ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ದಿನವೂ ರಸ್ತೆಗೆ ಇಳಿಯದ ಬಸ್

ಸಾರಿಗೆ ಸಿಬ್ಬಂದಿಯ ಮುಷ್ಕರ: ಪ್ರಯಾಣಿಕರಿಗೆ ತಪ್ಪದ ಪರದಾಟ, ಖಾಸಗಿ ವಾಹನಗಳೇ ಆಸರೆ
Last Updated 27 ಜುಲೈ 2016, 9:10 IST
ಅಕ್ಷರ ಗಾತ್ರ

ಕಲಬುರ್ಗಿ: ವೇತನ ಪರಿಷ್ಕರಣೆ ಸೇರಿ ದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ)ಯ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ಮಂಗಳ ವಾರವೂ ಯಾವುದೇ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ.

ಇದರಿಂದಾಗಿ ದೂರದ ಊರು ಗಳಿಗೆ ತೆರಳಬೇಕಾದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಕೇಂದ್ರ ಬಸ್ ನಿಲ್ದಾಣ ಆವರಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಬಸ್ ನಿಲ್ದಾಣದ ಆವರಣದಲ್ಲಿರುವ ಬೇಕರಿ, ವಿಶ್ರಾಂತಿಗೃಹ, ಟಿಕೆಟ್ ವಿತರಣಾ ಕೌಂಟರ್‌, ಪುಸ್ತಕ ಮಳಿಗೆಗಳು ಬಂದ್ ಆಗಿದ್ದವು. ಬಸ್ ಸೇವೆ ಇಲ್ಲದಿದ್ದರೂ ಅನೇಕರು ಬಸ್ ನಿಲ್ದಾಣಕ್ಕೆ ಬಂದು ವಾಪಸು ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೆಲ ಖಾಸಗಿ ಶಾಲೆ ಕಾರ್ಯ ನಿರ್ವಹಿಸಿದವು. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬರಲು ಜನರು ಖಾಸಗಿ ವಾಹನಗಳ ಮೊರೆ ಹೋದರು. ಆಟೊಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಬಸ್ ಸಂಚಾರ ಸ್ಥಗಿತಗೊಂಡಿದ್ದರೂ ರೈಲು ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬರಲಿಲ್ಲ.

ಬೆಂಗಳೂರು, ಮೈಸೂರು ಸೇರಿ ಕೆಲವಡೆ ಮಧ್ಯಾಹ್ನದಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಬಸ್ ಸಂಚಾರ ಆರಂಭಿಸಲಾಗಿತ್ತು. ಹೀಗಾಗಿ ಇಲ್ಲೂ ಕೂಡ ಬಸ್ ಸಂಚಾರ ಆರಂಭವಾಗಬ ಹುದು ಎಂಬ ನಿರೀಕ್ಷೆಯಿಂದ ಪ್ರಯಾಣಿ ಕರು ಸಂಜೆಯಿಂದಲೇ ಬಸ್ ನಿಲ್ದಾಣದತ್ತ ಬರತೊಡಗಿದರು. ಆದರೆ ಯಾವುದೇ ಬಸ್ ರಸ್ತೆಗೆ ಇಳಿಯದ್ದರಿಂದ ನಿರಾಸೆ ಯಿಂದ ಮನೆಗಳತ್ತ ಹೆಜ್ಜೆ ಹಾಕಿದರು.

‘ಎನ್‌ಇಕೆಆರ್‌ಟಿಸಿ ಅಧಿಕಾರಿಗಳು ಮಧ್ಯಾಹ್ನ 3ಗಂಟೆ ಸುಮಾರಿಗೆ ದೂರವಾಣಿ ಕರೆ ಮಾಡಿ ಬಸ್ ಸಂಚಾರ ಆರಂಭಿಸುವಂತೆ ಸೂಚಿಸಿದರು. ಅದರಂತೆ ನಾನು ಸೇರಿದಂತೆ ಕೆಲವರು ಡಿಪೋಕ್ಕೆ ಬಂದೆವು. ಆದರೆ ಗಲಾಟೆ ಆಗಬಹುದು ಎಂಬ ಉದ್ದೇಶದಿಂದ ಬಸ್ ಸೇವೆ ಆರಂಭಿಸಲಿಲ್ಲ’ ಎಂದು ತರಬೇತಿ ಚಾಲಕರೊಬ್ಬರು ಹೇಳಿದರು.

ಮಂಗಳವಾರ ಸಂಜೆ ಬಸ್ ಸಂಚಾರ ಆರಂಭಿಸಲಾಗುತ್ತದೆ ಎಂಬ ಮಾಹಿತಿ ಅರಿತ ಸಾರ್ವಜನಿಕರು ರಾಷ್ಟ್ರಪತಿ ಚೌಕ್ (ಜೇವರ್ಗಿ ಕ್ರಾಸ್) ಬಳಿ ಹೆಚ್ಚಿನ ಸಂಖ್ಯೆ ಯಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಜನರ ಚದುರಿಸಿದರು.

‘ಬಸ್ ಸಂಚಾರ ಆರಂಭಿಸುವ ಬಗ್ಗೆ ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಶೋಕಾನಂದ ಅವರು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಯೊಂದಿಗೆ ಮಾತುಕತೆ ನಡೆಸಿದ ರಾದರೂ ಅಂತಿಮವಾಗಿ ಬಸ್ ಓಡಿಸದಿರಲು ತೀರ್ಮಾನಿಸಿದರು’ ಎಂದು ಮೂಲಗಳು ತಿಳಿಸಿವೆ.

ಜನರಿಂದ ದುಪ್ಪಟ್ಟು  ವಸೂಲಿ!
ಕಮಲಾಪುರ:
ಬಸ್‌ ಮುಷ್ಕರದಿಂದ  ಪ್ರಯಾಣಿಕರು ಖಾಸಗಿ ವಾಹನಕ್ಕೆ  ದುಪಟ್ಟು ಹಣ ತೆರಬೇಕಾಯಿತು. ಕಮಲಾಪುರ–ಹುಮನಾಬಾದ, ಕಮಲಾಪುರ–ಕಲಬುರ್ಗಿಗೆ  ₹ 20 ಪ್ರಯಾಣ ದರ. ಆದರೆ ಮುಷ್ಕರ ಕಾರಣ ₹ 50 ತೆರಬೇ­ಕಾಯಿತು. ಕ್ರೂಸರ್‌, ಖಾಸಗಿ ಬಸ್ಸು, ಮ್ಯಾಕ್ಸಿ ಕ್ಯಾಬ್‌ಗಳು ಮಾತ್ರ ಸಂಚರಿಸುತ್ತಿದ್ದು,  ಪ್ರಯಾಣಿಕರು ಹೆಚ್ಚಿನ ಹಣ ಕೊಟ್ಟು ಪ್ರಯಾಣ ಮಾಡಿದರು. ಜನಸಂದಣಿ ಮಂಗಳವಾರ ಕಾಣಿಸಲಿಲ್ಲ.

ಇಂದೂ ರಜೆ
‘ಸಾರಿಗೆ ನೌಕರರು ಮುಷ್ಕರ ಮುಂದುವರಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜು.27ರಂದು ಕೂಡ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ತಿಳಿಸಿದರು.

***
ತರಬೇತಿ ಚಾಲಕ/ನಿರ್ವಾಹಕರನ್ನು ಬಳಸಿಕೊಂಡು ಬಸ್ ಸಂಚಾರ ಆರಂಭಿಸಲು ನಿರ್ಧರಿಸಿದ್ದೆವು. ಆದರೆ ಭದ್ರತಾ ದೃಷ್ಟಿಯಿಂದ ಬಸ್‌ ಓಡಿಸಲಿಲ್ಲ.
-ಅಶೋಕಾನಂದ ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT