ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2013–14ರ ಕಬ್ಬು ಬಾಕಿ ಸರ್ಕಾರದಿಂದ ಪಾವತಿ

ಈ ತಿಂಗಳೊಳಗೆ 2 ಕಂತಿನಲ್ಲಿ ರೈತರ ಖಾತೆಗೆ ₹ 923 ಕೋಟಿ ಜಮಾ
Last Updated 30 ಜೂನ್ 2015, 19:33 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ: ‘2013-14ನೇ ಸಾಲಿನ ₹ 923 ಕೋಟಿ ಕಬ್ಬು ಬಾಕಿಯನ್ನು ಜುಲೈ ತಿಂಗಳೊಳಗೆ ರೈತರಿಗೆ ಪಾವತಿಸಲಾಗುವುದು. 2014-15ನೇ ಸಾಲಿನ ಕಬ್ಬು ಬಾಕಿ ಪಾವತಿಗೆ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಿಧಾನಸಭೆಯಲ್ಲಿ ಪ್ರಕಟಿಸಿದರು.

ಇದೇ ವಿಷಯವನ್ನು ಸಕ್ಕರೆ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ವಿಧಾನಪರಿಷತ್ ಗೆ ತಿಳಿಸಿದರು.

2013-14ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ ₹ 2,500 ನಿಗದಿಪಡಿಸಿತ್ತು. ಇದರಲ್ಲಿ ಬಹುತೇಕ ಕಾರ್ಖಾನೆಗಳು  ₹ 2,300 ಪಾವತಿಸಿ, ₹ 200 ಬಾಕಿ ಉಳಿಸಿಕೊಂಡಿವೆ. ಈ ಬಾಕಿ ಮೊತ್ತವನ್ನು ಕೊಡಿಸಬೇಕು ಎಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ  ಪ್ರತಿಭಟನೆ ನಡೆಸಿದ್ದರು.

ಈ  ಕುರಿತು ನಿಯಮ 69ರಡಿ ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ‘ಜುಲೈಯಲ್ಲಿ ಎರಡು ಕಂತಿನಲ್ಲಿ ತಲಾ ₹ 100ರಂತೆ ಬಾಕಿ ಪಾವತಿಸಲಾಗುವುದು. ಈ ವಾಗ್ದಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದರು.

ಬಿಜೆಪಿ ಧರಣಿ: ಈ ಭರವಸೆಯಿಂದ ತೃಪ್ತರಾಗದ ಬಿಜೆಪಿ ಸದಸ್ಯರು ‘ಜುಲೈ 10ರೊಳಗೇ ಪೂರ್ಣ ಬಾಕಿ ಪಾವತಿಸಬೇಕು’ ಎಂದು ಪಟ್ಟುಹಿಡಿದರು. ಆಗ ದೀರ್ಘ ಚರ್ಚೆಗೆ ದಿಢೀರ್ ತಡೆ ಹಾಕಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಚರ್ಚೆ ಮುಕ್ತಾಯಗೊಳಿಸಿ, ಪ್ರಶ್ನೋತ್ತರ ಕೈಗೆತ್ತಿಕೊಂಡರು.

ಇದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ತೆರಳಿ ಧರಣಿ ನಡೆಸಿದರು. ಇದರಿಂದ ಸಿಟ್ಟಿಗೆದ್ದ ಕಾಗೋಡು, ಧರಣಿ ನಿರತರನ್ನು ಹೊರಹಾಕಲು ಮಾರ್ಷಲ್‌ಗಳನ್ನು ಕರೆದರು. ಆಗ ಆಡಳಿತ- ಪ್ರತಿಪಕ್ಷಗಳ ನಡುವೆ ಗದ್ದಲ ಹೆಚ್ಚಾಗಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಕೆಲಹೊತ್ತಿನಲ್ಲೇ ಶಾಂತರಾದ ಸಭಾಧ್ಯಕ್ಷರು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.  ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ‘ಜುಲೈ 10ರೊಳಗೇ ಬಾಕಿ ಹಣ ಪಾವತಿಸುವುದಾಗಿ  ಹೇಳಿಕೆ ನೀಡುವವರೆಗೂ ಕಲಾಪ ನಡೆಸಲು ಬಿಡುವುದಿಲ್ಲ’ ಎಂದು ಧರಣಿ ಮುಂದುವರಿಸಿದರು.

ಧರಣಿ ಕೈಬಿಡುವಂತೆ ಸಭಾಧ್ಯಕ್ಷರು ಎಷ್ಟೇ ಮನವಿ ಮಾಡಿದರೂ ಬಿಜೆಪಿ ಸದಸ್ಯರು ಜಗ್ಗಲಿಲ್ಲ. ಬಳಿಕ,  ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಕೀಲಿ ಕೊಡ್ತೇನೆ: ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, ‘ನೀವು (ಬಿಜೆಪಿ) ಹೇಳಿದ ಹಾಗೆ ತಕ್ಷಣಕ್ಕೆ ಹಣ ಕೊಡಲು ಆಗುವುದಿಲ್ಲ. ಬೇರೆ ಇಲಾಖೆಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಹೊಂದಾಣಿಕೆ ಮಾಡಿಕೊಂಡು ಬಾಕಿ ಪಾವತಿಸಬೇಕಾಗುತ್ತದೆ. ಹೀಗಾಗಿ ಜುಲೈ ಅಂತ್ಯದವರೆಗೂ ಸಮಯ ಕೇಳಿದ್ದೇನೆ. ಹಣಕಾಸು ನಿರ್ವಹಣೆ ವಿಷಯ ಶೆಟ್ಟರ್ ಅವರಿಗೂ ಗೊತ್ತಿದೆ. ವಿನಾಕಾರಣ ಪಟ್ಟುಹಿಡಿಯುವುದು ಸರಿಯಲ್ಲ’ ಎಂದರು. ಆದರೂ ಪಟ್ಟು ಸಡಿಲ ಮಾಡದಿದ್ದಾಗ ‘ಖಜಾನೆ ಕೀಲಿಕೈಯನ್ನು ಕೊಡುತ್ತೇನೆ; ಹೋಗಿ ನೀವೇ (ಬಿಜೆಪಿ) ತೆಗೆದುಕೊಳ್ಳಿ’ ಎಂದು ಏರುಧ್ವನಿಯಲ್ಲಿ ರೇಗಿದರು.

ಪ್ರತಿಪಕ್ಷ ಅಸಮಾಧಾನ: ಬಾಕಿ ಮೊತ್ತವನ್ನು ಕಂತುಗಳಲ್ಲಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ನೀಡಿದ ಭರವಸೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರಿಗೆ ಸಮಾಧಾನ ತರಲಿಲ್ಲ. ‘2013-14ರ ಬಾಕಿಯನ್ನು ಒಂದೇ ಕಂತಿನಲ್ಲಿ ಪಾವತಿಸಲಾಗದ ಪಿಗ್ಮಿ ಸರ್ಕಾರ ಇದು’ ಎಂದು ಘೋಷಣೆ ಕೂಗಿದ ಬಿಜೆಪಿ ಸದಸ್ಯರು ಸಭಾಪತಿ ಎದುರಿನ ಅಂಗಳದಲ್ಲಿ ಧರಣಿ ನಡೆಸಿದರು. ಜೆಡಿಎಸ್ ಸದಸ್ಯರೂ ಇದಕ್ಕೆ ಕೈಜೋಡಿಸಿದರು.

ರೈತರ ಪ್ರತಿಭಟನೆ ಹಿಂದಕ್ಕೆ: ಪ್ರತಿ ಟನ್‌ ಕಬ್ಬಿಗೆ 2013–14ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಇರುವ ಹಣವನ್ನು ಕಂತಿನ ಮೇಲೆ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ರೈತಸಂಘಗಳ ವಿವಿಧ ಬಣಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಮಂಗಳವಾರ ರಾತ್ರಿ ಹಿಂದಕ್ಕೆ ಪಡೆಯಲಾಯಿತು.

ಎರಡು ಕಂತಿನಲ್ಲಿ
ಜುಲೈ 10ರೊಳಗೆ ಸರ್ಕಾರವೇ ಬೊಕ್ಕಸದಿಂದ ಪ್ರತಿ ಟನ್ ಕಬ್ಬಿಗೆ ₹ 100 ನೀಡಲಿದೆ. ಉಳಿದ ₹ 100ನ್ನು ಕಾರ್ಖಾನೆಗಳಲ್ಲಿನ ಸಕ್ಕರೆ ಮಾರಿ ಅಥವಾ ಅದಾಗದಿದ್ದರೆ ಜುಲೈ 31ರೊಳಗೆ ಸರ್ಕಾರವೇ ಪಾವತಿ ಮಾಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

* ಕಬ್ಬು ಬೆಳೆಗಾರರ ಬಾಕಿ ಮೊತ್ತ ಪಾವತಿಗೆ ₹ 3 ಸಾವಿರ ಕೋಟಿಯನ್ನು ತಕ್ಷಣ ಬಿಡುಗಡೆ ಮಾಡಿ.
-ವೈ.ಎಸ್.ವಿ. ದತ್ತ, ಶಾಸಕ

* ಅಷ್ಟು ದುಡ್ಡನ್ನು ಎಲ್ಲಿಂದ ಮುದ್ರಿಸಿಕೊಡಬೇಕು? ಸರ್ಕಾರದ ಹತ್ತಿರ ಅಕ್ಷಯ ಪಾತ್ರೆ ಇದೆಯೇ?
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಮುಖ್ಯಾಂಶಗಳು
* 10ರ ಒಳಗೆ ಮರುಪಾವತಿಗೆ ಆಗ್ರಹಿಸಿ ಬಿಜೆಪಿ ಧರಣಿ

* ಮಾರ್ಷಲ್‌ಗಳನ್ನು ಕರೆಸಿದ ಸ್ಪೀಕರ್‌ ಕಾಗೋಡು ತಿಮ್ಮಪ್ಪ
* ನೆರವಿಗೆ ಬಾರದ ಕೇಂದ್ರ- ಸಿ.ಎಂ. ಸಿದ್ದರಾಮಯ್ಯ ಟೀಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT