ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೃಜನಶೀಲತೆ ಇಲ್ಲದವ ರಾಜಕಾರಣಿ’

Last Updated 5 ಏಪ್ರಿಲ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಾಜದಲ್ಲಿ ಸೃಜನಶೀಲತೆ ಇಲ್ಲದವ ವ್ಯಕ್ತಿ ಮಾತ್ರ ರಾಜಕಾರಣಿ ಆಗುತ್ತಾನೆ’ ಎಂದು ಹಿರಿಯ ಸಾಹಿತಿ ಎಸ್.ಎಲ್‌.ಭೈರಪ್ಪ ಕಟುವಾಗಿ ಟೀಕಿಸಿದರು.

ಶೈಕ್ಷಣಿಕ ಮತ್ತು ಸಮಾಜ ಅಧ್ಯಯನ ಕೇಂದ್ರದ (ಸಿಇಎಸ್‌ಎಸ್‌) ಜಿಜ್ಞಾಸ ಘಟಕದ ವತಿಯಿಂದ ಸೆಂಟ್ರಲ್‌ ಕಾಲೇಜಿನಲ್ಲಿ ಶನಿವಾರ ನಡೆದ ಇಂಗ್ಲಿಷ್‌ಗೆ ಅನುವಾದಗೊಂಡ ತಾವು ರಚಿಸಿದ್ದ ‘ಆವರಣ’ ಕಾದಂಬರಿಯ (ಅನುವಾದಕ–ಸಂದೀಪ್‌ ಬಾಲಕೃಷ್ಣ) ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಈಗಿನ ಕಾಲದಲ್ಲಿ ಹಣ ಮಾಡುವುದು ಸುಲಭ. ಸೃಜನಶೀಲತೆ ಇಲ್ಲದ ವ್ಯಕ್ತಿಯೊಬ್ಬ ರಾಜಕಾರಣಿ ಬಳಿ ಹೋಗಿ ‘ನನ್ನನ್ನು ಪಾಲಿಕೆ ಸದಸ್ಯನನ್ನಾಗಿ ಮಾಡಿ’ ಎಂದು ಬೇಡಿಕೊಳ್ಳುತ್ತಾನೆ. ಪಾಲಿಕೆ ಸದಸ್ಯನಾದ ಬಳಿಕ ಐದು ವರ್ಷಗಳ ಕಾಲ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾನೆ. ಮತ್ತೆ ಮತ್ತೊಂದು ರಾಜಕೀಯ ಪಕ್ಷದ ಮುಖಂಡನ ಬಳಿಗೆ ತೆರಳಿ ಶಾಸಕನನ್ನಾಗಿ ಮಾಡುವಂತೆ ವಿನಂತಿಸುತ್ತಾನೆ. ಇವತ್ತಿನ ರಾಜಕಾರಣದಲ್ಲಿ ನೈತಿಕತೆ ಇಲ್ಲ. ಇದು ದೇಶದ ದುರಂತ’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

‘ಇಂದಿರಾ ಗಾಂಧಿ ಕಾಲದಲ್ಲಿ ಕಪ್ಪು ಹಣದ ಮಾರುಕಟ್ಟೆ ಪ್ರಚಲಿತಕ್ಕೆ ಬಂತು. ಇಂದಿರಾ ಅವರು ಉದ್ಯಮಗಳಿಗೆ ಶೇ 97.5 ತೆರಿಗೆ ವಿಧಿಸಿದರು. ಇದರಿಂದ ಕಂಗೆಟ್ಟ ಉದ್ಯಮಿಗಳು ಸರ್ಕಾರದ ಕಣ್ಣು ತಪ್ಪಿಸಲು ಆದಾಯದ ಎರಡು ಖಾತೆಗಳನ್ನು ನಿರ್ವಹಣೆ ಮಾಡಲಾರಂಭಿಸಿದರು’ ಎಂದರು.

‘ಇದು ಇಂದಿರಾ ಅವರಿಗೂ ಗೊತ್ತಾಯಿತು. ಕಪ್ಪು ಹಣವನ್ನು ಪಕ್ಷದ ನಿಧಿಗೆ ಕೊಡಿ ಎಂದು ಉದ್ಯಮಿಗಳಿಗೆ ಇಂದಿರಾ ಬೆದರಿಕೆ ಹಾಕಿದರು. ಉದ್ಯಮಿಗಳು ಪಕ್ಷಕ್ಕೆ ದೇಣಿಗೆ ನೀಡಲಾರಂಭಿಸಿದರು. ಈಗ ತೆರಿಗೆ ಪ್ರಮಾಣ ಕಡಿಮೆ ಆಗಿದೆ. ಆದರೆ, ಜನರ ಹಳೆಯ ಹವ್ಯಾಸ ಈಗಲೂ ಮುಂದುವರಿದಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸತ್ಯಾನ್ವೇಷಣೆ: ‘ಸತ್ಯದ ಹುಡುಕಾಟವೇ ನನ್ನ ಕೃತಿಯ ಮೂಲ ಉದ್ದೇಶ’ ಎಂದು ಸ್ಪಷ್ಟಪಡಿಸಿದ ಅವರು, ‘ಓದುಗನ ಹೃದಯಕ್ಕೆ ಲಗ್ಗೆ ಇಡುವ ಕೃತಿಯೇ ಶ್ರೇಷ್ಠ ಕೃತಿ. ಕೃತಿಯಲ್ಲಿರುವ ವಿಷಯಗಳು ನನ್ನದೇ ಕತೆ ಎಂದು ಓದುಗನಿಗೆ ಅನಿಸಬೇಕು’ ಎಂದು ಪ್ರತಿಪಾದಿಸಿದರು.

‘ಸತ್ಯಾನ್ವೇಷಣೆಯೇ ಆವರಣ ಕೃತಿಯ ಮೂಲ ಉದ್ದೇಶವಾಗಿತ್ತು. ಈ ಕೃತಿಗೆ ಎರಡು ರೀತಿಯ ಪ್ರಚಾರ ಸಿಕ್ಕಿತು. ಕೃತಿ ಓದಿದವರು ತಮ್ಮ ಗೆಳೆಯರಿಗೆ, ಸಂಬಂಧಿಕರಿಗೆ ನೀಡಿ ಸದ್ದಿಲ್ಲದೆ ಪ್ರಚಾರ ಮಾಡಿದರು. ಇನ್ನೊಂದೆಡೆ, ಎಡಪಂಥೀಯರು ವಿಚಾರಸಂಕಿರಣಗಳನ್ನು ನಡೆಸಿ  ಕರಪತ್ರಗಳನ್ನು ಹಂಚಿದರು. ಇದರಿಂದಾಗಿ ಕೃತಿಗೆ ಮತ್ತೊಂದು ರೀತಿ ಪ್ರಚಾರ ಸಿಕ್ಕಿತು’ ಎಂದು ಅವರು ಮಾರ್ಮಿಕವಾಗಿ ನುಡಿದರು.

‘ಇಂತಹ ಪ್ರಚಾರದಿಂದಲೇ ಕೃತಿ ಮಾರುಕಟ್ಟೆಗೆ ಬರುವ ಮೊದಲೇ 3,000 ಪ್ರತಿ ಮಾರಾಟವಾ­ಯಿತು. ಮರು ಮುದ್ರಣ ಮಾಡಿದಾಗಲೂ ಇದೇ ಸ್ಥಿತಿ ಆಯಿತು. ಈಗ ಆವರಣದ 37ನೇ ಮುದ್ರಣ ಹೊರಬರುತ್ತಿದೆ. ಕೃತಿ ಮರಾಠಿಯಲ್ಲಿ 10 ಮುದ್ರಣ, ತಮಿಳಿನಲ್ಲಿ ಮೂರು, ಸಂಸ್ಕೃತದಲ್ಲಿ ಮೂರು, ಹಿಂದಿಯಲ್ಲಿ ಮೂರು ಮುದ್ರಣ ಕಂಡಿದೆ. ಕಳೆದ ತಿಂಗಳು ಗುಜರಾತ್‌ ಭಾಷೆಯಲ್ಲಿ ಕೃತಿ ಬಿಡುಗಡೆಯಾಯಿತು. ವಾರದೊಳಗೆ 10,000 ಪ್ರತಿ ಮಾರಾಟವಾಯಿತು’ ಎಂದು ಅವರು ಹೇಳಿದರು.

ಶಿಕ್ಷ ಬಚಾವೋ ಆಂದೋಲನ ಸಹ ಸಂಚಾಲಕ ಅತುಲ್ ಕೊಠಾರಿ ಮಾತನಾಡಿ, ‘ಶಿಕ್ಷಣ ವ್ಯವಸ್ಥೆ ಬದಲಾವಣೆಯಾದರೆ ಮಾತ್ರ ದೇಶದ ಬದಲಾವಣೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್‌ ಸದಸ್ಯ ಪಿ.ವಿ.ಕೃಷ್ಣ ಭಟ್‌, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮಸ್ವಾಮಿ, ಅನುವಾದಕ ಸಂದೀಪ್‌ ಬಾಲಕೃಷ್ಣ, ಶತವಧಾನಿ ಆರ್‌.ಗಣೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT