ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 827 ಕೋಟಿ ಮೌಲ್ಯದ ಆಸ್ತಿ ಜಿಲ್ಲಾಡಳಿತದ ವಶಕ್ಕೆ

ಹೊಸಕೆರೆಹಳ್ಳಿ ವರ್ತುಲ ರಸ್ತೆ ಪಕ್ಕದ 15 ಎಕರೆ ಜಾಗ ಒತ್ತುವರಿ ತೆರವು
Last Updated 25 ಜುಲೈ 2015, 20:31 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೆರೆಹಳ್ಳಿಯ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಪಕ್ಕದ ₹ 800 ಕೋಟಿ ಮೌಲ್ಯದ 15 ಎಕರೆ 27 ಗುಂಟೆ (ವರ್ತುಲ ರಸ್ತೆ ಸೇರಿ)  ಜಾಗವನ್ನು ಜಿಲ್ಲಾಡಳಿತ ಶನಿವಾರ ವಶಕ್ಕೆ ಪಡೆದಿದೆ. ಜಿಲ್ಲೆಯಲ್ಲಿ ಒಟ್ಟು ₹ 827 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಈ ಭೂಮಿಯ ಮಧ್ಯೆ ವರ್ತುಲ ರಸ್ತೆ ಹಾದು ಹೋಗಿದ್ದು, ಜನನಿಬಿಡ ಪ್ರದೇಶವಾದ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ಶೆಡ್ ನಿರ್ಮಾಣ ಮಾಡಿ ಅನೇಕ ಬಗೆಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು.

‘ರಾಜಧಾನಿ ವೈನ್ಸ್, ಪಲ್ಲವಿ ಡಾಬಾ, ಸಿಮೆಂಟ್ ಮಾರಾಟ ಅಂಗಡಿ, ಟಿಂಬರ್ ಮಾರಾಟ ಮಳಿಗೆ, ಮರದ ಪೀಠೋಪಕರಣ ಮಳಿಗೆ, ಗ್ರೀನ್ ಲ್ಯಾಂಡ್ ರೆಸ್ಟೋರೆಂಟ್, ಸೌದೆ ಮಂಡಿ, ಕಾರುಗಳ ಅಲಂಕಾರಿಕ ಸಾಮಗ್ರಿ ಮಳಿಗೆಯಾದ ರೈನ್‌ ಬೊ ಕಾರ್ ಡೆಕೋರ್ಸ್ಸ್, ಅಡಿಗ ಅಟೊಮೊಬೈಲ್ ಶೋರೂಂ, ಮೂರು ಗುಜರಿ ಅಂಗಡಿಗಳು, ಬಾದಶಹ ವೀಲ್ ಲೈಫ್ ಅಂಡ್ ಅಲೈನ್‌ಮೆಂಟ್‌, ಗುಲ್ ಮೊಹರ್ ಸಿಮೆಂಟ್ ಉಪಕರಣ ತಯಾರಿಕಾ ಸಂಸ್ಥೆ, ‘ಎ ಟು ಝಡ್ ಸಲ್ಯೂಷನ್ಸ್’ ಎಂಬ ರಿಯಲ್ ಎಸ್ಟೇಟ್ ಕಚೇರಿ, ಬಸ್ ರಿಪೇರಿ ಗ್ಯಾರೇಜ್ ಮತ್ತಿತರ ಅಂಗಡಿಗಳು ಇಲ್ಲಿದ್ದವು. ಈ ಜಾಗವನ್ನು ನಂಜುಂಡಸ್ವಾಮಿ ಎಂಬವರು ಒತ್ತುವರಿ ಮಾಡಿಕೊಂಡು ಬಾಡಿಗೆಗೆ ನೀಡಿದ್ದರು. ಇವುಗಳಿಂದ ಅವರು ತಿಂಗಳಿಗೆ ₹ 12 ಲಕ್ಷ  ಬಾಡಿಗೆ ಪಡೆಯುತ್ತಿದ್ದರು’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಗಡಿಗಳ ಮಾಲೀಕರಿಗೆ ಕೂಡಲೇ  ಸ್ವಯಂ ತೆರವುಗೊಳಿಸಲು ಸೂಚಿಸಲಾಯಿತು. ಇಲ್ಲದಿದ್ದರೆ ಬುಧವಾರದಿಂದ ಜಿಲ್ಲಾಡಳಿತ ತೆರವು ಮಾಡಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದರು.

ಇವುಗಳಲ್ಲಿ ಕೆಲವು ಬಾಡಿಗೆ ಮಳಿಗೆ ಗಳಾಗಿದ್ದು ಸ್ಥಳೀಯ ಸಂಸ್ಥೆಗಳಿಂದ ನಕಲಿ ದಾಖಲೆ ಆಧಾರದ ಮೇಲೆ ಖಾತೆ ಮಾಡಿಸಿಕೊಂಡು ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಈ ಭೂಮಿ ಮಧ್ಯೆಯೇ ವರ್ತುಲ ರಸ್ತೆ ಹಾದು ಹೋಗಿದ್ದು ಬಹುಕೋಟಿ ಬೆಲೆ ಬಾಳುತ್ತದೆ. ಈ ಪ್ರದೇಶದಲ್ಲಿ ಚದರ ಅಡಿಗೆ ₹ 20 ಸಾವಿರ ಬೆಲೆ ಇದೆ.

ಈ ಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮೂರು ಅಂತಸ್ತಿನ ವಸತಿ ಸಂಕೀರ್ಣ ಇದೆ. ಇದರಲ್ಲಿ ಯಾರೂ ವಾಸ ಇರಲಿಲ್ಲ. ಇದನ್ನು ಕೂಡ ವಶಕ್ಕೆ ಪಡೆದು ಸೂಚನಾ ಫಲಕ ಅಳವಡಿಸಲಾಯಿತು. ಈ ಜಾಗ ಸರ್ಕಾರಿ ಬಿ ಖರಾಬು ಭೂಮಿ. ಇದು ಗುಡ್ಡದ ಪ್ರದೇಶ. ಈ ಪ್ರದೇಶದಲ್ಲಿ ನಂಜುಂಡಸ್ವಾಮಿ ಅವರ 5 ಎಕರೆ ಜಾಗ ಇತ್ತು. ಈ ಜಾಗವನ್ನು ಕೆಐಎಡಿಬಿ ಹಾಗೂ ಬಿಡಿಎ ಭೂಸ್ವಾಧೀನ ಮಾಡಿಕೊಂಡು ಜಾಗದ ಮಾಲೀಕರಿಗೆ ಪರಿಹಾರ ನೀಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕೆಲವು ಸಮಯದ ಹಿಂದೆ ನಂಜುಂಡಸ್ವಾಮಿ ಅವರು ಭೂ ಒಡೆತನದ ದಾಖಲೆಗಳನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಸಿ ಖರಾಬು ಜಾಗವನ್ನು (15 ಎಕರೆ 27 ಗುಂಟೆ) ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲಾಯಿತು. ಸರ್ವೆ ಸಂಖ್ಯೆ 75/1ರ ಒಟ್ಟು ವಿಸ್ತೀರ್ಣ 10 ಎಕರೆ 36 ಗುಂಟೆ. ಇದರಲ್ಲಿ ಸರ್ಕಾರಿ ಖರಾಬು 8 ಎಕರೆ. ಉಳಿದ ಭೂಮಿಯ ಕೆಲ ಭಾಗ ವರ್ತುಲ ರಸ್ತೆಗೆ ಹೋಗಿತ್ತು. ಇದರಲ್ಲಿ 2 ಎಕರೆ 15 ಗುಂಟೆ ಜಾಗಕ್ಕೆ ಪರಿಹಾರವನ್ನೂ ನೀಡಲಾಗಿತ್ತು. ಉಳಿದ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಸರ್ವೆಯ ಬಳಿಕ ಉಳಿದ ಭೂಮಿಯ ಮಾಲೀಕತ್ವ ನಿರ್ಧಾರ ಆಗಲಿದೆ’ ಎಂದು ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ತಿಳಿಸಿದರು.

‘ಅದೇ ರೀತಿ ಸರ್ವೆ ಸಂಖ್ಯೆ 75/2ರಲ್ಲಿ 9 ಎಕರೆ 36 ಗುಂಟೆ ಜಾಗ ಇದೆ. ಇದರಲ್ಲಿ ಸರ್ಕಾರಿ ಖರಾಬು 7 ಎಕರೆ 27 ಗುಂಟೆ. ಉಳಿದ 2 ಎಕರೆ 9 ಗುಂಟೆ ಗುಡ್ಡ ಪ್ರದೇಶ. ಇದರ ಬಹುಭಾಗ ನಿವೇಶನ ಮಾಡಿ ಮನೆ ಕಟ್ಟಿಕೊಳ್ಳಲಾಗಿದೆ. ಇದೂ ಕೂಡ ನಂಜುಂಡಸ್ವಾಮಿಯ ವಶದಲ್ಲಿರುವ ಜಮೀನಾಗಿದೆ. ಇಲ್ಲಿ 4 ಅಂತಸ್ತಿನ 11 ಮನೆಗಳು, 2 ಅಂತಸ್ತಿನ 30 ಮನೆಗಳು,  ಹಾಗೂ 45 ಆರ್.ಸಿ.ಸಿ. ಮನೆಗಳನ್ನು ಗುರುತಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಈ ಜಾಗವನ್ನು ಮಕ್ಕಳ ಚಟುವಟಿಕೆಗಾಗಿ ಅಂದರೆ, ಮಕ್ಕಳ ಸಿನೆಮಾ, ಕಲಾ ಚಟುವಟಿಕೆ, ವಾಟರ್ ಪಾರ್ಕ್‌ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಅವರು ಹೇಳಿದರು.

ಸರ್ಕಾರಿ ಕೆರೆ ಜಾಗ ವಶ: ಯಲಹಂಕ ತಾಲ್ಲೂಕಿನ ಜಾಲ ಹೋಬಳಿ ಮೀನುಕುಂಟೆ ಗ್ರಾಮದ ಸರ್ವೆ ನಂ. 22 ರ ಸರ್ಕಾರಿ ಕೆರೆ ಜಾಗ 8 ಎಕರೆ 8 ಗುಂಟೆ ಒತ್ತುವರಿ ತೆರವು ಮಾಡಲಾಯಿತು. ಆನೇಕಲ್ ತಾಲ್ಲೂಕಿನಲ್ಲಿ ₹ 25 ಕೋಟಿ ಮೌಲ್ಯದ ಆಸ್ತಿಯ ಒತ್ತುವರಿ ತೆರವು ಮಾಡಲಾಯಿತು.
*
ಅಂಕಿ ಅಂಶ
46 ಎಕರೆ 34 ಗುಂಟೆ ಒಟ್ಟು ತೆರವುಗೊಳಿಸಿದ ವಿಸ್ತೀರ್ಣ
₹ 827 ಕೋಟಿ ವಶಪಡಿಸಿಕೊಂಡ ಆಸ್ತಿಯ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT