ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ತಾಸುಗಳಲ್ಲಿ ಹತ್ತು ಕಡೆ ಸರಗಳವು

Last Updated 30 ಆಗಸ್ಟ್ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ಮತ್ತು ಶನಿವಾರ ದುಷ್ಕರ್ಮಿಗಳು ಹತ್ತು ಕಡೆ ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿದ್ದಾರೆ.
ಕೆಂಪೇಗೌಡನಗರ ಸಮೀಪದ ನಂಜಪ್ಪ ಬ್ಲಾಕ್‌ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ವಾಯುವಿಹಾರ ಮಾಡುತ್ತಿದ್ದ ಸುಬ್ಬಮ್ಮ (58) ಎಂಬುವರಿಂದ 40 ಗ್ರಾಂನ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಸುಬ್ಬಮ್ಮ ಅವರು ಶನಿವಾರ ಬೆಳಿಗ್ಗೆ 8.45ರ ಸುಮಾರಿಗೆ ಮನೆ ಮುಂದೆಯೇ ವಾಯುವಿಹಾರ ಮಾಡುತ್ತಿದ್ದರು. ‘ದುಷ್ಕ-ರ್ಮಿ-ಗಳು ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡಿದ್ದರಿಂದ ಅವರ ಚಹರೆ ಗೊತ್ತಾಗಿಲ್ಲ. ಬೈಕ್‌ನ ನೋಂದಣಿ ಸಂಖ್ಯೆ-ಯನ್ನು ಸಹ ದಾಖಲಿಸಿಕೊಂಡಿಲ್ಲ’ ಎಂದು ದೂರುದಾರರು ಹೇಳಿದ್ದಾರೆ. ಕೆ.ಜಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಂಗೇರಿ: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮನೆ ಮುಂದೆ ನಿಂತಿದ್ದ ಸುಷ್ಮಾ (42) ಎಂಬುವರಿಂದ 25 ಗ್ರಾಂ ಚಿನ್ನದ ಸರ ದೋಚಿರುವ ಘಟನೆ ಎಂಟಿಎಸ್‌ ಲೇಔಟ್‌ನಲ್ಲಿ ನಡೆದಿದೆ.

‘ಬೆಳಿಗ್ಗೆ 10 ಗಂಟೆಗೆ ವಿಳಾಸ ಕೇಳುವ ನೆಪದಲ್ಲಿ ಮನೆ ಬಳಿ ಬಂದ ಅಪರಿಚಿತ ವ್ಯಕ್ತಿಗಳು, ಸರ ಕಿತ್ತುಕೊಂಡು ಪರಾರಿ-ಯಾದರು. ಬೈಕ್‌ ಓಡಿಸುತ್ತಿದ್ದ ವ್ಯಕ್ತಿ ಕೆಂಪು ಬಣ್ಣದ ಟಿ–ಶರ್ಟ್‌ ಹಾಗೂ ಹಿಂಬದಿ ಸವಾರ ಬಿಳಿ ಬಣ್ಣದ ಅಂಗಿ ತೊಟ್ಟಿದ್ದ. ಆ ಬೈಕ್‌ಗೆ ನೋಂದಣಿ ಸಂಖ್ಯೆ ಇರಲಿಲ್ಲ’ ಎಂದು ಸುಷ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರಣ್ಯಪುರ:  ದುಷ್ಕರ್ಮಿಗಳಿಬ್ಬರು ಪ್ರಭಾ (69) ಎಂಬುವರಿಂದ 80 ಗ್ರಾಂನ ಚಿನ್ನದ ಸರ ದೋಚಿರುವ ಘಟನೆ ಎಚ್‌ಎಂಟಿ ಲೇಔಟ್‌ನ ಒಂದನೇ ಬ್ಲಾಕ್‌ನಲ್ಲಿ ಶುಕ್ರವಾರ ನಡೆದಿದೆ.

ಪ್ರಭಾ ಅವರು ಮನೆ ಸಮೀಪದ ದುರ್ಗಾಂಬ ದೇವಸ್ಥಾನಕ್ಕೆ ಹೋಗಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಿಂದಿರುಗುತ್ತಿದ್ದಾಗ ಈ ಕೃತ್ಯ ನಡೆದಿದೆ.

ವಿಜಯನಗರ: ವಿನಾಯಕ ಲೇಔಟ್‌ನಲ್ಲಿ ಬಾಡಿಗೆ ಮನೆ ನೋಡಲು ನಡೆದು ಹೋಗುತ್ತಿದ್ದ ಅಂಬಿಕಾ (30) ಎಂಬುವ-ರಿಂದ ಕಿಡಿಗೇಡಿಗಳು 25 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಸರ ಕಿತ್ತುಕೊಳ್ಳುತ್ತಿದ್ದಂತೆಯೇ ಅಂಬಿಕಾ ನೆರವಿಗಾಗಿ ಕೂಗಿಕೊಂಡಿ-ದ್ದಾರೆ. ಸ್ಥಳೀಯರು ಸಹಾಯಕ್ಕೆ ಬರುವ-ಷ್ಟ-ರಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾಲಕ್ಷ್ಮೀಲೇಔಟ್: ನಾಗಪುರ 12ನೇ ‘ಸಿ’ ಅಡ್ಡರಸ್ತೆಯಲ್ಲಿರುವ ಅಣ್ಣನ ಮನೆಗೆ ನಡೆದು ಹೋಗುತ್ತಿದ್ದ ಪದ್ಮಾ (60) ಎಂಬುವರಿಂದ ಕಿಡಿಗೇಡಿಗಳು 140 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ದೋಚಿದ್ದಾರೆ.

ಸಣ್ಣಕ್ಕಿ ಬಯಲು ನಿವಾಸಿಯಾದ ಪದ್ಮಾ, ಮಧ್ಯಾಹ್ನ 1.30ರ ಸುಮಾರಿಗೆ ಅಣ್ಣನ ಮನೆಗೆ ಹೊರಟಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಅವರ ಸರಗಳನ್ನು ಕಿತ್ತುಕೊಂಡು ಓಡಿದ್ದಾನೆ. ಪದ್ಮಾ ಅವರ ಚೀರಾಟ ಕೇಳಿದ ಸ್ಥಳೀಯರು, ಕಳ್ಳನನ್ನು ಬೆನ್ನಟ್ಟಿದ್ದಾರೆ. ಆದರೆ, ಆತ ಮುಂದೆ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ಸಹಚರನ ಜತೆ ಪರಾರಿಯಾಗಿದ್ದಾನೆ ಎಂದು ಮಹಾ-ಲಕ್ಷ್ಮೀಲೇಔಟ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು
*ಒಟ್ಟು 516 ಗ್ರಾಂ ಚಿನ್ನಾಭರಣ ಕಳವು
*ವೃದ್ಧೆಯರನ್ನೇ ಗುರಿಯಾಗಿಸಿ ಕೃತ್ಯ
*ಬೈಕ್‌ನಲ್ಲಿ ಬಂದು ಸರಗಳವು
*ಒಂದೇ ತಂಡದ ಕೈವಾಡ ಶಂಕೆ
*ವಿಳಾಸ ಕೇಳುವ ನೆಪ

ಸಂಜಯನಗರ: ದೇವಪ್ಪ ಗಾರ್ಡನ್‌ನ ಎರಡನೇ ಅಡ್ಡರಸ್ತೆಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ದುಷ್ಕರ್ಮಿಗಳು ಉಮಾದೇವಿ (61) ಎಂಬುವರಿಂದ 25 ಗ್ರಾಂನ ಸರ ದೋಚಿದ್ದಾರೆ.

’ನೆರೆ ಮನೆಯ ಮಹಿಳೆ ಜತೆ ಮಾತನಾಡುತ್ತಿದ್ದ ವೇಳೆ ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಸರ ಕಿತ್ತುಕೊಂಡು ಪರಾರಿಯಾದರು’ ಎಂದು ಉಮಾದೇವಿ ದೂರು ಕೊಟ್ಟಿದ್ದಾರೆ. ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಪ್ಪನ ಅಗ್ರಹಾರ: ಡಾಕ್ಟರ್ಸ್‌ ಲೇಔಟ್‌-ನಲ್ಲಿ ದುಷ್ಕರ್ಮಿಗಳು ಯುವತಿ-ಯ ಕುತ್ತಿಗೆಯಿಂದ ಕಿಡಿಗೇಡಿಗಳು 48 ಗ್ರಾಂ ತೂಕದ ಚಿನ್ನದ ಸರ ದೋಚಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಯುವತಿ ಸಮೀಪದ ಅಂಗಡಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದೂರುದಾರರು ತಮ್ಮ ಹೆಸರು ವಿವರಗಳನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದ್ದಾರೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ಹೇಳಿದ್ದಾರೆ.

ನಗರದಲ್ಲಿ ನಾಕಾಬಂದಿ
‘ನಗರದಲ್ಲಿ ಶುಕ್ರವಾರ ಒಂದೇ ದಿನ ಸರಣಿ ಸರಗಳ್ಳತನ ನಡೆದಿದೆ. ಗೌರಿ– ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರು ಹೆಚ್ಚು ಆಭರಣ ಧರಿಸಿರುತ್ತಾರೆ ಎಂಬುದನ್ನು ಅರಿತು, ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ನಗರದೆಲ್ಲೆಡೆ ನಾಕಾಬಂದಿ ಹಾಕಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಹಿಂದೆ ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಸಹ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಳಾಸ ಕೇಳುವ ಸೋಗಿನಲ್ಲಿ ದುಷ್ಕರ್ಮಿಗಳು ಸರ ದೋಚುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಆದರು ಸಹ ಮೋಸ ಹೋಗುತ್ತಿದ್ದಾರೆ. ವೃದ್ಧೆಯರೇ ಸರಗಳ್ಳರ ಗುರಿಯಾಗಿರುವುದರಿಂದ, ಈ ವಿಚಾರದಲ್ಲಿ ಹಿರಿಯ ನಾಗರಿಕರು ಹೆಚ್ಚು ಜಾಗೃತರಾಗಬೇಕು’ ಎಂದರು.

ಸುಬ್ರಹ್ಮಣ್ಯಪುರ: ಚಿಕ್ಕಲಸಂದ್ರ ಬಸ್‌ ನಿಲ್ದಾಣದ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಕಿಡಗೇಡಿಗಳು ಸರೋಜಮ್ಮ (65) ಎಂಬುವರಿಂದ 25 ಗ್ರಾಂ ಸರ ದೋಚಿ ಪರಾರಿಯಾಗಿದ್ದಾರೆ.

ಚಿಕ್ಕಲಸಂದ್ರ 2ನೇ ಅಡ್ಡರಸ್ತೆ ನಿವಾಸಿ-ಯಾದ ಸರೋಜಮ್ಮ, ಪಕ್ಕದ ರಸ್ತೆ-ಯಲ್ಲಿ-ರುವ ಮಗನ ಮನೆಗೆ ಮಧ್ಯಾಹ್ನ 3.30ರ ಸುಮಾರಿಗೆ ನಡೆದು ಹೋಗುತ್ತಿದ್ದರು. ಆಗ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದ ಕಳ್ಳರು, ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಸುಬ್ರಹ್ಮಣ್ಯ-ಪುರ ಪೊಲೀಸರು ಹೇಳಿದ್ದಾರೆ.

ಕುಂಬಳಗೋಡು: ಅಂಚೆಪಾಳ್ಯದಲ್ಲಿ ಸಂಜೆ 5.30ಕ್ಕೆ ಮನೆ ಸಮೀಪ ವಾಯು-ವಿಹಾರ ಮಾಡುತ್ತಿದ್ದ ಲಕ್ಷ್ಮೀದೇವಮ್ಮ (48) ಎಂಬುವರಿಂದ ದುಷ್ಕರ್ಮಿಗಳು 48 ಗ್ರಾಂನ ಚಿನ್ನದ ಸರ ದೋಚಿದ್ದಾರೆ.

ಜಯನಗರ: ಮನೆ ಮುಂದೆ ವಾಯು-ವಿಹಾರ ಮಾಡುತ್ತಿದ್ದ ಗಿರಿಜಮ್ಮ (70) ಎಂಬುವರಿಂದ ಕಳ್ಳರು 60 ಗ್ರಾಂನ ಎರಡು ಚಿನ್ನದ ಸರಗಳನ್ನು ದೋಚಿರುವ ಘಟನೆ ಜಯನಗರ ‘ಡಿ’ ಬ್ಲಾಕ್‌ನ 17ನೇ ಮುಖ್ಯರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

‌ಬೈಕ್‌ನಲ್ಲಿ ಬಂದಿರುವ ಅಪರಿಚಿತರು, ವಿಳಾಸ ಕೇಳುವ ನೆಪದಲ್ಲಿ ಗಿರಿಜಮ್ಮ ಅವರ ಹತ್ತಿರ ಹೋಗಿ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಅವರ ಮಗ ಸುದರ್ಶನ್‌ ಎಂಬುವರು ದೂರು ಕೊಟ್ಟಿದ್ದಾರೆ ಎಂದು ಜಯನಗರ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT