ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತಬಳ್ಳಿ ಕಷಾಯದ ಕವಿಯ ಅಮೃತ ಹಸ್ತ!

ಧಾರವಾಡ ಸಾಹಿತ್ಯ ಸಂಭ್ರಮ
Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ
ADVERTISEMENT

ಧಾರವಾಡ: ‘ಅಮೃತಬಳ್ಳಿ ಕಷಾಯ ಬರೆದ ಜಯಂತ ಕಾಯ್ಕಿಣಿ ಅವರದ್ದು ಅಮೃತ ಹಸ್ತ. ಅವರ ಕೈಯಿಂದ ಬಿಡುಗಡೆಯಾದ ಪುಸ್ತಕಗಳು ಬಹಳ ಬೇಗ ಮಾರಾಟವಾಗುತ್ತವೆ. ಇತ್ತೀಚೆಗೆ ಅವರು ಹೊಸ ಲೇಖಕರೊಬ್ಬರ ಪುಸ್ತಕ ಬಿಡುಗಡೆ ಮಾಡಿದರು. ಅದು ಒಂದೇ ವಾರದಲ್ಲಿ 250 ಪ್ರತಿ ಮಾರಾಟವಾಯಿತು’.

ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದಲ್ಲಿ ಶನಿವಾರ ಹೀಗೆಂದು ಶಬ್ಬಾಸ್‌ಗಿರಿ ಕೊಟ್ಟವರು ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ. 
ಕೆದಂಬಾಡಿ ಜತ್ತಪ್ಪ ರೈ ‘ಬೇಟೆಯ ಉರುಳು’ ಮತ್ತು ಎಸ್‌.ಸಿ.ಸರದೇಶ­ಪಾಂಡೆ ಅವರ  ‘ರಾಷ್ಟ್ರೀಯ ಸುರಕ್ಷೆಯ ಜಗ್ಗಾಟ’ ಪುಸ್ತಕಗಳನ್ನು ಬಿಡುಗಡೆಗೆ ತಾವು ಜಯಂತ ಕಾಯ್ಕಿಣಿ ಅವರನ್ನೇ ಯಾಕೆ ಆಯ್ಕೆ ಮಾಡಿದ್ದು ಎನ್ನುವುದಕ್ಕೆ ಇದು ಅವರ ಸಮರ್ಥನೆಯೂ ಆಗಿತ್ತು. ಇದರೊಂದಿಗೆ ಕನ್ನಡ ಸಾಹಿತ್ಯಕ್ಕೆ ಬೇಟೆ ಸಾಹಿತ್ಯ ಮತ್ತು ಸೇನಾ ಸಾಹಿತ್ಯಗಳೂ ಸೇರ್ಪಡೆಗೊಂಡವು.

‘ಇನ್ನು ಮುಂದೆ ಜಯಂತ ಕಾಯ್ಕಿಣಿ ಅವರು ತಮ್ಮ ಪುಸ್ತಕಗಳನ್ನೂ ಬೇರೆಯವರಿಂದಲೂ ಬಿಡುಗಡೆ ಮಾಡಿಸದೆ ತಾವೇ ಬಿಡುಗಡೆ ಮಾಡಬೇಕು’ ಎಂಬ ಸಲಹೆಯನ್ನೂ ನೀಡಿದರು ಸುಬ್ರಹ್ಮಣ್ಯ.

ನಂತರ ಮಾತನಾಡಿದ ಜಯಂತ ಕಾಯ್ಕಿಣಿ ‘ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲಾ ಕಡೆ ಜೀಮ್‌ಗಳ ಹಾವಳಿ ಹೆಚ್ಚುತ್ತಿದೆ. ಅದರಷ್ಟೇ ಪ್ರಮಾಣದಲ್ಲಿ ಗ್ರಂಥಾಲಯಗಳು ಹೆಚ್ಚಾಗಬೇಕು. ಇಂದು ಪುಸ್ತಕ ಓದಲು ಗ್ರಂಥಾಲಯಕ್ಕೆ ಹೋಗುವವರ ಸಂಖ್ಯೆ ವಿರಳ. ಬುದ್ಧಿಯೇ ಇಲ್ಲದ ದೇಹ ನಿಷ್ಪ್ರಯೋಜಕ. ಬುದ್ಧಿಯೇ ಇಲ್ಲದ ದೇಹ ನಿರ್ಜೀವ ವಸ್ತು­ವಿನಂತೆ. ಅಂಥವರನ್ನು ಕಂಡಾಗ ನನಗೆ ಟ್ರ್ಯಾಕ್ಟರ್‌ ನೋಡಿದ ಹಾಗಾಗುತ್ತದೆ’ ಎಂದರು.

‘ಬೌದ್ಧಿಕ ಮಟ್ಟದ ವೃದ್ಧಿಗೆ ಪುಸ್ತಕಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳುವುದರ ಜೊತೆಗೆ ಸುಮಧುರ ಸಂಗೀತದ ಆಲಿಕೆ, ಉತ್ತಮ ಸ್ನೇಹಿತರ ಸಹವಾಸ ಅಗತ್ಯ.  ವಿಪುಲತೆಯೇ ನಮ್ಮ ಹಸಿವನ್ನು ಹುದುಗಿಸಬಹುದು. ತುಂಬಾ ಹಸಿವಾದಾಗ ಎದುರಿನಲ್ಲಿ ವಿಭಿನ್ನವಾದ ತಿನಿಸುಗಳಿದ್ದರೆ ಅದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಶುರುವಾಗುತ್ತದೆ. ಅದರಲ್ಲಿ ಯಾವುದು ಉತ್ತಮವಾಗಿರುತ್ತದೆಯೋ ಅದೇ ನಮ್ಮ ಆಯ್ಕೆಯಾಗಬೇಕು’ ಎಂದರು.

ಪೇಶಾವರದಲ್ಲಿ ಈಚೆಗೆ ಉಗ್ರರು ಮಕ್ಕಳನ್ನು ಹತ್ಯೆ ಮಾಡಿದ್ದನ್ನು ಪ್ರಸ್ತಾಪಿಸಿದ ಅವರು ‘ಮಕ್ಕಳ ಹತ್ಯೆ ಎಂತಹ ಕ್ರೌರ್ಯ. ಉಗ್ರರು ಸರಿಯಾದ ಸಮಯದಲ್ಲಿ ಸರಿಯಾದ ಪುಸ್ತಕ ಓದಿದ್ದರೆ, ಹಾಡು ಕೇಳಿದ್ದರೆ, ಒಳ್ಳೆಯ ಸ್ನೇಹಿತರ ಸಹವಾಸ ಮಾಡಿದ್ದರೆ ಖಂಡಿತಾ ಅವರು ಭಯೋತ್ಪಾದಕರಾಗುತ್ತಿರಲಿಲ್ಲ’ ಎಂದರು. ಕೆದಂಬಾಡಿ ಜತ್ತಪ್ಪ ರೈ ಅವರ ಮಗ ತಿಮ್ಮಪ್ಪ ರೈ ಮತ್ತು ಲೆಫ್ಟಿನೆಂಟ್‌ ಜನರಲ್‌ ಎಸ್‌.ಸಿ. ಸರದೇಶಪಾಂಡೆ ಇದ್ದರು.
* * *

ಮಿಲಿಟರಿ ಮತ್ತು ಬೇಟೆ ಸಂವೇದನೆ ಎರಡೂ ಸಾಹಿತ್ಯಕ್ಕೆ ಹೊಸತು. ಇವೆರಡೂ ವೈವಿಧ್ಯಮಯ ಕ್ಷೇತ್ರಗಳಿಂದ ರೂಪುಗೊಂಡ ಅಪರೂಪದ ವಸ್ತುಗಳು. ಮಿಲಿಟರಿ ಪುಸ್ತಕ ಎನ್ನುವುದನ್ನು ನಾನು ಇದೇ ಮೊದಲ ಬಾರಿಗೆ ಕೇಳಿದ ಶಬ್ದ. ಇಲ್ಲಿಯವರೆಗೂ ಮಿಲಿಟರಿ ಹೋಟೆಲ್‌ ಮಾತ್ರ ಕೇಳಿದ್ದೆ.
– ಜಯಂತ ಕಾಯ್ಕಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT