ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾವಾದಿ ಅಪ್ಪಯ್ಯ

Last Updated 29 ಮಾರ್ಚ್ 2013, 19:59 IST
ಅಕ್ಷರ ಗಾತ್ರ

`ಏನಯ್ಯಾ ಅಪ್ಪಯ್ಯ ಹೇಗಿದ್ದೀಯ?'
`ನನಗೇನಯ್ಯ ಫಸ್ಟ್‌ಕ್ಲಾಸ್ ಆಗಿದ್ದೀನಿ, ಹಾರ್ಟ್‌ಗೆ ಬೈಪಾಸ್ ಆಪರೇಷನ್ ಆಗಿ ಎರಡು ತಿಂಗಳಾಯಿತು. ನನ್ನೆಂಡ್ತಿಗೆ ಅದೂ ಇದೂ ಇದ್ದೇ ಇರುತ್ತೆ. ವಯಸ್ಸಾದ ಮೇಲೆ ಇವೆಲ್ಲ ಸಹಜವೇ. ಇರಲಿ ನೀನು ಹೇಗಿದ್ದೀಯ?'

ಹಳೆಯ ಮಿತ್ರನ ಮುಂದೆ ತಮ್ಮ ಕಷ್ಟ ಕೋಟಲೆಗಳನ್ನು ಹೇಳಿಕೊಳ್ಳಬೇಕು ಅಂದುಕೊಂಡಿದ್ದ ಮೂರ್ತಿ, ಮೌನವಾಗಿ ಅಪ್ಪಯ್ಯನವರ ಮುಖವನ್ನೇ ನೋಡಿದರು. ತಾವು ಏನು ಹೇಳಿಕೊಳ್ಳಬೇಕು ಎಂದುಕೊಂಡಿದ್ದರೋ ಅದೆಲ್ಲ ಮರೆತೇ ಹೋಯಿತು.

`ಫಸ್ಟ್ ಕ್ಲಾಸಾಗಿದ್ದೀನಿ ಅಂತ ನೀನು ಹೇಳಿದ್ದು ಕೇಳಿ ನನಗೆ ಮಾತೇ ಹೊರಡ್ತಾ ಇಲ್ಲ ನೋಡು. ಏನಯ್ಯ ನಿನ್ನ ಸಂತೋಷದ ಗುಟ್ಟು?'
`ಗುಟ್ಟು ಏನಿಲ್ಲಪ್ಪ. ಆಗ ಓದಿದ್ದನ್ನ ಈಗ ಅನುಸರಿಸ್ತಿದ್ದೀನಿ ಅಷ್ಟೆ. ಆದಷ್ಟು ಮಟ್ಟಿಗೆ ಎಲ್ರಿಗೂ ಇದ್ದ ಹಾಗೆ ನನಗೂ ನನ್ನದೇ ಆದ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆಲ್ಲ ಪರಿಹಾರಗಳು ಇಲ್ಲಾಂತ ನಂಗೆ ಗೊತ್ತು. ಪರಿಹರಿಸಲಾಗದ್ದನ್ನು ಸಹಿಸಿಕೊಳ್ಳಬೇಕು ಅನ್ನೋ ಮಾತು ಕೇಳಿದ್ದೀಯಲ್ಲ, ಹಾಗೆ ಅಂದುಕೊಂಡಿದ್ದೀನಿ'.

`ಅದೇನೋ ಸರಿಯೇ. ಯಾರಿಗಾದರೂ ಹೇಳಿಕೊಂಡರೆ ಸಮಾಧಾನ ಸಿಗುತ್ತೆ ಅಲ್ವಾ?'
`ಹೌದು. ಆದರೆ ಅವರಿಗೆ ನಮ್ಮ ತಾಪತ್ರಯಗಳನ್ನ ಕಟ್ಟಿಕೊಂಡು ಆಗಬೇಕಾದ್ದೇನು? ಏನೋ ಉಪಚಾರಕ್ಕೆ ಅವರು ಏನೋ ಹೇಳಿದರೆ ನನಗಾಗೋ ಪ್ರಯೋಜನವಾದರೂ ಏನು, ಅಲ್ವಾ?'

`ಹೌದು ಕಣಯ್ಯ. ಹೋಗಲಿ, ಫಸ್ಟ್‌ಕ್ಲಾಸ್ ಆಗಿರಬೇಕಾದರೆ, ನಿಜ ಜೀವನದಲ್ಲಿ ಏನೇನು ಮಾಡಬೇಕು ಹೇಳಿಬಿಡಪ್ಪಾ'.
`ಮೊದಲನೆಯದಾಗಿ, ಆಶಾವಾದಿ ಆಗಿರಬೇಕು. ಒಳ್ಳೆಯ ದಿನಗಳು ಬಂದೇ ಬರುತ್ತವೆ, ನಾಳೆ ಇವತ್ತಿಗಿಂತ ಖುಷಿಯಾಗಿರೋ ಅವಕಾಶ ಸಿಗುತ್ತೆ ಅಂತ ಬಲವಾಗಿ ನಂಬಬೇಕು. ಈ ನಂಬಿಕೆ ಅನ್ನೋದು ಚೆನ್ನಾಗಿ ಕೆಲಸ ಮಾಡುತ್ತೆ ನೋಡು. ದೇವರನ್ನ ದೃಢವಾಗಿ ನಂಬಿ, ಮಾಡೋ ಕೆಲಸವನ್ನ ಶ್ರದ್ಧೆಯಿಂದ ಮಾಡಿಬಿಡೋದು. ನಾವು ಬಯಸಿದ ಫಲ ಸಿಗದೇ ಇದ್ರೆ, ಆಗಿರಬಹುದಾದ ತಪ್ಪನ್ನ ಸರಿಪಡಿಸಿಕೊಂಡು ಮತ್ತೆ ಶುರು ಮಾಡೋದು'.

`ಹೌದು. ಸಣ್ಣ ಸೋಲಿನಿಂದ ಧೈರ್ಯ ಕಳೆದುಕೋಬಾರದು, ಅನ್ತೀಯ'.
`ಖಂಡಿತ. ಬ್ರೂಸ್ ದೊರೆ ಬಲೆ ಕಟ್ತಿದ್ದ ಜೇಡವನ್ನು ನೋಡಿ ಕಲೀಲಿಲ್ವಾ ಹಾಗೆ. ನನಗೆ ಸಿಗದೆ ಇರೋ ಜಯ ಬೇರೆ ಯಾರಿಗೋ ಸಿಕ್ತು ಅಂತಿಟ್ಕೊ, ಅವರನ್ನು ನೋಡಿ, ಅವರಿಗಾದರೂ ಸಿಕ್ತಲ್ಲ ಅಂತ ಸಮಾಧಾನ ಪಟ್ಟುಕೊಳ್ಳೋದು. ಇವತ್ತು ಅವನಿಗೆ ಸಿಕ್ಕಿದ್ದು ನಾಳೆ ನನಗೂ ಸಿಗುತ್ತೆ ಅಂದುಕೊಳ್ಳೋದು'.

`ಸರಳವಾಗಿ ಹೇಳಬೇಕೂಂದ್ರೆ, ನನಗೆ ಸಿಕ್ಕದ್ದು ಅವನಿಗೆ ಸಿಕ್ಕಿಬಿಡ್ತಲ್ಲ ಅಂತ ಕರುಬಬಾರದು ಅಲ್ವ'.
`ರೈಟ್, ಇನ್ನೊಬ್ಬನ್ನ ಅಭಿನಂದಿಸೋದು ನಿನ್ನ ಹೃದಯ ವೈಶಾಲ್ಯವನ್ನು ತೋರಿಸುತ್ತೆ. ಈ ಸಂದರ್ಭದಲ್ಲಿ, ನೀನು ಯಾರಿಗೇ ಆಗಲಿ ಮಾಡಿದ ಸಣ್ಣ ಸಹಾಯವನ್ನು ಜ್ಞಾಪಿಸಿಕೊ. ಅವರಿಗೆ ತೋರಿದ ಕರುಣೆಯಿಂದ ನಿನ್ನ ಮನಸ್ಸು ಹಗುರ ಆಗುತ್ತೆ. ಆಗ ಸುಖದ ಅನುಭವ ಆಗುತ್ತೆ, ನಿನಗೆ ಅಗತ್ಯವಾದ ಉತ್ತೇಜನವೂ ಸಿಗುತ್ತೆ. ಇನ್ನೊಬ್ಬರನ್ನು ಉತ್ತೇಜಿಸುವುದರಿಂದ ನೀನು ಕಳೆದುಕೊಳ್ಳೋದು ಏನೂ ಇಲ್ಲ.'
`ಉತ್ತೇಜನ ಬೇರೆಯವರಿಂದಲೇ ಬರಲಿ, ನಮ್ಮಳಗಿನಿಂದಲೇ ಬರಲಿ, ಒಳ್ಳೆಯ ಫಲವನ್ನೇ ಕೊಡುತ್ತೆ. ನಿನ್ನೊಳಗೂ ಒಂದೋ ಎರಡೋ ಒಳ್ಳೇ ಗುಣಗಳು ಇವೆಯಲ್ಲ, ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು, ತಾಳ್ಮೆಯಿಂದ ಯೋಚಿಸಿ ಕೆಲಸ ಮಾಡು. ಒಳ್ಳೆಯದೇ ಆಗುತ್ತೆ ಅಂತ ಸಮಾಧಾನವಾಗಿ ಇರೋದ್ರಿಂದ  ಶಕ್ತಿ ಬಂದ ಹಾಗಾಗುತ್ತೆ ಗೊತ್ತಾ?'

`ಹೌದಾ ಅಪ್ಪಯ್ಯ, ನಿನ್ನ ಮಾತಲ್ಲಿ ಸತ್ಯ ಇದೆ. ಕೈಲಾಗೋಲ್ಲ ಅಂತ ಕೂರೋ ಬದಲು, ಮುಂದೆ ಬಂದರೆ ಉತ್ಸಾಹ ತನ್ನಷ್ಟಕ್ಕೆ ತಾನೇ ಹುಟ್ಟುತ್ತೆ, ನನಗೂ ಈ ಅನುಭವ ಎಷ್ಟೋ ಸಲ ಆಗಿದೆ'.

`ನೋಡು ಮೂರ್ತಿ, ಈಗ ನಿನ್ನನ್ನು ನೋಡಿ ನನಗೆ ಏನೋ ಒಂಥರಾ ಸಂತೋಷ ಆಯ್ತು. ನನ್ನ ಬಳಿ ಮಾತಾಡಬೇಕು ಅಂತ ನಿನಗೂ ತವಕ ಆಯ್ತು. ನಮ್ನಿಬ್ಬರ ನಡುವಿನ ಸ್ನೇಹ ಸಂಬಂಧದಿಂದ ಇಬ್ರಿಗೂ ಆಶಾವಾದ ಹುಟ್ಟುತ್ತೆ. ನನಗೆ ಬೇಕಾದವರು ಬೇಕಾದಷ್ಟು ಜನ ಇದ್ದಾರೆ ಅನ್ನುವ ಮಧುರ ಭಾವನೆಯೇ ದುಗುಡ, ಒತ್ತಡಗಳಿಂದ ಬ್ರೇಕ್ ಹಾಕುತ್ತೆ'.

`ಇತ್ತೀಚೆಗಂತೂ, ಒತ್ತಡ ಕಡಿಮೆ ಮಾಡಿಕೊಳ್ಳಿ, ಅನವಶ್ಯಕವಾಗಿ ಔಷಧಿಗಳನ್ನ ತೆಗೆದುಕೊಳ್ಳಬೇಡಿ, ಸಮಾಧಾನ ಸಂತೃಪ್ತಿಗೋಸ್ಕರ ಧ್ಯಾನ ಮಾಡಿ, ಸರಳ ಜೀವನ ನಡೆಸಿ ಅಂತ ಬಲ್ಲವರು, ಅನುಭವಿಗಳು, ಡಾಕ್ಟ್ರುಗಳು ಎಲ್ರೂ ಹೇಳ್ತಾರೆ ನೋಡು.'

`ಅವ್ರ ಹೇಳ್ತಿರೋದು ನಿಜಾನೇ. ಹಿಂದಿನ ಕಾಲದಿಂದ ನಮ್ಮವರು ಅನುಸರಿಸ್ತಾ ಬಂದ ರೀತಿ ನೀತಿಗಳನ್ನ ಈಗಿನವ್ರ ವೈಜ್ಞಾನಿಕವಾಗಿ ವಿವರಿಸ್ತಿದಾರೆ. ಇಂದಿನ ಯುವಕ ಯುವತಿಯರಿಗೆ ಪ್ರಶ್ನೆ ಕೇಳುವ ಹುಮ್ಮಸ್ಸು. ಪ್ರಶ್ನೆಗೆ ತಕ್ಕ ಉತ್ತರ ಸಿಕ್ಕಾಗ ಅವರು ನಮಗಿಂತ ಸಾರ್ಥಕವಾಗಿ ಬದುಕ್ತಾರೆ ಅನ್ನಿಸುತ್ತಪ್ಪ ನನಗೆ'.

`ನನಗೂ ಅಷ್ಟೆ. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು ಅನ್ನಿಸತ್ತೆ. ಆದರೆ ಅವರಿಗೆ ಇಷ್ಟವಾಗುವ ಹಾಗೆ, ಹಿಡಿಸುವ ಹಾಗೆ ಹೇಳುವಷ್ಟು ತಾಳ್ಮೆ  ನಮಗಿರಬೇಕು ಅಲ್ವಾ?'

`ಖಂಡಿತ, ಖಂಡಿತ. ಕಾಲಕ್ಕೆ ತಕ್ಕ ಹಾಗೆ ನಾವೂ ಬದಲಾಗಲೇಬೇಕು, ಯಾಕೇಂದ್ರೆ ಬದಲಾವಣೆ ಪ್ರಕೃತಿ ನಿಯಮ. ದೇಹ, ವಯಸ್ಸಿಗೆ ತಕ್ಕ ಹಾಗೆ ಬದಲಾಗುತ್ತಲೇ ಇರುತ್ತಲ್ಲ. ಹಾಗೇನೇ ಆಲೋಚನೆಗಳು, ಚಿಂತನೆಗಳೂ ಬದಲಾಗಬೇಕು. ಇದು ಹೇಳಿದಷ್ಟು ಸುಲಭವಾಗಿ ಆಗೋ ಮಾತಲ್ಲ. ಆದರೆ ಪ್ರಯತ್ನದ ಮುಂದೆ ಯಾವುದೂ ಅಸಾಧ್ಯವಲ್ಲ, ಏನನ್ತೀಯ?' ಅಂದರು ಮೂರ್ತಿ. ಅಹುದಹುದು ಎನ್ನುವಂತೆ ತಲೆ ಅಲ್ಲಾಡಿಸಿದರು ಮೂರ್ತಿ.

ಇಬ್ಬರು ಹಿರಿಯರೂ ತಮ್ಮ ತಮ್ಮ ಕೈ ಗಡಿಯಾರಗಳನ್ನು ನೋಡಿಕೊಂಡು, ಕೈ ಕುಲುಕಿ, ಕನ್ನಡಕಗಳನ್ನು ಸರಿಪಡಿಸಿಕೊಂಡು, ಎದುರು ಬದುರು ದಿಕ್ಕುಗಳಲ್ಲಿ ನಡೆಯಲಾರಂಭಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT