ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ಕ್ಕೆ ಮೋದಿ ‘ನಾಯಕ’

ಔಪಚಾರಿಕ ಆಯ್ಕೆಗಾಗಿ ಬಿಜೆಪಿ ಸಂಸದೀಯ ಪಕ್ಷದ ಸಭೆ
Last Updated 17 ಮೇ 2014, 20:27 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ನರೇಂದ್ರ ಮೋದಿ ಅವರನ್ನು ತನ್ನ ನಾಯಕನೆಂದು ವಿಧ್ಯುಕ್ತವಾಗಿ ಆಯ್ಕೆ ಮಾಡುವ ಸಲುವಾಗಿ ಬಿಜೆಪಿ ಸಂಸದೀಯ ಪಕ್ಷ ಮೇ 20ರಂದು ಇಲ್ಲಿ ಸಭೆ ಸೇರಲಿದೆ.

ಪಕ್ಷದ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಯಿತು. ನರೇಂದ್ರ ಮೋದಿ, ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್‌ ಜೋಷಿ, ಸುಷ್ಮಾ ಸ್ವರಾಜ್‌ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಭವ್ಯ ಸ್ವಾಗತ: ಇದಕ್ಕೂ ಮುನ್ನ ಲೋಕ­ಸಭೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದ ಖುಷಿಯಲ್ಲಿ ಶನಿವಾರ ಬೆಳಿಗ್ಗೆ ದೆಹಲಿಗೆ ಬಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪಕ್ಷದ ಸಹಸ್ರಾರು ಕಾರ್ಯಕರ್ತರು ಹಾಗೂ  ಅಭಿಮಾನಿ­ಗಳು ಭವ್ಯ ಸ್ವಾಗತ ಕೋರಿದರು.

ದೆಹಲಿಯ ಇಂದಿರಾಗಾಂಧಿ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಕ್ಷದ ಪ್ರಧಾನ ಕಚೇರಿಗೆ ಅದ್ದೂರಿಯ ಮೆರವಣಿಗೆಯಲ್ಲಿ ಬಂದ ಮೋದಿ ಅಲ್ಲಿ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.

‘ಈ ವಿಜಯದ ಶ್ರೇಯ ನನಗಲ್ಲ, ನಿಮಗೆ ಸಲ್ಲಬೇಕು. ಲಕ್ಷಾಂತರ ಕಾರ್ಯ­ಕರ್ತರ ಕಠಿಣ ಪರಿಶ್ರಮದ ಫಲವಾಗಿ ಇಂಥದ್ದೊಂದು ಅಭೂತ­ಪೂರ್ವ ಗೆಲುವು ನಮಗೆ ಒಲಿದು ಬಂದಿದೆ. 1952ರಿಂದ ಪಕ್ಷಕ್ಕಾಗಿ ದುಡಿದ ನಾಲ್ಕೈದು ತಲೆಮಾರಿನ ಎಲ್ಲ ಮುಖಂಡರಿಗೆ ಹಾಗೂ 125 ಕೋಟಿ ಭಾರತೀಯರಿಗೆ  ಈ ಕೀರ್ತಿ ಸಲ್ಲುತ್ತದೆ’ ಎಂದು ಭಾವುಕರಾಗಿ ನುಡಿದರು.

ಎನ್‌ಡಿಎ ಸಭೆ: 20ರಂದು ಸಂಸದೀಯ ಪಕ್ಷದ ಸಭೆ ನಂತರ ಎನ್‌ಡಿಎ ಮಿತ್ರ ಪಕ್ಷಗಳ ಸಭೆಯನ್ನೂ ಕರೆಯಲಾಗು­ವುದು. ಅಲ್ಲಿ ಮೋದಿ ಅವರನ್ನು ಮೈತ್ರಿಕೂಟದ ನಾಯಕ­ನಾಗಿ ಆಯ್ಕೆ ಮಾಡಲಾಗುವುದು ಎಂದು ಸಂಸದೀಯ ಮಂಡಳಿ ಸಭೆ ನಂತರ ರಾಜನಾಥ್‌ ಸಿಂಗ್‌  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾದಕ್ಕೆ ನಮಸ್ಕಾರ: ಪರಸ್ಪರರ ನಡುವಿನ ಭಿನ್ನಾಭಿಪ್ರಾಯ ಮರೆತಂತೆ ಸುದ್ದಿಗೋಷ್ಠಿಯಲ್ಲಿ  ಮುಖಂಡರೆಲ್ಲ ಹಸನ್ಮುಖರಾಗಿ  ಒಟ್ಟಿಗೆ ಕಾಣಿಸಿದ್ದು ವಿಶೇಷ. ಮೋದಿ ಹಾಗೂ ಅಡ್ವಾಣಿ ಪರಸ್ಪರ ಆಲಿಂಗಿಸಿಕೊಂಡರು. ಪಾದ ಮುಟ್ಟಿ ನಮಸ್ಕರಿಸಿದ ಮೋದಿಗೆ ಅಡ್ವಾಣಿ ಆಶೀರ್ವಾದ ಮಾಡಿದರು.

ಕಾಶಿ ವಿಶ್ವನಾಥನ ದರ್ಶನ
ವಾರಾಣಸಿ(ಪಿಟಿಐ): ದೆಹಲಿಯಿಂದ ಸಂಜೆ ವಾರಣಸಿಗೆ ಬಂದ ಮೋದಿ  ಅವರು ಕಾಶಿ ವಿಶ್ವನಾಥನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ನಂತರ ‘ದಶಾಶ್ವಮೇಧ ಘಾಟ್’ನಲ್ಲಿ ಗಂಗಾನದಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ಈ ವೇಳೆ ಮೋದಿ ಜತೆಗೆ ರಾಜನಾಥ್‌ ಸಿಂಗ್‌, ಅಮಿತ್‌ ಷಾ ಹಾಗೂ ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್‌ ಬಾಜಪೇಯಿ ಇದ್ದರು.

ಮಿತ್ರಪಕ್ಷಗಳ ಓಲೈಕೆ
ಲೋಕಸಭೆಯಲ್ಲಿ ನಿಚ್ಚಳ ಬಹು­ಮತ ಇದ್ದರೂ, ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ­ಯಿದೆ. 240 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿಯ 64 ಸದಸ್ಯರು ಮಾತ್ರ ಇದ್ದಾರೆ. ಹೀಗಾಗಿ ಬಿಜೆಪಿ ಇನ್ನಷ್ಟು ಮಿತ್ರಪಕ್ಷ­ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ದಾರಿ ತೆರೆದಿಟ್ಟಿದೆ.

ಮಹತ್ವದ ಮಸೂದೆಗಳನ್ನು ಅಂಗೀಕರಿಸುವುದಕ್ಕೆ ರಾಜ್ಯಸಭೆ­ಯಲ್ಲಿ ಆಡಳಿತ ಪಕ್ಷ 121 ಸದಸ್ಯ ಬಲ ಹೊಂದಿರಬೇಕಾಗುತ್ತದೆ.

ಶೋಚನೀಯ ಸ್ಥಿತಿ
ಸಾಮಾನ್ಯವಾಗಿ ಸರ್ಕಾರ ರಚಿಸುವುದಕ್ಕೆ ಮೈತ್ರಿಕೂಟ ರಚಿಸಲಾಗುತ್ತದೆ. ಆದರೆ ಈಗ ನಮ್ಮ ಎದುರಾಳಿಗಳಿಗೆ ವಿರೋಧ ಪಕ್ಷದಲ್ಲಿ ಕೂರುವುದಕ್ಕೂ ಮೈತ್ರಿಕೂಟ ರಚಿಸಬೇಕಾದ ಶೋಚನೀಯ ಸ್ಥಿತಿ ಬಂದಿದೆ’
ವಾರಾಣಸಿಯಲ್ಲಿ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT