ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರಂದು ದೇಜಗೌ ಅಭಿನಂದನಾ ಕಾರ್ಯಕ್ರಮ

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಮೈಸೂರು: ಹಿರಿಯ ಸಾಹಿತಿ ಡಾ. ದೇಜಗೌ ಅವರ ಜನ್ಮದಿನದ ಪ್ರಯುಕ್ತ ಜುಲೈ 12ರಂದು ಅಭಿನಂದನಾ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವಾಸು ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ನಗರದ ಕಲಾಮಂದಿರದಲ್ಲಿ ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಅವರ ಜನ್ಮದಿನ ‘ಸಾರ್ವಜನಿಕರ ಹಬ್ಬ’ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕನ್ನಡ ಆಡಳಿತ ಭಾಷೆ ಆಗಬೇಕು ಎಂದು ಹೋರಾಟ ನಡೆಸಿದ ಅವರು, ನಾಡಿನ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ದೇಜಗೌ ಅವರ ವಯಸ್ಸು ದಾಖಲೆಗಳ ಪ್ರಕಾರ 102 ಆಗಿದ್ದು, ಅವರ ಜನ್ಮದಿನ ಜುಲೈ 6 ಆಗಿದೆ. ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಕಾರಣ ಜುಲೈ 12ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರದ ಸಹಕಾರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕನ್ನಡ ನಾಡಿನ ದಿಗ್ಗಜರನ್ನು ಪರಿಚಯಿಸಬೇಕು ಎಂಬುದು ಈ ನಿರ್ಧಾರದ ಆಶಯವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಾರ್ವಜನಿಕರು, ಸಂಘ–ಸಂಸ್ಥೆಗಳು, ವಿದ್ವಾಂಸರು, ವಿಶ್ವವಿದ್ಯಾಲಯದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಅಭಿನಂದನಾ ಸಮಿತಿ ಅಧ್ಯಕ್ಷ ಎ.ವಿ. ನರಸಿಂಹಮೂರ್ತಿ ಮಾತನಾಡಿ, ದೇಜಗೌ ಹೋರಾಟದ ಬದುಕನ್ನು ಮನೆ ಮನಗಳಿಗೆ ತಲುಪಿಸಬೇಕು ಎಂದರು. ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ದೇಜಗೌ ಅವರು ಗದ್ಯ ಬರಹದ ಬ್ರಹ್ಮ. ಅವರ 100ನೇ ಜನ್ಮದಿನೋತ್ಸವ ಆಗಿದ್ದರೂ, ಇದು ‘ಜನ ಜನ್ಮದಿನ’ವಾಗಿ ರೂಪಗೊಳ್ಳಬೇಕು ಎಂಬ ಉದ್ದೇಶ ಇದೆ. ಜನ್ಮದಿನಾಚರಣೆ ಸಂಭ್ರಮವನ್ನು ವರ್ಷದುದ್ದಕ್ಕೂ ಆಚರಿಸುವ ಉದ್ದೇಶ ಇದೆ. ಪ್ರತಿ ತಿಂಗಳೂ ಜವರೇಗೌಡ ಅವರ ಸಾಧನೆಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉಪನ್ಯಾಸ ಹಮ್ಮಿಕೊಂಡು ಅವುಗಳನ್ನು ಪ್ರಕಟಿಸುವ ಇರಾದೆಯೂ ಸಮಿತಿಗೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT