ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ಪರ್ವತಾರೋಹಿಗಳ ಸಾವು

ಸಂಕಷ್ಟದಲ್ಲಿ ಸಿಲುಕಿದ್ದ 61 ಮಂದಿಯನ್ನು ರಕ್ಷಿಸಿದ ಭಾರತೀಯ ಸೇನೆ
Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಮೌಂಟ್‌ ಎವರೆಸ್ಟ್‌ನ ಮೂಲಶಿಬಿರದಲ್ಲಿದ್ದ ಪರ್ವತಾರೋಹಿಗಳ ಪೈಕಿ ಕನಿಷ್ಠ 22 ಮಂದಿ ಭೂಕಂಪನದಿಂದ ಮೃತಪಟ್ಟಿದ್ದಾರೆ.

ವಿದೇಶಿಯರೂ ಸೇರಿದಂತೆ ನೂರಾರು ಚಾರಣಿಗರು ಹಿಮಕುಸಿತದ ನಡುವೆ ಸಿಲುಕಿದ್ದಾರೆ. 60ಕ್ಕೂ ಹೆಚ್ಚು ಚಾರಣಿಗರು ಗಾಯಗೊಂಡಿದ್ದಾರೆ. ಮೂಲಶಿಬಿರದಲ್ಲಿದ್ದ ನೂರಕ್ಕೂ ಅಧಿಕ ಸಾಹಸಿಗಳು, ಪಾದಯಾತ್ರಿಗಳು ಮತ್ತು ಪ್ರವಾಸಿ ಮಾರ್ಗದರ್ಶಕರು ಕಣ್ಮರೆಯಾಗಿದ್ದು, ಮೌಂಟ್‌ ಎವರೆಸ್ಟ್‌ನಿಂದ ಕುಸಿದ ಹಿಮದ ನಡುವೆ ಸಿಲುಕಿದ್ದಾರೆ ಎನ್ನಲಾಗಿದೆ.

17 ಮಂದಿ ಮೂಲ ಶಿಬಿರದಲ್ಲಿ ಮೃತಪಟ್ಟಿದ್ದು, ಇನ್ನು ಐವರು ಮೂಲ ಶಿಬಿರಕ್ಕಿಂತ ಕೆಳಗಿನ ಪ್ರದೇಶದಲ್ಲಿ ಸಾವಿಗೀಡಾಗಿದ್ದಾರೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

‘ಶಿಬಿರದಲ್ಲಿ ಹಾಕಲಾಗಿದ್ದ ಟೆಂಟ್‌ಗಳು ಗಾಳಿಗೆ ಹಾರಿಹೋಗಿವೆ. ಪರ್ವತದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ’ ಎಂದು ಭೂಕಂಪನವಾದ ಸಂದರ್ಭದಲ್ಲಿ ಶಿಬಿರದಲ್ಲಿದ್ದ ಗೆಲು ಶೆರ್ಪಾ ತಿಳಿಸಿದ್ದಾರೆ.

ಪ್ರತಿಕೂಲ ಹವಾಮಾನ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡುತ್ತಿದೆ. ಅದರ ನಡುವೆಯೂ ತೀವ್ರವಾಗಿ ಗಾಯಗೊಂಡಿರುವ 22 ಚಾರಣಿಗರನ್ನು ಭಾರತೀಯ ವಾಯುಪಡೆ ಸೇರಿದಂತೆ ವಿವಿಧ ಹೆಲಿಕಾಪ್ಟರ್‌ಗಳ ಮೂಲಕ ಸಮೀಪದ ಫೆರಿಚೆ ಗ್ರಾಮಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವು ಗಾಯಾಳುಗಳನ್ನು ಹೆಲಿಕಾಪ್ಟರ್‌ನಲ್ಲಿ  ದೆಹಲಿಗೆ ಕರೆತರಲಾಗಿದೆ.

ಮೌಂಟ್ ಎವರೆಸ್ಟ್‌ನ ಮೂಲ ಶಿಬಿರದ ಮೇಲ್ಭಾಗದಲ್ಲಿರುವ 1 ಮತ್ತು 2ನೇ ಶಿಬಿರಗಳಲ್ಲಿ ನೂರಕ್ಕೂ ಅಧಿಕ ಚಾರಣಿಗರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿರುವುದಾಗಿ ನೇಪಾಳ ಪರ್ವತಾರೋಹಣ ಸಂಸ್ಥೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮೂಲ ಶಿಬಿರದಲ್ಲಿರುವ ಭಾರತ ಸೇನೆಯ ಪರ್ವತಾರೋಹಿ ತಂಡ ಸುರಕ್ಷಿತವಾಗಿದ್ದು, ಶನಿವಾರ 13 ಮೃತದೇಹಗಳನ್ನು ಹೊರತೆಗೆಯಲು ನೆರವಾಗಿದೆ ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ. ಮೂಲ ಶಿಬಿರದಲ್ಲಿದ್ದ ವೈದ್ಯೆ ಮಾರಿಸಾ ಇವ್ ಗಿರಾವಾಂಗ್‌ ಹಿಮಕುಸಿತದಿಂದ ಮೃತಪಟ್ಟಿರುವುದಾಗಿ ಅಮೆರಿಕ ಮೂಲದ ಪರ್ವತಾರೋಹಿಗಳ ತಂಡ ಮ್ಯಾಡಿಸನ್ ತಿಳಿಸಿದೆ.

ಭೂಕಂಪ ಸಂಭವಿಸಿದ ವೇಳೆ 400 ವಿದೇಶಿಯರು ಸೇರಿದಂತೆ ಕನಿಷ್ಠ 1 ಸಾವಿರ ಚಾರಣಿಗರು ಮೂಲ ಶಿಬಿರದಲ್ಲಿದ್ದರು ಎಂದು ಇಲ್ಲಿನ ಪ್ರವಾಸೋದ್ಯಮ ಸಚಿವಾಲಯ ಅಂದಾಜಿಸಿದೆ.

ಸೇನೆಯಿಂದ 61 ಚಾರಣಿಗರ ರಕ್ಷಣೆ (ನವದೆಹಲಿ ವರದಿ): ಭಾರತೀಯ ಸೇನೆಯ ವಿಶೇಷ ಕಾರ್ಯಾಚರಣೆ ತಂಡ ಮೌಂಟ್‌ ಎವರೆಸ್ಟ್‌ನಿಂದ 61 ಚಾರಣಿಗರನ್ನು ರಕ್ಷಿಸಿದ್ದು, 19 ಮೃತದೇಹಗಳನ್ನು ಹೊರತೆಗೆದಿದೆ. ಮೂಲ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸೇನಾ ತಂಡ ಭೂಕಂಪನದ ನಡುವೆ ಸಿಲುಕಿತ್ತು. ಆದರೆ ಸುರಕ್ಷಿತವಾಗಿದ್ದ ತಂಡ ಕಾರ್ಯಾಚರಣೆಗೆ ನೆರವಾಯಿತು.

‘19 ಮೃತದೇಹಗಳನ್ನು ಹೊರತೆಗೆಯಲಾಗಿದೆ. 61 ಗಾಯಾಳುಗಳನ್ನು ಸೇನೆ ರಕ್ಷಿಸಿದೆ. ನಮ್ಮದೇ ಸಂಪನ್ಮೂಲಗಳಿಂದ ಅಗತ್ಯ ಪ್ರಮಾಣ ಔಷಧ ಮತ್ತು ಆಹಾರಗಳನ್ನು ಪೂರೈಸಲಾಗಿದ್ದು, ವೈದ್ಯಾಧಿಕಾರಿಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಸೇನೆ ತಿಳಿಸಿದೆ.

ಪರಿಹಾರ ಕಾರ್ಯದಲ್ಲಿ ನೇಪಾಳಕ್ಕೆ ನೆರವಾಗಲು ‘ಮೈತ್ರಿ’ ಕಾರ್ಯಾಚರಣೆಯನ್ನು ಭಾರತ ಸೇನೆ ಪ್ರಾರಂಭಿಸಿದೆ.

18 ವೈದ್ಯಕೀಯ ತಂಡಗಳನ್ನು ರಚಿಸಲಾಗಿದ್ದು, ಆರು ತಂಡಗಳು ಈಗಾಗಲೇ ನಿಯೋಜನೆಗೊಂಡಿವೆ. ಅವಶೇಷಗಳ ತೆರವಿಗೆ ಮಾನವ ಶಖ್ತಿಯ ಜೊತೆಗೆ ಜೆಸಿಬಿಯಂತಹ ಯಂತ್ರಗಳನ್ನು ನೇಪಾಳಕ್ಕೆ ಕಳುಹಿಸಲಾಗಿದೆ. 10 ಸಾವಿರ ಬ್ಲಾಂಕೆಟ್‌ ಮತ್ತು 1 ಸಾವಿರ ಟೆಂಟ್‌ಗಳನ್ನು ರವಾನಿಸಲಾಗಿದೆ. 

ಗೂಗಲ್‌ ಉದ್ಯೋಗಿ ಸಾವು (ನ್ಯೂಯಾರ್ಕ್‌ ವರದಿ): ಗೂಗಲ್‌ನ ಕಾರ್ಯನಿರ್ವಾಹಕರಾಗಿರುವ ಕ್ಯಾಲಿಫೋರ್ನಿಯಾದ ಡ್ಯಾನ್ ಫ್ರೆಡಿನ್‌ಬರ್ಗ್‌ ಸಾವಿಗೀಡಾಗಿರುವುದಾಗಿ ಗೂಗಲ್ ಸಂಸ್ಥೆ ತಿಳಿಸಿದೆ. ಚಾರಣಕ್ಕೆ ತೆರಳಿದ್ದ ಫ್ರೆಡಿನ್‌ಬರ್ಗ್‌ ಮೃತಪಟ್ಟಿದ್ದು, ಅವರೊಟ್ಟಿಗೆ ಇದ್ದ ಸಂಸ್ಥೆಯ ಇತರೆ ಮೂವರು ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಸಂಸ್ಥೆಯ ಅಧಿಕಾರಿ ಲಾರೆನ್ಸ್‌ ಯು ಅಂತರ್ಜಾಲದಲ್ಲಿ ತಿಳಿಸಿದ್ದಾರೆ. ಈ ಕುರಿತು ಗೂಗಲ್ ಹೆಚ್ಚುವರಿ ಮಾಹಿತಿ ನೀಡಿಲ್ಲ.

ಸಾಹಸ ಚಟುವಟಿಕೆಗಳಲ್ಲಿ ಸಾಕಷ್ಟು ಅನುಭವ ಹೊಂದಿದ್ದ ಫ್ರೆಡಿನ್‌ಬರ್ಗ್‌, ಗೂಗಲ್ ಅಡ್ವೆಂಚರ್ ಎಂಬ ಯೋಜನೆ ರೂಪಿಸಿದ್ದರು. ಗೂಗಲ್ ಸ್ಟ್ರೀಟ್‌ ವ್ಯೂ ಸೌಲಭ್ಯ ಯೋಜನೆಯನ್ನು ಮೌಂಟ್‌ ಎವರೆಸ್ಟ್‌ನ ತುತ್ತತುದಿ ಅಥವಾ ಆಸ್ಟ್ರೇಲಿಯಾದ ಸಮುದ್ರದಾಳದ ಬಂಡೆ ಹಾಸಿನ ಪ್ರದೇಶದಂತ ವಿಶಿಷ್ಟ, ಅಪಾಯಕಾರಿ ಜಾಗಕ್ಕೆ ಕೊಂಡೊಯ್ಯಬೇಕು ಎನ್ನುವುದು ಅವರ ಗುರಿಯಾಗಿತ್ತು ಎಂದು ಗೂಗಲ್‌ನ ತಾಂತ್ರಿಕ ವಿಭಾಗದ ಬ್ಲಾಗ್‌ಒಂದರಲ್ಲಿ ತಿಳಿಸಲಾಗಿದೆ.

ಜಾಗತಿಕ ತಾಪಮಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಫ್ರೆಡಿನ್‌ಬರ್ಗ್‌,  ಸೇವ್‌ ದಿ ಐಸ್‌ ಎಂಬ ಸಂಸ್ಥೆ ಹುಟ್ಟುಹಾಕಿದ್ದರು.

ಸಿಲುಕಿಕೊಂಡ ಭಾರತೀಯ: ಮ್ಯಾಡಿಸನ್‌ ಪರ್ವತಾರೋಹಿಗಳ ತಂಡದಲ್ಲಿ 54 ವರ್ಷದ ಭಾರತೀಯ ಅಂಕುರ್ ಬಾಲ್‌‌, ಹಿಮಕುಸಿತದ ನಡುವೆ ಸಿಲುಕಿಕೊಂಡಿದ್ದಾರೆ. 1ನೇ ಶಿಬಿರದಲ್ಲಿದ್ದ ಅಂಕುರ್, ಭೂಕಂಪನ ಸಂಭವಿಸಿದ ಬಳಿಕ 2ನೇ ಶಿಬಿರದತ್ತ ಶನಿವಾರ ತೆರಳಿದ್ದರು.

ಆದರೆ ಅವರು ನಡುವೆ ಸಿಲುಕಿಕೊಂಡಿದ್ದಾರೆ ಎಂದು ನವದೆಹಲಿಯಲ್ಲಿನ ಅವರ ಸ್ನೇಹಿತರು ತಿಳಿಸಿದ್ದಾರೆ. 1ನೇ ಶಿಬಿರ 19,500 ಅಡಿ ಎತ್ತರದಲ್ಲಿದ್ದರೆ, 2ನೇ ಶಿಬಿರ 21 ಸಾವಿರ ಅಡಿ ಎತ್ತರದಲ್ಲಿದೆ. ತೀವ್ರ ಹಿಮಕುಸಿತದಿಂದಾಗಿ 2ನೇ ಶಿಬಿರ ಸಂಪೂರ್ಣ ನಾಶವಾಗಿದೆ.
1ನೇ ಶಿಬಿರದ ಕೆಳಭಾಗದ ಮಾರ್ಗಕ್ಕೆ ಹಾನಿಯಾಗಿದೆ. ಜತೆಗೆ ಹಿಮಪಾತವೂ ಆಗುತ್ತಿದೆ ಎಂದು ಆ ತಂಡದೊಂದಿಗೆ ಉಪಗ್ರಹ ದೂರವಾಣಿ ಮೂಲಕ ಸಂಪರ್ಕ ಹೊಂದಿರುವ ಅಂಕುರ್‌ ಅವರ  ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT