ತೆರಿಗೆ ಅಧಿಕಾರಿಗಳು ನಂತರದಲ್ಲಿ ನ್ಯಾಯಾಧೀಶರೂ ಆಗಿಬಿಡುತ್ತಾರೆ.

ಯಾವುದನ್ನೂ ನಿರ್ದಿಷ್ಟವಾಗಿ, ನಿಖರವಾಗಿ ಹೇಳದ, ಸ್ಪಷ್ಟವಾಗಿ ತೋರಿಸದ ಅಮೂರ್ತ ಗುಣದ ಏಕಾಂಕ ‘ತೆರೆಗಳು’. ಮನುಷ್ಯನ ಬದುಕಿನ ವಿವಿಧ ಹಂತಗಳು,  ಲಾಭಕೋರತನ, ಪೊಳ್ಳುತನ, ಒಬ್ಬನೇ ಮನುಷ್ಯನಲ್ಲಿನ ಹಲವು ಮುಖಗಳು, ಸಮಾಜದ ಹಲವು ಮುಖಗಳು ಒಬ್ಬನೇ ಮನುಷ್ಯನಲ್ಲಿ ಸೇರಿಕೊಳ್ಳುವ ಕೌತುಕ ಹೀಗೆ ಹಲವು ಸಂಗತಿಗಳ ಅಂಚಂಚಿಗೆ ಕೊಂಚ ತಾಕಿ ಮುಂದೆ ಸಾಗುತ್ತದೆ.
ತುಂಡು ತುಂಡು ಎನ್ನಿಸುವ ಸಂಭಾಷಣೆ ಇರುವ ಇಂತಹ ಅಸಂಗತ ನಾಟಕಗಳು ರಂಗದ ಮೇಲೆ ಜೀವಂತಗೊಳ್ಳುವುದು, ನೋಡುಗರ ಮನದಲ್ಲಿ ರಿಂಗಣಿಸುವುದು ಪ್ರಭಾವಶಾಲಿ ಅಭಿನಯ ಮತ್ತು ಪರಿಣಾಮಕಾರಿ ಪ್ರಸ್ತುತಿಯ ಮೂಲಕ.

ಆದರೆ ‘ತೆರೆಗಳು’ ಈ ಎರಡೂ ವಿಭಾಗಗಳಲ್ಲಿಯೂ ದುರ್ಬಲವಾಗಿದೆ. ಅಭಿನಯ ತೀರಾ ಕೆಟ್ಟದಾಗಿ ಇರದಿದ್ದರೂ ಪಾತ್ರಧಾರಿಗಳು ತಮ್ಮಷ್ಟಕ್ಕೆ ತಾವೇ ಸಂಭಾಷಣೆ ಒಪ್ಪಿಸಿಕೊಳ್ಳುವುದರಿಂದ (ಕೆಲವು ಸಲ ಹೀಗೆ ಸಂಭಾಷಣೆ ಒಪ್ಪಿಸುವುದರಲ್ಲಿ ತೊದಲುತ್ತಾರೆ) ಪ್ರೇಕ್ಷಕನ ಜತೆ ಸಂಬಂಧ ಸಾಧಿಸುವಲ್ಲಿ ವಿಫಲರಾಗುತ್ತಾರೆ.

ಕಿಟ್ಟಿ ಪಾತ್ರಧಾರಿಯ (ಅಭಿಜಿತ್) ಅಭಿನಯ ಇದ್ದುದರಲ್ಲಿಯೇ ಗಮನ ಸೆಳೆಯುತ್ತದೆ. ನಿವೃತ್ತ ಮೇಷ್ಟ್ರು (ಕೌಸ್ತುಭ್) ಅವರ ಹಳೆಯ ವಿದ್ಯಾರ್ಥಿಗಳಿಗಿಂತಲೂ ಚಿಕ್ಕ ವಯಸ್ಸಿನವರಂತೆ ಕಾಣಿಸುವುದೂ ಒಂದು ಅಸಂಗತವೇ! (ಪ್ರಸಾಧನ: ನಾಗರಾಜ ಪತ್ತಾರ). ಪೂರ್ವಸಿದ್ಧತೆಯ ಕೊರತೆಯೂ ಕೆಲವು ಕಡೆ ಎದ್ದು ಕಾಣುತ್ತಿತ್ತು.
***
ದ್ವಿತಿಯಾರ್ಧದಲ್ಲಿ ಪ್ರದರ್ಶಿಸಿದ್ದು ‘ಸಿದ್ಧತೆ’. ವಯಸ್ಸಾದ ತಂದೆ ರಂಗಣ್ಣ ಎಲ್ಲಿಗೋ ಹೊರಟು ನಿಂತಿದ್ದಾನೆ. ಎಲ್ಲಿಗೆ ಎಂದು ಅವನಿಗೂ ತಿಳಿದಿಲ್ಲ. ಆ ಸಮಯದಲ್ಲಿ ಹೆಂಡತಿ ಲಲಿತಾಳೊಡನೆ ನಡೆಯುವ ಸಂಭಾಷಣೆಯಲ್ಲಿ ಅವನ ಭೂತದ ಬದುಕಿನ ಅಸಹನೆಗಳು ಬಿಚ್ಚಿಕೊಳ್ಳುತ್ತವೆ. ಅವನ ಮಗ ರಾಮು ಅಪ್ಪನ ಮುದಿ ವಯಸ್ಸಿನಲ್ಲಿ ಉತ್ತರವಿಲ್ಲದ ಪ್ರಶ್ನೆಯಾಗಿ ಎದುರು ನಿಲ್ಲುತ್ತಾನೆ. ಕುಟುಂಬ ಎಂಬ ವ್ಯವಸ್ಥೆಯು ಹಲವು ಬದುಕುಗಳನ್ನು ಬಳಸಿ ಬೆಳೆಸಿ ಚಿಗುರಿಸುವ ಜೀವನ್ಮುಖಿ. ಆದರೆ ಅದೇ ಕುಟುಂಬ ಇನ್ನೊಂದು ಮಜಲಿನಿಂದ ನೋಡಿದರೆ ಹಲವು ಕನಸುಗಳನ್ನು ಸಮಾಧಿಯ ಮೇಲೆ ನಿಂತ ನಿರರ್ಥಕ ಸ್ಮಾರಕವೂ ಆಗಿರಬಹುದು ಎಂಬ ಜಿಜ್ಞಾಸೆಯನ್ನು ‘ಸಿದ್ಧತೆ’ ಹುಟ್ಟಿಸುತ್ತದೆ. ರಂಗಣ್ಣನಿಗೆ ನೃತ್ಯದ ಹುಚ್ಚು. ಆದರೆ ಸಂಸಾರದ ಜಂಜಡದಲ್ಲಿ ತನ್ನ ಕನಸನ್ನು ಕೊಂದು ಬದುಕುತ್ತಿದ್ದರೂ ಈ ಸಂಸಾರದ ದೆಸೆಯಿಂದ ತನ್ನ ಕನಸು ಸಾಕಾರಗೊಳ್ಳಲು ಆಗಲಿಲ್ಲ ಎಂಬ ಅಪಾರ ಆಕ್ರೋಶ ಅವನನ್ನು ಕಾಡುತ್ತದೆ. ಅದಕ್ಕಾಗಿ ಪದೇ ಪದೇ ಹೆಂಡತಿಯನ್ನು ಮಗನನ್ನು ದೂಷಿಸುತ್ತಾನೆ. ಅಂತೆಯೇ ಲಲಿತಾಳೂ ಹಾಡುವುದು, ಕಸೂತಿ ಹಾಕುವುದು ಸೇರಿದಂತೆ ಅನೇಕ ಹವ್ಯಾಸಗಳನ್ನು, ಕನಸುಗಳನ್ನು ಕುಟುಂಬದ ನಿರ್ವಹಣೆಯಲ್ಲಿ ಕಳೆದುಕೊಂಡಿದ್ದಾಳೆ. ಮಗನಿಗೂ ಅಪ್ಪ ಏನೂ ಮಾಡಿಲ್ಲ ಎಂಬ ಆಕ್ರೋಶವಿದೆ.

ಹೀಗೆ ಬದುಕನ್ನು, ‘ಪೀಳಿಗೆಗಳ ನಡುವಿನ ಅಂತರ’ವನ್ನು, ಪ್ರತಿ ಪೀಳಿಗೆಯಲ್ಲೂ ಪುನರಾವರ್ತನೆಯಾಗುವ ಅವವೇ ಬದುಕಿನ ದುರಂತ ಕಥನಗಳನ್ನು ಇನ್ನೊಂದು ಬದಿಯಿಂದ ನೋಡುವ ಏಕಾಂಕ ‘ಸಿದ್ಧತೆ’. ರಂಗಣ್ಣನ ಪಾತ್ರ ಹೇಳುವ ‘ಮುದುಕರು ಮಾತಾಡ್ತಾರೆ ಕೇಳಿಸಲ್ಲ; ಚಿಕ್ಕವರು ಮಾತಾಡಲ್ಲ ಕೇಳಿಸತ್ತೆ’ ಎಂಬ ಮಾತು ಎರಡು ಪೀಳಿಗೆಗಳ ನಡುವಿನ ಅಕಾರಣ ಕಂದರದ ಪ್ರತಿಧ್ವನಿಯಂತೇ ತೋರುತ್ತದೆ. ‘ಪ್ರೇಮದ ಹೆಸರಲ್ಲಿ ಕನಸು ಸಾಯತ್ತೆ’ ‘ಇವತ್ತು ನಿದ್ರಿಸಿ ನಾಳೆ ಎದ್ದ ಹಾಗೆ ಮನುಷ್ಯ ಹುಟ್ತಾನೆ ಸಾಯ್ತಾನೆ’ ಎಂಬಂತಹ ಕಟುಸತ್ಯದಿಂದ ಹೊಳೆಯುವ ಮಾತುಗಳು ಗಮನ ಸೆಳೆಯುತ್ತವೆ.

ರಂಗಣ್ಣನ ಪಾತ್ರದಲ್ಲಿ ಸತೀಶ್ ಕುಮಾರ್ ಗಮನ ಸೆಳೆಯುತ್ತಾರೆ. ಲಲಿತಾ ಪಾತ್ರಧಾರಿ ಕ್ಷಮಾ ಅವರದೂ ಉತ್ತಮ ಅಭಿನಯ. ರಾಮು ಪಾತ್ರಧಾರಿ (ಮಂಜುನಾಥ) ಮೀಸೆ ಚಿಗುರಿದ ಹುಡುಗನ ಸಿಡುಕಿನಲ್ಲಿ ಇಷ್ಟವಾಗುತ್ತಾರೆ. ಪ್ರಸಾಧನವೂ ಪಾತ್ರಗಳಿಗೆ ಒಪ್ಪುವಂತಿತ್ತು.
ಎರಡೂ ಏಕಾಂಕಕ್ಕೂ ಒಂದೆರಡು ದೃಶ್ಯಗಳಲ್ಲಿ ಬಿಟ್ಟರೆ ಬೆಳಕು (ಮಂಜು) ಬದಲಾವಣೆ ಇಲ್ಲ. ಸಂಗೀತಕ್ಕೂ ಹೆಚ್ಚಿನ ಸ್ಥಾನವಿಲ್ಲ. ರಂಗಸಜ್ಜಿಗೆ ಸರಳವಾಗಿದೆ. ಎರಡೂ ಏಕಾಂಕಗಳ ಹಿನ್ನೆಲೆಯಲ್ಲಿ ಬಳಸಿಕೊಂಡ ಕಲಾಕೃತಿ ಉತ್ತಮವಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT