ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂ ಭಯೋತ್ಪಾದನೆ’ ಕಿಡಿ

Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿನ ಸರ್ಕಾರ ಹುಟ್ಟುಹಾಕಿದ ‘ಹಿಂದೂ ಭಯೋತ್ಪಾದನೆ’ ಪದ ಭಯೋತ್ಪಾದನೆ ವಿರುದ್ಧದ ತನಿಖೆ ಹಾಗೂ ಹೋರಾಟ ದುರ್ಬಲಗೊಳಿಸಿತು ಎಂದು ಶುಕ್ರವಾರ ಲೋಕಸಭೆಯಲ್ಲಿ ಸರ್ಕಾರ ಮಾಡಿದ ಆರೋಪವು, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಪಂಜಾಬಿನ ಗುರುದಾಸಪುರದ ಭಯೋತ್ಪಾದನೆ ಪ್ರಕರಣ ಕುರಿತು ಗೃಹ ಸಚಿವ ರಾಜನಾಥ್‌ಸಿಂಗ್‌ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್‌ ವಿರುದ್ಧ ಮಾಡಿದ ಆರೋಪ ಕೋಲಾಹಲಕ್ಕೆ ಕಾರಣವಾಯಿತು. 

2013ರಲ್ಲಿ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಹಿಂದೂ ಭಯೋತ್ಪಾದನೆ ಪದ ಹುಟ್ಟು ಹಾಕಿದರು. ಇದು ಭಯೋತ್ಪಾದಕ ಪ್ರಕರಣಗಳ ತನಿಖೆ ದಿಕ್ಕು ತಪ್ಪಿಸಿತು. ಅದಕ್ಕಾಗಿ ಹಫೀಜ್‌ ಸಯೀದ್‌ ಆಗಿನ ಗೃಹ ಸಚಿವರನ್ನು ಅಭಿನಂದಿಸಿದರು. ನಮ್ಮ ಸರ್ಕಾರ ಇಂಥ ನಾಚಿಕೆಗೇಡಿನ ಪರಿಸ್ಥಿತಿ ಮರುಕಳಿಸಲು ಅವಕಾಶ ಕೊಡುವುದಿಲ್ಲ ಎಂದು ರಾಜನಾಥ್‌ ಸ್ಪಷ್ಟಪಡಿಸಿದರು.

ಗೃಹ ಸಚಿವರ ಹೇಳಿಕೆಯಿಂದ ರೊಚ್ಚಿಗೆದ್ದ ಕಾಂಗ್ರೆಸ್‌ ಸದಸ್ಯರು ತಿರುಗೇಟು ಕೊಡಲು ಪ್ರಯತ್ನಿಸಿದರು. ಮಲ್ಲಿಕಾರ್ಜುನ ಖರ್ಗೆ ಏರಿದ ದನಿಯಲ್ಲಿ ಮಾತನಾಡಲು ಮುಂದಾದರು. ಅದಕ್ಕೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವಕಾಶ ಕೊಡಲಿಲ್ಲ. ಕೆಲವರು ನಿಯಮಗಳ ಕೈಪಿಡಿಯನ್ನು ಹಿಡಿದು ಪ್ರದರ್ಶಿಸಿದರು. ಒತ್ತಾಯಕ್ಕೆ ಸ್ಪೀಕರ್‌ ಮಣಿಯಲಿಲ್ಲ.

ಗದ್ದಲದ ನಡುವೆ ಖರ್ಗೆ, ‘ನೀವು ನಮ್ಮ ಗೌರವಕ್ಕೆ ಧಕ್ಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ’ ಎಂದು ಹೇಳಿದ್ದು ಕೇಳಿಬಂತು. ಕಾಂಗ್ರೆಸ್‌ ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಜಮಾಯಿಸಿ ಗದ್ದಲ ವೆಬ್ಬಿಸಿದರು. ತಮ್ಮ ನಾಯಕನಿಗೆ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯ ಮಾಡಿದರು. ಅವರ ಎಲ್ಲ ಪ್ರಯತ್ನಗಳು ವ್ಯರ್ಥವಾದವು.

ಖರ್ಗೆ ತಿರುಗೇಟು: ಲೋಕಸಭೆಯಲ್ಲಿ ಮಧ್ಯಾಹ್ನ ಮಾತನಾಡಿದ ಖರ್ಗೆ, ‘ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಂದಾಗಿದ್ದರೂ ರಾಜನಾಥ್‌ ರಾಜಕೀಯ ಭಾಷಣ ಮಾಡುವ ಮೂಲಕ ಸಂಸತ್ತನ್ನು ವಿಭಜನೆ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
ರಾಜನಾಥ್‌ ಸಿಂಗ್‌ ಕಾಂಗ್ರೆಸ್‌ ವಿರುದ್ಧ ಮಾಡಿದ ಆರೋಪಗಳನ್ನು ಕಡತದಿಂದ ತೆಗೆದು ಹಾಕುವಂತೆಯೂ ಖರ್ಗೆ ಆಗ್ರಹಿಸಿದರು. ಸ್ಪೀಕರ್‌ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ತಂಬಿದುರೈ ಬೇಡಿಕೆಯನ್ನು ತಿರಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT