ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BMW M6 ಗ್ರಾನ್ ಕೂಪ್: ಹೊಸತೊಂದು ಐಷಾರಾಮ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾರತದ ಐಷಾರಾಮಿ ಕಾರು ಪ್ರಿಯರಿಗೆ ಬಿಎಂಡಬ್ಲು ಹೊಸತನವನ್ನು ಪರಿಚಯಿಸಿದೆ. ಗ್ರಾಹಕ ಸಂತೃಪ್ತಿ ಐಷಾರಾಮಿ ಕಾರು ತಯಾರಿಸುವಲ್ಲಿ ಅಗ್ರಸ್ಥಾನದಲ್ಲಿರುವ ಬಿಎಂಡಬ್ಲ್ಯೂ ಸಂಸ್ಥೆ ‘ಎಂ6 ಗ್ರಾನ್ ಕೂಪ್’ ಕಾರನ್ನು ಭಾರತದಲ್ಲಿ ಪರಿಚಯಿಸಿದೆ. ಹರಿಯಾಣ ರಾಜ್ಯದ ಗುಡಗಾಂವ್ ನಲ್ಲಿ ನಿರ್ಮಾಣವಾಗಿರುವ ನೂತನ ತರಬೇತಿ ಕೇಂದ್ರದಲ್ಲಿ ‘ಬಿಎಂಡಬ್ಲ್ಯು ಎಂ6 ಗ್ರಾನ್ ಕೂಪ್’ ಕಾರು ಅನಾವರಣಗೊಂಡಿದೆ. 14 ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ತನ್ನ ಹಿಂದಿನ ಎಂ5 ಮತ್ತು ಎಂ6 ಶ್ರೇಣಿಯನ್ನು ಸಂಯೋಜಿಸಿ ಇದನ್ನು  ಸಿದ್ಧಪಡಿಸಿದೆ. ಅಂದರೆ ಸಂಸ್ಥೆಯ ಎಂ ಶ್ರೇಣಿಯ ಕಾರಿನಲ್ಲಿರುವ ಪ್ರಮುಖ ಲಕ್ಷಣಗಳನ್ನು ಇಲ್ಲಿಯೂ ಕಾಣಬಹುದು. ಅತ್ಯಾಕರ್ಷಕ ವಿನ್ಯಾಸ, ಸ್ಪೋರ್ಟ್ಸ್ ಕಾರಿನ ಲಕ್ಷಣ, ವಿಶಾಲ ಕ್ಯಾಬಿನ್ ಜತೆಗೆ ಕೆಲವು ಅತ್ಯಾಧುನಿಕ ತಂತ್ರಜ್ಞಾನಗಳಿಂದ ಬೇರೆ ಐಷಾರಾಮಿ ಕಾರುಗಳಿಗಿಂತ  ಇದು ವಿಭಿನ್ನವಾಗಿ ಕಾಣಿಸಿಕೊಂಡಿದೆ. ಮನಮೋಹಕ ಬಣ್ಣ, ವಿನ್ಯಾಸದಿಂದ ಮೊದಲ ನೋಟಕ್ಕೆ ಆಕರ್ಷಿಸುತ್ತದೆ. ಉತ್ಕೃಷ್ಟ ಗುಣಮಟ್ಟದ ಹೊರ ವಿನ್ಯಾಸ ಮತ್ತು ಒಳವಿನ್ಯಾಸ ಕಾರಿನ ಐಷಾರಾಮಿ ನೋಟವನ್ನು ಮತ್ತಷ್ಟು ಹೆಚ್ಚಿಸಿದೆ.

ಮುಂಭಾಗ ವಿಶಾಲ ಏರ್ ಇನ್ ಲೆಟ್‌ಗಳು, ಅಡಾಪ್ಟಿವ್ ಎಲ್ಇಡಿ ಹೆಡ್ ಲೈಟ್ಸ್, ಫ್ಲ್ಯಾಟ್ ಟೈರ್, ಏರೋಡೈನಮಿಕ್ ಕನ್ನಡಿಗಳು ಆಕರ್ಷಕವಾಗಿವೆ. ಗಾಳಿಯನ್ನು ತೂರಿಕೊಂಡು ವೇಗವಾಗಿ ಚಲಿಸುವಂತೆ ಮಾಡಲು ಕಾರ್ಬನ್ ಫೈಬರ್ ರಿಇನ್‌ಫೋರ್ಸಡ್ ಪ್ಲಾಸ್ಟಿಕ್ (ಸಿಎಫ್ಆರ್ ಪಿ) ಬಳಸಿ ಕಾರನ್ನು ರೂಪಿಸಲಾಗಿದೆ.

ಒಳವಿನ್ಯಾಸದಲ್ಲಿ ನಮ್ಮ ದೇಹ ವಿನ್ಯಾಸಕ್ಕೆ ಹೊಂದಿಕೊಳ್ಳುವಂತಹ ಐಷಾರಾಮಿ ಆಸನಗಳಿವೆ. ಕಾರಿನ ಅಗಲ 1899ಮಿ.ಮೀ. ಇದೆ. ಆಸನಗಳ ನಡುವಿನ ಅಂತರ ಹೆಚ್ಚಿಸುವುದರ ಜತೆಗೆ ಭುಜ ಹಾಗೂ ತಲೆಗೆ ಹೆಚ್ಚು ಆರಾಮ ನೀಡುವಂಥ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಉಳಿದಂತೆ ಆಡಿಯೊ ಸಿಸ್ಟಂ, ನೇವಿಗೇಟರ್, ಏರ್ ಬ್ಯಾಗ್ಸ್, ಆ್ಯಂಟಿ ಲಾಕ್ ಬ್ರೇಕಿಂಗ್, ಪವರ್ ಸ್ಟೀರಿಂಗ್, ಪವರ್ ವಿಂಡೋಸ್, ಏರ್ ಕಂಡೀಷನರ್ ಸೌಲಭ್ಯ ಹೊಂದಿದೆ.

ಗ್ರಾನ್‌ಕೂಪ್ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಲಭ್ಯವಿದೆ. ಎಂ ಟ್ವಿನ್ ಪವರ್ ಟರ್ಬೊ 8 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಬಿಎಂಡಬ್ಲುನ ಎಲ್ಲಾ ಎಂಜಿನ್‌ಗಳಲ್ಲೇ ಉತ್ತಮ ಗುಣಮಟ್ಟದ್ದಾಗಿದೆ. 1500 ಆರ್ ಪಿಎಂ ನಲ್ಲಿ 680 ಎನ್ ಎಂ ಟಾರ್ಕ್ ಉತ್ಪತ್ತಿ ಮಾಡಬಲ್ಲದು. ಗರಿಷ್ಠ ವೇಗದ ಮಿತಿ 250 ಕಿಮೀ.ಗೆ ನಿಗದಿಗೊಳಿಸಲಾಗಿದೆ.

ಕಾರು ಯಾವುದೇ ಗೇರ್‌ನಲ್ಲಿದ್ದರೂ ಶಕ್ತಿಯ ಅಗತ್ಯವನ್ನು ಪೂರೈಸುವ ಸಾಮರ್ಥ್ಯ ಎಂಜಿನ್‌ಗೆ ಇದೆ. ಹೀಗಾಗಿ ಕನಿಷ್ಠ ವೇಗವಿರಲೀ ಅಥವಾ ಗರಿಷ್ಠ ವೇಗವಿರಲಿ ಎಲ್ಲಿಯೂ ವೇಗಕ್ಕೆ ಭಂಗ ಬಾರದಂತೆ ಶಕ್ತಿ ಪೂರೈಕೆ ಮಾಡುವ ತಂತ್ರಜ್ಞಾನವನ್ನು ಇದು ಹೊಂದಿದೆ. ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್‌ನಿಂದಾಗಿ ನೇರವಾದ ರಸ್ತೆಯಲ್ಲಿ ಚಲಿಸುವಾಗ ಶೇಕಡಾ 30ರಷ್ಟು ಇಂಧನ ಉಳಿಸಬಹುದು. ಇಷ್ಟೇ ಅಲ್ಲದೆ ಕಡಿಮೆ ತೂಕ, ಸ್ವಯಂಚಾಲಿತ ಸ್ಟಾರ್ಟ್ ಅಥವಾ ಸ್ಟಾಪ್, ಬ್ರೇಕ್ ಎನರ್ಜಿ ರಿ ಜನರೇಷನ್, ಹೆಚ್ಚಿನ ಇಂಧನ ಕ್ಷಮತೆ ಹೊಂದಿದೆ.

‘ಭಾರತದ ಐಷಾರಾಮಿ ಕಾರು ಪ್ರಿಯರಿಗೆ ಇದು ಮೆಚ್ಚುಗೆಯಾಗಲಿದೆ. ಎಂ ಶ್ರೇಣಿ ಸಂಸ್ಥೆಗೆ ಮತ್ತಷ್ಟು ಮೆರುಗನ್ನು ತಂದುಕೊಡಲಿದೆ ಎಂಬ ಭರವಸೆ ಇದೆ. ಗ್ರಾನ್ ಕೂಪ್ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಲಭ್ಯವಿದ್ದು ಇದರ ಬೆಲೆ ರೂ. 1, 75, 40,000 (ಎಕ್ಸ್ ಶೋ ರೂಂ ಬೆಲೆ) ಇಂದ ಪ್ರಾರಂಭವಾಗಲಿದೆ’ ಎಂದು ಸಂಸ್ಥೆಯ ಭಾರತದ ವಿಭಾಗದ ಅಧ್ಯಕ್ಷ ಫಿಲಿಪ್ ವೋನ್‌ಸಾರ್ ತಿಳಿಸಿದ್ದಾರೆ.

ಬಿಎಂಡಬ್ಲ್ಯು ತರಬೇತಿ ಕೇಂದ್ರ
ಐಷಾರಾಮಿ ಕಾರು ತಯಾರಕ ಸಂಸ್ಥೆ  ಬಿಎಂಡಬ್ಲ್ಯು ಭಾರತದಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ. ದೇಶದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರ, ಹರಿಯಾಣ ರಾಜ್ಯದ ಗುಡಗಾಂವ್‌ನಲ್ಲಿ ತನ್ನ ನೂತನ ತರಬೇತಿ ಕೇಂದ್ರ ಸ್ಥಾಪಿಸಿದೆ. 

ತರಬೇತಿ ಕೇಂದ್ರ 2.2 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಕಟ್ಟಡವು ಎಂಟು ತರಬೇತಿ ಘಟಕಗಳನ್ನು ಹೊಂದಿದ್ದು, ನಾನ್ ಟೆಕ್ನಿಕಲ್, ಟೆಕ್ನಿಕಲ್ ಮತ್ತು ಬಾಡಿ ಟ್ರೈನಿಂಗ್, ಗ್ರಾಹಕ ಕೇಂದ್ರ ಹಾಗೂ ಮೂರು ಸಮಾಲೋಚನಾ ಕೊಠಡಿಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಗುಣಮಟ್ಟದ ತರಬೇತಿಗೆ ಅಗತ್ಯ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ತರಬೇತಿ ಕಾರ್ಯಕ್ರಮಗಳನ್ನು ಪ್ರಮಾಣಿತ ತರಬೇತುದಾರರಿಂದ ಆಯೋಜಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT