ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಕನಕದಾಸರ ಚಿಂತನೆಗಳು ವರ್ತಮಾನಕ್ಕೆ ತೀರಾ ಪ್ರಸ್ತುತ...

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅಮ್ಮೆಂಬಳ ವಾಸುದೇವ ನಾವಡ  ಕನ್ನಡ, ತುಳು ಭಾಷಾಸಾಹಿತ್ಯ, ಜಾನಪದ, ನಿಘಂಟು ಕುರಿತು ದುಡಿಯುತ್ತಿರುವ ವಿದ್ವಾಂಸರು. 68 ವಸಂತಗಳನ್ನು ಕಂಡಿರುವ ಅವರಿಗೆ ಈ ವರ್ಷದ ಕನಕಶ್ರೀ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಅವರೊಡನೆ ‘ಸಾಪ್ತಾಹಿಕ ಪುರವಣಿ’ಗಾಗಿ ನಡೆಸಿದ ಸಂದರ್ಶನ.

*ಈ ವರ್ಷದ ಕನಕಶ್ರೀ ಪ್ರಶಸ್ತಿ ನಿಮಗೆ ಸಂದಿದೆ, ನಿಮ್ಮ ಕನಕಾಧ್ಯಯನ ಹಾಗೂ ದಾಸಸಾಹಿತ್ಯದ ಅಧ್ಯಯನ ಕುರಿತು ಸ್ವಲ್ಪ ಹೇಳುವಿರಾ?
ದಾಸ ಸಾಹಿತ್ಯದಲ್ಲಿ  ಅದರಲ್ಲೂ ಕನಕ ದಾಸರನ್ನು ಕುರಿತು ಕೆಲಸ ಮಾಡಿರುವ ನನಗೆ ಇದರಿಂದ ವಿಶೇಷವಾಗಿ ಸಂತಸವಾಗಿದೆ, ಧನ್ಯತೆ ಉಂಟಾಗಿದೆ. ನನ್ನ ದಾಸಸಾಹಿತ್ಯದ ಅಧ್ಯಯನಕ್ಕೆ ಮೊನೆ ಬಂದಿದ್ದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪುರಂದರ ಪೀಠದ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿದ ಬಳಿಕ. ಈ ಹಿಂದೆ ಮೈಸೂರು ವಿ.ವಿಯಿಂದ ದಾಸ ಸಾಹಿತ್ಯದ ಸಂಗ್ರಹ, ಪ್ರಕಟಣೆ, ಆಗಿದ್ದರೂ ನನ್ನ ದೃಷ್ಟಿಯಲ್ಲಿ ಈಗ ನಡೆದಿರುವ ಅಧ್ಯಯನವು ಹಳೆಯ ಚಿಂತನಾ ಧಾರೆಗಿಂತ ಭಿನ್ನ ವಾದುದು. ದಾಸ ಸಾಹಿತ್ಯದ ಅಧ್ಯಯನವನ್ನು ಗುಡಿಗೋಪುರ ಮಠಗಳ ಆವರಣದಿಂದ ಹೊರತಂದು ಅಕಡೆಮಿಕ್‌ ಸ್ವರೂಪ ನೀಡಲು ಯೋಚಿಸಿದೆ. ಅದಕ್ಕಾಗಿ ಬಳ್ಳಾರಿ, ರಾಯಚೂರು, ಹೊಸಪೇಟೆಗಳಲ್ಲಿ ಹಸ್ತಪ್ರತಿಗಳ ಸಂಗ್ರಹ ಮಾಡಿದೆ. ಇದರ ಜತೆಗೆ ಮಹಿಳೆಯರ ನಾಲಿಗೆಯಿಂದ ಹಾಡುಗಳನ್ನು ಸಂಗ್ರಹಿಸುವಾಗ ಪಾಠಗಳ ವ್ಯಾಕರಣ ಶುದ್ಧತೆಗೆ ಒತ್ತು ನೀಡದೆ, ನಾಲಗೆಯಿಂದ ಅದು ಹೇಗೆ ಹೊರಗೆ ಬಂತೋ ಆ ರೂಪಕ್ಕೇ ಮಹತ್ವ ನೀಡಿದೆ. ಈ ಹಿಂದೆ ಉಡುಪಿಯಲ್ಲಿ ಪಾವಂಜೆ ಗುರುರಾಯರು ಮೊದಲಾದವರು ಸಂಗ್ರಹ ಮಾಡಿದ್ದರು. ನಾನು ಉತ್ತರ ಕರ್ನಾಟಕದಲ್ಲಿ ದೊರಕುವ ದಾಸರ ಪದಗಳನ್ನು ಅದರ ಪಾರಂಪರಿಕ ಧಾಟಿಯಲ್ಲೇ ಸಂಗ್ರಹ ಮಾಡಿದೆ. ರಾಯಚೂರು, ಹೊಸಪೇಟೆ ಮಾತ್ರವಲ್ಲದೆ ಪಂಢರಪುರದಲ್ಲಿಯೂ ದಾಸಸಾಹಿತ್ಯದ ಸಮಾವೇಶ ಏರ್ಪಡಿಸಿದೆ. ಈಗ ಹಂಪಿ ವಿ.ವಿಯ ಮೂಲಕ ಸುಳಾದಿಗಳ ಸಮಗ್ರ ದಾಖಲಾತಿ ಪೂರ್ಣಗೊಂಡಿದೆ. ನಾಲ್ಕಾರು ವಿದ್ಯಾರ್ಥಿಗಳು ಈ ಕುರಿತು ಸಂಶೋಧನೆ ನಡೆಸಿದ್ದಾರೆ. 2002ರಲ್ಲಿ ಮಂಗಳೂರಿಗೆ ಬಂದ ಮೇಲೆ ಮಂಗಳೂರು ವಿ.ವಿ ಯ ಮತ್ತು ಉಡುಪಿಯ ಕನಕ ಅಧ್ಯಯನ ಪೀಠ, ಬೆಂಗಳೂರಿನ ಕನಕ ಸಂಶೋಧನಾ ಪೀಠಗಳ ಸಂಪರ್ಕಕ್ಕೆ ಬಂದೆ, ಕನಕನ ಸಾಹಿತ್ಯದಲ್ಲಿ ಆಸಕ್ತಿ ಕುದುರಿತು. ಜತೆಗೆ ತಿರುಪತಿಯ ದಾಸ ಸಾಹಿತ್ಯ ಯೋಜನೆಯಲ್ಲೂ ಕ್ರಿಯಾಶೀಲನಾದೆ. ಈಗ ಒಂದು ‘ಕನಕ ನಿಘಂಟು’ ತಯಾರಿಸುತ್ತಿದ್ದೇನೆ.

*ಈಗಿನ ಸಂದರ್ಭಕ್ಕೆ ಕನಕದಾಸರ ಪ್ರಸ್ತುತತೆ ಏನು?
ಈ ತನಕ ಕನಕರನ್ನು ದಾಸವರೇಣ್ಯ, ಭಕ್ತ ಕನಕ ಈ ನಿಟ್ಟಿನಿಂದ ನೋಡಲಾಗಿದೆ. ಆದರೆ ಮುಂದೆ ಕನಕದಾಸರನ್ನು ಕರ್ನಾಟಕದ ಸಾಂಸ್ಕೃತಿಕ ಹಿನ್ನೆಲೆಯಿಂದ, ಆತ್ಮಶೋಧನಾ ನಿಪುಣ ಮಾನವತಾವಾದದ ನಿಲುವಿನಲ್ಲಿ ಪರಿಶೀಲಿಸಬೇಕಾಗಿದೆ. ಮತ–ಧರ್ಮವನ್ನು ಮೀರಿ ಸಮಾನತೆಯ ಕಡೆಗೆ ತುಡಿಯುತ್ತಿದ್ದ ಅವರ ಮನಸ್ಸು ರೂಪಿಸಿರುವ ಚಿಂತನೆಗಳು ವರ್ತಮಾನಕ್ಕೆ ತೀರಾ ಪ್ರಸ್ತುತ. ಈ ನೆಲೆಯಿಂದ 16ನೇ ಶತಮಾನದ ಕನಕ ಸಾಹಿತ್ಯ ಕೃತಿಗಳು ಇವತ್ತಿಗೂ ಪ್ರಸ್ತುತವಾದ ಸಾಂಸ್ಕೃತಿಕ ಪಠ್ಯ. ಅವರ ಆಲೋಚನೆಗಳು ಮತ್ತೆ ಮತ್ತೆ ಹೊಸ ವ್ಯಾಖ್ಯೆಗೆ, ಮರುಶೋಧನೆಗೆ ಒಳ ಗಾಗಬೇಕಿದೆ. ನಮ್ಮ ಇಂದಿನ ತಲ್ಲಣಗಳಾದ ಅಸಮಾನತೆ, ವರ್ಣ–ವರ್ಗ ಭೇದಗಳಿಗೆ ಒಂದು ಬಗೆಯ ಚಿಕಿತ್ಸಕ ನೀರನ್ನು ಕನಕರ ರಚನೆಗಳಿಂದ ಪಡೆಯಬೇಕಿದೆ. ಅವರನ್ನು ಬರೀ ಭಕ್ತಿ ಪ್ರತಿಪಾದಕರಾಗಿ ನೋಡದೆ, ಕವಿ–ಯೋಗಿ–ಮಾನವ ಸ್ನೇಹಿಯಾಗಿ, ವಾಗ್ಗೇಯಕಾರರಾಗಿ, ಮೌಢ್ಯ ನಿವಾರಕರಾಗಿ ನೋಡಬೇಕಿದೆ.  ಅವರ ‘ಮೋಹನ ತರಂಗಿಣಿ’ ಕಾವ್ಯವನ್ನು ಮಧ್ಯಕಾಲೀನ ಸಾಂಸ್ಕೃತಿಕ ಚರಿತ್ರೆಯಾಗಿ, ಶೈವ–ವೈಷ್ಣವ ಧರ್ಮಗಳ ಸಾಮರಸ್ಯದ ಸಾಂಕೇತಿಕತೆ, ಭಾಷಿಕ ವಿಶೇಷತೆಗಳಿಗಾಗಿ ಮತ್ತೆ ಓದಬೇಕಾಗಿದೆ.

*ಕಾವ್ಯ, ಜಾನಪದ, ತುಳು ಸಾಹಿತ್ಯ, ನಿಘಂಟು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧಕರಾಗಿ ಕೆಲಸ ಮಾಡಿರುವ ನೀವು ಸಂಶೋಧಕರಾಗಿ ಹೇಗೆ ಬೆಳೆದಿರಿ?
1970ರಲ್ಲಿ ಕುಂದಾಪುರದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನೆರವಿನಿಂದ ಮೊದಲಿಗೆ ಜಾನಪದ ಸಂಗ್ರಹ ಮಾಡಿದೆ, ಆಗ ನನಗೆ ಯಾವುದೇ ಮೆಥೆಡ್‌  ತಿಳಿದಿರಲಿಲ್ಲ. ಹಳ್ಳಿ ಪಟೇಲರೊಬ್ಬರ ಬಳಿ ಒಂದು ಟೇಪ್‌ರೆಕಾರ್ಡರ್‌ ಇತ್ತು, ಅದರಲ್ಲಿ ಜಾನಪದ ಹಾಡುಗಳನ್ನು ಸಂಗ್ರಹಮಾಡಿದೆ. ಕುಂದಾಪುರದ ಕಾಲೇಜು ಮ್ಯಾಗಝೀನ್‌ನಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಈ ಹಾಡುಗಳು ಪ್ರಕಟವಾದವು. ಆ ಸಮಯದಲ್ಲಿ ಪ್ರಸಿದ್ಧ ಭಾಷಾ ವಿದ್ವಾಂಸ ಡಿ.ಎನ್‌. ಶಂಕರಭಟ್ಟರು ಪೂನಾದಲ್ಲಿದ್ದರು, ಅಲ್ಲಿಗೆ ಬಾ ಎಂದು ನನ್ನನ್ನು ಆಹ್ವಾನಿಸಿದರು.  ಕೆಲವು ಕಾರಣಗಳಿಂದ ನನಗೆ ಹೋಗಲು ಆಗಲಿಲ್ಲ. ಆದರೆ ಅವರೊಟ್ಟಿಗೆ ಪತ್ರ ವ್ಯವಹಾರ ಇತ್ತು. ಕುಂದಾಪುರದ ಕನ್ನಡ, ಕೋಟಗನ್ನಡ, ಬೆಳಾರೆ ಭಾಷೆ, ಕೊರಗ ಭಾಷೆಗಳ ಕುರಿತು ಲೇಖನಗಳನ್ನು ಬರೆದೆ. ಇದರ ಫಲವಾಗಿ ನಾನು ಕು.ಶಿ. ಹರಿದಾಸ ಭಟ್ಟರ ಕಣ್ಣಿಗೆ ಬಿದ್ದೆ. ಅವರು ಕೈಗೆತ್ತಿಕೊಂಡಿದ್ದ ತುಳು ನಿಘಂಟು ಯೋಜನೆಯಲ್ಲಿ ಕಾಲೇಜಿನಿಂದ ಡೆಪ್ಯುಟೇಷನ್‌ ಮೇಲೆ ಹೋಗಿ, ಉಪಸಂಪಾದಕನಾಗಿ ಕೆಲಸಮಾಡಿದೆ. ತುಳು ಪಾಡ್ದನ, ಉರಾಲ್‌, ಕಬಿತ್‌ಗಳ ಸಂಗ್ರಹಕಾರ್ಯ, ನಿಘಂಟಿಗೋಸ್ಕರ ಆಕರ ಸಂಗ್ರಹ ಮಾಡುತ್ತಾ ಮಾಡುತ್ತಾ ತುಳು ಸಂಸ್ಕೃತಿಗೆ ಪ್ರವೇಶ ಪಡೆದೆ. ಈ ಸಮಯದಲ್ಲಿ ಅಮೆರಿಕದ ಮಾನವಶಾಸ್ತ್ರಜ್ಞ ಪೀಟರ್‌ ಕ್ಲಾಸ್‌ ಸಹವಾಸ ಉಂಟಾಗಿ, ಅವರೊಟ್ಟಿಗೆ ಭೂತ, ನೇಮ, ಸಿರಿ ಜಾತ್ರೆಗಳನ್ನು ಹತ್ತಿರದಿಂದ ಕಂಡೆ. ತುಳು ಮೌಖಿಕ ಪರಂಪರೆಯನ್ನು ಕೇವಲ ಸ್ಥಳೀಯವಾಗಿ ಮಾತ್ರವಲ್ಲ, ವಿಶ್ವಾತ್ಮಕ ನೆಲೆಯಲ್ಲಿ ಅರ್ಥೈಸುವ, ಸೈದ್ಧಾಂತಿಕ ನೆಲೆಯಲ್ಲಿ ವಿವೇಚಿಸುವ ಬಗೆಗಳನ್ನು ಅವರಿಂದ ತಿಳಿದುಕೊಂಡೆ. ಅವರು ಅಮೆರಿಕದ ಜರ್ನಲ್‌ಗಳಲ್ಲಿ ಬರೆದಿದ್ದ ಲೇಖನಗಳಲ್ಲಿ ಹತ್ತನ್ನು ಆಯ್ದು ಅನುವಾದಿಸಿ ‘ತುಳುವ ದರ್ಶನ’ ಪುಸ್ತಕ ಬರೆದೆ. ಆ ದಿನಗಳಲ್ಲಿ ತುಳು ಮೌಖಿಕತೆ ನನ್ನನ್ನು ಬಹಳ ಕಾಡಿದ ವಿಷಯ.

ಕು.ಶಿ. ಅವರು ಏರ್ಪಡಿಸಿದ್ದ ನೂರು ದಿನಗಳ ಅಂತರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಲು ಅವಕಾಶ ದೊರೆತದ್ದು, ನನ್ನ ಸುಕೃತ. ಅಲ್ಲಿ ಅಲೆನ್‌ ಡಂಡಸ್‌, ಎ.ಕೆ. ರಾಮಾನುಜನ್‌, ಪೀಟರ್‌ ಕ್ಲಾಸ್‌ ಅವರ ಬೋಧನೆಗಳನ್ನು ಕೇಳಿದ್ದು ನನ್ನ ಜಾನಪದ ಅರಿವಿಗೆ ಮೊನೆ ಮೂಡಿಸಿತು. ಅನೇಕ ಬೇಸಗೆಗಳಲ್ಲಿ ನಾನು ಅಣ್ಣಾಮಲೈ, ಮದ್ರಸ್‌್, ಕೇರಳ ವಿ.ವಿಗಳಲ್ಲಿ ಬೇಸಗೆ ರಜೆಯ ಭಾಷಾ ತರಗತಿಗಳಲ್ಲಿಭಾಗವಹಿಸಿದೆ.  ಮುಂದೆ ನಿಘಂಟು ವಿಜ್ಞಾನ, ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಇವೆಲ್ಲಾ ನನಗೆ ಬುನಾದಿಯಾದವು. ನನಗೆ ಬಹಳ ಸಮಾಧಾನ ನೀಡಿದ ನನ್ನ ಸಂಶೋಧನೆ ಎಂದರೆ, ಕಾಡ್ಯ ನಾಟದ ಶೋಧ ಮತ್ತು ವಿಶ್ಲೇಷಣೆ. ಕಾಳಿಂಗ ಸರ್ಪದ ಆರಾಧನಾ ಪದ್ಧತಿಯನ್ನು ಅಲ್ಲಿಯ ತನಕ ಮೇಲ್ವರ್ಗದವರ ಆಚರಣೆ ಎಂದು ಭಾವಿಸಲಾಗಿತ್ತು, ಅದು ಹಾಗಲ್ಲ, ಕಾಡ್ಯನಾಟ ದಲಿತ ಮೇದರ ಆಚರಣೆ ಎಂದು ತೋರಿಸಿಕೊಡಲು ಈ ಮೂಲಕ ಅವಕಾಶವಾಯಿತು. ನಾಲ್ಕು ರಾತ್ರಿ, ಮೂರು ಹಗಲು ಕಾಡ್ಯನಾಟದ ಆರಾಧನೆಯನ್ನು ಉಡುಪಿಯ ಆರ್‌ಆರ್‌ಸಿ ನೆರವಿನಿಂದ ಮೊದಲ ಸಲ ಸಮಗ್ರವಾಗಿ ದಾಖಲು ಮಾಡಿದ್ದು ಒಂದು ವಿಶೇಷ.

*ನಿಮ್ಮ ಹಂಪಿಯ ಸಂಶೋಧನೆಯ ದಿನಗಳು ಹೇಗಿದ್ದವು?
ಹಂಪಿ ಕನ್ನಡ ವಿ.ವಿಯ ಪ್ರಸಾರಾಂಗಕ್ಕೆ ಹಲವು ವರ್ಷಗಳು ನಿರ್ದೇಶಕನಾಗಿ ಸೇವೆ ಸಲ್ಲಿಸಿದೆ. ಆ ಸಮಯದಲ್ಲಿ ಆರು ನೂರಕ್ಕೂ ಹೆಚ್ಚಿನ ಪುಸ್ತಕಗಳು ಪ್ರಕಟವಾದವು.  ವಿಭಾಗದ ಸಹೋ ದ್ಯೋಗಿಗಳು ಸುಮಾರು ನಾಲ್ಕು ಸಾವಿರ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಈ ಕೆಲಸಕ್ಕೆ ಬೇಕಾದ ಆಡಳಿತಾತ್ಮಕ ಅನುಕೂಲ, ಅವಕಾಶಗಳನ್ನು ಮಾಡಿಕೊಟ್ಟೆ. ಜಾನಪದ ಅಧ್ಯಯನವು ಸ್ಥಾಪಿತ ಗ್ರಂಥ ಸಂಪಾದನೆಯ ನಿಯಮಗಳನ್ನು ಮೀರಿ ಹೊಸಬಗೆಯ ಸಂಪಾದನೆಯ ತಾತ್ವಿಕತೆಯನ್ನು  ಹೊಂದಬೇಕು ಎಂಬುದು ನನ್ನ ಕಾಳಜಿ. ಅಂದರೆ ಪ್ರೊ.ಡಿ.ಎಲ್‌.ನರಸಿಂಹಾಚಾರ್ಯರ ದಾರಿಗಿಂತ ಭಿನ್ನವಾದ ದಾರಿ. ದಾಸ ಸಾಹಿತ್ಯವನ್ನು ಹಲವು ಹಸ್ತಪ್ರತಿಗಳ ನೆರವಿಲ್ಲದೆ ಕವಿಯ ಊರಿನ ಸಮೀಪ ದೊರೆಯುವ ಒಂದೆರಡು ಹಸ್ತಪ್ರತಿ ಮೂಲಕ, ಕವಿಯ ಮೂಲ ಅಭಿವ್ಯಕ್ತಿಯನ್ನು ಕೀಸುಳಿ ಮಾಡದೆ (ಮಟ್ಟಮಾಡದೆ) ಸಂಪಾದಿಸ ಬೇಕು ಎಂಬುದು ನನ್ನ ಆಗ್ರಹವಾಗಿತ್ತು.

ತುಳು ಪಾಡ್ಡನಗಳ ಸಂಗ್ರಹ ಮಾಡುವಾಗಲೂ ಹೀಗೆ ಮಾಡಿದೆ. ಹಿಂದೆ ಹಾಡಿದವರನ್ನು ಗಾಯಕ, ಗಾಯಕಿ ಎಂದು ಮಾತ್ರ ಹೆಸರಿಸ ಲಾಗುತ್ತಿತ್ತು. ನಾನು ಸಂಪಾದಿಸುವ ವೇಳೆಗೆ ಕಟೀಲಿನ ದಲಿತ ಮಹಿಳೆ ರಾಮಕ್ಕ ಕಟ್ಟಿದ ಪಾಡ್ಡನ ಎಂದು ದಾಖಲಿಸಿದೆ. ಅಕ್ಷರ ವಲಯದ ಕವಿ ಗಳಿಗೆ ಇರುವ ಮನ್ನಣೆಯೇ ಇಂಥ ಜಾನಪದೀಯ ಕವಿ, ಕವಯತ್ರಿಯರಿಗೆ ಸಿಗಬೇಕು ಎಂಬುದು ನನ್ನ ನಿಲುವು. ಹಿಂದಿನ ಅನುಭವಗಳ ಕಾರಣಕ್ಕೆ ತುಳು ಸಾಹಿತ್ಯ ಚರಿತ್ರೆ ಸಂಪಾದಿಸಲು ಸಾಧ್ಯ ವಾಯಿತು.

*ಕನ್ನಡ ಭಾಷೆ ಈಗ ಸಾಂಸ್ಕೃತಿಕ ಸಂಕಟದಲ್ಲಿದೆ, ಅದು ಈ ಪರಿಸ್ಥಿತಿಯಿಂದ ಪಾರಾಗಲು ಪರಿಹಾರಗಳೇನು?
ಜಾಗತೀಕರಣದ ಈ ಸಂದರ್ಭದಲ್ಲಿ ಕನ್ನಡದ ಆತಂಕ ಎಂದರೆ ಅದರ ಬಳಕೆಯ ವಲಯ ಕುಗ್ಗುತ್ತಿರುವುದು. ಕೆಲವೇ ವರ್ಷಗಳಲ್ಲಿ ಕನ್ನಡ ಬಳಸುವ ವರ ಸಂಖ್ಯೆ ಕಡಿಮೆಯಾಗಬಹುದು. ಪರಿಸ್ಥಿತಿ ಹೀಗೆ ಮುಂದುವರೆದರೆ ಭಾಷೆ ಬಡಕಲಾಗುತ್ತದೆ. ಸೃಜನಶೀಲ ಭಾಷೆಯಾಗಿ ಕನ್ನಡ ಉಳಿಯಬಹುದು, ಆದರೆ ಕುಟುಂಬದೊಳಗೆ, ಅಂಗಡಿ–ಬೀದಿಗಳಲ್ಲಿ, ಕೋರ್ಟು, ಕಚೇರಿಗಳಲ್ಲಿ ಕನ್ನಡ ಮಾಯವಾಗಬಹುದು. ಹಿರಿಯರು ಎಳೆಯರಿಗಾಗಿ ತಮ್ಮ ಮನೆ ಮಾತು ಕೈಬಿಟ್ಟು ಇಂಗ್ಲಿಷಿಗೆ ಎಡ  ತಾಕುತ್ತಿದ್ದಾರೆ. ಅಜ್ಜ, ಅಜ್ಜಿ ತಮ್ಮ ಭಾಷೆಯಲ್ಲಿ ಮಾತನಾಡಲಾರದೆ ದಿಕ್ಕೇಡು ಸ್ಥಿತಿಗೆ ತಲುಪಿದ್ದಾರೆ. ನಮ್ಮ ಪರಿಸರದಲ್ಲಿ ಬಹುತ್ವದ ಭಾಷಿಕ ವಾತಾವರಣ ನಾಶವಾಗಿದೆ. ಇದರಿಂದ ಕನ್ನಡ ಶಾಸ್ತ್ರಭಾಷೆಯಾಗಿ ಬೆಳೆ ಯುವುದು ಕನಸೇ ಆದೀತು.

ಇದಕ್ಕೆ ಪರಿಹಾರವಾಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಮೊದಲನೆಯ ಅಥವಾ ಎರಡನೆಯ ಭಾಷೆಯಾಗಿ ಬಳಸಲು ಕಡ್ಡಾಯ ಕಾನೂನು ತರಬೇಕು. ಚಿಕ್ಕ ಮಕ್ಕಳಿಗೆ ಕನ್ನಡ ಸ್ಪೀಕಿಂಗ್‌ ಕೋರ್ಸ್‌ ಆರಂಭಿಸಬೇಕು. ಇದರೊಂದಿಗೆ ಕನ್ನಡದೊಟ್ಟಿಗೆ  ಇರುವ ಸೋಲಿಗ,ಇರುಳ,ಬೆಳಾರಿ ಭಾಷೆಗಳು ಉಳಿಯುವಂತೆ ಯೋಜನೆಗಳನ್ನು ರೂಪಿಸಬೇಕು.

*ನಿಮ್ಮ ಮುಂದಿನ ಯೋಜನೆಗಳೇನು?
ಮಂಗಳೂರಿನ ಬಾಸೆಲ್‌ ಮಿಷನ್‌ನ ಪತ್ರಾಗಾರದಲ್ಲಿರುವ ಹರ್ಮನ್‌ ಮೋಗ್ಲಿಂಗ್‌,  ಕಿಟ್ಟೆಲ್‌  ಇವರ ಸಮಗ್ರ ಸಾಹಿತ್ಯವನ್ನು ಆರೆಂಟು ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆಯಲ್ಲಿ ಸದ್ಯಕ್ಕೆ ತೊಡಗಿಕೊಂಡಿದ್ದೇನೆ. ವಿಶೇಷವಾಗಿ ಕನಕ, ಪುರಂದರರನ್ನು ಮರುಅಧ್ಯಯನಕ್ಕೆ, ಹೊಸ ಆಯಾಮದ ಚರ್ಚೆಗಳಿಗೆ ಒಳಪಡಿಸಬೇಕೆಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT