ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹300 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ

ಟೆಂಡರ್‌ ಶ್ಯೂರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ
Last Updated 24 ಮೇ 2016, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ₹ 300 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರ ಸಂಚಾರ  ಮಾಡಿದ ಬಳಿಕ ಮಾತನಾಡಿದ ಅವರು, ‘ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಮೇಲ್ಸೇತುವೆ ನಿರ್ಮಿಸುತ್ತೇವೆ. ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ₹ 200 ಕೋಟಿ, ಬಿಡಿಎ
₹ 100 ಕೋಟಿ ಭರಿಸಲಿದೆ’ ಎಂದರು.

‘ನಗರದಲ್ಲಿ ಇನ್ಮುಂದೆ ಕೈಗೊಳ್ಳುವ ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ಡಾಂಬರು ಬದಲಿಗೆ ಕಾಂಕ್ರೀಟ್‌ನಿಂದ ನಿರ್ಮಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಹಂತಹಂತವಾಗಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸುತ್ತೇವೆ. ಈ ರಸ್ತೆಗಳ ನಿರ್ಮಾಣ ದುಬಾರಿಯಾದರೂ, ಹಾಳಾಗುವುದು, ಗುಂಡಿ ಬೀಳುವುದು ತಪ್ಪುತ್ತದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವುದು ಕಡಿಮೆಯಾಗುತ್ತದೆ’ ಎಂದರು.

‘ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ರಾತ್ರಿ ವೇಳೆಯಲ್ಲಿ ನಿರ್ಮಿಸಬೇಕು. ಇದರಿಂದ ಕಾಮಗಾರಿ ವಿಳಂಬವಾಗುವುದು ಸಹಜ. ಆದರೆ, ಕಾಮಗಾರಿ  ಶೀಘ್ರ ಮುಗಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

‘ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆಯ ವರೆಗೆ ಎಲಿವೇಟೆಡ್‌ ರಸ್ತೆಯನ್ನು ₹ 1,500 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಟೆಂಡರ್‌ ಕರೆದಿದ್ದೇವೆ. ಅಂತಿಮಗೊಂಡ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ಹೇಳಿದರು.

‘ಟಿನ್‌ ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯಿಂದ ವಾಹನ ಸವಾರರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ₹ 630 ಕೋಟಿ ವೆಚ್ಚದಲ್ಲಿ ಎಲಿವೇಟೆಡ್‌ ರಸ್ತೆ ನಿರ್ಮಿಸುತ್ತೇವೆ. ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಬಿಡಿಎ ಹಾಗೂ ಸರ್ಕಾರ ತಲಾ ಶೇ 50ರಷ್ಟು ಹಣ ಭರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಅದನ್ನು ನೋಡಿಕೊಂಡು ಶೀಘ್ರ ಟೆಂಡರ್‌ ಕರೆಯುತ್ತೇವೆ’ ಎಂದು ತಿಳಿಸಿದರು.

‘ಈ ರಸ್ತೆ ಹೆಬ್ಬಾಳ, ಮಾರತ್ತಹಳ್ಳಿ, ವೈಟ್‌ಫೀಲ್ಡ್‌, ಕೆ.ಆರ್‌.ಪುರ, ಸಿ.ವಿ. ರಾಮನ್‌ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಂಚಾರ ದಟ್ಟಣೆಯಿಂದ ಯಾತನೆ ಅನುಭವಿಸುವುದು ತಪ್ಪುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT