ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

43 ಹುದ್ದೆ ಭರ್ತಿ ಮಾಡದ ವಿವಿ

10 ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳು
Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: 2006ರಲ್ಲಿ 112 ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯವು, ಈವರೆಗೆ 69 ಮಂದಿಯನ್ನಷ್ಟೇ ನೇಮಕ ಮಾಡಿಕೊಂಡಿದೆ.

  ಆದರೆ, ವಿವಿಧ ವಿಭಾಗಗಳ 43 ಬೋಧಕರ ಹುದ್ದೆಗಳಿಗೆ ನಾಲ್ಕು ಸಲ ಅಧಿಸೂಚನೆ ಹೊರಡಿಸಿ, 10 ವರ್ಷಗಳಿಂದಲೂ ತುಂಬದೆ ಖಾಲಿ ಬಿಟ್ಟಿದೆ.
ತುಂಬದೇ ಇರುವ ಹುದ್ದೆಗಳಲ್ಲಿ  39 ಹುದ್ದೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡ,  ಸಾಮಾನ್ಯ (ಮಹಿಳೆ),  ಪ್ರವರ್ಗ–1, 2ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾಗಿವೆ.

ನೇಮಕಾತಿಗೆ ಮೊದಲ ಬಾರಿ ಅಧಿಸೂಚನೆ ಹೊರಡಿಸಿದ್ದು 2006ರ ಫೆಬ್ರುವರಿಯಲ್ಲಿ. ಆದರೆ, ಆ  ಸಂದರ್ಭದಲ್ಲಿ ನೇಮಕ ನಡೆದಿರಲಿಲ್ಲ.
ಇವೇ ಹುದ್ದೆಗಳಿಗೆ 2006ರ ಅಕ್ಟೋಬರ್‌ನಲ್ಲಿ ಮತ್ತೆ ಅಧಿಸೂಚನೆ ಹೊರಡಿಸಲಾಗಿತ್ತು. ಆಗ 54 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿತ್ತು. ಅವರಲ್ಲಿ ಬಹುತೇಕರು ಮೇಲ್ವರ್ಗದವರು.

ಉಳಿದ 58 ಹುದ್ದೆಗಳಿಗೆ 2008ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿ, 15 ಮಂದಿಯನ್ನು ನೇಮಕ ಮಾಡಿಕೊಂಡಿತ್ತು. ಆಗಲೂ ಮೇಲ್ವರ್ಗಕ್ಕೇ ಮನ್ನಣೆ ಸಿಕ್ಕಿತ್ತು.  ಉಳಿದ 43 ಹುದ್ದೆಗಳ ಭರ್ತಿಗೆ 2011ರ ಮಾರ್ಚ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. ನೇಮಕ ಮಾತ್ರ ಇದುವರೆಗೂ  ನಡೆದಿಲ್ಲ.

ಪಕ್ಷಪಾತ: ‘ಪ್ರತೀ ಸಲವೂ ಆಗಿನ ಕುಲಪತಿಗಳು ತಮಗೆ ಬೇಕಾದವರನ್ನು ನೇಮಿಸಿಕೊಂಡಿದ್ದಾರೆ. ಮೀಸಲಾತಿ ಹುದ್ದೆಗಳನ್ನು ನೇಮಕ ಮಾಡುವುದಕ್ಕೆ ಮನಸ್ಸು ಮಾಡಿಲ್ಲ’ ಎಂದು 2011ರಲ್ಲಿ   ಹುದ್ದೆಗಳಿಗೆ ಅರ್ಜಿ ಹಾಕಿದ್ದ ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಿಮ್ಮತ್ತಿಲ್ಲ: ಭರ್ತಿಯಾಗದೇ ಇರುವ ಹುದ್ದೆಗಳಲ್ಲಿ ಪರಿಸರ ವಿಜ್ಞಾನ ವಿಭಾಗದ 8 ಹುದ್ದೆಗಳೂ ಸೇರಿವೆ.
(ಪ್ರಾಧ್ಯಾಪಕ–1, ಸಹ ಪ್ರಾಧ್ಯಾಪಕ–2, ಸಹಾಯಕ ಪ್ರಾಧ್ಯಾಪಕ–5. ಈ ಐವರು ಸಹಾಯಕ ಪ್ರಾಧ್ಯಾಪಕರ ಮೀಸಲಾತಿ ವಿವರ: ಎಸ್‌ಸಿ–1, ಎಸ್‌ಟಿ–1, ಪ್ರವರ್ಗ(1)–1, ಸಾಮಾನ್ಯ–2  (ಮಹಿಳೆ–1).

ಈ ವಿಭಾಗದಲ್ಲಿ ಡಾ. ಎನ್‌. ಸುನಿತಾ ಮತ್ತು ಡಾ. ಡಿ. ಪರಮೇಶ್ ನಾಯ್ಕ್ ಎಂಬುವವರು ಕ್ರಮವಾಗಿ 20 ಹಾಗೂ 16 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವೆಯನ್ನು ಕಾಯಂಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌, ಉನ್ನತ ಶಿಕ್ಷಣ ಇಲಾಖೆ, ಮುಖ್ಯಮಂತ್ರಿ ಕಚೇರಿ ಸಲಹೆ ನೀಡಿದ್ದರೂ ವಿಶ್ವವಿದ್ಯಾಲಯ ಸ್ಪಂದಿಸಿಲ್ಲ!

‘ನಾವಿಬ್ಬರೂ ಪರಿಸರ ವಿಜ್ಞಾನ ವಿಭಾಗದಲ್ಲಿ ಪೂರ್ಣಕಾಲಿಕ ಅತಿಥಿ ಬೋಧಕರು. ಮೂರು ಬಾರಿ ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ. ವಿಭಾಗದಲ್ಲಿ ಹುದ್ದೆಗಳು ಖಾಲಿ ಇದ್ದರೆ, ನಿಯಮಾನುಸಾರ ನೇಮಕಾತಿ ಮಾಡಬಹುದು ಎಂದು ಹೈಕೋರ್ಟ್‌ ಆದೇಶ ನೀಡಿದೆ. ಆದರೂ ನಮ್ಮ ಸೇವೆ ಕಾಯಂ ಆಗಿಲ್ಲ. ನಾವು ದಲಿತರು, ಹಿಂದುಳಿದವರು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ’ ಎಂದು ಪರಮೇಶ ನಾಯ್ಕ್‌ ಆರೋಪಿಸಿದರು.

ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ (ಯುಜಿಸಿ) 10 ನೇ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ  ಗುತ್ತಿಗೆ ಆಧಾರದಲ್ಲಿ ಇದೇ ವಿಭಾಗಕ್ಕೆ ನೇಮಕವಾಗಿದ್ದ ಇಬ್ಬರ ಸೇವೆಯನ್ನು 2013ರಲ್ಲಿಯೇ ವಿಶ್ವವಿದ್ಯಾಲಯ ಕಾಯಂಗೊಳಿಸಿದೆ.

10ನೇ ಪಂಚವಾರ್ಷಿಕ ಯೋಜನೆಯು 2003–2007ರವರೆಗೆ ಜಾರಿಯಲ್ಲಿತ್ತು. ಈ ಯೋಜನೆ ಅಡಿಯಲ್ಲಿ ನೇಮಕವಾಗಿ ಸೇವೆ ಸಲ್ಲಿಸುತ್ತಿದ್ದ ವಿವಿಯ ವಿವಿಧ ವಿಭಾಗಗಳ 9 ಬೋಧಕರ ಸೇವೆ ಕಾಯಂಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಅವಕಾಶ ಇದೆ: ‘10ನೇ ಯೋಜನೆ ಅಡಿಯಲ್ಲಿ ನೇಮಕಗೊಂಡಿದ್ದವರನ್ನು ಕಾಯಂಗೊಳಿಸುವ ನಿರ್ಧಾರ ಕೈಗೊಂಡಿದ್ದು ವಿವಿ ಆಡಳಿತ ಮಂಡಳಿ.  ಅದೇರೀತಿ ನಮ್ಮ ಸೇವೆ ಕಾಯಂ ಗೊಳಿಸುವ ಅಧಿಕಾರವೂ ಅದಕ್ಕಿದೆ’  ಎನ್ನುವುದು ಪರಮೇಶ್ ನಾಯ್ಕ್‌ ಅವರ ವಾದ.

ಪತ್ರ: ಸೇವೆ ಕಾಯಂಗೊಳಿಸಲು ಕುಲಪತಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಬ್ಬರೂ ಅಧ್ಯಾಪಕರು ಪತ್ರ ಬರೆದಿದ್ದಾರೆ. ಅದಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

‘ವಿಭಾಗದಲ್ಲಿ ಪೂರ್ಣಕಾಲಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಈ ಮೊದಲೇ ನಮ್ಮ ಸೇವೆ ಕಾಯಂ ಆಗಿದ್ದರೆ ನಾವು ಇಷ್ಟೊತ್ತಿಗೆ ಪ್ರಾಧ್ಯಾಪಕರಾಗಿರುತ್ತಿದ್ದೆವು.  ಪಿಎಚ್‌.ಡಿ ಸೇರಿದಂತೆ ಎಲ್ಲ ಅರ್ಹತೆಗಳಿದ್ದರೂ ಸೇವೆ ಕಾಯಂ ಆಗಿಲ್ಲ.  ಕುಲಪತಿ ಪ್ರೊ. ತಿಮ್ಮೇಗೌಡ ಅವರಿಗೂ ಮನವಿ ಮಾಡಿದ್ದೇವೆ. ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ, ಇದುವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ನಾಯ್ಕ್‌ ಅವರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT