ನವದೆಹಲಿ (ರಾಯಿಟರ್ಸ್): ಭಾರತ ಪ್ರವಾಸದಲ್ಲಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಹೆಸರನ್ನು ‘11ನೇ’ ಜಿನ್ಪಿಂಗ್ ಎಂದು ಓದಿ ತಪ್ಪೆಸಗಿರುವ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯ ವಾರ್ತಾ ವಾಚಕಿ ಕೆಲಸ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಇಂಗ್ಲಿಷ್ನ ‘ಎಕ್ಸ್ಐ’ ಅನ್ನು ರೋಮನ್ ಅಂಕಿ ಎಂದು ಭಾವಿಸಿದ ವಾರ್ತಾ ವಾಚಕಿ 11ನೇ ಜಿನ್ಪಿಂಗ್ ಎಂದು ಓದಿದ್ದಾರೆ. ಇದು ದೂರದರ್ಶನದಲ್ಲಿ ಬುಧವಾರ ಪ್ರಸಾರವಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಗುತ್ತಿಗೆ ಆಧಾರ ಮೇಲೆ ನೇಮಕಗೊಂಡಿದ್ದ ಈ ವಾಚಕಿಯು ಮಾಡಿದ ತಪ್ಪು ಅಕ್ಷಮ್ಯವಾಗಿದ್ದು, ಅವರನ್ನು ಕೆಲವು ತಿಂಗಳವರೆಗೆ ಅನ್ವಯವಾಗುವಂತೆ ವಜಾಗೊಳಿಸಲಾಗಿದೆ ಎಂದು ದೂರದರ್ಶನ ಅಧಿಕಾರಿಗಳು ತಿಳಿಸಿದ್ದಾರೆ. ವಾಚಕಿಯರ ಕೊರತೆಯಿಂದಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತೆಂದು ತಿಳಿಸಲಾಗಿದೆ.