ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

110 ಹಳ್ಳಿಗಳಿಗೆ ಕುಡಿಯುವ ನೀರು

ಜಪಾನ್ ಮೂಲದ ಸಂಸ್ಥೆಯ ಅನುದಾನದ ನಿರೀಕ್ಷೆಯಲ್ಲಿ ಜಲಮಂಡಳಿ
Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಜಲಮಂಡಳಿ ರೂಪಿಸಿದ ಯೋಜನೆಗೆ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆಡಳಿತಾತ್ಮಕ ಅನುಮೋದನೆ ಮಾತ್ರ ಬಾಕಿ ಇದೆ.

110 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆಗೆ ₹ 5,018 ಕೋಟಿ ಅಗತ್ಯವಾಗಿದ್ದು, ಸಾಲಕ್ಕಾಗಿ ಜೈಕಾಕ್ಕೆ ಜಲಮಂಡಳಿ ಕೆಲವು ತಿಂಗಳ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಅಷ್ಟೊಂದು ನೀರನ್ನು ಎಲ್ಲಿಂದ ತರುತ್ತೀರಿ ಎಂದು ಜೈಕಾ ಪ್ರತಿನಿಧಿಗಳು ಪ್ರಶ್ನಿಸಿದ್ದರು. ಸೋರಿಕೆ ತಡೆಗಟ್ಟಿ ಉಳಿಸಿದ ನೀರನ್ನೇ ಕೊಡಲಾಗುವುದು ಎಂದು ಜಲಮಂಡಳಿ ಉತ್ತರಿಸಿತ್ತು. ಬಳಿಕ ಸಂಸ್ಥೆಯ ಪ್ರತಿನಿಧಿಗಳು ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

‘ಯೋಜನೆಯ ವಿಸ್ತೃತಾ ಯೋಜನಾ ವರದಿಯನ್ನು ತಯಾರಿಸಿ ಜೈಕಾಕ್ಕೆ ಸಲ್ಲಿಸಲಾಗಿತ್ತು. ಸಾಮಾನ್ಯವಾಗಿ ಇದರ ಪರಿಶೀಲನೆಗೆ ಜೈಕಾ ಆರು ತಿಂಗಳು ತೆಗೆದುಕೊಳ್ಳುತ್ತದೆ. ಬಳಿಕ ಅನುದಾನ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಸಲ ಅನುದಾನ ಸಿಗುವ ವಿಶ್ವಾಸ ಇದೆ’ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಜೈಕಾಕ್ಕೆ ಜಲಮಂಡಳಿ  ಸಲ್ಲಿಸುತ್ತಿರುವ ಎರಡನೇ ಪ್ರಸ್ತಾವನೆ ಇದಾಗಿದೆ. ಜಲಮಂಡಳಿ 2010ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಆಗ ಯೋಜನೆಯ ಮೊತ್ತ ₹2,379 ಕೋಟಿ ಆಗಿತ್ತು. ನೀರಿನ ಮೂಲವನ್ನು ತೋರಿಸಿಲ್ಲ ಎಂಬ ಕಾರಣಕ್ಕೆ  ಪ್ರಸ್ತಾವ ತಿರಸ್ಕೃತಗೊಂಡಿತ್ತು.

110 ಹಳ್ಳಿಗಳಲ್ಲಿ ನೀರಿನ ತತ್ವಾರ: ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ ವಿಸ್ತೀರ್ಣ 226 ಚದರ ಕಿ.ಮೀ ಆಗಿತ್ತು. 2007ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರೂಪುಗೊಂಡಿತ್ತು. 6 ನಗರಸಭೆಗಳು, ಒಂದು ಪುರಸಭೆ ಹಾಗೂ 110 ಗ್ರಾಮಗಳು ಸೇರ್ಪಡೆಯಾಗಿ ಬಿಬಿಎಂಪಿ ವಿಸ್ತೀರ್ಣ 800 ಚದರ ಕಿ.ಮೀ.ಗೆ ಹೆಚ್ಚಿದೆ. ಕಾವೇರಿ ನಾಲ್ಕನೇ ಹಂತ ಹಾಗೂ ಎರಡನೇ ಘಟ್ಟದ ಯೋಜನೆಯ ಮೂಲಕ ಆರು ನಗರಸಭೆಗಳು ಹಾಗೂ ಒಂದು ಪುರಸಭೆಗೆ 50 ಕೋಟಿ ಲೀಟರ್‌ ಪೂರೈಕೆ ಮಾಡಲಾಗುತ್ತಿದೆ.

110 ಹಳ್ಳಿಗಳಿಗೆ ಕೊಳವೆಬಾವಿಗಳು ನೀರಿನ ಮೂಲ­ಗಳಾಗಿದ್ದವು. ಈ ಭಾಗಗಳಲ್ಲಿ ಈಚಿನ ವರ್ಷಗಳಲ್ಲಿ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ.  ಇಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಅಲ್ಲದೆ ಕೊಳವೆಬಾವಿಗಳ ನೀರು ಕಲುಷಿತಗೊಂಡಿದೆ ಎಂದು ಗಣಿ ಹಾಗೂ ಭೂವಿಜ್ಞಾನ ಇಲಾಖೆ 2 ವರ್ಷಗಳ ಹಿಂದೆ ವರದಿ ಸಲ್ಲಿಸಿತ್ತು. ಕಾವೇರಿ ನದಿಯಿಂದ ಕುಡಿಯುವ ನೀರು ಒದಗಿಸಬೇಕು ಎಂದು ಇಲ್ಲಿನ ಜನರು ಆಗ್ರಹಿಸಿದ್ದರು.

ಈ ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ರಾಜ್ಯ ಸರ್ಕಾರ 2010ರ ಡಿಸೆಂಬರ್‌ನಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಜಲಮೂಲದ ಬಗ್ಗೆ ಗೊಂದಲ ಉಂಟಾಗಿತ್ತು. ಲಿಂಗನಮಕ್ಕಿ, ಮೇಕೆದಾಟು ಸೇರಿದಂತೆ ಬೇರೆ ಬೇರೆ ಮೂಲಗಳಿಂದ ನೀರು ಪೂರೈಕೆ ಮಾಡಲು ಪ್ರಸ್ತಾವ ಸಿದ್ಧಪಡಿಸಲಾಗಿತ್ತು.

ಈ ಯೋಜನೆಗೆ ಮಂಜೂರಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ 2011­ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ನಿಶ್ಚಿತ ಜಲಮೂಲ ಗುರುತಿಸಿ ಮತ್ತೆ ಪ್ರಸ್ತಾವ ಸಲ್ಲಿಸಿ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ ಸ್ವಲ್ಪ ಕಾಲ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಕಾವೇರಿ ನದಿಯಿಂದ ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ ನೀರು ಒದಗಿಸಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದಾದ ಮೇಲೆ ವಿಸ್ತೃತಾ ಯೋಜನಾ ವರದಿ ತಯಾರಿಸಲಾಗಿತ್ತು. ಈ ಗ್ರಾಮಗಳ 2049ರ ಜನಸಂಖ್ಯೆ (43 ಲಕ್ಷ) ದೃಷ್ಟಿಯಲ್ಲಿಟ್ಟುಕೊಂಡು ಈ ವರದಿ  ಸಿದ್ಧಪಡಿಸಲಾಗಿತ್ತು. ಈ ಯೋಜನೆಯಲ್ಲಿ 16 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವ ಪ್ರಸ್ತಾವವೂ ಇದೆ.

‘ಈ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮಂಡಳಿ ಫಲಾನುಭವಿಗಳ ವಂತಿಗೆ (ಜಿಬಿ ವ್ಯಾಸ್ಪ್‌) ಸಂಗ್ರಹಿಸಿದೆ. ಈ ಹಣವನ್ನು ಬಳಸಿಕೊಂಡು ಈಗಾಗಲೇ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲಸೌಕರ್ಯ ಅಳವಡಿಸುವ ಕಾಮಗಾರಿ ಆರಂಭವಾಗಿದೆ’ ಎಂದು ಮಂಡಳಿ ಅಧಿಕಾರಿಗಳು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT