ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಎಲ್ಲರೊಳಗೂ ಒಬ್ಬ ಛಾಯಾಗ್ರಾಹಕ ...

Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ಕೆಂಡಸಂಪಿಗೆ’, ‘ಆಟಗಾರ’, ‘ರಾಟೆ’, ‘ಮೈನಾ’, ‘ಗಜಕೇಸರಿ’– ಈ ಎಲ್ಲ ಸಿನಿಮಾಗಳ ಸಾಮ್ಯತೆ ಏನು? ಅದು, ಈ ಚಿತ್ರಗಳ ಮೇಲಿರುವ ಸತ್ಯ ಹೆಗಡೆ ಅವರ ಛಾಫು. ತಮ್ಮ ಕ್ಯಾಮೆರಾ ಕೆಲಸದಿಂದ ಚಿತ್ರಗಳನ್ನೂ ಚಿತ್ರರಸಿಕರನ್ನೂ ಆವರಿಸಿಕೊಳ್ಳುವ ಅವರು ‘ಚಂದನವನ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

* ಕನ್ನಡ ಚಿತ್ರರಂಗಕ್ಕೆ ಈಗ ಒಳ್ಳೆಯ ದಿನಗಳು ಎನ್ನುವ ಮಾತಿದೆ. ನಿಮಗೆ ಏನನ್ನಿಸುತ್ತಿದೆ?
ಒಳ್ಳೆಯ ಕಥೆಗಳು ಬರುತ್ತಿವೆ. ಆ ಕಥೆಗಳ ಚಿತ್ರಗಳು ಜನರನ್ನು ತಲುಪುತ್ತಿವೆ. ಈಗ ಜನರು ಸಿನಿಮಾ ನೋಡುವ ರೀತಿ ಬದಲಾಗಿದೆ. ಪಕ್ಕಾ ವ್ಯಾಪಾರಿ ಸಿನಿಮಾ ಮಾತ್ರ ಗಳಿಕೆ ಮಾಡುತ್ತದೆ ಎನ್ನುವ ಮಾತು ಇತ್ತು. ಆದರೆ ಪ್ರಯೋಗಶೀಲ ಸಿನಿಮಾಗಳು ಕೂಡ ಜನಮನ್ನಣೆ ಗಳಿಸುತ್ತಿವೆ. ‘ಮುಂಗಾರು ಮಳೆ’, ‘ದುನಿಯಾ’ ಚಿತ್ರಗಳ ನಂತರ ಜನರು ಚಿತ್ರಮಂದಿರಗಳಿಗೆ ಬರುವುದು ಹೆಚ್ಚಾಗಿತ್ತು. ನಂತರ ಜನರು ಸಿನಿಮಾಗಳಿಂದ ದೂರವಾದರು. ಈಗ ಒಂದಷ್ಟು ಸಿನಿಮಾಗಳು ಮತ್ತೆ ಪ್ರೇಕ್ಷಕರನ್ನು ಸೆಳೆದಿವೆ.  ಹೊರಭಾಗದಲ್ಲಿರುವ ಕನ್ನಡಿಗರು ಕೂಡ ಕನ್ನಡ ಚಿತ್ರಗಳನ್ನು ನೋಡುವಂತಾಗಿದೆ. 

* ಜಾಗತಿಕ ಸಿನಿಮಾ ಸ್ಪರ್ಧೆಗಳಲ್ಲಿ ಕನ್ನಡ ಚಿತ್ರಗಳು ಹಿಂದುಳಿಯಲು ತಾಂತ್ರಿಕ ಹಿನ್ನಡೆ ಕಾರಣವೇ?
ಈ ಮೊದಲು ಕನ್ನಡ ಸಿನಿಮಾ ಮಾಡುವಾಗ ನಮ್ಮಲ್ಲಿ ಆ ರೀತಿಯ ಕ್ವಾಲಿಟಿ ಕ್ಯಾಮೆರಾ ಇಲ್ಲ ಎನ್ನುವ ಕಾರಣಗಳನ್ನು ಹೇಳಬಹುದಿತ್ತು. ಆದರೆ ಇಂದು ಜಗತ್ತಿನ ಯಾವ ಭಾಗದಲ್ಲಿಯೇ ಹೊಸ ಕ್ಯಾಮೆರಾ ಬಂದರೂ ಅದನ್ನು ಬೆಂಗಳೂರಿನಲ್ಲಿ ಕೊಳ್ಳಬಹುದು. ಆ ಕ್ಯಾಮೆರವಾವನ್ನು ಹೇಗೆ, ಯಾವ ರೀತಿ ಬಳಸಿಕೊಳ್ಳುತ್ತಾರೆ ಎನ್ನುವುದಷ್ಟೇ ಸದ್ಯದ ಚಾಲೆಂಜ್‌. ಎಲ್ಲರೂ ಮಾಡುವುದು ಡಿಜಿಟಲ್ ಕ್ಯಾಮೆರಾದಲ್ಲಿಯೇ– ಆದರೆ ಸ್ವರೂಪ ಬದಲಾಗುತ್ತದೆ ಅಷ್ಟೇ. ಜಾಗತಿಕ ಸಿನಿಮಾಗಳಲ್ಲಿ ಅಥವಾ ಬೇರೆ ಕಡೆಗಳಲ್ಲಿ ಬಳಸುವ ಲೆನ್ಸ್‌ಗಳು ಇಲ್ಲೂ ಸಿಕ್ಕುತ್ತದೆ. ವಿಷಯವನ್ನು ನಾವು ಹೇಗೆ ರೀಚ್ ಮಾಡುತ್ತೇವೆ ಎನ್ನುವುದಷ್ಟೇ ಇಲ್ಲಿ ಮುಖ್ಯ.

* ಫ್ರೇಮ್‌ಗಳ ಮೇಲೆ ನಿಮ್ಮ ವರ್ಕ್ ಯಾವ ರೀತಿ ಇರುತ್ತದೆ?
ಎಲ್ಲರ ಹತ್ತಿರವೂ ಮೊಬೈಲ್ ಕ್ಯಾಮೆರಾ ಇದೆ. ಎಲ್ಲರೊಳಗೂ ಒಬ್ಬ ಛಾಯಾಗ್ರಾಹಕ ಇದ್ದಾನೆ. ಎಲ್ಲರಿಗೂ ಫ್ರೇಮ್ ಸೆನ್ಸ್ ಬಂದಿದೆ. ಯಾವುದು ಚೆನ್ನಾಗಿದೆ–ಚೆನ್ನಾಗಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಒಂದು ಶಾಟ್‌ಗೆ ಯಾವ ರೀತಿ ಕ್ಯಾಮೆರಾ ಬೇಕು, ಆ ದೃಶ್ಯ ಯಾವ ರೀತಿ ಇರಬೇಕು ಎನ್ನುವ ಲೆಕ್ಕಾಚಾರ ಮಾಡಿದಾಗಲೇ ಒಳ್ಳೆಯ ಸಿನಿಮಾ ಆಗುತ್ತದೆ. ನನಗೆ ಖುಷಿ ಎಂದರೆ, ಪ್ರಸ್ತುತ ಫ್ರೇಮ್‌ಗಳ ಲೈಟಿಂಗ್ ಬಗ್ಗೆಯೂ ಜನರು ಮಾತನಾಡುತ್ತಿರುವುದು. ಅಂದರೆ, ಚಿತ್ರರಸಿಕರು ಸಿನಿಮಾಟೋಗ್ರಫಿ ಬಗ್ಗೆ ಆಸಕ್ತಿ ಇದೆ ಎಂದಾಯಿತು. ಫ್ರೇಮ್‌ಗಳ ಮೇಲೆ ಕೆಲಸ ಮಾಡಿ ಎಲ್ಲರನ್ನೂ ತೃಪ್ತಿಪಡಿಸಬೇಕು ಎಂದರೆ ನಾವು ನಿದ್ದೆ ಮಾಡದೇ ಕೆಲಸ ಮಾಡಬೇಕು.

* ಈ ಹಿಂದೆ ‘ಲೋ ಆ್ಯಂಗಲ್’ ತಮ್ಮ ಬಲವೂ ಹೌದು, ದೌರ್ಬಲ್ಯವೂ ಹೌದು ಎಂದಿದ್ದೀರಿ. ಈಗ ‘ಟಾಪ್ ಆ್ಯಂಗಲ್‌’ ಬಗ್ಗೆ ಗಮನ ನೀಡುತ್ತಿದ್ದೀರಿ?
ನಿಜ, ಈಗ ಎಲ್ಲರೂ ಟಾಪ್ ಆ್ಯಂಗಲ್ ಬಗ್ಗೆ ಮಾತನಾಡುತ್ತಿದ್ದಾರೆ. ಲೋ ಆ್ಯಂಗಲ್ ನನ್ನ ಬಲ ಮತ್ತು ದೌರ್ಬಲ್ಯ ಆಗಿತ್ತಲ್ಲವೇ– ಅದರಿಂದ ಎಸ್ಕೇಪ್ ಆಗುವುದಕ್ಕೆ ಈ ಟಾಪ್ ಆ್ಯಂಗಲ್! ‘ಕೆಂಡಸಂಪಿಗೆ’ ಪಯಣದ ಕಥೆಯಾದ್ದರಿಂದ ಟಾಪ್ ಹ್ಯಾಂಗಲ್‌ ಉತ್ತಮವಾಗಿ ಕಾಣಿಸಿತು. ಜನ ಕೂಡ ಮೆಚ್ಚಿಕೊಂಡಿದ್ದಾರೆ.

* ಚಿತ್ರೀಕರಣ ಸ್ಥಳದ ನಿಮ್ಮ ಹುಡುಕಾಟ ಹೇಗಿರುತ್ತದೆ?
ಒಂದು ಸಿನಿಮಾ ಒಪ್ಪಿಕೊಂಡರೆ ಅದು ನನಗೆ ಹೊಸದೇ ಎಂದೇ ಒಪ್ಪಿಕೊಳ್ಳುವೆ. ಆ ಕಥೆಗೆ ಏನು ಬೇಕು ಎಂದು ಹುಡುಕುವೆ. ಈ ಹುಡುಕಾಟದಲ್ಲಿ ಸಿಕ್ಕಿದ್ದ ಲೊಕೇಶನ್‌ಗಳನ್ನು ಸುಮ್ಮನೆ ಇಟ್ಟುಕೊಂಡಿರುವೆ. ರೈಟ್ ಟೈಮ್‌ನಲ್ಲಿ ಸರಿಯಾದ ಬಾಂಬ್ ಹಾಕುವೆ! ಲೊಕೇಶನ್‌ಗಳು ಬೇಕಾದಷ್ಟಿವೆ. ಚಿತ್ರಗಳಲ್ಲಿ ನಿರ್ದೇಶಕರು ಸ್ವಾತಂತ್ರ್ಯ ಕೊಟ್ಟಿದ್ದರಿಂದ ನನಗೆ ಮುಕ್ತವಾಗಿ ಕ್ಯಾಮೆರಾ ಕೆಲಸ ಮಾಡಲು ಅನುಕೂಲವಾಯಿತು. ಒಂದು ಚಿತ್ರಕ್ಕೆ ತಾಣಗಳ ಹುಡುಕಾಟದಲ್ಲಿ ಬೇಕಾದಷ್ಟು ಸ್ಥಳಗಳು ಸಿಗುತ್ತವೆ. ಅವು ಬೇರೆ ಚಿತ್ರಗಳಿಗೂ ಬಳಕೆಯಾಗುತ್ತವೆ. ರೀಮೇಕ್ ಚಿತ್ರ ಮಾಡಿದರೂ ಅದಕ್ಕೆ ಹೊಸ ಲೊಕೇಶ್‌ನಗಳನ್ನು ಹೇಗೆ ಬಳಸಬಹುದು ಎನ್ನುವ ಬಗ್ಗೆ ಆಲೋಚಿಸಿದರೆ ಚಿತ್ರ ಚೆಂದವಾಗುತ್ತದೆ. ಎಲ್ಲವೂ ನಿರ್ದೇಶಕರ ಕೈಯಲ್ಲಿ ಇರುತ್ತದೆ.

* ನೀವು ಮೂಲತಃ ಮಲೆನಾಡಿನವರು. ಬಾಲ್ಯದಲ್ಲಿ ನೀವು ಕಂಡುಂಡ ಪರಿಸರ ಮತ್ತು ಅನುಭವಗಳು ವೃತ್ತಿಗೆ ನೆರವಾಗುತ್ತಿವೆಯೇ?
ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯಾದರೂ ಶಿಕ್ಷಣ–ಬೆಳವಣಿಗೆ ಧಾರವಾಡ–ಹುಬ್ಬಳ್ಳಿ, ಬಳ್ಳಾರಿ ಇತ್ಯಾದಿ ಕಡೆಗಳಲ್ಲಿ. ರಾಜ್ಯವನ್ನು ಸುತ್ತಿದ್ದರಿಂದ ಆ ಅನುಭವಗಳನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಆಸೆ ಇದೆ. ಬಯಲು ಸೀಮೆ–ಮಲೆನಾಡು–ಕರಾವಳಿ ಹೀಗೆ ಎಲ್ಲ ಪ್ರದೇಶಗಳನ್ನೂ ಚೆನ್ನಾಗಿ ಬಲ್ಲೆ. ಸಂಡೂರಿನಲ್ಲಿ ಓದಿದ್ದು. ಅಲ್ಲಿನ ತಾಣಗಳಲ್ಲಿ ಇನ್ನೂ 10 ಸಿನಿಮಾ ಮಾಡಬಹುದು. ಆದರೆ ಸುಮ್ಮನೆ ಬಳಸುವುದಕ್ಕೆ ಸಾಧ್ಯವಿಲ್ಲ, ಅದನ್ನು ಚಿತ್ರಕಥೆ ಬೇಡಬೇಕು. ‘ಮನಸಾರೆ’ ಚಿತ್ರದ ಸಮಯದಲ್ಲಿ ಬೀದರ್ ಕೋಟೆ ನೋಡಿದ್ದೆ– ಅದು ‘ಗಗನವೆ ಬಾಗಿ’ ಸಿನಿಮಾಕ್ಕೆ ನೆರವಾಯಿತು.

* ಸದ್ಯ ನೀವು ತೊಡಗಿಕೊಂಡಿರುವ ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಕ್ಯಾಮೆರಾ ಕೆಲಸ ಹೇಗೆ ಕಾಣುತ್ತದೆ?
‘ದೊಡ್ಮನೆ ಹುಡುಗ’ ಚಿತ್ರದಲ್ಲಿ  ಎಕ್ಸ್‌ಕ್ಲೂಸಿವ್ ಆಗಿ ಲೊಕೇಶನ್‌ಗಳನ್ನು ಮಾಡಿದ್ದೇನೆ. ದೊಡ್ಡ ರೇಂಜ್‌ನಲ್ಲಿ ಹೊಡೆಯುವುದು ಎಂದು ಇರುತ್ತದೆಯಲ್ಲ, ಆ ರೀತಿ ಪ್ರಯೋಗ ಮಾಡಲಾಗಿದೆ. ನಾನು ಎಲ್ಲ ರೀತಿಯ ಸಿನಿಮಾ ಮಾಡುತ್ತೇನೆ ಎಂದು ತೋರಿಸಬೇಕಿತ್ತು, ಅದು ‘ಕೆಂಡಸಂಪಿಗೆ’ಯಿಂದ ಸಾಧ್ಯವಾಯಿತು.

* ವರ್ಷಕ್ಕೊಂದು ಸಿನಿಮಾ ಎನ್ನುವ ಮಿತಿ ಹಾಕಿಕೊಂಡಂತಿದೆ?
2015ಕ್ಕೆ ಸಿನಿಮಾ ರಂಗಕ್ಕೆ ಬಂದು 20 ವರ್ಷಗಳಾದವು. ಇಲ್ಲಿವರೆಗೂ ಮಾಡಿದ್ದು 22 ಸಿನಿಮಾಗಳನ್ನು. ಒಂದು ಸಿನಿಮಾಕ್ಕೆ ಬದ್ಧನಾದೆ ಎಂದರೆ ಅದು ಪೂರ್ಣಗೊಳ್ಳುವವರೆಗೆ ಮತ್ತೊಂದು ಚಿತ್ರ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಚೌಕಟ್ಟು ಉಳಿಸಿಕೊಳ್ಳುವೆ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಪರಭಾಷೆ ಸಿನಿಮಾಗಳಿಂದಲೂ ಆಹ್ವಾನಗಳು ಬರುತ್ತಿವೆ. ಆ ಬಗ್ಗೆ ಸದ್ಯಕ್ಕೆ ಆಲೋಚನೆ ಇಲ್ಲ. ಮುಂದಿನ ದಿನಗಳಲ್ಲಿ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT