ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌’ ಆಗಬೇಕಾಗಿದೆ

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಶಿಕ್ಷಣ ಸಚಿವರು ಸುಮಾರು 3 ಸಾವಿರ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಸ್ತಾಪ ಇಟ್ಟಿದ್ದಾರೆ. ಇಂಥ ಪ್ರಸ್ತಾಪ ಬಂದಾಗ ‘ಕನ್ನಡ ಶಾಲೆಗಳ ಮುಚ್ಚೋಣ’ದ ಚರ್ಚೆ ಆಗುತ್ತದೆ. ಆಮೇಲೆ ದಿವ್ಯ ಮೌನ.

ಈ ಸ್ಥಿತಿಯಲ್ಲಿ  ಸರ್ಕಾರಿ ಶಾಲೆಗಳನ್ನು ಮತ್ತೆ ಆಕರ್ಷಣೆಗೊಳಿಸುವುದು ಸಾಹಸದ ಕೆಲಸ. ಏಕೆಂದರೆ ಸಮಗ್ರ ಸರ್ಕಾರಿ ವ್ಯವಸ್ಥೆಯ ಬಗ್ಗೆಯೇ ಸಮಾಜದಲ್ಲಿ ನಕಾರಾತ್ಮಕ  ಭಾವನೆ ಬೆಳೆದು ಬಿಟ್ಟಿದೆ. ಸರ್ಕಾರಿ ವ್ಯವಸ್ಥೆಗಳೆಲ್ಲ ಬಡವರಿಗೆ ಮಾತ್ರ ಎಂಬ ಧೋರಣೆ ಅದು.

ಆದರೆ ಸುಮಾರು 2000ದ ತನಕ ಶಾಲೆಗಳು ಈ ಮನೋಭಾವದಿಂದ ವಿನಾಯಿತಿ ಪಡೆದಿದ್ದವು. ಏಕೆಂದರೆ ಅಲ್ಲಿಯ ತನಕ ಶಾಲೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆ ಇತ್ತು. ಆದರೆ ಯಾವಾಗ ಬಡವರಿಗೆ ಮಾತ್ರವೇ ಅಗತ್ಯವಾಗಿರುವ ಅನೇಕಾನೇಕ ಕೊಡುಗೆಗಳನ್ನು ಎಡೆಬಿಡದೆ ಸರ್ಕಾರಿ ಶಾಲೆಗಳಲ್ಲಿ ಕೊಡುವುದನ್ನೇ ಸುಧಾರಣೆ ಎಂಬರ್ಥದಲ್ಲಿ ಸರ್ಕಾರ ತೆಗೆದುಕೊಂಡಿತೋ,

ಆಗ ಮಧ್ಯಮ ವರ್ಗ ಈ  ಶಾಲೆಗಳಿಂದ ಕಳಚಿಕೊಳ್ಳಲು ಪ್ರಾರಂಭಿಸಿತು. ತಾಯಿ ತಂದೆಗೆ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಎನ್ನುವುದು ಸಂಬಂಧಿಕರೆದುರು ತಾವು ಮಕ್ಕಳನ್ನು ಓದಿಸುವ ಸಾಮರ್ಥ್ಯವಿಲ್ಲದವರು ಎಂಬುದರ ಸೂಚಕ ಎನಿಸತೊಡಗಿತು.

ಮಧ್ಯಮ ವರ್ಗ ಮತ್ತೆ ಸರ್ಕಾರಿ ಶಾಲೆಗಳ ಕಡೆಗೆ ಬರಬೇಕಾದರೆ ಈಗ ಬೆಳೆದಿರುವ ಭಾವನೆಯನ್ನು ತೊಡೆದು ಹಾಕುವ ನಿರಂತರ ಪ್ರಯತ್ನಗಳನ್ನು ಕನಿಷ್ಠ ಒಂದು ದಶಕದವರೆಗಾದರೂ ಮಾಡಬೇಕು.

ಮೊದಲು ಶಾಲೆಗಳಲ್ಲಿ ಕೊಡುವ ಕೊಡುಗೆಗಳು ಮಧ್ಯಮ ವರ್ಗದ ಅಗತ್ಯಗಳಾಗಿರುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಇಂಗ್ಲಿಷ್‌ ಕಲಿಸುತ್ತೇವೆ ಎಂದ ತಕ್ಷಣ ಆ ಶಾಲೆಗೆ ಒಳ್ಳೆಯ ಶಿಕ್ಷಣ ಬಂತು ಎಂದು ಮಧ್ಯಮ ವರ್ಗ ಒಪ್ಪಿಕೊಳ್ಳುವುದಿಲ್ಲ.

ಅದು ಶಾಲೆಗಳನ್ನು ನೋಡುತ್ತದೆ. ಆಗ ಒಂದು ಶಾಲೆಯಲ್ಲಿ ಎಷ್ಟು ಶಿಕ್ಷಕ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಅದಕ್ಕೆ ಗೊತ್ತಾಗುತ್ತದೆ. ಇರುವ ಶಿಕ್ಷಕರಾದರೂ ದಿನದಲ್ಲಿ ಎಷ್ಟು ಗಂಟೆ  ತರಗತಿಯ ಒಳಗೆ ಇರಲು ಸಾಧ್ಯವಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ.

ಈ ವಿಚಾರವನ್ನು ಪ್ರಸ್ತಾಪಿಸಿದ ತಕ್ಷಣ ಜನಗಣತಿ ಮತ್ತು ಚುನಾವಣಾ ಕಾರ್ಯಗಳನ್ನು ಬಿಟ್ಟರೆ ಬೇರಾವುದಕ್ಕೂ ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ ಎಂದು ಸಮರ್ಥಿಸಿಕೊಳ್ಳಲಾಗುತ್ತದೆ. ಆದರೆ ತಾರ್ಕಿಕ  ಸಮರ್ಥನೆಗಳನ್ನು ಪರಿಗಣಿಸಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ನೈಜ ಸ್ಥಿತಿಯನ್ನು ನೋಡಿ ನಿರ್ಧಾರ  ಮಾಡುತ್ತಾರೆ.

ಖಾಸಗಿ ಶಾಲೆಯಲ್ಲಿ ಏನಲ್ಲದಿದ್ದರೂ ಎಲ್ಲ ವಿಷಯಗಳಿಗೆ ಶಿಕ್ಷಕರು ಇರುತ್ತಾರೆ ಮತ್ತು ಅವರು ತರಗತಿಯ ಒಳಗೆಯೇ ಇರುತ್ತಾರೆ.  ನಿಜವಾಗಿ ಈ ಸ್ಥಿತಿಯಲ್ಲಿ ಕಡು ಬಡವರಿಗೂ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸೋಣವೆಂದೇ ಇರುತ್ತದೆ. ಆದರೆ ಶಕ್ತಿ ಇಲ್ಲದಿರುವುದರಿಂದ ಮತ್ತು ಸರ್ಕಾರಿ ಶಾಲೆಗಳಲ್ಲಿನ ಕೊಡುಗೆಗಳ ಆಕರ್ಷಣೆಯಿಂದ ಅವರಿಗದು ಅನಿವಾರ್ಯವಾಗಿರುತ್ತದೆ.

ಶಿಕ್ಷಕರಿಗೆ ಸರಿಯಾಗಿ ಪಾಠ ಮಾಡಲು ಅವಕಾಶ ಕೊಡದೆ ಉತ್ತಮ ಫಲಿತಾಂಶ ಕೊಡಿ ಎಂದು ಕೇಳಿದಾಗ ಉತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗಿಂತ ಉತ್ತೀರ್ಣಗೊಳಿಸಲಾಗುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಶಿಕ್ಷಕರು ಸ್ಥಳೀಯರಾಗಿದ್ದಾಗ ಮಕ್ಕಳಿಗೆ ಸ್ಪಂದಿಸುವುದು ಸಾಮಾಜಿಕ ಅನಿವಾರ್ಯವಾಗಿರುತ್ತದೆ.

ಮಧ್ಯಮ ವರ್ಗ ಕೊಂಚ ‘ಸ್ಮಾರ್ಟ್‌ನೆಸ್‌’ ಬಯಸುತ್ತದೆ. ಆದ್ದರಿಂದ ಶಾಲೆಗೆ ಕಾಲಕಾಲಕ್ಕೆ ಸುಣ್ಣ–ಬಣ್ಣ, ಸುಸಜ್ಜಿತ ತರಗತಿ ಕೋಣೆಗಳು, ಪೀಠೋಪಕರಣ, ಕ್ರೀಡಾ ಸಾಮಗ್ರಿ, ಕಂಪ್ಯೂಟರ್‌ ಶಿಕ್ಷಣ ಎಲ್ಲವೂ ಬೇಕಾಗುತ್ತವೆ. ಇಂಥವುಗಳನ್ನು ಸರ್ಕಾರ ಸಾಕಷ್ಟು ಕೊಡಮಾಡಿದೆ.

ಆದರೆ ಕೊಟ್ಟಿರುವುದನ್ನು ಸರಿಯಾಗಿ ನಿರ್ವಹಿಸಿ ಸಮಾಜಕ್ಕೆ ತೋರಿಸುವ ವ್ಯವಸ್ಥೆ ಇಲ್ಲ. ಕಂಪ್ಯೂಟರ್‌ ಕಲಿತು ಬೋಧಿಸದಿದ್ದರೆ ಅಮಾನತು ಮಾಡುತ್ತೇವೆ ಎಂದು ವಯೋವೃದ್ಧ ಶಿಕ್ಷಕರನ್ನು ಎಚ್ಚರಿಸಿದರೆ ಕಂಪ್ಯೂಟರ್‌ ಕಲಿಸಿದ ದಾಖಲೆ ಸಿಗಬಹುದೇ ಹೊರತು ಕಲಿಕೆ ಯಶಸ್ವಿಯಾಗದು.

ಅದಾಗಬೇಕಾದರೆ ಇತ್ತೀಚಿನ ವರ್ಷಗಳಲ್ಲಿ  ಡಿ.ಇಡಿ. ಮಾಡಿದ ಯುವಕ/ಯುವತಿಯನ್ನು ಶಿಕ್ಷಕರಾಗಿ ನೇಮಿಸಿ ಅವರಿಗೆ ಕಂಪ್ಯೂಟರ್‌ ಶಿಕ್ಷಣದ ಜವಾಬ್ದಾರಿ ಕೊಡಬೇಕು. ಆದರೆ 25 ಸಾವಿರ ರೂಪಾಯಿ ಒಳಗೆ ಸುಣ್ಣ ಬಣ್ಣ ಹೊಡೆಸುವ ಜವಾಬ್ದಾರಿಯನ್ನು ವಯೋವೃದ್ಧರಿಗೇ ಕೊಡಬೇಕು. ಅದನ್ನು ಮಾಡಬಲ್ಲವರು ಅವರೆ. ಅಂದರೆ ಸರ್ಕಾರಿ ಶಾಲೆಗಳು ಮತ್ತೆ ಮಧ್ಯಮ ವರ್ಗವನ್ನು ಸೆಳೆಯಬೇಕಾದರೆ,

ಬಡವರಿಗಾಗಿನ ಕೊಡುಗೆಗಳ ಜೊತೆಗೆ, ಶಾಲೆಗಳಲ್ಲಿನ ಮಾನವ ಸಂಪನ್ಮೂಲದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿ ಅದರ ನೈಜ ಅನುಭವ ಸಮಾಜಕ್ಕೆ ದೊರಕುವಂತೆ ಮಾಡಬೇಕು. ಮುಖ್ಯೋಪಾಧ್ಯಾಯರ ನಿಯಂತ್ರಣದಲ್ಲಿ ಶಾಲೆಗಳಿದ್ದಾಗ ಇದು ಸುಲಭ. ಆಯುಕ್ತರೇ ಶಾಲೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಾಗ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT