ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿರಿವಂತ’ ಆಗುವುದು ಹೇಗೆ?

Last Updated 23 ಏಪ್ರಿಲ್ 2014, 4:16 IST
ಅಕ್ಷರ ಗಾತ್ರ

ಇದೊಂದು ತರಹ ವೈರುಧ್ಯಗಳಿಂದ ಕೂಡಿರುವ ಮಾತು. ಸಿರಿವಂತನಾಗಲು ಹಣವೇ ಮುಖ್ಯ ಅಲ್ಲ ಎನ್ನುವುದಾದರೆ ಸಿರಿವಂತನಾಗುವುದಾದರೂ ಹೇಗೆ? ಸಿರಿವಂತಿಕೆಯ ಅನುಭವ ಬರುವುದೇ ಹಣದಿಂದ...

ಆದರೆ ಬದುಕನ್ನು ಶ್ರೀಮಂತಗೊಳಿಸುವುದರಲ್ಲಿ ಇನ್ನಿತರ ಅಂಶಗಳೂ ಬಹಳ ಪ್ರಮುಖ ಎನ್ನುವುದನ್ನು ಮರೆಯಬಾರದು.
ಶ್ರೀಮಂತ ವ್ಯಕ್ತಿತ್ವಕ್ಕೆ ಅವನ ನಿಲುವು, ಭಾಷೆ, ಅನುಭವ, ಚಿಂತನೆ, ವೈಚಾರಿಕ ನಿಲುವು, ಕೌಶಲ ಮತ್ತು ಮಾನಸಿಕವಾಗಿ ಪ್ರಬುದ್ಧರಾಗುವುದು ಇವೆಲ್ಲವೂ ಶ್ರೀಮಂತ ವ್ಯಕ್ತಿತ್ವವನ್ನು ಕಟ್ಟಿಕೊಡುವ ಇನ್ನಿತರ ಅಂಶಗಳಾಗಿವೆ.

ಅಷ್ಟೇ ಅಲ್ಲ, ವ್ಯಕ್ತಿಯನ್ನು ಸಂತಸವಾಗಿಡುವ ಅಂಶ ಗಳೂ ಇವೇ ಆಗಿವೆ.  ಹಣ ಮಾತ್ರದಿಂದ ಹಣವಂತರಾಗಬಹುದೇ ಹೊರತು ಸಿರಿವಂತರಲ್ಲ. ಶ್ರೀಮಂತಿಕೆಯ ಅಂಶಗಳೇ ಬೇರೆ.

ಅಂಥ ಕೆಲವು ಅಂಶಗಳಲ್ಲಿ ವ್ಯಕ್ತಿಯ ನಿಲುವು ಮೊದಲನೆಯದ್ದು ಎಂದು ಹೇಳಬಹುದಾಗಿದೆ. ಅಥವಾ ವ್ಯಕ್ತಿಯ ನಿಲುವೇ ಏಕೈಕ ಅಂಶವೆಂದೂ ಹೇಳಬಹುದು. ಈ ನಿಲುವಿನಿಂದಾಗಿಯೇ ವ್ಯಕ್ತಿ ಪ್ರಸಿದ್ಧಿಗೆ ಬರಬಹುದು. ವ್ಯಕ್ತಿಗೆ ಬದುಕುವುದು ಕಲಿಸಬಹುದು. ಪ್ರತಿಯೊಬ್ಬರ ಬದುಕಿನಲ್ಲಿಯೂ ಏರಿಳಿತಗಳು ಇದ್ದೇ ಇರುತ್ತವೆ. ಒಂದಲ್ಲ ಒಂದು ಸಂದರ್ಭದಲ್ಲಿ ತೀರ ಸೋತ ಅನುಭವ ಎಲ್ಲರಿಗೂ ಆಗಿರುತ್ತದೆ. ಆದರೆ ಅಂಥ ಸಂದರ್ಭಗಳೊಡನೆ ಹೋರಾಡುತ್ತಲೇ ಮತ್ತೆ ಮೇಲೇರುವುದು ಮಹತ್ವದ ಹೆಜ್ಜೆಯಾಗಿದೆ, ಅದೂ ಸಕಾರಾತ್ಮಕ ನಿಲುವಿನೊಂದಿಗೆ.

ನಿಮ್ಮ ನಿಲುವು ಸಕಾರಾತ್ಮಕವಾಗಿದ್ದರೆ ಹಣವಂತನಲ್ಲದ ಬಡವನೂ ಹಣ ಮಾಡಬಹುದು. ಆರ್ಥಿಕವಾಗಿ ಸದೃಢನಾಗ ಬಹುದು. ಇದಕ್ಕೆ ವಿಶ್ವದಾದ್ಯಂತ ಅನೇಕ ದೃಷ್ಟಾಂತಗಳು, ಉದಾ ಹರಣೆಗಳು ಲಭ್ಯ ಇವೆ.

 

(ಲೇಖಕಿ ಸ್ಮಿತಾ ಹರಿ  ಹಣಕಾಸು ಕ್ಷೇತ್ರದಲ್ಲಿ ಎಂಬಿಎ ಮಾಡಿದ್ದಾರೆ. ‘ಗೆಟ್ಟಿಂಗ್‌ ಯು ರಿಚ್‌’ ಸಂಸ್ಥೆಯಲ್ಲಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ)

ಹೇಗೆ ಸ್ವೀಕರಿಸುವಿರಿ?
‘ಜೀವನ ಎಂದರೆ ಶೇ 10ರಷ್ಟು ಅದನ್ನು ನೀವು ಹೇಗೆ ರೂಪಿಸಿಕೊಳ್ಳುತ್ತೀರಿ ಎಂದೂ, ಉಳಿದ ಶೇ 90ರಷ್ಟು ನೀವು ಹೇಗೆ ಸ್ವೀಕರಿಸುವಿರಿ ಎಂಬುದೇ ಆಗಿದೆ’ ಎಂದು ಐರ್ವಿಂಗ್‌ ಬರ್ಲಿನ್‌ ಒಂದೆಡೆ ಹೇಳಿದ್ದಾರೆ. ಇದು ಸತ್ಯವೂ ಹೌದು.

ಸಕಾರಾತ್ಮಕ ನಿಲುವು
ಇನ್ನು ಎರಡನೇ ಅಂಶ ವ್ಯಕ್ತಿಯ ಸ್ವಭಾವ ಮತ್ತು ವರ್ತನೆ. ಸಕಾರಾತ್ಮಕ ನಿಲುವು ಹೊಂದುವುದಂತೂ ಅತ್ಯಗತ್ಯ. ಜೊತೆಗೆ ಒಂದು ಸನ್ನಿವೇಶಕ್ಕೆ ಅದೆಷ್ಟರ ಮಟ್ಟಿಗೆ ಸಕಾರಾತ್ಮಕವಾಗಿ ಸ್ಪಂದಿಸು ವಿರಿ ಎನ್ನುವುದು ಅದಕ್ಕಿಂತಲೂ ಮಹತ್ವದ ವಿಷಯವಾಗಿದೆ.

ವಿಭಿನ್ನ ರೀತಿ ನಿರ್ವಹಣೆ
ಪ್ರತಿಯೊಬ್ಬರೂ ಪ್ರತಿಯೊಂದು ಸನ್ನಿವೇಶವನ್ನೂ ವಿಭಿನ್ನ ರೀತಿ ಯಲ್ಲಿ ನಿಭಾಯಿಸುತ್ತಾರೆ. ಉದಾಹರಣೆಗೆ ಒಬ್ಬ ವ್ಯಾಪಾರಿಯು ತನ್ನ ವ್ಯವಹಾರವನ್ನು ನೀತಿ ಮಾರ್ಗದಲ್ಲಿ ಮುಂದುವರಿಸಬೇಕೆ ನ್ನುತ್ತಾನೆ. ಅಥವಾ ವಾಮಮಾರ್ಗವಾದರೂ ಸರಿ, ವ್ಯವಹಾರ ಕುದುರಬೇಕು ಎಂದು ಬಯಸುತ್ತಾನೆ.

ಈ ವಾಮಮಾರ್ಗದ ವ್ಯಾಪಾರ ಅತಿ ಶೀಘ್ರವಾಗಿ ಹಣ, ಹೆಸರು ಎರಡನ್ನೂ ವರ್ತಕನಿಗೆ ತಂದು ಕೊಡಬಹುದು. ಆದರೆ ಅದೂ ತಾತ್ಕಾಲಿಕವಾಗಿ ಎನ್ನುವುದು ನೆನಪಿರಬೇಕು.

ಪ್ರಾಮಾಣಿಕ ವ್ಯವಹಾರ
ಸಕಾರಾತ್ಮಕ ನಿಲುವುಳ್ಳ ಜನರು, ಅದೇ ಗುಣವನ್ನು ಅದೇ ನಿಲುವನ್ನು ಇನ್ನಷ್ಟು ಜನರಿಗೆ ಹರಡುವ ಹಂಚುವ ಕೆಲಸ ಮಾಡುತ್ತಾರೆ. ಪ್ರಾಮಾಣಿಕತನದ ವ್ಯವಹಾರವು ಇಂಥ ಸಕಾರಾತ್ಮಕ ಧೋರಣೆಯನ್ನೇ ಬಿಂಬಿಸುತ್ತದೆ.

‘ದ ಸೆವೆನ್‌ ಹ್ಯಾಬಿಟ್ಸ್‌ ಆಫ್‌ ಹೈಲಿ ಎಫೆಕ್ಟಿವ್‌ ಪೀಪಲ್‌’ ಪುಸ್ತಕದ ಲೇಖಕ ಸ್ಟೀವನ್‌ ಕೋವೆ ಪ್ರಕಾರ, ‘ನಮಗೇನಾಗಿದೆ ಎಂಬುದು ನೋವುಂಟು ಮಾಡುವುದಿಲ್ಲ. ಆದರೆ ನಮಗೇನಾಗಿದೆ ಎಂಬುದಕ್ಕೆ ನಾವು ಹೇಗೆ ಸ್ಪಂದಿಸುತ್ತೇವೆ ಎನ್ನುವುದೇ ನಮಗೆ ನೋವು ತರುತ್ತದೆ’. ಯಾತನೆಯ ಮೂಲ ನಾವದನ್ನು ಸ್ವೀಕರಿಸುವ ರೀತಿಯೇ ಆಗಿದೆ.

ಜೀವನಾನುಭವ
ಸಿರಿವಂತಿಕೆಯನ್ನು ಅನುಭವಿಸುವ ಮುಂದಿನ ಹೆಜ್ಜೆ ಎಂದರೆ, ಜೀವನಾನುಭವ. ಒಬ್ಬ ಕೋಟ್ಯಧಿಪತಿ ಕೇವಲ ಹಣ ಗಳಿಕೆಯನ್ನೇ ತನ್ನ ಉದ್ದೇಶವೆಂದುಕೊಂಡಿದ್ದರೆ ಅವನಲ್ಲಿ ಹಣವಿರುತ್ತದೆಯೇ ಹೊರತು ಶ್ರೀಮಂತಿಕೆ ಅಲ್ಲ. ಜೀವನದ ಪ್ರತಿಯೊಂದು ತಿರುವಿನ ಲ್ಲಿಯೂ ಹೊಸತನದ ಅನುಭವ ಕಾಣುವುದೇ ಜೀವನಾನುಭವ ತಂದು ಕೊಡುತ್ತದೆ. ಇದು ಜೀವನವನ್ನು ಇನ್ನಷ್ಟು ಸಿರಿವಂತ ಗೊಳಿಸುತ್ತದೆ. ಒಂದು ರಜಾ ದಿನವನ್ನು ಅನುಭವಿಸುವುದು, ಹೊಸ ತಾಣಗಳಿಗೆ ಭೇಟಿ ನೀಡುವುದು, ಪುಸ್ತಕ ಓದುವುದು, ಹಣವನ್ನು ದಾನ ಮಾಡು ವುದು, ಸ್ನೇಹಿತರನ್ನು ಗಳಿಸುವುದು ಇವೆಲ್ಲವೂ ಜೀವನಾನುಭವವನ್ನು ಹೆಚ್ಚಿಸುತ್ತವೆ. ಜೀವನಕ್ಕೆ ಸಿರಿವಂತಿಕೆಯನ್ನು ತಂದು ಕೊಡುತ್ತವೆ.

ಶ್ರೀಮಂತಿಕೆ ಹೆಚ್ಚಿಸಿ
ಜೀವನದಲ್ಲಿ ಶ್ರೀಮಂತಿಕೆಯನ್ನು ಹೆಚ್ಚಿಸುವ ಇನ್ನೊಂದು ಅಂಶವೆಂದರೆ ನಮ್ಮ ಕೌಶಲಗಳನ್ನು ಆಗಾಗ ಒರೆಗೆ ಹಚ್ಚುವುದು, ಲಭ್ಯ ಇರುವ ಅವಕಾಶಗಳತ್ತ ಗಮನ ಹರಿಸುವುದು. ಇವೆರಡಕ್ಕೂ ಒಂದಿನಿತು ಮಹತ್ವ ನೀಡಿದರೆ ಬದುಕು ಮೇಲ್ಮುಖವಾಗುತ್ತದೆ.

ಕಲಿಕೆ ನಿರಂತರವಾಗಿರಬೇಕು. ಬೆಳವಣಿಗೆ ಮತ್ತು ಜ್ಞಾನಾರ್ಜನೆ ಸಿರಿವಂತರಾಗುವ ಮುಖ್ಯ ಮೆಟ್ಟಿಲುಗಳಾಗಿವೆ. ಹೀಗೆ ಮಾಡಲು ಇರುವ ಮಾರ್ಗವೆಂದರೆ ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜ್ಞಾನವನ್ನು ಪಡೆಯಬೇಕು. ಮಾಹಿತಿ ಸಂಗ್ರಹಿಸುತ್ತಿರಬೇಕು.

ಕೇವಲ ಕೌಶಲಗಳಿದ್ದರೆ ಸಾಲದು. ಪಡೆದ ಮಾಹಿತಿ ಮತ್ತು ಗಳಿಸಿದ ಜ್ಞಾನವನ್ನು ಅನ್ವಯಗೊಳಿಸುವತ್ತ ಶ್ರಮಿಸಬೇಕು. ಈ ಪ್ರಯೋಗಗಳು ಮಾನವನ ಸೃಜನಶೀಲ ಗುಣವನ್ನು ಬೆಳೆಸುತ್ತವೆ. ಯಶಸ್ಸಿನತ್ತ ಮತ್ತೊಂದು ಹಂತ ದಾಟುವಂತೆ ಪ್ರೇರೇಪಿಸುತ್ತವೆ.

ಮತ್ತಷ್ಟು ಅವಕಾಶ ಸೃಷ್ಟಿ
ವಿಶ್ವದಾದ್ಯಂತ,   ಇಂಥ ನಿಲುವುಗಳಿಂದಲೇ ಸಿರಿವಂತಿಕೆ ಗಳಿಸಿದ ಹತ್ತು ಹಲವು ಅನುಭವಗಳು ದೊರೆಯುತ್ತವೆ. ಅವಕಾಶಗಳ ಹುಡುಕಾಟದಿಂದ ಆರಂಭವಾಗಿ,  ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಲೇ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸಿಕೊಂಡವರಿದ್ದಾರೆ. ಹಾಗೆ ಮಾಡುತ್ತಲೇ ಹೆಸರು ಗಳಿಸಿದವ ರಿದ್ದಾರೆ. ಜೊತೆಗೆ ಹಣವನ್ನೂ....
ಉದಾಹರಣೆಗೆ ರಜನಿಕಾಂತ್‌, ಓಪ್ರಾ ವಿನ್‌ಫ್ರೆ, ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ...

ಹಣವನ್ನೂ ಮೀರಿದ ಅಂಶ
ಇವರೆಲ್ಲರೂ ಹಣದಿಂದ ಸಿರಿವಂತರಾದವರಲ್ಲ. ಆದರೆ ಹಣವನ್ನೂ ಮೀರಿದ ಒಂದಷ್ಟು ಅಂಶಗಳನ್ನು ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅದು ಅವರ ಬದುಕಿಗೆ ಮೆರುಗು ನೀಡಿತು. ಸಾಧಕರ ಸಾಲಿನಲ್ಲಿ, ಸಿರಿವಂತರ ಸಾಲಿನಲ್ಲಿ ನಿಲ್ಲಿಸಿತು.

ರಜನಿಕಾಂತ್‌ ಅವರ ಪರಿಶ್ರಮ ಮತ್ತು ಛಲ, ಓಪ್ರಾ ವಿನ್‌ಫ್ರೇ ಅವರ ದೃಢ ನಿರ್ಧಾರ, ಅಚಲ ವಿಶ್ವಾಸ, ಸ್ಪಷ್ಟ ಗುರಿ, ಅಬ್ದುಲ್‌ ಕಲಾಂ ಅವರ ಪರಿಶ್ರಮ, ಜ್ಞಾನ ಇವೆಲ್ಲವೂ ಅವರನ್ನು ಖಂಡಿತ ವಾಗಿಯೂ ಶ್ರೀಮಂತ ವ್ಯಕ್ತಿತ್ವದವರ ಸಾಲಿನಲ್ಲಿ ನಿಲ್ಲಿಸಿದೆ.

ಜಾಗತಿಕವಾಗಿ ಸಾಮಾಜಿಕ ಸ್ತರಗಳನ್ನು ಬದಲಿಸುವಲ್ಲಿ, ವಿಶೇಷ ವಾಗಿ ಭಾರತದಲ್ಲಿ ಹಣವೊಂದೇ ಬೆಂಬಲಿಸುವ ಅಂಶವಾಗಿದೆ ಎಂಬ ವಾದವನ್ನು ಒಪ್ಪಲಾಗದು.

ಆತ್ಮಹತ್ಯೆ ಪ್ರಕರಣ ಹೆಚ್ಚಳ
ಒಂದು ಆಸಕ್ತಿಕರ, ಅಷ್ಟೇ ಆಘಾತಕಾರಿ ಅಂಶವೆಂದರೆ, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳ.
‘ವಿಕಿಪಿಡಿಯಾ’ ಪ್ರಕಾರ ವಿಶ್ವದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇ 20ರಷ್ಟು ಭಾರತದಲ್ಲೇ ನಡೆದಿವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಪ್ರಕಾರ 2012ರಲ್ಲಿ 1,35,445 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇದೇ ವರ್ಷ ವರದಿಯಾಗಿರುವ ಕೊಲೆ ಪ್ರಕರಣಗಳ ಸಂಖ್ಯೆ 34,434. ಒಂದು ವೇಳೆ, ಈ ಆತ್ಮಹತ್ಯೆಯ ಪ್ರಕರಣಗಳ ಹಿಂದಿರುವ ಕಾರಣವನ್ನು ಪರಿಶೀಲಿಸಿದಾಗ 6,379 ಪ್ರಕರಣಗಳು ಮಾತ್ರ  ಸಾಲ, ಬಡತನ ಹಾಗೂ ನಿರುದ್ಯೋಗ ಕಾರಣಗಳಿಂದ  ಜರುಗಿವೆ. ಬಹುತೇಕ ಪ್ರಕರಣಗಳಲ್ಲಿ ಅಂದರೆ 30,792 ಸಾವುಗಳಿಗೆ ಕೌಟುಂಬಿಕ ಕಾರಣಗಳ ಹಿನ್ನೆಲೆ ಇದೆ.

ಹಾಗಿದ್ದಲ್ಲಿ, ಇನ್ನುಳಿದ ಪ್ರಕರಣಗಳಿಗೆ ಪ್ರಮುಖ ಕಾರಣವೇನು?  ಈ ಅಂಕಿ ಅಂಶಗಳು ಒಂದಂತೂ ಸ್ಪಷ್ಟ ಪಡಿಸುತ್ತವೆ. ‘ಸಿರಿವಂತಿಕೆ’ ಎಂದರೆ ಕೇವಲ ಹಣವನ್ನು ಗಳಿಸುವುದು ಮತ್ತು ಹಣವಂತರಾಗಿ ರುವುದು ಮಾತ್ರವಲ್ಲ.

ಶ್ರೀಮಂತ ಜೀವನಕ್ಕೆ ಆಧಾರ
ಒಂದು ನೆಮ್ಮದಿಯ ಜೀವನ, ಸಕಾರಾತ್ಮಕ ನಿಲುವಿನೊಂದಿಗೆ, ಅಚಲ ವಿಶ್ವಾಸ, ದೃಢ ನಿರ್ಧಾರಗಳಿದ್ದರೆ ಇವೆಲ್ಲವೂ ಶ್ರೀಮಂತ ಜೀವನಕ್ಕೆ ಆಧಾರವಾಗುತ್ತವೆ. ಇಲ್ಲದಿದ್ದರೆ, ಇತ್ತೀಚಿನ ಅತಿ ಸಿರಿವಂತರೂ, ಆರ್ಥಿಕವಾಗಿ ಸದೃಢರಾದವರೂ ಆತ್ಮಹತ್ಯೆಗೆ ಶರಣಾಗುತ್ತಿದ್ದರೇ?
ಈ ನಿಟ್ಟಿನಲ್ಲಿ ಯೋಚಿಸಿದರೂ ಹಣವೊಂದೇ ಶ್ರೀಮಂತಿ ಕೆಯ ಲಕ್ಷಣವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಹಣವೊಂದರಿಂದಲೇ ಶ್ರೀಮಂತರಾಗುವುದು ಜೀವನವಲ್ಲ. ಆದರೆ ದೃಷ್ಟಿಕೋನದಲ್ಲಿಯೂ ಸಿರಿವಂತಿಕೆ ಬರಬೇಕು. ಪ್ರತಿ ಯೊಂದು ಧರ್ಮವೂ ಅದನ್ನೇ ಉಪದೇಶಿಸುತ್ತದೆ. ಪ್ರತಿ ಯೊಬ್ಬರೂ ತಾವು ನಂಬಿರುವ, ಅಥವಾ ತಮಗೆ ನಂಬಿಕೆ ಇರುವ ಧರ್ಮವನ್ನು ಅನುಸರಿಸುವುದು, ಅತೀಮುಖ್ಯ.
ಪ್ರತಿಯೊಂದು ಧರ್ಮದಲ್ಲಿಯೂ ಬದುಕುವ ಕಲೆಯನ್ನೇ ಹೇಳಿಕೊಡುವ ತತ್ವಗಳಿವೆ. ಕೇವಲ ಧರ್ಮವನ್ನು ಅಥವಾ ಧಾರ್ಮಿಕ ಆಚರಣೆಗಳನ್ನು ಅನಸುರಿಸುವುದರಲ್ಲಿ ಅರ್ಥವಿಲ್ಲ. ಅವು ವ್ಯಕ್ತಿಯ ಬದುಕನ್ನು ಮೇಲೆತ್ತುವುದಿಲ್ಲ. ಆದರೆ ಅಧ್ಯಾತ್ಮವು ಈ ಕೆಲಸವನ್ನು ಮಾಡುತ್ತದೆ.

ನಮ್ಮನ್ನು ನಾವು ಅರಿಯುವುದು, ನಮ್ಮ ಅರಿವೇ ನಮ್ಮ ಗುರು ಆಗಬೇಕು. ಆಗ ನಮ್ಮೊಳಗಿನ ಸಾಮರ್ಥ್ಯವನ್ನು ನಾವು ಅರಿತಂತಾಗುತ್ತದೆ. ನಮ್ಮ ಸುಪ್ತ ಪ್ರಜ್ಞೆಯ ಆಳದಲ್ಲಿ ನಮ್ಮತ ನದ ಅರಿವು ನಮಗಾಗುತ್ತದೆ. ಇದನ್ನು ಸಾಧಿಸಲು ಧ್ಯಾನವು ಪ್ರಮುಖ ಮಾಧ್ಯಮವಾಗಿದೆ. ಧ್ಯಾನವು ಮಾನವನಿಗೆ ಅಂತಃ ದೃಷ್ಟಿಯನ್ನು ನೀಡುತ್ತದೆ. ಹೊಸ ಹೊಳಹುಗಳು ಧ್ಯಾನದಲ್ಲಿ ದೊರೆಯುತ್ತವೆ. ಬದುಕಿನ ಶ್ರೇಷ್ಠತನದ,  ಸಿರಿವಂತಿಕೆಯ ಅರಿವೂ ಧ್ಯಾನದಲ್ಲಿಯೇ ಆಗುತ್ತದೆ. 

ಮಾನಸಿಕ ನೆಮ್ಮದಿಯೊಂದಿಗೆ ದೈಹಿಕ ಸದೃಢತನವೂ ಅಷ್ಟೇ ಮಹತ್ವದ್ದು. ಇವೆರಡೂ ಒಟ್ಟೊಟ್ಟಿಗೆ ಸಾಗಬೇಕು. ದೈಹಿಕ ವಾಗಿ ಚಟುವಟಿಕೆಯಿಂದಿರಲು, ವ್ಯಾಯಾಮ, ಕಸರತ್ತು ಬೇಕೇಬೇಕು. ಯೋಗದಿಂದ ಇವೆರಡನ್ನೂ ಸಾಧಿಸಬಹುದು. ಪ್ರತಿದಿನವೂ ಯೋಗ ಮತ್ತು ಧ್ಯಾನವನ್ನು ನಮ್ಮ ದಿನಚರಿ ಯಲ್ಲಿ ಅಳವಡಿಸಿಕೊಂಡರೆ, ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ.

ಎಲ್ಲ ನಾಯಕರೂ ಉತ್ತಮ ಓದುಗರು. ಓದುವುದು ಜೀವನವನ್ನು ಪರಿಪೂರ್ಣಗೊಳಿಸುವ ಇನ್ನೊಂದು ಕ್ರಮವಾ ಗಿದೆ. ಓದಲು ಆಯ್ಕೆ ಮಾಡುವ ಪುಸ್ತಕಗಳು ನಮ್ಮ ಅಭಿ ರುಚಿ, ಆಸಕ್ತಿಗೆ ಅನುಗುಣವಾಗಿರಬೇಕು. ನಮ್ಮ ಓದು, ಕೇವಲ ಜ್ಞಾನ ಹೆಚ್ಚಿಸಲು ಮಾತ್ರ ಸೀಮಿತವಾಗಿರಬಾರದು. ಅದು ನಮ್ಮನ್ನು ಬೆಳೆಸುವಂತಿರಬೇಕು.

ಬದುಕು ಸಿರಿವಂತಗೊಳಿಸುವ ಈ ಪ್ರಯಾಣದಲ್ಲಿ ಮೊದಲ ಹೆಜ್ಜೆಯಾಗಬೇಕಿರುವ ಇನ್ನೊಂದು ಮಹತ್ವದ ಅಂಶವಿದೆ. ಅದು, ಇಂಥ ಶ್ರೀಮಂತರ ಬದುಕನ್ನು ಗಮನಿಸುವುದು. ಜೀವ ನದ ವಿವಿಧ ಆಯಾಮಗಳನ್ನು ಅವರು ಸ್ವೀಕರಿಸುವ ರೀತಿ, ನಿಭಾಯಿಸುವ ವಿಧಾನ, ಕಲಿಯುವ ಮನಸ್ಸು, ಮುಂತಾದವುಗಳನ್ನು ಗಮನಿಸುವುದೂ ಉತ್ತಮ ವಿಧಾನ.

ಆ್ಯನ್ ಯಾಂಡ್‌ ಇದನ್ನು ಶಬ್ದಗಳಲ್ಲಿ ಸಮರ್ಥವಾಗಿ ಹೀಗೆ ಹಿಡಿದಿಡುತ್ತಾರೆ, ‘ ಹಣವೆಂಬುದು ಕೇವಲ ಒಂದು ಸಾಧನ. ಇದು ನೀವಿಷ್ಟ ಪಟ್ಟಲ್ಲಿ ನಿಮ್ಮನ್ನು ಕರೆದೊಯ್ಯಬಲ್ಲದು. ಆದರೆ ನಿಮ್ಮನ್ನು ಚಾಲಕನ ಸ್ಥಾನದಲ್ಲಿ ಕೂರಿಸುವುದು ಹಣದಿಂದ ಅಸಾಧ್ಯ’ ಶ್ರೀಮಂತರಾಗುವುದು ಒಂದು ಪ್ರಯಾಣವಿದ್ದಂತೆ. ಹಣವು ಈ ಪ್ರಯಾಣದ ಒಂದು ಸಾಧನ ಮಾತ್ರ. ಪ್ರಯಾಣದ ಗಮ್ಯಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT