ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₨506 ಕೋಟಿ ಮೌಲ್ಯದ ಆಸ್ತಿ ವಶ

ಕಾಚರಕನಹಳ್ಳಿಯಲ್ಲಿ ಒತ್ತುವರಿ ತೆರವಿಗೆ ವಿರೋಧ, ಉದ್ವಿಗ್ನ
Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರು­ವ­ವರ ವಿರುದ್ಧ ಗದಾಪ್ರಹಾರವನ್ನು ಮುಂದು­ವರಿಸಿರುವ ನಗರ ಜಿಲ್ಲಾಡಳಿತ,  ಶನಿವಾರ ಒಂದೇ ದಿನ ₨506 ಕೋಟಿ ಮೌಲ್ಯದ 106 ಎಕರೆ ಜಾಗವನ್ನು ವಶಕ್ಕೆ ಪಡೆದಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಕಾಚರಕನಹಳ್ಳಿಯಲ್ಲಿ ನಾಲ್ಕು ದೇವ­ಸ್ಥಾನ­ಗಳನ್ನು ತೆರವು ಮಾಡಲು ಜಿಲ್ಲಾ­ಡಳಿತ ಮುಂದಾಗಿದೆ ಎಂದು ಆರೋಪಿಸಿ ಸಾವಿರಾರು ಭಕ್ತರು ಪ್ರತಿಭಟನೆ ನಡೆಸಿ­ದ್ದರಿಂದ ಸ್ಥಳದಲ್ಲಿ ಕೆಲವು ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಂಜೆ ವೇಳೆಗೆ ಇಲ್ಲಿನ 33 ಎಕರೆ ಒತ್ತುವರಿ­ಯನ್ನು ಜಿಲ್ಲಾಡಳಿತ ತೆರವು ಮಾಡಿತು. ಈ ಜಾಗದ ಮೌಲ್ಯ ₨360 ಕೋಟಿ.

ಗ್ರಾಮದ ಸರ್ವೆ ಸಂಖ್ಯೆ 153­ರಲ್ಲಿರುವ ಕಾಚರಕನಹಳ್ಳಿ ಕೆರೆ ದಶಕಗಳ ಹಿಂದೆಯೇ ಒತ್ತುವರಿಯಾಗಿತ್ತು. ಈ ಕೆರೆಯ ವಿಸ್ತೀರ್ಣ  57 ಎಕರೆ. ಬೆಂಗ­ಳೂರು ಅಭಿವೃದ್ಧಿ ಪ್ರಾಧಿಕಾರವು ದಶಕ­ಗಳ ಹಿಂದೆ ಕೆರೆ ಅಂಗಣದ 20 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಿ ಹಂಚಿತ್ತು. ವರ್ಷಗಳು ಕಳೆದಂತೆ ಇಡೀ ಕೆರೆ ಅಂಗಳ ಒತ್ತುವರಿಗೆ ಒಳಗಾಯಿತು.

‘ಕೆಲವು ವರ್ಷಗಳ ಹಿಂದೆ ಕೆರೆ ಅಂಗಳದಲ್ಲಿ ಸ್ಥಳೀಯ ರಾಜಕಾರಣಿ­ಯೊ­ಬ್ಬರು ಸಣ್ಣ ದೇವಸ್ಥಾನವೊಂದನ್ನು ನಿರ್ಮಿ­ಸಿದ್ದರು. ಬಳಿಕ ಈ ದೇವಸ್ಥಾನದ ಹೆಸರನ್ನು ‘ಕೋದಂಡರಾಮ ದೇವ­ಸ್ಥಾನ’ ಎಂದು ಬದಲಿಸಲಾಯಿತು. ಈ ದೇವಸ್ಥಾನ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಪಕ್ಕ­ದಲ್ಲೇ ಸಾಯಿಬಾಬಾ ಮಂದಿರ, ಇಸ್ಕಾನ್, ಕನ್ನಿಕಾ ಪರಮೇಶ್ವರಿ ದೇವ­ಸ್ಥಾನ­ಗಳು ನಿರ್ಮಾಣವಾದವು. ಮೂರು ಸಭಾಂಗಣಗಳು ತಲೆ ಎತ್ತಿದವು’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಕೆರೆ ಅಂಗಳದ ಒತ್ತುವರಿಯ ವಿರುದ್ಧ ಕೆಲವು ಸ್ಥಳೀಯರು ಜಿಲ್ಲಾಡಳಿತ ಸೇರಿ­ದಂತೆ ಸಂಬಂಧಿತ ಇಲಾಖೆಗಳ ಗಮನಕ್ಕೆ ತಂದಿದ್ದರು. ಜಿಲ್ಲಾಡಳಿತ ಈ ಸಂಬಂಧ ಒತ್ತುವರಿದಾರರಿಗೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ  ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಕೋರ್ಟ್‌ ಮೊರೆ ಹೋಗಿದ್ದರು. ದೇವಸ್ಥಾನ ತೆರವಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಉಳಿದ 33 ಎಕರೆಗಳ ಒತ್ತುವರಿ ತೆರವಿಗೆ  ಸಿದ್ಧತೆ ನಡೆಸಿತು. ನಾಲ್ಕು ದಿನಗಳ ಹಿಂದೆ ಅಧಿಕಾರಿಗಳು ಸಮೀಕ್ಷೆಯನ್ನೂ ನಡೆಸಿ­ದರು. ಜಿಲ್ಲಾಡಳಿತ ದೇವಸ್ಥಾನ­ವನ್ನು ತೆರವು ಮಾಡಲು ಮುಂದಾಗಿದೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿತು.

ಶನಿವಾರ ಬೆಳಿಗ್ಗೆ ಆರು ಗಂಟೆಗೆ ಸಾವಿ-­ರಾರು ಭಕ್ತರು ದೇವಸ್ಥಾನದ ಮುಂಭಾ­ಗ­ದಲ್ಲಿ ಜಮಾಯಿಸಿ ಪ್ರತಿಭ­ಟನೆ ನಡೆಸಿ­ದರು. ಜಿಲ್ಲಾಧಿಕಾರಿ ವಿ.ಶಂಕರ್ ಸೇರಿ­ದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ­ದಾಗ ಭಕ್ತಾದಿಗಳು ಆಕ್ರೋಶ ಹೊರ ಹಾಕಿದರು.
‘ಯಾವುದೇ ಕಾರಣಕ್ಕೂ ದೇವಸ್ಥಾನ­ಗ­­ಳನ್ನು ತೆರವಿಗೆ ಅವಕಾಶ ನೀಡುವುದಿಲ್ಲ. ಸರ್ಕಾರ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಪೂಜಾ ಮಂದಿರ ಇರುವ ನಾಲ್ಕು ಎಕರೆ ಆರು ಗುಂಟೆ ಜಮೀನಿನ ಒತ್ತುವರಿ ತೆರವಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ’ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದರು.
ಬಳಿಕ ಜಿಲ್ಲಾಧಿಕಾರಿ ಅವರು ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿ ದೇವ­ಸ್ಥಾನ ತೆರವು ಮಾಡುವುದಿಲ್ಲ ಎಂದು ಮನವರಿಕೆ ಮಾಡಿದರು. ದೇವಸ್ಥಾನ­ವನ್ನು ಇನ್ನಷ್ಟು ಅಭಿವೃದ್ಧಿಪಡಿಸ­ಲಾ­ಗುವುದು ಎಂದು ಭರವಸೆ ನೀಡಿದರು.

‘ದೇವಸ್ಥಾನಗಳ ಬಿಟ್ಟು ಉಳಿದ ಜಾಗದ ಒತ್ತುವರಿ ತೆರವಿಗೆ ಅಭ್ಯಂತರ ಇಲ್ಲ’ ಎಂದು ಆಡಳಿತ ಮಂಡಳಿ ಸದ­ಸ್ಯರು ಒಪ್ಪಿದರು. ಬಳಿಕ ಅಧಿಕಾರಿಗಳು 33 ಎಕರೆ ಒತ್ತುವರಿಯನ್ನು ತೆರವು­ಗೊಳಿ­ಸಿದರು. ಸೋಮವಾರದಿಂದ ಈ ಜಾಗಕ್ಕೆ ಬೇಲಿ ಹಾಕುವ ಕಾರ್ಯ ಆರಂಭ­ವಾ­ಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

45 ಎಕರೆ ಒತ್ತುವರಿ ತೆರವು: ಬೆಂಗ­ಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಗ್ರಾಮದ ಸರ್ವೆ ಸಂಖ್ಯೆ 150ರಲ್ಲಿ 45 ಎಕರೆ ಸರ್ಕಾರಿ ಜಮೀನಿನ ಒತ್ತುವರಿ­ಯನ್ನು ತಹಶೀಲ್ದಾರ್‌ ಬಿ.ಆರ್‌.­ದಯಾನಂದ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಕೆರೆ ಅಂಗಳವನ್ನು 42 ಮಂದಿ ಒತ್ತುವರಿ ಮಾಡಿಕೊಂಡಿ­ದ್ದರು. ಬಹು­ತೇಕ ಭಾಗದಲ್ಲಿ ಕೃಷಿ ಚಟುವಟಿಕೆ ನಡೆ­ಯು­ತ್ತಿತ್ತು. ಒತ್ತುವರಿದಾರರು ರಸ್ತೆ ನಿರ್ಮಿ­ಸಿದ್ದರು. ಇತ್ತೀಚೆಗೆ ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಆರಂಭ­ವಾಗಿತ್ತು. ಅಧಿಕಾರಿಗಳು ಒತ್ತುವರಿ ತೆರವು­ಗೊಳಿಸಿ ಬೇಲಿ ಹಾಕಿದರು. ಇದನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ: ಅಕ್ರಮ ದಾಖಲೆ ಸೃಷ್ಟಿಸಿ ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಮರಳು­ಕುಂಟೆ ಹಾಗೂ ಚಿಕ್ಕಜಾಲ ಗ್ರಾಮ­ದಲ್ಲಿ ಆರು ಮಂದಿ 14.29 ಎಕರೆ ಜಾಗವನ್ನು ಒತ್ತುವರಿ ಮಾಡಿ­ಕೊಂ­ಡಿದ್ದರು. ಕೆಲವು ಕಡೆಗಳಲ್ಲಿ ಒತ್ತು­ವ­ರಿ­ದಾರರು ನೀಲಗಿರಿ ಗಿಡಗಳನ್ನು ನೆಟ್ಟಿ­ದ್ದರು. ಚಿಕ್ಕಜಾಲ ಗ್ರಾಮದಲ್ಲಿ 3–4  ಶೆಡ್‌­ಗ­ಳನ್ನು ನಿರ್ಮಿಸಿದ್ದರು. ಈ ಜಾಗದ ದಾಖಲೆಗಳನ್ನು ರದ್ದುಗೊಳಿಸಬೇಕು ಎಂದು ವಿನಂತಿಸಿ ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವ ಸಲ್ಲಿಸಿ­ದ್ದರು.

ವಿಚಾರಣೆ ನಡೆಸಿದ  ಜಿಲ್ಲಾಧಿ­ಕಾರಿ ಅವರು ಈ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲು ಆದೇಶಿಸಿದ್ದರು. ತಹ­ಶೀಲ್ದಾರ್‌ ಬಾಳಪ್ಪ ಹಂದಿಗುಂದ ನೇತೃತ್ವ­ದಲ್ಲಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವು ಮಾಡಲಾಯಿತು. ಗೋಮಾಳದ ಮಾರುಕಟ್ಟೆ ಮೌಲ್ಯ ₨48 ಕೋಟಿ.

ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಗ್ರಾಮದ ಸರ್ವೆ ಸಂಖ್ಯೆ 147ರಲ್ಲಿ ಒಂದು ಎಕರೆ 32 ಗುಂಟೆ ಸರ್ಕಾರಿ ಗುಂಡು­ತೋಪು, ಜಿಗಳ ಗ್ರಾಮದ ಸರ್ವೆ ಸಂಖ್ಯೆ 29ರಲ್ಲಿ 1 ಎಕರೆ 32 ಗುಂಟೆ ಸರ್ಕಾರಿ ಗುಂಡು ತೋಪು, ಕೂತ­ಗಾನ­ಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 41ರಲ್ಲಿ 3 ಎಕರೆ 32 ಗುಂಟೆ ಸರ್ಕಾರಿ ಕೆರೆ ಜಮೀನಿನ ಒತ್ತುವರಿಯನ್ನು ತಹಶೀ­ಲ್ದಾರ್‌ ಅನಿಲ್‌ ಕುಮಾರ್‌ ನೇತೃತ್ವದಲ್ಲಿ ತೆರವು ಮಾಡಲಾಯಿತು.

ಒತ್ತುವರಿಗೆ ಠಾಣೆ ನಿರ್ಮಾಣ ಕೊಡುಗೆ!
ವೈಟ್‌ಫೀಲ್ಡ್‌ ಗ್ರಾಮದಲ್ಲಿ ಪ್ರೆಸ್ಟೀಜ್‌ ಸಮೂಹ  ಮಾಡಿಕೊಂಡಿದ್ದ ಒತ್ತುವರಿ­ಯನ್ನು ತೆರವು ಮಾಡಲಾಯಿತು. ಗ್ರಾಮದ ಸರ್ವೆ ಸಂಖ್ಯೆ 2/1ಸಿ, 2/1ಡಿಯಲ್ಲಿ ಒಂದು ಎಕರೆ ಆರು ಗುಂಟೆ ಜಾಗದಲ್ಲಿ ‘ಬಿ’ ಖರಾಬ್‌ ಜಮೀನು ಇದೆ. ಈ ಜಾಗವನ್ನು ಸಂಸ್ಥೆ­ಯೊಂದು ಒತ್ತುವರಿ ಮಾಡಿಕೊಂಡಿತ್ತು. ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡುವ ಸಲುವಾಗಿ ಎರಡು ವರ್ಷಗಳ ಹಿಂದೆ ಸಂಸ್ಥೆಯ ಜಾಗವನ್ನು ಪ್ರೆಸ್ಟೀಜ್‌ ಸಮೂಹ ಖರೀದಿಸಿತ್ತು.

ಪಕ್ಕದಲ್ಲಿದ್ದ ‘ಬಿ’ ಖರಾಬು ಜಮೀನಿಗೂ ಕಾಂಪೌಂಡ್‌ ಹಾಕಿತ್ತು. ಈ ಜಾಗವನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಪರ್ಯಾಯವಾಗಿ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ಕಟ್ಟಡ ನಿರ್ಮಿಸಿಕೊಡುವುದಾಗಿಯೂ ಭರವಸೆ ನೀಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಾನೂನಿನಲ್ಲಿ ‘ಬಿ’ ಖರಾಬು ಜಾಗ ಮಂಜೂರು ಮಾಡಲು ಅವಕಾಶ ಇಲ್ಲದ ಕಾರಣ ಪ್ರೆಸ್ಟೀಜ್‌ ಸಮೂಹದ ಮನವಿಯನ್ನು ರಾಜ್ಯ ಸರ್ಕಾರ ಮಾನ್ಯ ಮಾಡಿರಲಿಲ್ಲ. ಈ ಒತ್ತುವರಿಗೆ ಸ್ಥಳೀಯರಿಂದಲೂ ವಿರೋಧ ವ್ಯಕ್ತವಾಗಿತ್ತು. ಒತ್ತುವರಿ ತೆರವು ಮಾಡುವಂತೆ ಕೆಲವು ದಿನಗಳ ಹಿಂದೆ ಪ್ರೆಸ್ಟೀಜ್‌ ಸಮೂಹಕ್ಕೆ ಕೆ.ಆರ್‌.ಪುರ ತಹಶೀಲ್ದಾರ್‌ ಡಾ.ಬಿ.ಆರ್‌.ಹರೀಶ್‌ ನಾಯಕ್‌ ಅವರು ನೋಟಿಸ್‌ ನೀಡಿದ್ದರು. ನೋಟಿಸ್‌ಗೆ ಸ್ಪಂದಿಸದ ಕಾರಣ ಅಧಿಕಾರಿಗಳು ಶನಿವಾರ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿ ಬೇಲಿ ಹಾಕಿದರು. ಈ ಜಾಗದ ಮಾರುಕಟ್ಟೆ ಮೌಲ್ಯ ₨10 ಕೋಟಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT