ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಉಪ್ಪಿಯಷ್ಟು ರುಚಿ ಬೇರೆಯಿಲ್ಲ...

Last Updated 18 ಜುಲೈ 2016, 10:08 IST
ಅಕ್ಷರ ಗಾತ್ರ

ಅನಂತರಾಜು ನಿರ್ದೇಶನದ ‘ಕಲ್ಪನಾ 2’ ಇಂದು ತೆರೆ ಕಾಣುತ್ತಿದೆ. ಸಿನಿಮಾದ ವಿಶೇಷಗಳು ಹಾಗೂ ಉಪೇಂದ್ರ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

‘ಕಲ್ಪನಾ’ ಎಂದಕೂಡಲೇ ನಿರ್ದೇಶಕ ಆರ್. ಅನಂತರಾಜು ಅವರ ಮಾತುಗಳಲ್ಲಿ ಲವಲವಿಕೆ ಕಾಣಿಸುತ್ತದೆ. ಅದು ಸಿನಿಮಾದ ನಿರ್ದೇಶನ ತಂದುಕೊಟ್ಟ ಪುಲಕ; ಉಪೇಂದ್ರ ಅವರೊಂದಿಗೆ ಕೆಲಸ ಮಾಡಿದ ವಿಶಿಷ್ಟ ಅನುಭವದ ಖುಷಿ.

‘ಉಪ್ಪಿ 2’ ಚಿತ್ರೀಕರಣದ ಸಮಯದಲ್ಲೇ ತಮಿಳಿನ ‘ಕಾಂಚನಾ 2’ ಚಿತ್ರವನ್ನು ಕನ್ನಡಕ್ಕೆ ತರುವ ಮಾತುಕತೆ ನಡೆದಿತ್ತು. ಈ ಮೊದಲು ‘ಕಾಂಚನಾ’ ಚಿತ್ರವು ಕನ್ನಡದಲ್ಲಿ ‘ಕಲ್ಪನಾ’ ಹೆಸರಿನಲ್ಲಿ ರೀಮೇಕ್ ಆಗಿತ್ತು. ಈಗ ‘ಕಾಂಚನಾ 2’ ಚಿತ್ರವನ್ನು ‘ಕಲ್ಪನಾ 2’ ಆಗಿ ಕನ್ನಡಕ್ಕೆ ತರುವ ಸಂದರ್ಭದಲ್ಲಿ ಪ್ರಸ್ತಾಪವಾದ ನಿರ್ದೇಶಕರ ಹೆಸರುಗಳಲ್ಲಿ ಅನಂತರಾಜು ಅವರ ಹೆಸರೂ ಸೇರಿತ್ತು. ಉಪೇಂದ್ರ ಅವರ ಓಟು ದೊರಕುವುದರೊಂದಿಗೆ ಅನಂತರಾಜು ‘ಕಲ್ಪನಾ–2’ ಬಳಗ ಸೇರಿಕೊಂಡರು.

ಅನಂತರಾಜ್‌ ಸಾಕಷ್ಟು ಪಳಗಿದ ನಿರ್ದೇಶಕರು. ‘ಮಸ್ತ್ ಮಜಾ ಮಾಡಿ’, ‘ನಂದ’, ‘ಕಿಲಾಡಿ ಕಿಟ್ಟಿ’ ಸೇರಿದಂತೆ ಎಂಟು ಚಿತ್ರಗಳನ್ನು ನಿರ್ದೇಶಿಸಿರುವ ಅವರಿಗೆ ‘ಕಲ್ಪನಾ 2’ ನಿರ್ದೇಶಕರಾಗಿ ಒಂಬತ್ತನೇ ಸಿನಿಮಾ.

ಕಥೆಯಲ್ಲಿ ಹೊಸ ತಿರುವು
ರಿಮೇಕ್ ಮಾಡುವ ಉದ್ದೇಶದಿಂದ ಅನಂತರಾಜು ‘ಕಾಂಚನಾ 2’ ಚಿತ್ರ ನೋಡಿದ್ದಾರೆ. ತಮಿಳಿನ ಮೂಲ ಚಿತ್ರವನ್ನು ಅವರು ಕನ್ನಡ ಪ್ರೇಕ್ಷಕರಿಗೆ ಒಪ್ಪುವಂತೆ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿದ್ದಾರಂತೆ.

ಮೂಲ ಕಥೆಗೆ ತೀರಾ ನಿಷ್ಠರಾಗಿರದ ಅವರು ಚಿತ್ರಕಥೆಯಲ್ಲಿ ಶೇಕಡ ನಲವತ್ತರಷ್ಟು ಬದಲಾಯಿಸಿಕೊಂಡಿದ್ದಾರೆ. ದ್ವಿತೀಯಾರ್ಧದಲ್ಲಿ ಒಂದೇ ದಿನದಲ್ಲಿ ಮುಗಿಯುವ ಮೂಲ ಕಥೆಯನ್ನು ತಿದ್ದಿ, ಮುಖ್ಯ ತಿರುವುಗಳಿಗೆ ಇನ್ನಷ್ಟು ಹಿನ್ನೆಲೆ ಸೇರಿಸಿ ತಾರ್ಕಿಕ ಅಂತ್ಯ ನೀಡಿದ್ದಾರೆ.

ಕಥೆಯಲ್ಲಿ ಬದಲಾವಣೆ ತಂದಾಗ ಮೂಲ ಚಿತ್ರದ ಸಂಗೀತವನ್ನೇ ಬಳಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವ ಅನಂತರಾಜು, ಅರ್ಜುನ್ ಜನ್ಯ ಅವರಿಂದ ಚಿತ್ರಕ್ಕೆ ಹೊಸತಾಗಿ ಸಂಗೀತ ಮಾಡಿಸಿದ್ದಾರೆ. ತಮಿಳಿನ ಟ್ಯೂನ್‌ಗೆ ಕನ್ನಡ ಸಾಹಿತ್ಯ ಬರೆಸಿದರೆ ಅದು ಎಷ್ಟರ ಮಟ್ಟಿಗೆ ಹೊಂದಿಕೊಳ್ಳುತ್ತದೆ ಎಂಬ ಅನುಮಾನವೂ ಅವರಲ್ಲಿತ್ತು. ‘ಅಲ್ಲಿಯ ಹಾಡುಗಳು ನಮ್ಮ ನೇಟಿವಿಟಿಗೆ ಒಗ್ಗುವುದಿಲ್ಲ’ ಎಂಬುದು ಅವರ ಅಭಿಪ್ರಾಯ.

‘ಕಲ್ಪನಾ’ ನೋಡದೇ ಇದ್ದವರೂ ‘ಕಲ್ಪನಾ 2’ ನೋಡಿದರೆ ಏನೂ ಗೊಂದಲ ಅನ್ನಿಸುವುದಿಲ್ಲ. ಅಲ್ಲಿನ ಎರಡು ಪಾತ್ರಗಳು ಮಾತ್ರ ಇಲ್ಲಿ ಮುಂದುವರಿದಿವೆಯೇ ಹೊರತು ಕಥೆಗಳಲ್ಲಿ ಏನೂ ಹೋಲಿಕೆ ಇಲ್ಲ ಎನ್ನುವ ಅನಂತರಾಜು, ‘ಕಾಂಚನ 2’ ನೋಡಿದವರೂ ‘ಕಲ್ಪನಾ 2’ ಖಂಡಿತ ನೋಡಬೇಕು ಎನ್ನುತ್ತಾರೆ.

‘ಮೂಲ ಚಿತ್ರದಲ್ಲಿ ಇಲ್ಲದ ಅಂಶಗಳನ್ನು ಇಲ್ಲಿ ಸೇರಿಸಿದ್ದರಿಂದ, ಇವೆರಡನ್ನೂ ನೋಡುವ ಅನುಭವವೇ ಬೇರೆ. ಮತ್ತೆ ಮತ್ತೆ ಒಂದೇ ಸಿನಿಮಾ ನೋಡಿದಂತೆ ಅನ್ನಿಸುವುದಿಲ್ಲ’ ಎಂಬುದು ಅವರು ಪ್ರೇಕ್ಷಕರಿಗೆ ನೀಡುವ ಭರವಸೆ.

ವಾಹಿನಿಯೊಂದರ ವರದಿಗಾರನಾಗಿ ದೆವ್ವದ ಬಂಗಲೆ ಹೊಕ್ಕುವ ನಾಯಕನ ದೇಹದಲ ದೆವ್ವ ಸೇರಿಕೊಳ್ಳುತ್ತದೆ. ವರದಿಗಾರನಾಗಿ ಮತ್ತು ದೆವ್ವದ ಪಾತ್ರವನ್ನು ಉಪೇಂದ್ರ ನಿಭಾಯಿಸಿದ್ದಾರೆ. ‘ಹಾರರ್ ಸಿನಿಮಾ ಎಂದಾಕ್ಷಣ ಬರೀ ಭಯ ಹುಟ್ಟಿಸುವುದಷ್ಟೇ ಅಲ್ಲ, ಭಯದ ಸನ್ನಿವೇಶದಲ್ಲೂ ನಗೆ ಉಕ್ಕಿಸುವ ಹಾಸ್ಯ ದೃಶ್ಯಗಳು ತೆರೆದುಕೊಳ್ಳುತ್ತವೆ. ಚಿತ್ರದ ಎಪ್ಪತ್ತೈದರಷ್ಟು ಭಾಗ ಹಾರರ್–ಕಾಮೆಡಿ ಸಂಯೋಜನೆಯಿಂದ ಕೂಡಿದೆ’ ಎನ್ನುತ್ತಾರೆ ನಿರ್ದೇಶಕರು.

ರುಚಿಕರ ಉಪ್ಪಿ!
ಅನಂತರಾಜು ಈ ಮೊದಲು ‘ಮಸ್ತ್ ಮಜಾ ಮಾಡಿ’ ಚಿತ್ರದಲ್ಲಿ ಉಪೇಂದ್ರ ಜೊತೆ ಕೆಲಸ ಮಾಡಿದ್ದಾರೆ. ಅದರಲ್ಲಿ ಒಂದು ಹಾಡಿನಲ್ಲಿ ಉಪೇಂದ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗಿನಿಂದಲೂ ಅವರಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು.

‘ಉಪೇಂದ್ರ ಅವರೊಂದಿಗೆ ಒಳ್ಳೆಯ ಸ್ನೇಹವಿದ್ದ ಕಾರಣ ಇಡೀ ಚಿತ್ರೀಕರಣ ಹಾಯೆನ್ನುವಂತೆ ಕಳೆದುಬಿಟ್ಟಿತು’ ಎನ್ನುತ್ತಾರೆ ನಿರ್ದೇಶಕರು. ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡುತ್ತಿದ್ದೇನೆ ಎಂದಾಗ ‘ಉಪೇಂದ್ರ ಚಿತ್ರದ ನಿರ್ದೇಶನ ವಿಭಾಗದಲ್ಲೂ ಕೈ ಆಡಿಸುತ್ತಾರೆ’ ಎಂದು ಕೆಲವರು ಹೆದರಿಸಿದ್ದರಂತೆ.

ಆದರೆ ಅವರೊಂದಿಗೆ ಸಿನಿಮಾ ಮಾಡಿದ ಮೇಲೆ ಅನಂತರಾಜು ಹೇಳುವ ಮಾತು– ‘ಉಪೇಂದ್ರ ಅವರಂತೆ ಸಹಕರಿಸುವ ಕಲಾವಿದರು ಸಿಗುವುದು ಅಪರೂಪ. ಇನ್ನೂ ಹತ್ತು ಅವಕಾಶಗಳು ಸಿಕ್ಕರೂ ಅವರೊಂದಿಗೆ ಕೆಲಸ ಮಾಡುತ್ತೇನೆ’.

ಸರಿ ಎನ್ನಿಸಿದ್ದನ್ನು ಒಪ್ಪಿಕೊಳ್ಳುವ ಉಪ್ಪಿ, ತಪ್ಪು ಎನ್ನಿಸಿದ್ದನ್ನೂ ಹೇಳುತ್ತಿದ್ದರಂತೆ. ಆದರೆ ‘ಹೀಗೇ ಮಾಡಿ’ ಎಂದು ಯಾವತ್ತಿಗೂ ಅವರು ಒತ್ತಡ ಹಾಕಿಲ್ಲವಂತೆ. ಪ್ರಿಯಾಮಣಿ, ಆವಂತಿಕಾ ಶೆಟ್ಟಿ ಬಗ್ಗೆಯೂ ಅನಂತರಾಜು ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸುತ್ತಾರೆ.

ಕಥೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ನಡೆಯುವುದರಿಂದ ಈ ನಗರಗಳ ಸುತ್ತಮುತ್ತಲೇ ಚಿತ್ರೀಕರಣ ಮಾಡಲಾಗಿದೆ. ಫ್ಲಾಷ್‌ಬ್ಯಾಕ್ ಕಥೆ ಮಂಗಳೂರಿನಲ್ಲಿ ನಡೆಯುತ್ತದೆ. ಮೂರು ಹಾಡುಗಳಿಗೆ ಬೆಂಗಳೂರಲ್ಲಿ ಸೆಟ್ ಹಾಕಿದ್ದರೆ ಒಂದು ಹಾಡಿಗೆ ಚಿತ್ರತಂಡ ಗೋವಾಕ್ಕೆ ತೆರಳಿತ್ತು.

‘ಕಲ್ಪನಾ’ ಚಿತ್ರದಲ್ಲಿ ಉಮಾಶ್ರೀ ಮಾಡಿದ ಪಾತ್ರವನ್ನು ‘ಕಲ್ಪನಾ 2’ರಲ್ಲಿ ತುಳಸಿ ನಿರ್ವಹಿಸಿದ್ದಾರೆ. ಚಿತ್ರಾ ಶೆಣೈ, ಶೋಭರಾಜ್, ಕುರಿ, ಪ್ರತಾಪ್, ಮುನಿ, ಪೆಟ್ರೋಲ್ ಪ್ರಸನ್ನ, ಪ್ರಕಾಶ್ ಹೆಗ್ಗೋಡು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT