ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುಕ್ಕಾ ಸೇದಲು ಪ್ರತ್ಯೇಕ ಪರವಾನಗಿ ಅಗತ್ಯವಿಲ್ಲ’

Last Updated 3 ಸೆಪ್ಟೆಂಬರ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ರೆಸ್ಟೋರೆಂಟ್‌ಗಳಲ್ಲಿ  ಗ್ರಾಹಕರಿಗೆ ಹುಕ್ಕಾ ಸೇದಲು ಅನುಮತಿ ನೀಡುವುದಕ್ಕಾಗಿ ಪ್ರತ್ಯೇಕ ಪರವಾನಗಿ ಪಡೆಯುವ ಅಗತ್ಯವಿಲ್ಲ’ ಎಂದು ಹೈಕೋರ್ಟ್‌ ಹೇಳಿದೆ.

ಈ ಸಂಬಂಧ ಡೈಮಂಡ್‌ ಎಂಟರ್‌ಪ್ರೈಸಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು  ಗುರುವಾರ ವಿಲೇವಾರಿ ಮಾಡಿದೆ. ‘ಹುಕ್ಕಾಗಳಲ್ಲಿ ಕೇವಲ ತಂಬಾಕನ್ನು ಮಾತ್ರವೇ ಮಿಶ್ರಣ ಮಾಡಿರಬೇಕು. ಬೇರೆ ಇನ್ನಾವುದೇ ನಿಷೇಧಿತ ಮಾದಕ ದ್ರವ್ಯಗಳನ್ನು ತುಂಬಿರಬಾರದು. ಒಂದುವೇಳೆ ಪೊಲೀಸರಿಗೆ ಈ ಸಂಬಂಧ ಏನಾದರೂ ವಿಶ್ವಾಸಾರ್ಹ ಮಾಹಿತಿ ದೊರೆತರೆ, ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಗೊತ್ತಾದರೆ ಅಂತಹ ರೆಸ್ಟೋರೆಂಟ್‌ಗಳ ಮೇಲೆ ದಾಳಿ ಮಾಡಲು ಸ್ವತಂತ್ರರು’ ಎಂದು ಪೀಠವು ಹೇಳಿದೆ.

ಡೈಮಂಡ್‌ ಎಂಟರ್‌ಪ್ರೈಸಸ್‌ ಬ್ರ್ಯೂಸ್‌ ಎನ್ ಬೈಟ್ಸ್‌’ ಹೆಸರಿನ ರೆಸ್ಟೋರೆಂಟ್‌ ಅನ್ನು ಜಯನಗರದ 4ನೇ ಬ್ಲಾಕ್‌ನಲ್ಲಿ ನಡೆಸುತ್ತಿತ್ತು.  ಇಲ್ಲಿ ಕಾಫಿ ಮತ್ತು ಕುರುಕಲು ತಿಂಡಿಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಗ್ರಾಹಕರಿಗೆ ಪ್ರತ್ಯೇಕ ಧೂಮಪಾನ ಮಾಡುವ ಸ್ಥಳದಲ್ಲಿ ಹುಕ್ಕಾ ಸೇದುವುದಕ್ಕೂ ಅವಕಾಶ ಕಲ್ಪಿಸಲಾಗಿತ್ತು.

ಮೈಕೊ ಲೇಔಟ್‌ ಉಪ ವಿಭಾಗದ ತಿಲಕ್‌ನಗರ ಪೊಲೀಸರು ಈ ರೆಸ್ಟೋರೆಂಟ್‌, ಹುಕ್ಕಾ ಸೇದುವುದಕ್ಕೆ ಪ್ರತ್ಯೇಕ ಅನುಮತಿ ಪಡೆಯಬೇಕು ಎಂದು ಸೂಚಿಸಿದ್ದರು. ಈ ಸಂಬಂಧ ಅರ್ಜಿದಾರರು ಬಿಬಿಎಂಪಿಯನ್ನು ಸಂಪರ್ಕಿಸಿದಾಗ ಪ್ರತ್ಯೇಕ ಪರವಾನಗಿ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದು ಹೇಳಲಾಗಿತ್ತು. ಆದರೆ ಪೊಲೀಸರು ಸುಮ್ಮನಾಗಿರಲಿಲ್ಲ. ಈ ಕಾರಣಕ್ಕಾಗಿ ಅರ್ಜಿದಾರರು ಕೋರ್ಟ್‌ ಮೊರೆ ಹೊಕ್ಕಿದ್ದರು.

‘ನಮ್ಮ ನಿತ್ಯದ ವ್ಯವಹಾರದಲ್ಲಿ ಪೊಲೀಸರು ಮೂಗು ತೂರಿಸುತ್ತಿದ್ದಾರೆ. ಇದರಿಂದ ನಮಗೆ ಅಡಚಣೆ ಉಂಟಾಗಿದೆ’ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT