ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಕನ್ನಡ ಚಿಂತನೆ ಧಾರ್ಮಿಕ ಚೌಕಟ್ಟು ದಾಟಿ ಹೊಸ ದಾರಿಗಳನ್ನು ತೆರೆಯಬೇಕಾಗಿದೆ...

Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಭಾರತೀಯ ಭಾಷೆಗಳ ಶಾಸ್ತ್ರೀಯ ಕೃತಿಗಳನ್ನು ವಿಶ್ವಕ್ಕೆ ಪರಿಚಯಿಸುವ ‘ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ’ ಯೋಜನೆಯ ರೂವಾರಿ ಶೆಲ್ಡನ್ ಪೊಲಾಕ್. ಸಂಸ್ಕೃತದಲ್ಲಿ ವಿದ್ವತ್‌ ಹೊಂದಿರುವ ಪೊಲಾಕ್‌ ಅವರಿಗೆ ಕನ್ನಡ ಹಾಗೂ ಕನ್ನಡದ ಶಾಸ್ತ್ರೀಯ ಪಠ್ಯಗಳ ಪರಿಚಯವೂ ಇದೆ.

2015ರ ‘ಜೈಪುರ ಸಾಹಿತ್ಯ ಹಬ್ಬ’ದಲ್ಲಿ ಭೇಟಿಯಾದ ಈ ಭಾಷಾ ಮೇಷ್ಟರೊಂದಿಗೆ ಕನ್ನಡದ ಲೇಖಕ ವಿಕ್ರಮ ವಿಸಾಜಿ ಅವರು ನಡೆಸಿರುವ ಮಾತುಕತೆಯ ಆಯ್ದಭಾಗ ಇಲ್ಲಿದೆ. ಈಗಲೂ ಪ್ರಸ್ತುತ ಎನ್ನಿಸುವಂತಿರುವ ಈ ಮಾತುಕತೆ ‘ನುಡಿ ಶ್ರೀಮಂತಿಕೆ’ ಕುರಿತ ನಮ್ಮ ಚಿಂತನೆಗಳ ಮರುಪರಿಶೀಲನೆಗೆ ಒತ್ತಾಯಿಸುವಂತಿದೆ.

ಜೈಪುರದಲ್ಲಿನ ಜನವರಿಯ ಚುರುಗುಟ್ಟಿಸುವ ಚಳಿಯಲ್ಲಿ ಶೆಲ್ಡನ್ ಪೊಲಾಕ್ ಕಾಫಿ ಫ್ಲಾಸ್ಕ್ ಹಿಡಿದುಕೊಂಡು ನಿಂತಿದ್ದರು. ದಟ್ಟ ಗಡ್ಡ, ಕೆದರಿದ ಕೂದಲು, ದೊಗಳೆ ಕೋಟು, ಬಗಲ ಚೀಲ, ಜೊತೆಗೆ ದೊಡ್ಡ ನಗು. ನಾನು ಮತ್ತು ಗೆಳೆಯ ಮಹೇಂದ್ರ ಅವರನ್ನು ಹಿಂಬಾಲಿಸಿದೆವು. ಅವರ ‘ಕ್ರೈಸಿಸ್ ಇನ್ ದಿ ಕ್ಲಾಸಿಕ್ಸ್’ ಲೇಖನ ಓದಿರುವುದಾಗಿಯೂ ಅದು ಅನೇಕ ಒಳನೋಟಗಳಿಂದ ಕೂಡಿದೆ ಎಂದೆವು. ನಮ್ಮ ಮೆಚ್ಚಿಗೆಯಲ್ಲಿ ಅವರನ್ನು ಮಾತಿಗೆಳೆಯುವ ಉಮೇದೂ ಇತ್ತು.

ಡಿ.ಆರ್. ನಾಗರಾಜರಿಂದ ಹಿಡಿದು ಪೃಥ್ವಿದತ್ತ ಚಂದ್ರಶೋಭಿ ಅವರವರೆಗೆ ಅವರಿಗೆ ಗೊತ್ತಿರುವ ಎಲ್ಲರ ಹೆಸರು ಹೇಳಿ ಒಂದು ಆತ್ಮೀಯತೆ ಕುದುರುವುದೇ ಅಂತ ಕಣ್ಣುಬಿಟ್ಟೆವು. ಆಸಾಮಿ ಜಪ್ಪೆನ್ನಲಿಲ್ಲ. ಫ್ಲಾಸ್ಕಿನ ಮೇಲೆಯೇ ಅವರ ಆಸಕ್ತಿ ಹೆಚ್ಚಿದ್ದಂತೆ ಕಾಣುತಿತ್ತು.

ಒಮ್ಮೆ ನೇರವಾಗಿ ಕೇಳಿಯೇ ಬಿಡೋಣವೆಂದು– ‘‘ಸರ್ ನಿಮಗೆ ಕೆಲ ಪ್ರಶ್ನೆಗಳನ್ನು ಕೇಳಬೇಕಾಗಿದೆ? ನಿಮ್ಮೊಂದಿಗೆ ಮಾತನಾಡಬಹುದೆ?’’ ಎಂದೆವು. ‘‘ಅದಕ್ಕೇನಂತೆ ಬನ್ನಿ’’ ಎಂದರು. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ನಮ್ಮ ನಡೆ ನಮಗೇ ನಾಚಿಕೆ ತರಿಸಿತ್ತು. ಆ ಜನಜಂಗುಳಿಯಲ್ಲಿ ಅವರು ಚಿಕ್ಕ ಹುಡುಗನಂತೆ ದಾರಿ ಮಾಡಿಕೊಳ್ಳುತ್ತ ಪತ್ರಕರ್ತರ ಗ್ಯಾಲರಿಗೆ ಕರೆದುಕೊಂಡು ಬಂದರು.

‘‘ಶಾಸ್ತ್ರೀಯ ಪಠ್ಯಗಳ ಪ್ರಕಟಣೆಯ ಐಡಿಯಾ ಬಂದದ್ದು ಹೇಗೆ? ಮತ್ತು ಯಾಕೆ?’’ ಅಂದೆ. ಮಾತಿಗಿಳಿದರು ಶೆಲ್ಡನ್ ಪೊಲಾಕ್. ‘‘ಈ ಮೊದಲು ಕ್ಲೇ ಸಂಸ್ಕೃತ ಲೈಬ್ರರಿಯಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದೆವು. ಅವು ಭಾರತೀಯರಿಗೆ ಸಿಗುವುದು ಕಷ್ಟ, ದುಬಾರಿ ಕೂಡ. ನಡುವೆ ಅದಕ್ಕೆ ಹಣಕಾಸಿನ ಸಹಾಯ ನಿಂತುಹೋಯಿತು. ಈಗ ಅಂಥದ್ದೇ ಮತ್ತೊಂದು ಸೀರೀಸ್ ಶುರು ಮಾಡಿದ್ದೇವೆ. ಬೆಲೆ ಕೂಡ ಕಡಿಮೆ.

ಜನರಿಗೆ ತಮ್ಮ ಶ್ರೇಷ್ಠ ಸಾಹಿತ್ಯ ಪರಂಪರೆ ಗೊತ್ತಾಗಬೇಕು. ಜಗತ್ತಿಗೆ ಎಲ್ಲಾ ಭಾಷೆಯ ಶ್ರೇಷ್ಠ ಸಾಹಿತ್ಯ ಪರಂಪರೆ ದಕ್ಕಬೇಕು. ಅಂಥದ್ದೊಂದು ಪ್ರೇರಣೆಯ ಹಿನ್ನೆಲೆಯಲ್ಲಿ ಇದನ್ನು ಮಾಡಲಾಗಿದೆ’’

ಪೊಲಾಕ್‌ ಮತ್ತೆ ನೆನಪು ಮಾಡಿಕೊಳ್ಳತೊಡಗಿದರು. ‘‘ಗ್ರೀಸಿಗೆ, ಚೀನಾಕ್ಕೆ, ಭಾರತಕ್ಕೆ ಭೌಗೋಳಿಕ ಸೀಮೆಗಳಿರಬಹುದು. ಆದರೆ ಅವುಗಳ ಸಾಂಸ್ಕೃತಿಕ ಸೀಮೆಗಳೆಲ್ಲಿವೆ? ಅವುಗಳ ಶ್ರೇಷ್ಠ ಪಠ್ಯಗಳಿಗೆ ಸೀಮೆಗಳೆಲ್ಲಿವೆ? ಭೌಗೋಳಿಕ ಸರಹದ್ದುಗಳ ಚರ್ಚೆ ರಾಜಕಾರಣಿಗಳಿಗಿರಲಿ, ನಾವು ಸಾಂಸ್ಕೃತಿಕ ಸರಹದ್ದುಗಳನ್ನು ಚಲನಶೀಲವಾಗಿಸೋಣ. ಹಲವು ಜಗತ್ತುಗಳನ್ನು ಅರ್ಥಮಾಡಿಕೊಳ್ಳುವ ದಾರಿಯಿದು’’ ಅಂತ ಒಂದು ಕ್ಷಣ ಸುಮ್ಮನಾದರು. 

ನಾನು ಇನ್ನೊಂದು ಪ್ರಶ್ನೆಗೆ ಸಿದ್ಧವಾದೆ. ‘‘ಕನ್ನಡದಲ್ಲಿ ಕ್ಲಾಸಿಕಲ್ ಪದದ ಬಗೆಗೆ ಗೊಂದಲವಿದೆ. ಅಲ್ಲಿ ಗುರುತಿಸುತ್ತಿರುವ ಪಠ್ಯಗಳ ಬಗೆಗೂ ಪ್ರಶ್ನೆಗಳಿವೆ. ಅದನ್ನು ಆಧುನಿಕ ಪಠ್ಯಗಳಿಗೂ ವಿಸ್ತರಿಸಬೇಕು ಎಂಬ ವಾದವಿದೆ. ಅಲ್ಲಿ ಜನಪದ ಮಹಾಕಾವ್ಯಗಳಿಗೆ ಸ್ಥಾನವೇಕಿಲ್ಲ ಎಂಬ ಅಸಮಾಧಾನವಿದೆ?’’ ಎಂದೆ. ‘‘ಹೌದೆ?’’ ಎಂದು ಅಚ್ಚರಿಗೊಂಡ ಅವರು ಅದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ– ‘‘ಕ್ಲಾಸಿಕಲ್ ಪದದ ಬಗೆಗೆ ಗೊಂದಲ ಬೇಡ.

ಸದ್ಯಕ್ಕೆ ಅದನ್ನು ಕ್ರಿ.ಶ. ೧೮೦೦ರ ಒಳಗಿನ ಪಠ್ಯಗಳೆಂದು ಭಾವಿಸೋಣ. ನನಗೆ ಗೊತ್ತು, ಅನೇಕರಿಗೆ ಈ ತರಹದ ವ್ಯಾಖ್ಯಾನ ಹಿಡಿಸುವುದಿಲ್ಲವೆಂದು. ನನ್ನ ಅಭಿಪ್ರಾಯ ಕೂಡ ಕಾಲಾನಂತರದಲ್ಲಿ ಬದಲಾಗಬಹುದು.

ಕ್ಲಾಸಿಕಲ್ ಎಂದರೆ, ಆ ಪಠ್ಯಗಳು ಮನುಷ್ಯನ ಅಸ್ತಿತ್ವದ ಚರಿತ್ರೆಗಳನ್ನು ಹೇಳುತ್ತಿವೆ, ಚಿಂತನೆಯ ಚರಿತ್ರೆ ಹೇಳುತ್ತಿವೆ, ಮನುಷ್ಯ ಪ್ರಜ್ಞೆಯ ವಿಭಿನ ಸ್ತರಗಳನ್ನು ದಟ್ಟವಾಗಿ ಕಾಣಿಸುತ್ತಿವೆ... ಈ ನಿಟ್ಟಿನಲ್ಲಿ ಕ್ಲಾಸಿಕಲ್ ಪದ ನಾವ್ಯಾಕೆ ಬಳಸಬಾರದು ಹೇಳಿ? ನಮ್ಮ ಶ್ರೇಷ್ಠ ಪರಂಪರೆಯೊಂದು ಈ ಪದದ ಆವರಣದಲ್ಲಿದೆ.

ಆವರಣ ಒಡೆದು ನಮ್ಮ ಕಾಲಕ್ಕೆ ಚರ್ಚೆಯನ್ನು ತೆಗೆದುಕೊಂಡು ಹೋಗಬೇಕಲ್ಲವೆ? ಗ್ರೀಕ್, ಲ್ಯಾಟಿನ್‌ನಲ್ಲಿ ಅದ್ಭುತವಾದ ಕೆಲಸವಾಗಿದೆ. ಹಾರ್ವರ್ಡ್ ವಿಶ್ವವಿದ್ಯಾಲಯ ಇಂಥ ಹಲವಾರು ಯೋಜನೆಗಳಲ್ಲಿ ಕೃತಿಗಳನ್ನು ಪ್ರಕಟಿಸಿದೆ. ‘ಮಿಡಿವಲ್ ಲೈಬ್ರರಿ’ ಎನ್ನುವ ಸಿರೀಸ್ ಇದೆ. ‘ಓಲ್ಡ್ ಲೈಬ್ರರಿ ಸಿರೀಸ್’ ಇದೆ. ‘ಲೋ ಕ್ಲಾಸಿಕಲ್ ಸಿರೀಸ್’ ಕೂಡ ಇದೆ. ಯುರೋಪು ಇದನ್ನು ತನ್ನದೇ ನೆಲೆಯಲ್ಲಿ ವಿವರಿಸಿದೆ.

ಅನೇಕ ಸಲ ಶಬ್ದಗಳ ಜಾಲದಲ್ಲಿ ಸಿಲುಕಿ ಅಲ್ಲೇ ಉಳಿಯುವಂತಾಗಬಾರದು. ಅದರಿಂದ ಹೊಸದೊಂದು ಚರ್ಚೆಗೆ ಅವಕಾಶವಾಗುವಂತಿದ್ದರೆ ಕ್ರಿಯಾಶೀಲರಾಗಬೇಕು. ಜಾಗತಿಕ ಬೌದ್ಧಿಕ ಚರ್ಚೆಗಳ ಜೊತೆಯಲ್ಲಿ ಕನ್ನಡದ ಚರ್ಚೆಗಳನ್ನು ಎಳೆದು ತರಬೇಕು.

ಒಟ್ಟಿನಲ್ಲಿ ಭಾರತದ ಶ್ರೇಷ್ಠ ಪಠ್ಯಗಳು ಜಗತ್ತಿಗೆ ತಲುಪುವಂತಾಗಬೇಕು’’. ಪೊಲಾಕ್‌ರ ಮಾತುಗಳನ್ನು ಕೇಳುತ್ತ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಚಂದ್ರಶೇಖರ ಕಂಬಾರರು ಮತ್ತವರ ಸಂಗಾತಿಗಳು ರೂಪಿಸಿದ ಯೋಜನೆಗಳು ಒಂದು ಕ್ಷಣ ಮನಸ್ಸಿನಲ್ಲಿ ಸುಳಿದುಹೋದವು.

‘‘ಈಗ ನೀವು ಆಯ್ಕೆ ಮಾಡಿಕೊಂಡ ಪಠ್ಯಗಳು ಎಂಥವು? ನಿಮ್ಮ ಅನುವಾದದಿಂದ ಮೂಲ ಭಾಷೆಯ ಬೆಳವಣಿಗೆಯನ್ನು ಹೇಗೆ ವಿವರಿಸುವಿರಿ. ಇಂಗ್ಲಿಷ್ ಭಾಷೆಗೆ ದಕ್ಕುವ ಹೊಸ ತಿಳಿವಳಿಕೆಯಿಂದ ಮೂಲ ಭಾಷೆಗೆ ಆಗುವ ಅನುಕೂಲಗಳೇನು?’’ ಎಂದೆ. ಈ ಪ್ರಶ್ನೆಯ ಕುರಿತು ನನಗೇ ಗೊಂದಲವಿತ್ತು.

ಇದನ್ನವರು ಗುರುತಿಸಿದರೊ ಏನೊ. ‘‘ತೇರಿಗಾಥಾ ಭಾರತದಿಂದ ಮರೆಯಾಗಿತ್ತು. ಇದರ ಪ್ರತಿ ಶ್ರೀಲಂಕಾದಲ್ಲಿ ಸಂರಕ್ಷಿಸಲಾಗಿದೆ. ಇದು ಯಾವುದೇ ಕವಿಪ್ರಶಂಸೆಯ ಕೃತಿಯಲ್ಲ. ಇದು ಹೆಣ್ಣಿನ ಹಂಬಲಗಳ ಕೃತಿ. ಮೊದಲ ಸಲ ಇದನ್ನು ಸಂಪೂರ್ಣವಾಗಿ ಇಂಗ್ಲಿಷಿನಲ್ಲಿ ತಂದಿದ್ದೇವೆ. ಇಂಥದ್ದೊಂದು ಕೃತಿ ರಸಿಕರಿಗಾಗಿ ನಿರ್ಮಾಣಗೊಂಡಿದ್ದಲ್ಲ ಎಂಬುದನ್ನು ನೆನಪಿಡಬೇಕು. ಜನ ತಮ್ಮ ಸಾಹಿತ್ಯ ಪರಂಪರೆಯನ್ನು ಮರುಶೋಧಿಸುವಂತಾಗಬೇಕು.

ಅಲ್ಲಿನ ದೃಷ್ಟಿಕೋನಗಳಿಂದ ಕಲಿಯಬೇಕು. ನಮಗೆ ಕ್ಲಾಸಿಕಲ್ ಪಠ್ಯಗಳು, ಕ್ಲಾಸಿಕಲ್ ಮಾಸ್ಟರ್ಸ್, ಕ್ಲಾಸಿಕಲ್ ಸಂಪಾದನೆಗಳು ಬೇಕು. ಅದನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನೇಕ ವಿದ್ವಾಂಸರು ಮಾಡಿದ್ದಾರೆ. ಇಂಗ್ಲಿಷ್ ಜಗತ್ತಿಗೂ ಇವು ಬರಬೇಕು. ಚೇತನ್ ಭಗತ್‌ರನ್ನು ಓದುವ ರೀತಿಯದಲ್ಲ ಇದು.

ನಮ್ಮ ಜನ ನೈಜ ಪಠ್ಯಗಳ ಕಡೆ ಚಲಿಸಬೇಕು. ಸದ್ಯ ಇಂಗ್ಲಿಷ್ ಅನುವಾದದಲ್ಲಿ ತರುತಿದ್ದೇವೆ. ಮುಂದೆ ಹಿಂದಿಯಲ್ಲೂ ಬರಬಹುದು. ಜಗತ್ತಿನ ಬೇರೆ ಬೇರೆ ಭಾಷೆಗೂ ಬರಬಹುದು. ಹಾಗೆಯೇ ಇದನ್ನೆಲ್ಲ ಓದುತ್ತಾ ಓದುತ್ತಾ ಜನ ಮೂಲಭಾಷೆಗಳ ಕಡೆ ಹೋಗುವಂತಾಗಬೇಕೆಂಬುದೇ ನಮ್ಮ ಆಶಯ’’ ಎಂದರು.

ಅಪರೂಪದ ಪ್ರಾಚೀನ ಪಠ್ಯದ ಸಾಧ್ಯತೆಗಳನ್ನು ಮರುಗಳಿಸಿಕೊಳ್ಳಬೇಕಾಗಿದೆ ಎಂದು ಹೇಳುತ್ತಿದ್ದ ಶೆಲ್ಡನ್ ಪೊಲಾಕ್‌ರಿಗೆ ಓರಿಯಂಟಲ್ ವಿರೋಧಿ ಕ್ರಮಗಳು ಇನ್ನಷ್ಟು ಮಾಗಬೇಕಿತ್ತು, ವಸಾಹತೋತ್ತರ ಕ್ರಮಗಳು ಅಷ್ಟು ಉಪಯುಕ್ತವಲ್ಲವೇನೊ  ಅನಿಸಿರಬೇಕು.

‘‘ಆಳವಲ್ಲದ ಓರಿಯಂಟಲಿಸಂ ವಿರೋಧಿ ಕ್ರಮಗಳಿಂದಾಗಲಿ ಅಥವಾ ಅವಸರದ ವಸಾಹತೋತ್ತರ ಕ್ರಮಗಳಿಂದಾಗಲಿ ಶಾಸ್ತ್ರೀಯ ಪಠ್ಯಗಳ ಸರಿಯಾದ ಓದು ಸಾಧ್ಯವೆ ಎಂಬ ಅನುಮಾನ ನನಗಿದೆ’’ ಎಂದ ಅವರು– ‘‘ಮೂಲಭೂತವಾದಿಗಳು ಸೂಚಿಸುತ್ತಿರುವ ಅಧ್ಯಯನ ಕ್ರಮಗಳು ಕೂಡ ನಿರುಪಯುಕ್ತ.

ಪ್ರಾಚೀನ ಪಠ್ಯಗಳ ಭಾಷೆ, ಚರಿತ್ರೆ, ಸಂಸ್ಕೃತಿಯನ್ನು ಕಾಣಲು ಹೊಸದಾದ, ಘನವಾದ ಪರಿಕರಗಳನ್ನು ರೂಪಿಸಿಕೊಳ್ಳಲು ಯತ್ನಿಸಬೇಕು. ಇಂಥ ಪಠ್ಯಗಳಲ್ಲಿರುವ ಚಿಂತನಾಕ್ರಮಗಳ ವಂಶಾವಳಿಯನ್ನು ಮರುಕಟ್ಟಿಕೊಳ್ಳಬೇಕು. ಹೊಸ ಕಾಲದ ಹೊಳಪಿನಲ್ಲಿಟ್ಟು ಓದಬೇಕು.

ಒಂದು ವೇಳೆ ನಮ್ಮ ಪ್ರಾಚೀನ ಪಠ್ಯಗಳಿಂದ ಕಲಿಯುವ ಸಾಮರ್ಥ್ಯ ನಾವು ಕಳೆದುಕೊಂಡರೆ ಅರ್ಥಪೂರ್ಣ ಚಿಂತನಾಕ್ರಮಗಳ ಚರಿತ್ರೆಯನ್ನು ಕಳೆದುಕೊಳ್ಳುತ್ತೇವಷ್ಟೇ. ಅಲ್ಲದೆ, ಇಂಥದ್ದೊಂದು ಚಿಂತನಾ ಕ್ರಮಗಳು ಜಗತ್ತಿನ ಬೇರೆಲ್ಲೆಡೆಯೂ ಸಿಗುವುದಿಲ್ಲ. ಅದ್ಭುತವಾದ ಕಥನಕ್ರಮ, ಜೀವನದೃಷ್ಟಿ, ಅಭಿವ್ಯಕ್ತಿ ಮಾದರಿ, ಸೈದ್ಧಾಂತಿಕ ಸಂಘರ್ಷ-ಸಂವಾದ, ಮುನ್ನೋಟ ಈ ಶಾಸ್ತ್ರೀಯ ಪಠ್ಯಗಳಲ್ಲಿ ಮಿಳಿತಗೊಂಡಿವೆ’’ ಎಂದರು.

‘‘ಸಂಸ್ಕೃತ ಪಠ್ಯಗಳ ಜೊತೆಗೆ ಕೆಲ ಕನ್ನಡದ ಪ್ರಾಚೀನ ಪಠ್ಯಗಳ ಕುರಿತೂ ವಿದ್ವತ್ಪೂರ್ಣ ಬರಹಗಳನ್ನು ಬರೆದಿದ್ದೀರಿ. ಕನ್ನಡದಲ್ಲಿ ಯಾರ ಚರ್ಚೆಗಳಿಂದ ನಿಮಗೆ ಅನುಕೂಲವಾಯಿತು? ಇಲ್ಲಿನ ವಿದ್ವತ್ತಿನಿಂದ ನೀವು ಪಡೆದ ತಿಳಿವಳಿಕೆ ಯಾವ ತರಹದ್ದು? ಕವಿರಾಜಮಾರ್ಗದ ಕುರಿತ ನಿಮ್ಮ ಬರಹ ಕರ್ನಾಟಕದ ಜೊತೆ ಇತರ ದೇಶಭಾಷೆಗಳ ಕೃತಿಗಳ ಕಡೆಗೂ ಚಲಿಸುವಂತೆ ಮಾಡಿತೆ?’’ ಅಂದೆ.

ಕನ್ನಡ ಕರ್ನಾಟಕವೆಂದರೆ ಕೊಂಚ ಗೆಲುವಾದಂತೆ ಕಂಡಬಂದ ಅವರು ಮೊದಲಿಗೆ ನೆನಪಿಸಿಕೊಂಡದ್ದು ಡಿ.ಆರ್. ನಾಗರಾಜ್ ಅವರನ್ನು. ಅವರ ಮಾತಿನ ವರಸೆ ಹೀಗಿತ್ತು. ‘‘ಡಿ.ಎಲ್.ಎನ್, ತೀನಂಶ್ರೀ, ಮುಳಿಯ ತಿಮ್ಮಪ್ಪಯ್ಯ, ಗೋವಿಂದ ಪೈ, ಬಿಎಂಶ್ರೀ ಎಲ್ಲರೂ ಶ್ರೇಷ್ಠ ದರ್ಜೆಯ ಚಿಂತಕರು. ಟಿ.ವಿ. ವೆಂಕಟಾಚಲಶಾಸ್ತ್ರಿ, ಎಂ.ಎಂ. ಕಲಬುರ್ಗಿ, ಎಂ. ಚಿದಾನಂದಮೂರ್ತಿ, ಷ. ಶೆಟ್ಟರ್ ಮಹತ್ವದ ಬರವಣಿಗೆ ಮಾಡಿದ್ದಾರೆ.

ಶೆಟ್ಟರ್ ಅವರು ಬ್ರಿಲಿಯೆಂಟ್ ಆರ್ಕಿಯಾಲಜಿಸ್ಟ್. ಸಾಹಿತ್ಯ ಪಠ್ಯಗಳ ಓದಿನ ಸಂದರ್ಭದಲ್ಲೂ ಅವರ ಈ ಆರ್ಕಿಯಾಲಜಿಸ್ಟ್‌ತನವೇ ಮುನ್ನಲೆಗೆ ಬರುತ್ತದೆ. ಆದರೂ ಕನ್ನಡ ಚಿಂತನೆ ಬ್ರಾಮಿನಿಕಲ್ ಚೌಕಟ್ಟಿನಿಂದ, ಧಾರ್ಮಿಕ ಚೌಕಟ್ಟಿನಿಂದ, ಪ್ರಾದೇಶಿಕ ಚೌಕಟ್ಟಿನಿಂದ ದಾಟಿ ಹೊಸ ದಾರಿಗಳನ್ನು ತೆರೆಯಬೇಕಾಗಿದೆ. ಕನ್ನಡ ಚಿಂತಕರು ಬೌದ್ಧಿಕ ಮಹತ್ವಾಕಾಂಕ್ಷಿಗಳಾಗಬೇಕು.

  ಈಗಾಗಲೇ ಅಂಥದ್ದನ್ನು ಕೆಲವರು ಮಾಡುತಿದ್ದಾರೆಂದು ಕೇಳಿರುವೆ. ಕನ್ನಡದ ನನ್ನ ಓದು ಈ ದೃಷ್ಟಿಯಿಂದ ಸೀಮಿತ’’ ಎಂದರು. ಕನ್ನಡದಲ್ಲಿ ಪ್ರಾಚೀನ ಪಠ್ಯಗಳ ಬಗ್ಗೆ ಬರುತ್ತಿರುವ ಹೊಸ ಬರವಣಿಗೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೆ ಇರುವ ಅಸಹಾಯಕತೆ ಅವರಲ್ಲಿ ಕಂಡುಬರುತಿತ್ತು.

‘‘ನಿಮ್ಮ ಮಾತಿನಲ್ಲಿ ಶಾಸ್ತ್ರೀಯ ಪಠ್ಯಗಳ ಭವಿಷ್ಯದ ಕುರಿತು ಆತಂಕವಿತ್ತು. ನಿಮ್ಮ ಕೆಲ ಲೇಖನಗಳಲ್ಲೂ ಈ ಆತಂಕ ಇದೆ. ಈ ಆತಂಕ ಇಷ್ಟು ದಟ್ಟವಾಗಲು ಕಾರಣ? ಇದು ಎಲ್ಲೆಡೆಯೂ ಕಂಡುಬರುತ್ತಿರುವ ಸ್ಥಿತಿಯೆ? ಅಥವಾ ಬರೀ ಭಾರತದ ವಿದ್ಯಮಾನವೆ?’’ ಎನ್ನುವುದು ನಮ್ಮ ಮುಂದಿನ ಪ್ರಶ್ನೆ.

‘‘ಶಾಸ್ತ್ರೀಯ ಅಧ್ಯಯನದ ಹಿನ್ನಡೆ ಈಗ ಒಂದು ಜಾಗತಿಕ ವಿದ್ಯಮಾನವಾಗಿದೆ. ಕ್ಲಾಸಿಕಲ್ ಐರೋಪ್ಯ ಪಠ್ಯಗಳು, ಇಸ್ಲಾಮಿಕ್ ಪಠ್ಯಗಳು, ಭಾರತದ ವಿವಿಧ ಪ್ರಾದೇಶಿಕ ಭಾಷೆಗಳ ಪಠ್ಯಗಳು, ಚೈನೀಸ್ ಪಠ್ಯಗಳು ಇತ್ಯಾದಿ... ಹೊಸ ಚರ್ಚೆಯಿಂದ, ಸೈದ್ಧಾಂತಿಕ ತಿಳಿವಳಿಕೆಯಿಂದ ವಂಚಿತವಾಗುತ್ತಿವೆ.

ಕ್ಲಾಸಿಕಲ್ ಪಠ್ಯಗಳ ಅಧ್ಯಯನವೆಂದರೆ ಉಪಯುಕ್ತವಲ್ಲದ್ದು, ಹಳೆಕಾಲದ ಕೆಲಸ ಎಂಬ ನಿರಾಸಕ್ತಿ ಬೆಳೆದಿದೆ. ಇಂಥ ನಿರಾಸಕ್ತಿಯ ವಾತಾವರಣ
ವಿಶ್ವವಿದ್ಯಾಲಯಗಳಲ್ಲೆ ಇದೆ. ಇದಕ್ಕೆ ಯಾರು ಕಾರಣ? ನಮ್ಮ ಪಠ್ಯಗಳ ಹೊಸ ಚರ್ಚೆ ನಮಗೇ ಬೇಡವಾಯಿತೆ? ಎರಡನೇ ಅಥವಾ ಮೂರನೇ ದರ್ಜೆಯ ಲೇಖಕರ ಕೃತಿಗಳನ್ನಿಟ್ಟುಕೊಂಡು ಸಂಶೋಧನೆಗೆ ತೊಡಗುತ್ತಾರೆ.

ಪಾಶ್ಚಾತ್ಯರ ಮೂರನೇ ದರ್ಜೆಯ ಲೇಖಕರೂ ಕೂಡ ಇವರ ಸಂಶೋಧನೆಗೆ ಒಳಗಾಗುತ್ತಾರೆ. ಇದನ್ನು ಮೀರಬೇಕಾದುದು ಭಾರತದ ಹೊಸ ಸಂಶೋಧಕರ ಮುಂದಿರುವ ಸವಾಲು’’. ಅವರ ಮಾತು ಹರಡಿಕೊಳ್ಳತೊಡಗಿತು. ಜೊತೆಗೆ, ಇತ್ತೀಚಿನ ಕೆಲವು ಪಿಎಚ್.ಡಿಗಳು ನೆನಪಾಗತೊಡಗಿದವು. ಕನ್ನಡ ಅಧ್ಯಯನ ಮಾಡಿದವರು ಕ್ಲಾಸಿಕಲ್ ಪಠ್ಯಗಳ ಜೊತೆ ಇಟ್ಟುಕೊಳ್ಳುವ ಸಂಬಂಧ ಕೂಡ ಅಷ್ಟಕಷ್ಟೆ ಎನಿಸಿತು.

ಇಂಗ್ಲಿಷ್ ಅಧ್ಯಯನ ಮಾಡಿದ ಬಹುತೇಕರು ಭಾರತದ ಕ್ಲಾಸಿಕಲ್ ಪಠ್ಯಗಳ ಜೊತೆಗೆ ಸಂವಾದ ಬೇಕಾಗಿಲ್ಲವೆಂದೇ ತಿಳಿದಿದ್ದಾರೆ. ಇವರ ನಡುವೆ ಡಿ.ಆರ್.ನಾಗರಾಜ್, ಜಿ.ಎನ್.ದೇವಿ, ಭಾಲಚಂದ್ರ ನೇಮಾಡೆ ಅವರ ಕೆಲಸಗಳ ಮಹತ್ವವೂ ನೆನಪಾಯಿತು.

ಮಾತು ಮುಂದುವರೆದುದು, ‘‘ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಭಾರತದಲ್ಲಿ ಪ್ರಾಚೀನ ಪಠ್ಯಗಳ ಅಧ್ಯಯನ ಕುಸಿಯುತ್ತಿರುವುದಕ್ಕೆ ನಿಮ್ಮ ಪ್ರಕಾರ ಯಾವ ಕಾರಣಗಳನ್ನು ಗುರುತಿಸಿದ್ದೀರಿ’’ ಪ್ರಶ್ನೆಯೊಂದಿಗೆ. ಅವರ ಉತ್ತರ ಸಿದ್ಧವಾಗಿಯೇ ಇತ್ತು. ‘‘ಶಾಸ್ತ್ರೀಯ ಅಧ್ಯಯನ ಕ್ರಮಗಳನ್ನು ಆಳವಾಗಿ ಯೋಚಿಸದೆ ಅದನ್ನು ಶಿಕ್ಷಣದ ಒಂದು ಸಾಮಾನ್ಯ ಭಾಗವಾಗಿ ಮಾತ್ರ ಇಡಲಾಯಿತು.

ಹತ್ತು ಪತ್ರಿಕೆಗಳಲ್ಲಿ ಇದು ಕೂಡ ಒಂದು ಪತ್ರಿಕೆಯಾಗಿಬಿಡ್ತು. ಹೀಗೆ ಸುಮ್ಮನೆ ಯಾವ ಸಿದ್ಧತೆಯಿಲ್ಲದೆ ಕಲಿಸಹೊರಟರೆ ಇದರ ವಿದ್ವತ್ತು ದಕ್ಕುವುದಿಲ್ಲವೆಂಬ ಸಣ್ಣ ಊಹೆಯನ್ನೂ ಕೂಡ ಮಾಡಲಿಲ್ಲ. ಶಾಸ್ತ್ರೀಯ ಸಾಹಿತ್ಯಾಧ್ಯಯನದ ಪ್ರತ್ಯೇಕ ಕ್ರಮಗಳನ್ನು ಕಟ್ಟಿಕೊಳ್ಳಬೇಕಾಗಿದೆ. ಇಲ್ಲವಾದರೆ ಹತ್ತರಲ್ಲಿ ಹನ್ನೊಂದಾಗಿ ನಿಧಾನವಾಗಿ ವಿದ್ಯಾರ್ಥಿಗಳ ಪ್ರಜ್ಞೆಯಿಂದ ದೂರ ಸರಿಯುತ್ತಲೇ ಹೋಗುತ್ತದೆ’’ ಎಂದರು.

ಶಾಸ್ತ್ರೀಯ ಅಧ್ಯಯನಕ್ಕೆ ಬೇಕಾದ ಸಿದ್ಧತೆಯನ್ನು ಭಾರತದಂಥ ದೇಶ ನಿರ್ವಹಿಸಿದ ಕುರಿತು ಅವರಿಗೆ ಸಮಾಧಾನವಿರಲಿಲ್ಲ. ‘‘ಶಾಸ್ತ್ರೀಯ ಪಠ್ಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಬರುತಿದ್ದ ಜರ್ನಲ್‌ಗಳಲ್ಲಿ ಮೊದಲಿನ ಗುಣಮಟ್ಟ ಉಳಿದಿಲ್ಲ.

ಶಾಸ್ತ್ರೀಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಒಂದಾದರೂ ಅಂತರರಾಷ್ಟ್ರೀಯ ಜರ್ನಲ್ ತರಲು ಯಾರೂ ಸಿದ್ಧತೆ ನಡೆಸಿದಂತಿಲ್ಲ. ಇದೆಲ್ಲದರ ಒಟ್ಟಾರೆ ಪರಿಣಾಮವೆಂದರೆ ಕಳೆದ ನಲವತ್ತು ವರ್ಷಗಳಲ್ಲಿ ಶಾಸ್ತ್ರೀಯ ಪಠ್ಯಗಳ ಅಧ್ಯಯನ ಭಾರತದೊಳಗೆ ತೀವ್ರಗತಿಯಲ್ಲಿ ಕುಸಿದಿದೆ’’ ಎಂದು ಮೌನವಾದರು.

ಶೆಲ್ಡನ್ ಪೊಲಾಕ್‌ರ ಓದಿನ ಹರುಹು ಕೂಡ ದೊಡ್ಡದೆ. ‘‘ಡಿ.ಡಿ. ಕೋಸಾಂಬಿಯವರ ಬರಹಗಳನ್ನೋದಿ ನಾನು ಕಲಿತಿರುವೆ. ಅವರ ಶಾಸ್ತ್ರೀಯ ಅಧ್ಯಯನ ಕ್ರಮಗಳು, ಚರಿತ್ರೆ ಓದುವ ವಿಧಾನಗಳು, ಹಳೆಯ ಪಠ್ಯಗಳೊಂದಿಗಿನ ಸಂವಾದದ ಬಗೆಗಳು ಶ್ರೇಷ್ಠ ಮಟ್ಟದ್ದು. ನೋಡಿ ಸ್ವಾತಂತ್ರ್ಯಪೂರ್ವದ ಸಂಸ್ಕೃತ ವಿದ್ವಾಂಸರ ಉತ್ತರಾಧಿಕಾರಿಗಳೆಂದು ಈಗ ಯಾರನ್ನಾದರೂ ಹೆಸರಿಸಲು ತುಂಬಾ ಕಷ್ಟವಾಗುತ್ತದೆ.

ಎಸ್.ಎನ್. ದಾಸಗುಪ್ತ, ಎಸ್.ಕೆ. ಡೇ, ಮೈಸೂರು ಹಿರಿಯಣ್ಣ, ಪಿ.ವಿ. ಕಾಣೆ, ಎಸ್. ರಾಧಾಕೃಷ್ಣನ್, ವೆಂಕಟ್ ರಾಘವನ್, ವಿ.ಎಸ್. ಸುಕ್ತಂಕರ್ ಭಾರತದ ಹಲವು ಪ್ರದೇಶಗಳಿಂದ ಸಂಸ್ಕೃತ ವಿದ್ವಾಂಸರು ಮೂಡಿಬಂದಿದ್ದರು. ಸಂಸ್ಕೃತ ಸಾಹಿತ್ಯ ಕುರಿತು ಹಾಕಿಕೊಂಡ ಯೋಜನೆಗಳೆಲ್ಲ ಮೂವತ್ತು ನಲವತ್ತು ವರ್ಷಗಳ ಹಿಂದಿನದ್ದು. ಪ್ರಾಕೃತ ಹಾಗು ಅಪಭ್ರಂಶಗಳ ಅಧ್ಯಯನವಂತೂ ಸಂಪೂರ್ಣ ಸ್ಥಗಿತಗೊಂಡಿದೆ.

ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಗೆ ಮಾತ್ರವಲ್ಲ, ಭಾರತದ ಉಳಿದ ಭಾಷೆಗಳ ಮಟ್ಟಿಗೂ ಈ ಮಾತು ನಿಜ’’ ಎಂದರು. ‘‘ಆದರೆ ಪ್ರಾದೇಶಿಕ ಭಾಷೆಗಳಲ್ಲಿ ವಾತಾವರಣ ಕೊಂಚಮಟ್ಟಿಗೆ ಆಶಾದಾಯಕವಾಗಿರಬಹುದೇನೊ’’ ಎಂತಲೂ ಮಾತು ಸೇರಿಸಿದರು.

‘‘ಶಾಸ್ತ್ರೀಯ ಅಧ್ಯಯನಕ್ಕೆ ಬೇಕಾದ ವಾತಾವರಣ ರೂಪುಗೊಳ್ಳುವಿಕೆಗೆ ನಿಮ್ಮದೇ ವಿಚಾರಗಳಿವೆ ಎಂದಿದ್ದಿರಿ. ಏನವು? ಈಗ ತತ್ಕಾಲದ ಯೋಜನೆಗಳಿಂದ ಅಷ್ಟು ಪ್ರಯೋಜನವಿಲ್ಲವೇನೊ? ದೀರ್ಘಕಾಲದ ಯೋಜನೆಗಳು ಬೇಕಾಗಬಹುದು. ಯಾಕೆಂದರೆ ಇದು ಅಭಿರುಚಿ ಮತ್ತು ಪರಿಶ್ರಮದಿಂದ ರೂಪುಗೊಳ್ಳಬೇಕಾದ ವಿದ್ವತ್ತು’’ ಎನ್ನುವ ಮಾತಿಗೆ– ‘‘ಸಮಸ್ಯೆಯೊಂದು ಹುಟ್ಟಿದಾಗ ಅದರ ನಿವಾರಣೆಯ ಮಾರ್ಗಗಳೂ ಇರುತ್ತವೆ.

ಅದನ್ನು ಕಂಡುಕೊಳ್ಳಬೇಕಷ್ಟೆ. ಮಾನವಿಕ ಮತ್ತು ಶಾಸ್ತ್ರೀಯ ಭಾಷೆಗಳ ಅಧ್ಯಯನದಲ್ಲಿ ಹುಟ್ಟಿಕೊಂಡ ತೊಡಕುಗಳನ್ನು ನಿವಾರಿಸಬೇಕಾಗಿದೆ. ಅದಕ್ಕಾಗಿ ನಾವು ಕೆಲವರು ಕೆಲ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ’ಯ ಅನುವಾದ ಮತ್ತು ಪ್ರಕಟಣಾ ಯೋಜನೆ ಕೂಡ ಅದರಲ್ಲೊಂದು. ಇದು ಯಾರೊ ಒಬ್ಬರಿಂದ ಇಬ್ಬರಿಂದ ಸಾಧ್ಯವಾಗುವಂಥದ್ದಲ್ಲ.

ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಒಟ್ಟಿಗೆ ಸೇರಿ ಕೆಲ ಕೃತಿಗಳನ್ನು ಹೊರತರುತ್ತಿದ್ದೇವೆ. ಬೇರೆಯವರೂ ಭಿನ್ನವಾದ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಒಟ್ಟಾರೆ ಶಾಸ್ತ್ರೀಯ ಪಠ್ಯಗಳ ಹೊಸ ಸಾಧ್ಯತೆಗಳಿಗೆ ಕಾರಣವಾಗಬೇಕಷ್ಟೆ. ಇಲ್ಲವಾದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ದುಃಖ, ದುಃಖದ ಕಾರಣಗಳು, ದುಃಖದ ನಿವಾರಣೆ– ಈ ದಾರಿಯಲ್ಲಿ ನಂಬಿಕೆಯಿಟ್ಟವನು ನಾನು’’ ಎಂದರು.

ಅವರಲ್ಲಿ ಈ ಕುರಿತು ಇನ್ನಷ್ಟು ಚಿಂತನೆಗಳಿದ್ದವು. ‘‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ಸ್ಟಡೀಸ್ ಸಂಸ್ಥೆಯನ್ನು ಸ್ಥಾಪಿಸಿ, ಭಾರತದ ಬೇರೆ ಬೇರೆ ಭಾಷೆಗಳಲ್ಲಿನ ಶಾಸ್ತ್ರೀಯ ಪಠ್ಯಗಳ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕು. ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’, ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’, ‘ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌’ ತರಹ ಈ ಸಂಸ್ಥೆ ಕೆಲಸ ಮಾಡಬೇಕು.

ಫಿಲಾಲಜಿಯ ವಿಭಾಗವನ್ನು ಕೆಲವಾದರೂ ವಿಶ್ವವಿದ್ಯಾಲಯಗಳಲ್ಲಿ ತೆರೆಯಬೇಕು. ಐಐಟಿಗಳಲ್ಲಿರುವ ಮಾನವಿಕಗಳಗನ್ನು ವೈವಿಧ್ಯಮಯಗೊಳಿಸಬೇಕು. ಶಾಸ್ತ್ರೀಯ ಸಾಹಿತ್ಯದ ಮೇಲೆ ಪ್ರಶಸ್ತಿಗಳನ್ನು ಸ್ಥಾಪಿಸುವುದು ಸುಲಭ.

ಕೆಲ ವರ್ಷಗಳ ತರುವಾಯ ಈ ಪ್ರಶಸ್ತಿಗಳನ್ನು ಯಾರಿಗೆ ಕೊಡುವಿರಿ?’’ ಎಂದು ಪ್ರಶ್ನಾರ್ಥಕವಾಗಿ ದಿಟ್ಟಿಸಿದರು. ಪೊಲಾಕ್‌ರ ಮಾತುಗಳ ಗುಂಗಿನಲ್ಲೇ ಅವರಿಗೆ ಧನ್ಯವಾದ ಹೇಳಿ ಹೊರಡುವಷ್ಟರಲ್ಲಿ, ಅವರು ನಮಗಿಂತ ಮುಂಚೆಯೆ ಮೆಟ್ಟಿಲಿಳಿದು ಜನಜಂಗುಳಿಯಲ್ಲಿ ಮಾಯವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT