ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್ ಪ್ರೇತ’ ನಗರ ಸೃಷ್ಟಿಯಾದೀತು!

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ನಗರ-ಗಳು ಮತ್ತು ಗ್ರಾಮೀಣ ಪ್ರದೇಶಗಳು ಎರಡನ್ನೂ ಒಳಗೊಂಡ ಸಮಾನವಾದ ಅಭಿವೃದ್ಧಿ ಯೋಜನೆಗಳು ನಮಗೀಗ ಹೆಚ್ಚಾಗಿ ಬೇಕಾಗಿವೆ

ಕೇಂದ್ರ ಸರ್ಕಾರದ ‘ಸ್ಮಾರ್ಟ್ ಸಿಟಿ ಮಿಷನ್’ ಯೋಜನೆಗೆ ಈಗ ಒಂದು ವರ್ಷ ತುಂಬಿದೆ. 100 ಹೊಸ ನಗರಗಳನ್ನು ಸೃಷ್ಟಿಸುವ ಈ ಮಹತ್ವಾಕಾಂಕ್ಷಿ ಯೋಜನೆಯ  ಅನುಷ್ಠಾನಕ್ಕೆ ಈಗ 20 ನಗರಗಳು ಆಯ್ಕೆಯಾಗಿವೆ.

‘ಈ ನಗರಗಳ ನವೀಕರಣಕ್ಕೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ಅತ್ಯಧಿಕ ಮಟ್ಟದಲ್ಲಿ ಕುದುರಿಸಲು ಈ ಯೋಜನೆ ಅತ್ಯಂತ ಸಹಕಾರಿ’ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ‘ಇದು ಪ್ರಪಂಚದಲ್ಲೇ ದೊಡ್ಡ ಪ್ರಮಾಣದ ನಗರೀಕರಣ ಯೋಜನೆ’ ಎಂದು  ಪ್ರಧಾನಿ ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ನಗರಗಳನ್ನು ‘ಸ್ಮಾರ್ಟ್’ ಆಗಿ ನವೀಕರಿಸಲು ಪ್ರತಿ ನಗರಕ್ಕೆ ₹ 1000 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ₹ 500 ಕೋಟಿ ಕೇಂದ್ರ ಸರ್ಕಾರದ ಬಳುವಳಿಯಾದರೆ, ಮಿಕ್ಕ ಹಣವನ್ನು ಆಯಾ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿನಿಯೋಗಿಸಬೇಕು. ಈ ಯೋಜನೆಯಿಂದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಚಿನ್ನದ ಅವಕಾಶಗಳು ಒದಗಲಿವೆ.

ಮಾದರಿ ನಗರ ವ್ಯವಸ್ಥೆಯ ಸೃಷ್ಟಿಯು ‘ಸ್ಮಾರ್ಟ್ ಸಿಟಿ ಮಿಷನ್‌’ನ ಉದ್ದೇಶ. ನಗರವಾಸಿಗಳನ್ನು ತೀವ್ರವಾಗಿ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಮತ್ತು ನೀರಿನ ಸಮಸ್ಯೆಯನ್ನು ನಿವಾರಿಸಲು, ಸಂಚಾರ ವ್ಯವಸ್ಥೆಯನ್ನು ಹೆಚ್ಚು ಸುಗಮವಾಗಿ ಮತ್ತು ಸಂಪೂರ್ಣವಾಗಿ ದೊರಕಿಸುವ ಬಡಾವಣೆಗಳನ್ನು ಸಿದ್ಧಪಡಿಸುವ ಭರವಸೆಯನ್ನು ‘ಸ್ಮಾರ್ಟ್ ಸಿಟಿ’ ಯೋಜನೆ ಕೊಡುತ್ತದೆ.

ನಗರದ ಸಂಪೂರ್ಣ ನವೀಕರಣವು ಆ ನಗರದ ಈಗಿನ ಹಲವು ಸಮಸ್ಯೆಗಳನ್ನು ನಿವಾರಿಸಬೇಕಾಗುತ್ತದೆ. ಆದರೆ ಈಗ ಆಯ್ಕೆಯಾಗಿರುವ ನಗರಗಳ ನವೀಕರಣದ ನಕಾಶೆಯಲ್ಲಿ ಸಂಪೂರ್ಣ ನಗರಗಳ ನವೀಕರಣವಿಲ್ಲದೆ, ಕೇವಲ ಆಯ್ದ ಭಾಗಗಳನ್ನು ಮಾತ್ರ ಅದು ಒಳಗೊಂಡಿದೆ. ಆಯ್ದ ಭಾಗಗಳಲ್ಲಿ ಹೊಸ ಆಧುನಿಕ ಬಡಾವಣೆಗಳನ್ನು ಸೃಷ್ಟಿಸುವುದು ಇದರಲ್ಲಿರುವ ಮುಖ್ಯ ಅಂಶ.

ಬಡಾವಣೆಗಳಿಗೆ ಬೇಕಿರುವ ನೀರಿನ ವ್ಯವಸ್ಥೆ, ರಸ್ತೆಗಳು, ಸಂಚಾರ ವ್ಯವಸ್ಥೆ, ವಿದ್ಯುತ್, ಶಾಲಾ ಕಾಲೇಜು, ಆಸ್ಪತ್ರೆಗಳು, ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು ಮತ್ತು ಹಲವಾರು ಆಧುನಿಕ ಸವಲತ್ತುಗಳನ್ನು ಒದಗಿಸುವ ಒಂದು ಮಾದರಿ ನಗರ ವ್ಯವಸ್ಥೆಯ ಸೃಷ್ಟಿ ಈ ಯೋಜನೆಗಿದೆ.

ನಗರದಲ್ಲಿ ವಾಸಮಾಡುವ ಎಲ್ಲ ವರ್ಗದ ಜನರಿಗೆ ಪ್ರಯೋಜನವಾಗುವ ಕಾರ್ಯ ಯೋಜನೆಗಳು ಈ ಪ್ರಸ್ತಾವದಲ್ಲಿ ಕಾಣುತ್ತಿಲ್ಲವೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದಲೇ ಎಲ್ಲಾ ನಗರವಾಸಿಗಳ ಹಿತಕ್ಕಿಂತ ಶ್ರೀಮಂತ ವರ್ಗ ಮತ್ತು ಬಂಡವಾಳಶಾಹಿಗಳ ಹಿತ ಕಾಪಾಡುವ ಯೋಜನೆಯಂತೆ ಇದು ಕಂಡುಬರುತ್ತದೆ.  

ಮಹಾನಗರಗಳಲ್ಲಿ ಈಗಾಗಲೇ ಪ್ರತ್ಯೇಕವಾಗಿ ವಾಸಿಸುವ  ಶ್ರೀಮಂತ ಸಮುದಾಯವನ್ನು ಇತ್ತೀಚಿನ ದಿನಗಳಲ್ಲಿ ನಾವು ಕಾಣಬಹುದು. ಅವು ‘ಗೇಟೆಡ್ ಕಮ್ಯುನಿಟೀಸ್’ ಮತ್ತು ‘ಎಲೈಟ್ ಟೌನ್‌ಶಿಪ್ಸ್’. ಅಂದರೆ ನಾವು ವಾಸ ಮಾಡುತ್ತಿರುವ ಸಮಾಜದಿಂದ ‘ಸುರಕ್ಷಿತ’ವಾಗಿ ಇರಬಯಸುವ ಶ್ರೀಮಂತ ವರ್ಗಗಳು ನಗರದ ಹೊರವಲಯದ ವಿಶಾಲವಾದ ಜಾಗದಲ್ಲಿ ಕಟ್ಟಲಾಗಿರುವ ಮನೆಗಳ ಸಮೂಹದಲ್ಲಿ ವಾಸಮಾಡುತ್ತಿವೆ.

ಇಂತಹ ಸಮುದಾಯ ವಾಸ ಮಾಡುವ ಜಾಗಕ್ಕೆ ದೊಡ್ಡ ಗೋಡೆ ನಿರ್ಮಿಸಲಾಗಿದ್ದು ಅಲ್ಲಿಗೆ ಮಾಲೀಕರಿಗಲ್ಲದೆ ಬೇರೆ ಯಾರಿಗೂ ಪ್ರವೇಶವಿಲ್ಲ. ಸೆಕ್ಯುರಿಟಿ ಗಾರ್ಡ್‌ಗಳು ದಿನದ 24 ಗಂಟೆ ಕಾವಲು ಕಾಯುತ್ತಾರೆ.

ಈ ಭದ್ರಕೋಟೆಯ ಒಳಗೆ ಐಷಾರಾಮಿ ಮನೆಗಳು ಅಥವಾ ಅಪಾರ್ಟ್‌ಮೆಂಟ್‌ಗಳು ಇರುತ್ತವೆ. ಆಸ್ಪತ್ರೆ, ಸೂಪರ್ ಮಾರ್ಕೆಟ್, ಈಜುಕೊಳ, ದೊಡ್ಡ ಉದ್ಯಾನಗಳು, ಅಗಲವಾದ ರಸ್ತೆಗಳು, ಮತ್ತಿನ್ನೆಲ್ಲ ಜೀವನ ಸೌಲಭ್ಯಗಳನ್ನು ಇಲ್ಲಿ ಸೃಷ್ಟಿಸಲಾಗಿರುತ್ತದೆ. ಇಂಥ ‘ಎಲೈಟ್’ ಬಡಾವಣೆಗಳು ಬೆಂಗಳೂರಿನಲ್ಲೂ ತಲೆ ಎತ್ತಿವೆ.

ಇಂಥ ‘ಗೇಟೆಡ್ ಕಮ್ಯುನಿಟಿ’ ಹೊರಗಿನ ಸಮಾಜದ ಸಂಪರ್ಕವನ್ನು ಕಡಿದುಕೊಂಡಿರುತ್ತದೆ. ಇಲ್ಲಿ ವಾಸಿಸುವ ಸಮಾಜಕ್ಕೆ ಹೊರಗಿನ ಸಮಾಜದ ಬಗ್ಗೆ ಕೀಳು ಭಾವನೆಯಿರುತ್ತದೆ. ತಮ್ಮ ಮಕ್ಕಳ ಬೆಳವಣಿಗೆಗೆ ‘ಸುರಕ್ಷಿತ’ ಮತ್ತು ‘ಸುಶಿಕ್ಷಿತ’ ವಾತಾವರಣ ಲಭ್ಯವೆಂದೇ ಶ್ರೀಮಂತ ವರ್ಗದವರು ಇಲ್ಲಿ ಇರಬಯಸುತ್ತಾರೆ. ಮಕ್ಕಳಿಗೆ ವಾಸ್ತವ ಜಗತ್ತಿನ ಪರಿಚಯಕ್ಕೆ ಅವಕಾಶವೇ ಇಲ್ಲದಾಗಿರುತ್ತದೆ.

ಕೆಳ ವರ್ಗದ ಸಮಾಜವು ಏನಿದ್ದರೂ ತಮ್ಮ ಅಗತ್ಯಗಳಿಗೆ ದುಡಿಯುವವರೆಂಬುದು  ಇಲ್ಲಿ ಬೆಳೆಯುವ ಮಕ್ಕಳ ಗ್ರಹಿಕೆಯಾಗಿರುತ್ತದೆ. ಏಕೆಂದರೆ ಗೇಟೆಡ್ ಕಮ್ಯುನಿಟಿಯ ಅಗತ್ಯಗಳನ್ನು ಪೂರೈಸಲು ಬೇಕಾಗಿರುವ ಕೆಲಸದಾಳುಗಳಾಗಿ ಕೆಳ ವರ್ಗದ ಸಮಾಜವು ದುಡಿಯುತ್ತಿರುತ್ತದೆ.

ಮನೆಗಳಲ್ಲಿ, ಶಾಪಿಂಗ್ ಮಾಲ್‌ಗಳಲ್ಲಿ ನಮಗೆ ಸೇವೆ ಕೊಡುವ ದುಡಿಯುವ ಜನರನ್ನು ನೋಡುವ ಮಕ್ಕಳು, ನಮ್ಮ ಗೋಡೆಯಿಂದ ಹೊರಗಿರುವ ಸಮಾಜವು ಇರುವುದೇ ನಮ್ಮ ಸೇವೆಗಾಗಿ ಎಂದು ತಿಳಿದಿರುತ್ತವೆ.   

ಒಟ್ಟಿನಲ್ಲಿ ಸಮಾಜವನ್ನು ಸಮಗ್ರವಾಗಿ ನೋಡುವ ಯಾವುದೇ ಸಂದರ್ಭ ಗೇಟೆಡ್ ಕಮ್ಯುನಿಟಿಯ ಮಕ್ಕಳಿಗಾಗಲಿ ಅಥವಾ ಗೋಡೆಯಾಚೆಗಿನ ಮಕ್ಕಳಿಗಾಗಲಿ ಇರುವುದಿಲ್ಲ. ಮಗುವಿನ ಆರೋಗ್ಯಕರ ಮಾನಸಿಕ ಬೆಳವಣಿಗೆಗೆ ಸಮಾಜವನ್ನು ವಾಸ್ತವದ ನೆಲೆಯಲ್ಲಿ ಅನುಭವಿಸುವ ಅವಕಾಶಗಳು ಅಗತ್ಯ. ಸಮಸಮಾಜದ ಪರಿಕಲ್ಪನೆ ಮಾನವತೆಯನ್ನು ನಿರೀಕ್ಷಿಸುತ್ತದೆ.

ಮಕ್ಕಳಲ್ಲಿ ಸಹಜವಾಗಿರುವ ಸಮಾನತೆಯ ಮನಸ್ಸನ್ನು ‘ಗೇಟೆಡ್ ಕಮ್ಯುನಿಟಿ’ಯಂಥ ವಾತಾವರಣವು ಕಲುಷಿತಗೊಳಿಸುತ್ತದೆ. ಮಾನವತೆ ಮತ್ತು ಜೀವಪರ ನಿಲುವನ್ನು ಬೆಳೆಸುವಲ್ಲಿ ಮತ್ತು ಉಳಿಸುವಲ್ಲಿ ಈ ರೀತಿಯ ಸಮುದಾಯಗಳು ಸೋಲುತ್ತವೆ. ಒಟ್ಟಿನಲ್ಲಿ ಒಂದೇ ಸಮಾಜದಲ್ಲಿ ಬದುಕು ಮಾಡುವ ಅತ್ಯಂತ ಭಿನ್ನ ಸಮುದಾಯಗಳು ಸಾಮಾಜಿಕ ಒಡಕುಗಳಿಗೆ ನಾಂದಿಯಾಗಿವೆ.

ಇಂತಹ ‘ಎಲೈಟ್’ ಟೌನ್‌ಶಿಪ್‌ಗಳು ಮತ್ತು ‘ಗೇಟೆಡ್ ಕಮ್ಯುನಿಟಿ’ಗಳು ಸಮಾಜದಲ್ಲಿ ಅನಾರೋಗ್ಯಕರ ಪರಿಸರವನ್ನು ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಮಾದರಿಯ ‘ಸ್ಮಾರ್ಟ್ ಸಿಟಿ’ಗಳು ಯಾವ ಉದ್ದೇಶಗಳ ತಳಹದಿಯ ಮೇಲೆ ನಿಂತಿವೆ ಎಂಬುದನ್ನು ಅರಿಯುವ ಪ್ರಯತ್ನವನ್ನು ನಾವು ಮಾಡಲೇಬೇಕು. ಇಲ್ಲದಿದ್ದರೆ ಬಂಡವಾಳಶಾಹಿಗಳ ಅಂತ್ಯವಿಲ್ಲದ ದುರಾಸೆಗೆ ಸಮಾಜವನ್ನು ಬಲಿ ಕೊಡುವ ಸಾಹಸಕ್ಕೆ ಕೈ ಹಾಕಿದಂತಾಗುತ್ತದೆ.

ಇತರ ದೇಶಗಳಲ್ಲಿ ಸೃಷ್ಟಿಗೊಂಡ ‘ಸ್ಮಾರ್ಟ್ ಸಿಟಿ’ ಪರಿಕಲ್ಪನೆಯ ನಗರಗಳು ಇಂದು ‘ಪ್ರೇತ ನಗರಿ’ಗಳಾಗಿರುವುದನ್ನು ನಾವು ನೋಡಬಹುದು. ಚೀನಾದಲ್ಲಿ ಸೃಷ್ಟಿಗೊಂಡ ಇಂಥ ಹೊಸ ನಗರಗಳಲ್ಲಿ ಶ್ರೀಮಂತ ವರ್ಗದವರು ತಮ್ಮ ಬಂಡವಾಳ ಹೂಡಿಕೆಗಾಗಿ ಅಲ್ಲಿನ ಮನೆಗಳನ್ನು ಕೊಂಡರು.

ಆದರೆ ವಾಸ ಮಾಡಲಿಲ್ಲ. ಈಗ ಎಷ್ಟೋ ಹೊಸ ನಗರಗಳು ಜನರಿಲ್ಲದೆ ಪಾಳುಬಿದ್ದಿವೆ. ಈ ನಗರಗಳು ವಿಸ್ತಾರವಾದ ಜಾಗದಲ್ಲಿ ಸುಂದರವಾಗಿ ಕಟ್ಟಲಾಗಿರುವ ಕಟ್ಟಡಗಳ ಮಧ್ಯೆ ಜೀವದ ಸ್ಪರ್ಶವಿಲ್ಲದೆ ಹಾಗೇ ಕೊಳೆಯುತ್ತಿವೆ. ಇದಕ್ಕಾಗಿಯೇ ಇಂಥ ನಗರಗಳನ್ನು ‘ಗೋಸ್ಟ್ ಸಿಟೀಸ್’ ಎಂದು ಕರೆಯುತ್ತಾರೆ. ಇಂಥ ‘ಪ್ರೇತ ನಗರ’ಗಳನ್ನು ಚೀನಾದಲ್ಲಿ ಮಾತ್ರವಲ್ಲದೆ ಪ್ರಪಂಚದ ಹಲವು ಕಡೆ ನಾವು ನೋಡಬಹುದು.

ನಗರಾಭಿವೃದ್ಧಿಯೊಂದೇ ಒಂದು ದೇಶದ ಪ್ರಗತಿಯ ದಿಕ್ಸೂಚಿಯಾಗಲಾರದು. ನಗರ-ಗ್ರಾಮೀಣ ಪ್ರದೇಶಗಳೆರಡನ್ನೂ ಒಳಗೊಂಡ ಸಮಾನವಾದ ಅಭಿವೃದ್ಧಿಯ ಯೋಜನೆಗಳು ಬೇಕಾಗಿವೆ.

ಪ್ರಪಂಚದ ಹಲವಾರು ದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವ್ಯಯವಾಗಿರುವ ಹಣ ಮತ್ತು ಅದರಿಂದ ನನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳಿಂದ ನಾವು ಪಾಠ ಕಲಿಯುವುದಿದೆ. ದೂರದೃಷ್ಟಿಯಿಲ್ಲದ, ಗೊತ್ತುಗುರಿಯಿಲ್ಲದ ನಗರಾಭಿವೃದ್ಧಿ ಸತ್ತ ನಾಗರಿಕತೆಯ ಸೃಷ್ಟಿಗೆ ನಾಂದಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT