ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂರ್ತ ಬಿಂಬಗಳು

ಕಲಾಪ
Last Updated 6 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಜೀವಿಯಲ್ಲೂ ವಿಭಿನ್ನ ಅಭಿವ್ಯಕ್ತಿಯನ್ನು ಕಾಣುತ್ತೇವೆ. ಆದರೆ ಎಲ್ಲದರಲ್ಲೂ ಸಾರ್ವಕಾಲಿಕ ಎಂಬಂತಹ ಕೆಲವೊಂದು ಅಂಶಗಳು, ದ್ವಂದ್ವಗಳು ಇದ್ದೇ ಇರುತ್ತವೆ.

ಅಂತಹವುಗಳ ಕುರಿತ ಸೂಕ್ಮ ಬಿಂಬಗಳು ಕಲಾಕೃತಿಗಳ ರೂಪದಲ್ಲಿ ಮೂಡಿಬಂದಿರುವುದು ‘ಉಜ್ಜಲ’ ಕಲಾತಂಡದ ಪ್ರದರ್ಶನದಲ್ಲಿ.
ಪ್ರದರ್ಶನವನ್ನು ಆಯೋಜಿಸಿರುವ ‘ಉಜ್ಜಲ’ ಕಲಾ ತಂಡ ಕೋಲ್ಕತ್ತ ಕಲಾ ವಿಶ್ವವಿದ್ಯಾಲಯದ ಏಳು ಕಲಾವಿದರನ್ನು ಒಳಗೊಂಡಿದೆ. ನ. 2ರಿಂದ ನಗರದ ಚಿತ್ರಕಲಾ ಪರಿಷತ್ತಿನ 3ನೇ ಪ್ರದರ್ಶಕ ಕೋಣೆಯಲ್ಲಿ ಪ್ರಾರಂಭವಾಗಿರುವ ಚಿತ್ರಕಲಾ ಪ್ರದರ್ಶನವು ನ. 8ರವರೆಗೆ  ನಡೆಯಲಿದೆ.

ಶ್ರೀಪರ್ಣ ಭಟ್ಟಾಚಾರ್ಯ, ಸುದೇಷ್ಣಾ  ಸಿಲ್‌ ಮುಖರ್ಜಿ, ಶ್ರೀಪರ್ಣ ರಾಯ್‌, ಬಪ್ಪಾ ಮಜಿ,  ತನ್ಮಯ್‌ ಹಜಾರ, ಸುದೀಪ್‌ ಬಿಸ್ವಾಸ್‌ ಹಾಗೂ ಸಾಮ್ರಾಟ್‌ ಚೌಧರಿ ಅವರನ್ನು ಒಳಗೊಂಡ ಯುವ ಕಲಾವಿದರು ಸೇರಿ ವರ್ಣ ಚಿತ್ರ, ಸ್ಕಲ್ಪ್‌ಚರ್‌ ಕ್ಯಾನ್ವಾಸ್‌, ಆಕ್ರಿಲಿಕ್‌ ಸೇರಿದಂತೆ ವಿವಿಧ ವಿನ್ಯಾಸಗಳ ಚಿತ್ರಕಲೆಗಳ ಸಂಗ್ರಹಗಳ ಮೂರನೇ ವರ್ಷದ ಪ್ರದರ್ಶನದಲ್ಲಿ ಭಾಗವಹಿಸಿರುವುದು ವಿಶೇಷ.

ಮನುಷ್ಯನ ವಿಭಿನ್ನ ಅನುಭವ, ಕೋಪ, ಹತಾಶೆ, ಕ್ರೋಧ, ವ್ಯಾಕುಲತೆ ಹಾಗೂ ತ್ಯಾಗಗಳ ಮುಖಚರ್ಯೆಗಳನ್ನು ಬಿಂಬಿಸುವ ಶ್ರೀಪರ್ಣ ಭಟ್ಟಾಚಾರ್ಯರ ಮಿಶ್ರ ಮಾಧ್ಯಮದ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಅದರಲ್ಲೂ ಬುದ್ಧನ ಕೋಪದ ಮುಖ ಹಾಗೂ ತ್ಯಾಗದ ಪ್ರತೀಕದಂತೆ ಬಲಿ ರೂಪದ  ಕಲ್ಪಿತಮುಖ ಬಿಂಬಿತವಾಗಿದೆ. ಒಟ್ಟಾರೆ ಮನುಷ್ಯನ ರಸಭಾವದ ಚಿತ್ರಗಳನ್ನು ಭಟ್ಟಾಚಾರ್ಯ ಚಿತ್ರಿಸಿದ್ದಾರೆ.

ಮಾನವ ಜೀವನದ ಮೆಟ್ಟಿಲುಗಳು, ಏರಿಳಿತಗಳು ಸ್ಪರ್ಧೆ, ಹೋರಾಟ ಹಾಗೂ ಮಿತಿಮೀರಿದ ಜನಸಂಖ್ಯೆಯಲ್ಲಿ ತಮ್ಮದೇ ಅಸ್ತಿತ್ವಕ್ಕಾಗಿ ಹೋರಾಡುವ ಬಗೆಗಿನ ಅಮೂರ್ತ ಕಲ್ಪನಾ ಕಣ್ಣುಗಳ ಚಿತ್ರಗಳು  ಶ್ರೀಪರ್ಣ ರಾಯ್‌  ಅವರ ‘ಪಾಪ್ಯುಲೇಷನ್‌’ ಸಂಗ್ರಹದಲ್ಲಿವೆ. ಹಾಗೆಯೇ ಸುದೇಷ್ಣಾ ಸಿಲ್‌ ಮುಖರ್ಜಿ ಅವರ ಚಿತ್ರಗಳೂ  ಅಮೂರ್ತದೆಡೆಗಿನ ತುಡಿತದಿಂದ ಕೂಡಿವೆ. ಮನುಷ್ಯನ ಮಿದುಳು ಮೀನಿನಂತೆ.  ಅದರ ಜಾಡು ಹಿಡಿಯುವುದು ಕಷ್ಟ ಎನ್ನುವುದನ್ನು ಆಕ್ರಿಲಿಕ್‌ ಕ್ಯಾನ್ವಾಸ್‌ನ ‘ಮ್ಯಾನ್‌ ಅಂಡ್‌ ಫಿಶ್‌’ ಚಿತ್ರವು ಸಾರುತ್ತದೆ. ತಿಳಿಬಣ್ಣಗಳ ಕಲಾಕೃತಿ ಇದು.

ಮೋಹಕ ಕಣ್ಣುಗಳುಳ್ಳ ಸುಂದರಿಯರ ಮುಖದಲ್ಲೂ ವ್ಯಕ್ತವಾಗುವ ಬೇಸರ, ನೋವು–ಹತಾಶೆಯ ಭಾವವನ್ನು ಸುದೀಪ್‌ ಬಿಸ್ವಾಸ್‌ ಚಿತ್ರಿಸಿದ್ದಾರೆ. ಜತೆಗೆ ಮೋಹದ ಹಿಂದಿನ ಹತಾಶ ಸ್ಥಿತಿಗಳನ್ನು ಸ್ತ್ರೀ ಮುಖದಲ್ಲಿ ಆಕ್ರಿಲಿಕ್‌ ಮತ್ತು ಪೆನ್ಸಿಲ್‌ ಬಳಸಿ ಚಿತ್ರಿಸಿದ್ದಾರೆ. ಹಾಗೆಯೇ ಇವರ ಚಿಕ್ಕ ಗಾತ್ರದ ಕಾಡಿನ ಚಿತ್ರಗಳೂ ಪ್ರದರ್ಶನದಲ್ಲಿವೆ.

ಮರದ ಹಲಗೆ ಹಾಗೂ ಲೋಹ ಮಿಶ್ರಿತ ಚಿತ್ರಕಲೆ ಪ್ರದರ್ಶನಕ್ಕೆ ಮೆರುಗು ನೀಡಿವೆ. ಸಾಮ್ರಾಟ್‌ ಚೌಧರಿ ಅವರ ಎರಡು–ಮೂರು ಶಿರಗಳ ಚಿತ್ರಗಳು ಹಾಗೂ ಮೀನುಗಳ ಗುಂಪಿನ ಚಿತ್ರ ಗಮನ ಸೆಳೆಯುವಂತಿವೆ. ಫೈಬರ್‌ ಗಾಜು– ತೈಲವರ್ಣದಿಂದ ಕೂಡಿದ ಮಿಶ್ರ ಮಾಧ್ಯಮದ ‘ಜರ್ನಿ’ ಚಿತ್ರವು ಜೀವನದ ಜಂಜಾಟಗಳ ಪ್ರತೀಕವೆಂಬಂತೆ  ಬಿಂಬಿತವಾಗಿದ್ದು, ಇವನ್ನು ತನ್ಮಯ್‌ ಹಜಾರ ರಚಿಸಿದ್ದಾರೆ. ಅವರ ‘ರೆವೆಲ್ಯೂಷನ್‌’ ಚಿತ್ರ  ರಕ್ತದ ಕಣಗಳು, ಗಾಯಗಳನ್ನು ಪ್ರತಿಬಿಂಬಿಸುತ್ತವೆ.

ಬಪ್ಪಾ ಮಜಿಯವರ ಮಿಶ್ರ ಮಾಧ್ಯಮದ ಚಿತ್ರಗಳು ಪರಿಸರ, ಕಾಡು, ವನದ ನಡುವಿನ ಕೊಳ ಹಾಗೂ ಬುದ್ಧ, ಕೃಷ್ಣನ ಗಣೇಶನ ಮೂರ್ತಿಗಳ ಚಿತ್ರಗಳು  ಇವರ ಸೂಕ್ಮ ಕುಶಲತೆಯನ್ನು  ಬಿಂಬಿಸುತ್ತವೆ. ಕನಿಷ್ಠ ಐದು ಸಾವಿರದಿಂದ ಹದಿನೈದು ಸಾವಿರದವರೆಗಿನ  ಚಿತ್ರಗಳು ಈ ಪ್ರದರ್ಶನದಲ್ಲಿವೆ. ಹಾಗೆಯೇ ಮಿಶ್ರ ಮಾಧ್ಯಮದ ಕಲಾಚಿತ್ರಗಳು ಹದಿನೈದು ಸಾವಿರದಿಂದ  ಎಪ್ಪತೈದು ಸಾವಿರದವರೆಗೆ ಬಿಕರಿಯಲ್ಲಿವೆ.

ಚಿತ್ರ ಪ್ರದರ್ಶನ ವೇಳೆ: ಬೆಳಿಗ್ಗೆ10:30 ರಿಂದ ಸಂಜೆ 7 ಗಂಟೆವರೆಗೆ.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT