ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ 3 ದಿನ ಸಾಹಿತ್ಯ ಸುಗ್ಗಿ

ಧಾರವಾಡ ಸಾಹಿತ್ಯ ಸಂಭ್ರಮ 2015
Last Updated 15 ಜನವರಿ 2015, 19:35 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ನಗರದಲ್ಲಿ ನಡೆಸುತ್ತಿ­ರುವ ‘ಧಾರವಾಡ ಸಾಹಿತ್ಯ ಸಂಭ್ರಮ’ದ ಮೂರನೆಯ ಆವೃತ್ತಿ ಶುಕ್ರವಾರದಿಂದ ಮೂರು ದಿನ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ.

ಈ ಬಾರಿಯ ಸಾಹಿತ್ಯ ಸಂಭ್ರಮ­ದಲ್ಲಿ ಸಾಹಿತ್ಯಪ್ರೇಮಿಗಳಿಗೆ ಸಾಹಿತ್ಯದ ಅಪ್ಪಟ ಅನುಭವ ದೊರೆಯುವಂತೆ  ಕಾರ್ಯಕ್ರಮಗಳನ್ನು ಯೋಜಿಸಲಾ­ಗಿದೆ. ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳಿಗಿಂತ ಭಿನ್ನವಾದ ಕಾರ್ಯ­ಕ್ರಮವಾಗಿರಬೇಕು ಎಂಬುದು ಆಯೋಜ­ಕರ ಉದ್ದೇಶ. ಇಲ್ಲಿ ಭಾಷಣ­ಗಳಿಗಿಂತ ಓದು, ಸಂವಾದ, ಚರ್ಚೆ, ಮಾತುಕತೆ, ಪ್ರಶ್ನೋತ್ತರಗಳಿಗೆ ಹೆಚ್ಚು ಒತ್ತು ನೀಡಿದ್ದು ಇಡೀ ದಿನದ ಕಾರ್ಯಕ್ರಮಗಳನ್ನು ಭಿನ್ನವಾಗಿ ರೂಪಿ­ಸ­ಲಾಗಿದೆ. ಇಂದಿನ ಕನ್ನಡ ಸಾಹಿತ್ಯ­ದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿ­ಕೊಂಡಿರುವ, ಎಲ್ಲ ಪೀಳಿಗೆಗಳಿಗೆ ಸೇರಿದ ಸುಮಾರು 150ಕ್ಕೂ ಹೆಚ್ಚು ಸಾಹಿತಿಗಳು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರಲಿದ್ದಾರೆ.

ಇಂದಿನ ಕನ್ನಡ ಸಾಹಿತ್ಯ ಎದುರಿಸು­ತ್ತಿರುವ ಮುಖ್ಯ ಸಮಸ್ಯೆಗಳನ್ನು ಚರ್ಚಿ­ಸುವುದು, ಹಿಡಿದಿರುವ ಹಾದಿಗಳನ್ನು ಗುರುತಿಸುವುದು, ಕೈ ಬಿಟ್ಟ ವಿಷಯ­ಗಳನ್ನು ನೆನಪಿಸುವುದು ಇತ್ಯಾದಿ ಈ ಸಂಭ್ರಮದಲ್ಲಿ ಮುಖ್ಯ ವಿಷಯ­ಗಳಾ­ಗಲಿವೆ.

ಲಲಿತಪ್ರಬಂಧಗಳ ಓದು, ಹಿರಿಯ ಕವಿಗಳಾದ ವಿ.ಕೃ. ಗೋಕಾಕ-, ಪು.ತಿ.ನ. ಅವರ ಕವಿತೆಗಳ ವಾಚನ, ಕನ್ನಡ ಭಾರತಗಳ ಪಠಣ, ದಲಿತ, ಮುಸ್ಲಿಂ, ಮಹಿಳಾ ಸಂವೇದನೆಗಳು, ಪತ್ತೇದಾರಿ ಕಾದಂಬರಿಯ ಅವಸಾನ, ಸಾಹಿತ್ಯಪ್ರಸಂಗಗಳ ನಿರೂಪಣೆ, ಕನ್ನಡ ಮಾಧ್ಯಮದ ಭವಿಷ್ಯ, ಭಾಷಾಂತರದ ಸಮಸ್ಯೆಗಳು, ಹಿರಿಯ ಲೇಖಕ­ರೊಂದಿಗೆ ಸಂವಾದ, ಸಾಹಿತ್ಯದ ಬೆಳವಣಿಗೆ­ಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ, ಶಿಕ್ಷಣ ವ್ಯವಸ್ಥೆಯಲ್ಲಿ ಸಾಹಿತ್ಯದ ಸ್ಥಾನ, ಕನ್ನಡ ಓದುಗರ ಒಲವುಗಳು ಇತ್ಯಾದಿ ವಿಷಯಗಳನ್ನು ಕುರಿತು 17 ಗೋಷ್ಠಿಗಳು ಈ ಮೂರು ದಿನಗಳಲ್ಲಿ ನಡೆಯಲಿವೆ.

ಸಾಹಿತ್ಯ ಸಂಭ್ರಮದಲ್ಲಿ ಇಂದು
ಧಾರವಾಡ: ಬೆಳಿಗ್ಗೆ 9.30ಕ್ಕೆ ಪುಸ್ತಕ ಮಳಿಗೆ ಉದ್ಘಾಟನೆ– ಐ.ಎಂ. ವಿಠಲಮೂರ್ತಿ. ವಿ.ಜಿ.ನರೇಂದ್ರ ಅವರ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟನೆ– ಕೆ.ಆರ್‌.ರಾಮಕೃಷ್ಣ. 10ಕ್ಕೆ ಧಾರವಾಡ ಸಾಹಿತ್ಯ ಸಂಭ್ರಮ ಉದ್ಘಾಟನೆ– ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ. ಆಶಯ ಭಾಷಣ– ಎಚ್‌.ಎಸ್. ಶಿವಪ್ರಕಾಶ.

11ಕ್ಕೆ ಗೋಷ್ಠಿ– ಈಗ ಪತ್ತೇದಾರಿ ಕಾದಂಬರಿ ಏಕೆ ಬರುತ್ತಿಲ್ಲ? ಭಾಗವಹಿಸುವವರು– ಕೆ.ಎನ್‌. ಗಣೇಶಯ್ಯ, ಎನ್‌.ಎಸ್‌. ಶ್ರೀಧರ ಮೂರ್ತಿ, ರಾಜಾ ಚೆಂಡೂರ. ನಿರ್ದೇಶನ– ಜೋಗಿ 12.30ಕ್ಕೆ ಗೋಷ್ಠಿ– ಲಲಿತ ಪ್ರಬಂಧಗಳ ಓದು
ಭಾಗವಹಿಸುವವರು– ಅ.ರಾ,ಮಿತ್ರ, ಭುವನೇಶ್ವರಿ ಹೆಗಡೆ, ಜಯಂತ ಕಾಯ್ಕಿಣಿ. ನಿರ್ದೇಶನ– ಕೆ. ಸತ್ಯ ನಾರಾಯಣ

ಮಧ್ಯಾಹ್ನ 3ಕ್ಕೆ ಗೋಷ್ಠಿ– ಕನ್ನಡದಲ್ಲಿ ಅನುವಾದ ಸಮಸ್ಯೆಗಳು
ಭಾಗವಹಿಸುವವರು– ಚಂದ್ರಕಾಂತ ಪೋಕಳೆ, ವಿಜಯಾ ಗುತ್ತಲ, ಪ್ರಧಾನ ಗುರುದತ್ತ, ಪ್ರಹ್ಲಾದ ಮಹಿಷಿ. ನಿರ್ದೇಶನ– ವಿ.ಬಿ.ತಾರಕೇಶ್ವರ.

ಸಂಜೆ 5.30ಕ್ಕೆ ಗೋಷ್ಠಿ– ಇತಿಹಾಸಕಾರರೊಂದಿಗೆ ಇತಿಹಾಸ ಕಾರ– ಷ.ಶೆಟ್ಟರ ಹಾಗೂ ಎಂ.ಎಂ. ಕಲಬುರ್ಗಿ. ಸಂಜೆ 6.45ರ ನಂತರ ಪಂಡಿತ್‌ಎಂ.ವೆಂಕಟೇಶಕುಮಾರ ಅವರಿಂದ ಶಾಸ್ತ್ರೀಯ ಸಂಗೀತ. ಉದಯ ಕುಲಕರ್ಣಿ (ತಬಲಾ), ಗುರು ಪ್ರಸಾದ ಹೆಗಡೆ (ಹಾರ್ಮೋನಿಯಂ), ಅಶೋಕ ನಿಂಗೋಲಿ (ತಂಬೂರಿ)
ಸ್ಥಳ: ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಭವನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT